Advertisement

ಸೀರಿಯಲ್‌ ಕಿಲ್ಲರ್‌!

10:07 AM Dec 19, 2019 | mahesh |

ಧಾರಾವಾಹಿ ಎನ್ನುವುದು ಮನರಂಜನಾ ಜಗತ್ತು. ಆದರೂ, ಮನರಂಜನೆಯಲ್ಲಿ ಕೊಂಚವಾದರೂ ಮೌಲ್ಯಗಳಿರಬೇಕು. ಒಂದಿಷ್ಟು ಸಮಯ ವ್ಯಯಿಸಿದ್ದೇವೆ ಎಂದಾದರೆ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಾಯ ಆಗುವಂಥದ್ದೇನನ್ನೋ ಅದರಿಂದ ಕಲಿತಿರಬೇಕು. ನೀವು ನೋಡುವ ಧಾರಾವಾಹಿ ನಿಮಗೆ ಅಂಥ ಉತ್ತಮ ಮೌಲ್ಯಗಳನ್ನು ಕಲಿಸುತ್ತಿದೆಯೇ?

Advertisement

ಇತ್ತೀಚೆಗೆ ಮಗಳ ಜೊತೆ ಗೆಳತಿಯ ಮನೆಗೆ ಹೋಗಿದ್ದೆ. ಟಿ.ವಿಯಲ್ಲಿ ಯಾವುದೋ ಧಾರಾವಾಹಿ ಪ್ರಸಾರವಾಗುತ್ತಿತ್ತು. ನಾವು ಗೆಳತಿಯರು ಹರಟೆಯಲ್ಲಿ ತೊಡಗಿದ್ದರೆ, ಮಗಳು ಧಾರಾವಾಹಿಯಲ್ಲಿ ಮುಳುಗಿದ್ದಳು. ಗೆಳತಿಯ ತಾಯಿ ಅವಳನ್ನು ಮಾತಿಗೆಳೆದಾಗ ಆಕೆ, ಆ ಧಾರಾವಾಹಿಯ ಪಾತ್ರಗಳ ಹೆಸರನ್ನು ಹೇಳಿದ್ದಷ್ಟೇ ಅಲ್ಲದೇ, ಮುಂದೆ ಏನಾಗಬಹುದು ಅಂತಲೂ ಹೇಳತೊಡಗಿದಳು. ಇವಳಿಗೆ ಧಾರಾವಾಹಿ ಹುಚ್ಚು ಹೇಗೆ ಹಿಡಿಯಿತಪ್ಪಾ ಅಂತ ನನಗೆ ಚಿಂತೆಯಾಯ್ತು. ಯಾಕೆಂದರೆ, ನಾನು ಧಾರಾವಾಹಿ ನೋಡುವುದಿರಲಿ, ಟಿ.ವಿ ನೋಡುವುದೇ ಕಡಿಮೆ. ಅಂಥದ್ದರಲ್ಲಿ ಇವಳು ಹೇಗೆ ಮುಂದಿನ ಕತೆಯನ್ನೂ ಹೇಳಲು ಕಲಿತಳು? ಎಂಬ ಗಾಬರಿ. ಈ ಗಾಬರಿಗೆ ಕಾರಣವಿಲ್ಲದಿಲ್ಲ. ಇಂದಿನ ಧಾರಾವಾಹಿಗಳು ಏನನ್ನು ಬೋಧಿಸುತ್ತಿವೆ, ಯಾವ ಮಟ್ಟದ ಮನರಂಜನೆ ಒದಗಿಸುತ್ತಿವೆ ಎನ್ನುವುದನ್ನು ನೆನೆದರೆ ದಿಗಿಲಾಗುತ್ತದೆ.

