ಬೆಂಗಳೂರು: ಕಾನೂನು ಬಾಹಿರ ಕಟ್ಟಡ ನಿರ್ಮಾಣಗಳಿಗೆ ಕಡಿವಾಣ ಹಾಕದ ಬಿಬಿಎಂಪಿ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಬೆಂಗಳೂರಿನಲ್ಲಿ “ಜಂಗಲ್ ರಾಜ್’ ಆಡಳಿತ ವ್ಯವಸ್ಥೆ ಜಾರಿಯಲ್ಲಿದೆಯೇ ಎಂದು ಕಿಡಿಕಾರಿದೆ.
ಅರಕೆರೆ ಸಮೀಪದ ಬಿಟಿಎಸ್ ಲೇಔಟ್‌ನಲ್ಲಿ ರಾಜಾಕಾಲುವೆ ಮೇಲೆ ಕಾನೂನು ಬಾಹಿರವಾಗಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣವನ್ನು ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್ ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ, ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಕಾನೂನು ಉಲ್ಲಂ ಸಿ ರಾಜಕಾಲುವೆ ಮೇಲೆ ನಾಲ್ಕಂತಸ್ತಿನ ಕಟ್ಟಡ ನಿರ್ಮಾಣ ಮಾಡುತ್ತಾರೆ ಎಂದರೆ ಏನರ್ಥ? ಅಕ್ರಮ ಕಂಡು ಬಿಬಿಎಂಪಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರೇ, ಅಧಿಕಾರಿಗಳು ಶಾಮೀಲಾಗದೆ ಇದೆಲ್ಲಾ ಸಾಧ್ಯವೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಬಿಬಿಎಂಪಿ ಅಧಿಕಾರಿಗಳ ಕಾರ್ಯವೈಖರಿ ನೋಡಿದರೇ ಕಾನೂನು ಕಟ್ಟಳೆಗಳು ಲೆಕ್ಕಕ್ಕಿಲ್ಲ ದಂತಾಗಿದೆ. ನಗರದಲ್ಲಿ ಕಾನೂನು ಆಡಳಿತದ ಬದಲಿಗೆ ” ಜಂಗಲ್ ರಾಜ್’ ಆಡಳಿತವಿದೆ ಎಂದು ಅನಿಸುತ್ತಿದೆ. ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಏನಾಗಿದೆ? ನಗರದಲ್ಲಿ ಎಲ್ಲೆಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ಕಟ್ಟಲಾಗಿದೆ ಎಬುದನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಬೇಕು. ಅನುಮಾನ ಬಂದ ಕಡೆ ದಿಢೀರ್ ಭೇಟಿಗಳನ್ನು ನೀಡಿ ಪರಿಶೀಲನೆ ನಡೆಸಬೇಕು. ಹಾಗೊಮ್ಮೆ ನಿಮಗೆ ಹೋಗಲು ಭಯವಾದರೆ, ಪೊಲೀಸರ ಭದ್ರತೆಯಲ್ಲಿ ತೆರಳಿ ಎಂದು ಕ್ರೋಶವ್ಯಕ್ತಪಡಿಸಿತು.
ಬಿಬಿಎಂಪಿ ಪರ ವಕೀಲರು ವಾದಿಸಿ, ಅನಧಿಕೃತವಾಗಿ ನಾಲ್ಕಂತಸ್ತಿನ ಕಟ್ಟಡ ಕಟ್ಟಿರುವ ಕುರಿತು, ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಅಪಾರ್ಟ್‌ಮೆಂಟ್ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಪರಿಶೀಲನೆ ನಡೆಲಾ
ಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹಾಗಾದರೇ ಕಟ್ಟಡ ನಿರ್ಮಾಣ ಆಗುವವರೆಗೂ ಅಧಿಕಾರಿಗಳು ಏನು ಮಾಡುತ್ತಿದ್ದರು. ಎಲ್ಲಾ ಮುಗಿದ ಮೇಲೆ ಎಚ್ಚೆತ್ತುಕೊಳ್ತೀರಾ ಎಂದು ಅಸಮಾಧಾನ ವ್ಯಕ್ತಪಡಿಸಿ, ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ ಬಿಬಿಎಂಪಿ ಬೇಗೂರು ವಿಭಾಗದ ಸಹಾಯಕ ಕಾರ್ಯಪಾಲಕ
ಎಂಜಿನಿಯರ್‌ಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಬಿಟಿಎಸ್ ಲೇಔಟ್‌ನ ಸಮೀಪದ ರಾಜಕಾಲುವೆ ಮೇಲೆ ಖಾಸಗಿ ವ್ಯಕ್ತಿಯೊಬ್ಬರು ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿ
ಪ್ರಮಾಣಪತ್ರ ಪಡೆಯದೆ ನಾಲ್ಕಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದಾರೆ. ನಿಯಮಾವಳಿಗಳನ್ನು ಉಲ್ಲಂ ಸಿದ್ದರೂ ಬಿಬಿಎಂಪಿ ಅಧಿಕಾರಿಗಳು ಸೂಕ್ತಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದ ಸ್ಥಳೀಯರಿಗೆ ಒಂದಲ್ಲಾ ಒಂದು ದಿನ ಅಪಾಯ
ಎದುರಾಗಲಿದೆ. ಈ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣದಾರರ ವಿರುದ್ಧ ಕ್ರಮ ಜರುಗಿಸಲು ನಿರ್ದೇಶಿಸುವಂತೆ ಕೋರಿ ಸುನೀಲ್‌ಕುಮಾರ್ ಜೆ ಎಂಬುವವರು ಪಿಐಎಲ್ ಸಲ್ಲಿಸಿದ್ದರು.