Advertisement

Wedding: ನಿಮ್ಮನಿಯ್ನಾಗ ಕನ್ಯಾವ ಏನ್ರೀ…

01:23 PM May 31, 2024 | Team Udayavani |

ಹಿಂದಿನ ಕಾಲದಾಗ ವರ ಅವ ಏನ್ರಿ ನಿಮ್ಮ ಮನಿಯಾಗ, ನನ್ನ ಮಗಳಿಗ ಒಂದು ಚೋಲೋ ವರ ಇದ್ರ ಮರಿಬ್ಯಾಡ್ರೀ, ನಮ್ಗ ಏನು ಅತಿಯಾಸೆ ಇಲ್ರಿ ಮತ್ತ ವರಗ ಒಂದು ಹೇಳ್ಕೋಳಾಕ ಸರ್ಕಾರಿ ನೌಕರಿ-ಕೈ ತುಂಬ ಸಂಬಳ, ಅಪ್ಪ – ಅವ್ವಗ ಒಬ್ಬನ ಮಗ ಇದ್ರ ಆತರಿ ಅಂತೆಲ್ಲ ಹೇಳುದನ್ನ ಕೇಳತಿದ್ವೀ.

Advertisement

ಅದ ಇವತ್ತಿನ ಕಾಲದಾಗ ಎಲ್ಲಾ ಉಲ್ಟಾ ಆಗೇತಿ ನೋಡ್ರಿ, ಗುಡಿಗ ಹೋಗ್ರೀ, ಮದುವಿಗ ಹೋಗ್ರಿ, ಇನ್ನ ಜಾತ್ರಿ ಅನ್ಕೊಂತ ನೆಂಟರಿಷ್ಟರ ಮನಿಗ ಹೋಗ್ರೀ ಎಲ್ಲೋ ಹೋದಾಗನೂ ಅಲ್ಲೇಲ್ಲಾ ಮಾತಾಡೋ ವಿಷಯಾ ಏನಂದ್ರ ನಿಮ್ಮ ಮನಿಯಾಗ ಕನ್ಯಾ ಅವೇನ್ರೀ.. ಅವ್ರ ತಮ್ಮ ಆಧಾರ ಕಾರ್ಡ್‌ ಎಷ್ಟ ಕಾಪಿ ತೆಗಿಸ್ಯಾರ ಗೊತ್ತಿಲ್ರಿ, ತಮ್ಮ ಮಕ್ಕಳ ಕುಂಡಲಿ ಪೋಟೋನ ಅಷ್ಟ ಕಾಪಿ ತೆಗೆಸಿ ಎಲ್ಲಾ ಕಡೆ ಕೊಟ್ಟ ಬಂದಿರತಾರ..

ಹೋದ ಸೋಮವಾರ ದೇವಸ್ಥಾನಕ್ಕ ಹೋದಾಗ, ಅಲ್ಲೇ ಪದ್ಮಕ್ಕ ಮತ್ತ ಸಾವಿತ್ರಕ್ಕಂದ ಮಾತು ಕತಿ ಏನ್‌ ಜೋರಾಗಿ ನಡೆದಿದ್ವು ಅಂತೀರಿ… ದರ್ಶನ ಮಾಡಾಕ ಬಂದೀವಿ ಅಂತ ಲಕ್ಷ್ಯನ ಇಲ್ಲದ ಪದ್ಮಕ್ಕ ಸಾವಿತ್ರಕ್ಕಗ ಹಿಂಗ ಕೇಳಾತಿದ್ರ ರೀ…!!

ನಿಮ್ಮ ಮನಿಯಾಗ ಕನ್ಯಾ ಇದ್ರ ಹೇಳ್ರಿ ಅಲಾ, ನಮ್ಮ ಮಗಾ ಅದಾನ, ದೊಡ್ಡ ಕಂಪನಿದಾಗ ಸಾಫ್ಟ್ವೇರ್‌ ಇಂಜಿನೀಯರ್‌ ಅಂತ ಕೆಲಸ ಮಾಡಾತಾನ, ಇದಕ್ಕ ಸಾವಿತ್ರಕ ಉತ್ತರ ಕೊಡಲಿಲ್ಲಂದ್ರ ಹೆಂಗ.. ನಮ್ಮ ತಮ್ಮನ ಮಗಳ ಅದಾಳ ಆದ್ರ ಅವ್ರ ಯಾವªರ ಆಗ್ಲಿ ಸರ್ಕಾರಿ ನೌಕರಿ ಇದ್ದವಂಗ ಕನ್ಯಾ ಕೊಡತೇನಿ ಅಂತ ಕುಂತಾರ ನೋಡ್ರೀ ಅಂತ ಹೇಳ್ಬಿಟ್ಲು.

ಇಷ್ಟಕ್ಕ ಸುಮ್ನ ಆಗಿದ್ರ ಚೋಲೊ ಆಗತಿತ್ತ್, ಹಿಂಗ ಮಾತು-ಕತಿ ಮುಂದವರದ ಅವರೊಂದು ಹೇಳ್ಳೋದ ಇವರೊಂದು ಹೇಳ್ಳೋದ ನಡೆದಿತ್ತ. ಇದನ್ಲಲ್ಲ ಕೇಳ್ಕೋಂತ ಅಲ್ಲೆ ನಿಂತಿದ್ದ ಆ ಗುಡಿಯ ಪೂಜಾರಿ ಯಾವ್ದರ ಕನ್ಯಾ ಇದ್ರ ಹೇಳ್ರಿ ನನ್ನ ಮಗಗ ಕನ್ಯಾ ನೋಡಾತೇನಿ ಅಂತ ಹೇಳ್ದ. ಅಷ್ಟರಾಗ ಸುಮ್ನಿರದ ಸಾವಿತ್ರಕ ಪದ್ಮಕ್ಕಗ ಹೇಳಿದನ್ನ ಮಾಡಿಬಿಟ್ರಾ…. ಆಗ ಪೂಜಾರಿ ಸಿಟ್ಟನ್ಯಾಗ ತೀರ್ಥ ಕೊಟ್ಟ ಪ್ರಸಾದ ಕೊಟ್ಟ ಒಳಗ ನಡೆದಬಿಟ್ರ.