ಮರೆಯಲಾಗದ ಸೀರಿಯಲ್‌ಗ‌ಳು
ತುಂಬಾ ಏನಲ್ಲ, ಕೇವಲ ಒಂದು ದಶಕದ ಹಿಂದೆ, ಮನೆ ಮಂದಿಯೆಲ್ಲ ಕೂತು ನೋಡುವಂಥ ಧಾರಾವಾಹಿಗಳು ಪ್ರಸಾರವಾಗುತ್ತಿದ್ದವು. ಪೌರಾಣಿಕ ಧಾರಾವಾಹಿಗಳು ಬರುವಾಗಲಂತೂ ಹಿರಿಯರೇ ಮಕ್ಕಳನ್ನು ಹಿಡಿದು ತಂದು ಟಿ.ವಿಯ ಮುಂದೆ ಕೂರಿಸುತ್ತಿದ್ದರು. “ಸೀತೆ’ ಧಾರಾವಾಹಿ ನೋಡುತ್ತಾ, ಸೀತೆಯ ಕಷ್ಟಗಳನ್ನು ತಾನೇ ಅನುಭವಿಸುತ್ತಿರುವಂತೆ ಹನಿಗಣ್ಣಾಗುತ್ತಿದ್ದ ಅಮ್ಮನ ದುಃಖ ನಮಗೂ ತಟ್ಟುತ್ತಿತ್ತು. ವಿದ್ಯಾಭೂಷಣರ ಸುಶ್ರಾವ್ಯ ಧ್ವನಿಯಲ್ಲಿ “ತುಂಗಾ ತೀರದಿ ನಿಂತ.. ‘ ಹಾಡಿನೊಂದಿಗೆ ಆರಂಭವಾಗುತ್ತಿದ್ದ “ಶ್ರೀ ರಾಘವೇಂದ್ರ ವೈಭವ’ ಧಾರಾವಾಹಿಯಲ್ಲಿ ನೋಡಿದ್ದ ರಾಯರ ಜೀವನ ಇಂದಿಗೂ ಸ್ಪಷ್ಟ ನೆನಪಿದೆ. ಪೌರಾಣಿಕ ಧಾರಾವಾಹಿಗಳಂತೆ ಸಾಮಾಜಿಕ ಧಾರಾವಾಹಿಗಳೂ ಮೌಲ್ಯಯುತವಾಗಿದ್ದವು.

ಟಿಆರ್‌ಪಿ ಬಂದರೆ ಸಾಕು
ಆದರೆ, ಇಂದಿನ ಧಾರಾವಾಹಿಗಳು ಹೆಸರಿಗೆ ತಕ್ಕಂತೆ “ದಾರಾ’ವಾಹಿಗಳೇ ಆಗಿವೆ. ಆರಂಭದಲ್ಲಿ ಚೆನ್ನಾಗಿದ್ದರೂ ದಿನ ಕಳೆದಂತೆ ಟಿಆರ್‌ಪಿ ಏರಿಕೆಗಾಗಿ ಅಸಂಗತ ವಿಷಯಗಳನ್ನೆಲ್ಲ ಸೇರಿಸಿಬಿಡುತ್ತಾರೆ. ಕೆಲವೊಂದು ಧಾರಾವಾಹಿಗಳ ತಲೆಬುಡವಿಲ್ಲದ ಸನ್ನಿವೇಶಗಳು, ಅತಿರೇಕವಾಗಿ ವರ್ತಿಸುವ ಪಾತ್ರಗಳನ್ನು ನೋಡುವಾಗ ಹೇವರಿಕೆಯಾಗುತ್ತದೆ. ನಮ್ಮ ಜನ ಇಂಥ ಸೀರಿಯಲ…ಗಳನ್ನು ನೋಡುತ್ತಾರೆಯೇ ಎಂಬ ಅಚ್ಚರಿಯೂ!

ಇದೂ ಒಂದು ಕತೆಯೇ?
ಗಂಡ ಹೆಂಡತಿಯ ಸಂಸಾರದಲ್ಲಿ ಮತ್ತೂಬ್ಬ ಹೆಣ್ಣು ಪ್ರವೇಶಿಸಿ ಗೊಂದಲವೆಬ್ಬಿಸುತ್ತಾಳೆ. ಇಲ್ಲವೇ, ಚಂದದ ಸಂಬಂಧಗಳಲ್ಲಿ ಅದೇ ಮನೆಯ ಮತ್ತೂಬ್ಟಾಕೆ ಹುಳಿ ಹಿಂಡಲು ನೋಡುತ್ತಾಳೆ. ಇದು ಪ್ರತಿ ಧಾರಾವಾಹಿಯ ಕಥಾವಸ್ತು. ಮಧ್ಯದಲ್ಲಿ ಚಾನೆಲ್‌ ಬದಲಿಸಿ ಬೇರೊಂದು ಧಾರಾವಾಹಿ ನೋಡಿದರೆ, ಹಿಂದಿನದಕ್ಕೂ ಇದಕ್ಕೂ ವ್ಯತ್ಯಾಸ ತಿಳಿಯದಷ್ಟರ ಮಟ್ಟಿಗೆ, ಕತೆ ಒಂದೇ ಆಗಿರುತ್ತವೆ!

Advertisement

ಕೆಲವು ಧಾರಾವಾಹಿಗಳಲ್ಲಿ ಒಬ್ಬ ಹೆಣ್ಣು, ಗಂಡ ಬದುಕಿರುವಾಗಲೇ ಮೂರು ನಾಲ್ಕು ಮದುವೆಯಾಗುತ್ತಾಳೆ, ಮತ್ತೂಬ್ಬ, ಹೆಂಡತಿಯಿರುವ ಮನೆಗೇ ಪ್ರೇಯಸಿಯನ್ನು ಕರೆ ತರುತ್ತಾನೆ. ಪುಟ್ಟ ಮಗುವನ್ನು ಕೊಲ್ಲಲು ಯತ್ನಿಸುವ ಸನ್ನಿವೇಶಗಳೂ ಇರುತ್ತವೆ. ಇವು ಧಾರಾವಾಹಿ ನೋಡುವ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಅತ್ತೆ ಸೊಸೆಗೆ, ಸೊಸೆ ಅತ್ತೆಗೆ ಕಿರುಕುಳ ಕೊಡುವ ದೃಶ್ಯಗಳು ಬಂದಾಗ, ಜೊತೆಗೆ ಕೂತು ಅದನ್ನು ನೋಡುತ್ತಿರುವ ಅತ್ತೆ-ಸೊಸೆಯರಲ್ಲಿ ಯಾವ ಭಾವ ಮೂಡುತ್ತದೆ? ಈ ಧಾರಾವಾಹಿಗಳು ಸಮಾಜಕ್ಕೆ ಹೇಳ ಹೊರಟಿರುವುದಾದರೂ ಏನು? ಜನರ ಅಭಿರುಚಿ ಬದಲಾಗುತ್ತಿದೆಯೋ ಅಥವಾ ಜನರಲ್ಲಿ ಇಂತಹ ಹೀನ ಅಭಿರುಚಿ ಬೆಳಸಲಾಗುತ್ತಿದೆಯೋ ಗೊತ್ತಾಗುತ್ತಿಲ್ಲ.