Advertisement

ಅದಾತು ಬಿಡ್ರಿ ಇನ್ನ ಮೊನ್ನೆ ಒಂದು ಮದುವಿ ಕಾರ್ಯಕ್ರಮಕ್ಕ ಹೋಗಿದ್ವೀ, ಅಲ್ಲಿ ಹೇಳ್ತೀನಿ ನಿಮ್ಗ ಮದುವಿ ನಡಿಯೋದನ್ನ ನೋಡೋ ಬದ್ಲಿಗ ಗಂಡ ಮಕ್ಕಳ ಇದ್ದ ಅಪ್ಪ ಅಮ್ಮಂದ್ರು ಅಲ್ಲಿ ಚಂದಗ ಕಲರ ಕಲರ ಸಾರಿ ಉಟ್ಕೊಂಡ ಮೈತುಂಬ ಬಂಗಾರ ಹಾಕ್ಕೊಂಡ ಅತ್ತಿಂದ ಇತ್ತ ಇತ್ತಿಂದ ಓಡ್ಯಾಡತಿದ್ದ ಕನ್ಯಾಗೋಳ ನೋಡಕ್ಕೊಂತನ ಕುಂತಬಿಟ್ಟಿದ್ರು.. ಅವ್ರ ಅಪ್ಪ ಅವ್ವನ ಮಾತಾಡಿಸ್ಕೊಂತ, ನಿಮ್ಮ ಮಗಳ ಚಂದ ರೆಡಿಯಾಗಾಳ್ರಿ, ಏನ ಓದ್ಕೊಂಡಾಳ್ರಿ, ಮತ್ತ ವರ ನೋಡಾಕ ಚಾಲೂ ಮಾಡೀರಿ ಏನ, ಮಾಡಿರತೀರಿ ಬೀಡ್ರೀ ಎದಿಯುದ್ದ ಬೆಳಿದ ಮಗಳನ್ನ ಮನಿಯಾಗ ಇಟ್ಕೊಳ್ಳೋದ ಅಂದ್ರ ಹಂಗ ಏನ್ರೀ ಮತ್ತ.. ಹಿಂಗ ಹತ್ತ ಹನ್ನೇರಡ ಮಾತ ಹೇಳ್ಕೊಂತ ಕೊನಿಗ ತಮ್ಮ ಮಗಂದು ಜಾತಕ, ಒಂದು ಪೋಟೊ ಕೊಟ್ಟ ಬಿಡೋದ..ಇಷ್ಟರಾಗ ಅಲ್ಪೇ ಮದುವಿಗ ಬಂದವರದು ಮದುವಿ ಆಗಿ ಹೋಗಿತ್ತ..

ಇಷ್ಟ ಅಲ್ದ ಇವತ್ತಿನ ಆನ್‌ಲೈನ್‌ ಯುಗದಾಗ ಇವ್ರ ಇಲ್ಲೆ ಅವ್ರ ಅಲ್ಲೆ ಇದ್ಕೊಂಡ ಆನ್‌ಲೈನ್‌ ದಾಗ ವರ-ಕನ್ಯಾ ನೋಡಾಕ ಚಾಲೂ ಮಾಡ್ಯಾರರೀ.., ಇನ್ನ ಪ್ರೀತಿ ಮಾಡೋದ ಅಂದ್ರ… ಒಂದ ಪ್ರೇಮಪತ್ರ ಅನ್ಕೊಂತ ಹಿಂದಿನ ಕಾಲದಾಗ ಚಾಲೂ ಆಗಿದ್ದ ಇವತ್ತ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಆದ-ಇದ ಅನ್ಕೊಂತ ಹತ್ತಾರ ಹುಟ್ಕೊಂಡಾವ.

ಇಷ್ಟೆಲ್ಲ ನಡಿಯಾಕತಿದ್ರೂ, ಟೆಕ್ನಾಲಜಿ ಇಷ್ಟೆಲ್ಲ ಬದಲಾದ್ರು, ಯಾವುದರ ಮದುವಿ-ಮುಂಜವಿ, ಅಷ್ಟ ಯಾಕ ಯಾರ ಅರ ಮನಿಗ ಪೂಜ್ಯಾಕ ಅಂತ ಹೋದ್ರು ಅಂದ್ರ! ಅಲ್ಲಿ ಕೇಳಿಬರೋ ಒಂದ ಒಂದು ಮಾತ್‌ ನಿಮ್ಮನ್ಯಾಗ ಕನ್ಯಾ ಅವ ಏನ್ರೀ…..?

-ಅಕ್ಷಯ ಕುಮಾರ ಜೋಶಿ

ಹುಬ್ಬಳ್ಳಿ

 

Advertisement

Udayavani is now on Telegram. Click here to join our channel and stay updated with the latest news.

Next