ಒಂದು ಪ್ರಶ್ನೆ ಕೇಳಿಕೊಳ್ಳಿ
ಒಳ್ಳೆಯ ಧಾರಾವಾಹಿಗಳು ಇಲ್ಲವೇ ಇಲ್ಲ ಎಂದಲ್ಲ. ಆದರೆ ಅವು ಹತ್ತಕ್ಕೆ ಒಂದು ಮಾತ್ರ. ಪ್ರತಿದಿನ ಗಂಟೆಗಳ ಕಾಲ ಧಾರಾವಾಹಿಗಳ ಮುಂದೆ ಕೂತು ನೋಡುವುದರ ಪ್ರಭಾವ ನಮ್ಮ ಮನಸ್ಸಿಗಾಗದೇ ಇರದು. ನಕಾರಾತ್ಮಕ ವಿಷಯಗಳನ್ನೇ ಹೆಚ್ಚು ನೋಡಿದರೆ, ಅದರ ಒಂದು ಅಂಶವಾದರೂ ನಮ್ಮ ಸ್ವಭಾವದಲ್ಲಿ ಬೆರೆತು ಹೋಗಿರುತ್ತದೆ. ಪಾತ್ರಗಳೊಂದಿಗೆ ತುಲನೆ ಮಾಡಿಕೊಳ್ಳುವುದು ಅಥವಾ ಅಂಥದ್ದೇ ವಿಷಯಗಳನ್ನು ನಿಜಜೀವನದಲ್ಲಿ ಪಾಲಿಸಲು ಹೋಗಿ ಮತ್ತಷ್ಟು ಸಮಸ್ಯೆ ತಂದುಕೊಳ್ಳುವ ಸಾಧ್ಯತೆಗಳೂ ಇವೆ. ಧಾರಾವಾಹಿ ಎನ್ನುವುದು ಮನರಂಜನಾ ಜಗತ್ತು. ಆದರೂ, ಮನರಂಜನೆಯಲ್ಲಿ ಕೊಂಚವಾದರೂ ಮೌಲ್ಯಗಳಿರಬೇಕು. ಒಂದಿಷ್ಟು ಸಮಯ ವ್ಯಯಿಸಿದ್ದೇವೆ ಎಂದಾದರೆ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಾಯ ಆಗುವಂಥದ್ದೇನನ್ನೋ ಅದರಿಂದ ಕಲಿತಿರಬೇಕು. ನೀವು ನೋಡುವ ಧಾರಾವಾಹಿ ನಿಮಗೆ ಅಂಥ ಉತ್ತಮ ಮೌಲ್ಯಗಳನ್ನು ಕಲಿಸುತ್ತಿದೆಯೇ?

ಸದಭಿರುಚಿ ಬೆಳೆಸಿಕೊಳ್ಳಿ
ಸಂಜೆಯಾಗುತ್ತಿದ್ದಂತೆ, ಗಡಿಬಿಡಿಯಲ್ಲಿ ಕೆಲಸ ಮುಗಿಸಿ ಟಿ.ವಿ ಮುಂದೆ ಕೂತರೆ, ಮಕ್ಕಳನ್ನು ಓದಿಸುವುದರಿಂದ ಹಿಡಿದು, ರಾತ್ರಿಯ ಊಟದವರೆಗೂ ಸರ್ವ ಕಾರ್ಯಗಳನ್ನೂ ಧಾರಾವಾಹಿಗಳ ಜೊತೆಜೊತೆಗೇ ಮುಗಿಸುವ ಮಹಿಳೆಯರಿ¨ªಾರೆ. ಹೆಂಗಸರಿಗೆ ಮನರಂಜನೆ ಬೇಕು ನಿಜ. ಆದರೆ ಮೂರು ಕಾಸಿಗೂ ಪ್ರಯೋಜನಕ್ಕೆ ಬಾರದ ಇಂಥ ಕಾರ್ಯಕ್ರಮಗಳನ್ನು ನೋಡಿ ಪಡೆಯುವುದಾದರೂ ಏನು? ಅದರ ಬದಲಿಗೆ, ಆಸಕ್ತಿ ಇರುವ ವಿಷಯಗಳನ್ನು ಕಲಿಯಬಹುದು. ಪುಸ್ತಕಗಳನ್ನು ಓದಬಹುದು, ಉತ್ತಮ ಸಿನಿಮಾಗಳನ್ನು ಆಯ್ದು ನೋಡಬಹುದು. ಮಕ್ಕಳ ಜೊತೆಗೆ ಕೂತು ಕಾರ್ಟೂನ್‌ ನೋಡುವುದು ಧಾರಾವಾಹಿಗಳನ್ನು ನೋಡುವುದಕ್ಕಿಂತ ಸಾವಿರ ಪಾಲು ಉತ್ತಮ!

– ಕವಿತಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next