Advertisement

“ದಲಿತ’ಪದವೇ ಮುಳುವಾಗುತ್ತಿದೆಯಾ?

12:43 AM Dec 05, 2019 | Team Udayavani |

ಬೆಂಗಳೂರು: ರಾಜ್ಯದ ಉಪ ಚುನಾವಣೆ ಫ‌ಲಿತಾಂಶ ಹಾಲಿ ಸರ್ಕಾರವನ್ನು ಬದಲಾಯಿಸುತ್ತದೋ ಇಲ್ಲವೋ ಆದರೆ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ನಲ್ಲಿ ತೆರೆಮರೆಯಲ್ಲಿ ಮೈತ್ರಿ ಕಸರತ್ತು ಹಾಗೂ ಮುಂದಿನ
ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಇದರ ನಡುವೆಯೇ “ದಲಿತ ಮುಖ್ಯಮಂತ್ರಿ’ಯ ಪ್ರಸ್ತಾಪವಾಗುತ್ತಿದ್ದು, ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಬಾರಿಯಾದರೂ ಅವಕಾಶ ದೊರೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಬಿಜೆಪಿ
ಸರ್ಕಾರ ಪತನವಾಗಿ ಮೈತ್ರಿ ಸರ್ಕಾರ ರಚನೆಯಾಗಿ ಕಾಂಗ್ರೆಸ್‌ಗೆ ಮುಖ್ಯಮಂತ್ರಿಯಾಗುವ ಅವಕಾಶ
ದೊರೆತರೆ ಅಚ್ಚರಿಯ ವ್ಯಕ್ತಿಗೆ ಉನ್ನತ ಹುದ್ದೆಯ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ ಎಂಬ
ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

ದಲಿತ ಸಿಎಂ ಮುಂಚೂಣಿಗೆ: ಮಹಾರಾಷ್ಟ್ರ ರಾಜಕಾರಣದ ಬೆಳವಣಿಗೆಯಿಂದ ರಾಜ್ಯ ಕಾಂಗ್ರೆಸ್‌
ನಾಯಕರು ಕಳೆದ ಒಂದು ವಾರದಿಂದ ಸಕ್ರಿಯರಾಗಿದ್ದಾರೆ. ಉಪ ಚುನಾವಣೆ ಫ‌ಲಿತಾಂಶ
ಬರುವ ಮೊದಲೇ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಡಿಸೆಂಬರ್‌ 9 ರ ನಂತರ ಸಿಹಿ
ಸುದ್ದಿ ನೀಡುವುದಾಗಿ ಹೇಳಿದ್ದಾರೆ. ಖರ್ಗೆಯವರ ಹೇಳಿಕೆ ಹಾಗೂ ಅವರು ಚುನಾವಣೆಯ ಪ್ರಚಾರದ ಕೊನೆ ದಿನಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದು, ಖರ್ಗೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗುತ್ತಾರೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬಂದವು.

ಇದರ ಬೆನ್ನಲ್ಲೇ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ಖರ್ಗೆ ಹೆಸರೂ ಮುಂಚೂಣಿಯಲ್ಲಿ
ಚರ್ಚಿತವಾಗುತ್ತಿದೆ. ರಾಜ್ಯ ರಾಜಕಾರಣದಲ್ಲಿ ಖರ್ಗೆ ಸಕ್ರಿಯರಾಗಿರುವ ಬಹುತೇಕ ಹಿರಿಯ ನಾಯಕರಲ್ಲಿ
ಒಬ್ಬರು. ಕಳೆದ 50 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸೋಲಿಲ್ಲದ ಸರದಾರ ಎಂದೇ ಬಿಂಬಿತರಾಗಿ ರಾಜ್ಯ
ವಿಧಾನಸಭೆ 9 ಬಾರಿ ಹಾಗೂ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಲೋಕಸಭೆಯಲ್ಲಿ
ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರಾಗಿ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು
ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, 2019ರಲ್ಲಿ ನಡೆದ ಲೋಕಸಭೆ  ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ತೆರಳಿದ್ದ ಉಮೇಶ್‌ ಜಾಧವ್‌ ವಿರುದಟಛಿ ಮೊದಲ ಬಾರಿಗೆ ಸೋಲು ಕಂಡರು. ಆದರೆ, ಮಹಾರಾಷ್ಟ್ರ ಉಸ್ತುವಾರಿಯಾಗಿ ಬಿಜೆಪಿಯೇತರ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣೀಕರ್ತರಾದರು. ಈಗ ರಾಜ್ಯದ ಉಪ ಚುನಾವಣೆಯಲ್ಲಿ ಖರ್ಗೆಯವರು ಸಕ್ರಿಯರಾಗುತ್ತಿದ್ದಂತೆ ದಲಿತ ಮುಖ್ಯಮಂತ್ರಿ ವಿಷಯ ಮತ್ತೆ ಮುಂಚೂಣಿಗೆ ಬಂದಿದೆ. ಆದರೆ, ದಲಿತ ಪದವೇ ಖರ್ಗೆಯವರು
ಮುಖ್ಯಮಂತ್ರಿ ಪದವಿಗೇರಲು ಅಡ್ಡಿಯಾಗುತ್ತಿದೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ
ಬರುತ್ತಿವೆ. ರಾಜ್ಯ ಕಾಂಗ್ರೆಸ್‌ನಲ್ಲಿ ಖರ್ಗೆಯವರು ಪ್ರಶ್ನಾತೀತ ನಾಯಕರಾಗಿ ಗುರುತಿಸಿಕೊಂಡಿದ್ದರೂ,
ಅವರಿಗೆ ಮುಖ್ಯಮಂತ್ರಿಯ ಉನ್ನತ ಹುದ್ದೆ ನೀಡುವ ಪ್ರಶ್ನೆ ಬಂದಾಗ ರಾಜ್ಯ ಕಾಂಗ್ರೆಸ್‌ನಲ್ಲಿ ಸಾಮಾಜಿಕ ಸ್ತರದ ವ್ಯವಸ್ಥೆ ಮುಂಚೂಣಿಗೆ ಬರುತ್ತದೆ ಎನ್ನಲಾಗುತ್ತಿದೆ.

2013ರಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದಿತ್ತು. ಆಗ ಮುಖ್ಯಮಂತ್ರಿ ಅಭ್ಯರ್ಥಿಯಾರಾಗಬೇಕು ಎಂದು
ಕಾಂಗ್ರೆಸ್‌ ಹೈಕಮಾಂಡ್‌ ನೇರವಾಗಿ ಶಾಸಕರ ಮೂಲಕವೇ ಆಯ್ಕೆಗೆ ಅವಕಾಶ ಕಲ್ಪಿಸಿತ್ತು. ಆ
ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ
ಬಹುತೇಕ ಶಾಸಕರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಬಹಿರಂಗವಾಗಿಯೇ
ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗುತ್ತಿದೆ.

2004ರಲ್ಲಿಯೂ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಸಂದರ್ಭದಲ್ಲಿಯೂ ಜೆಡಿಎಸ್‌ ಜೊತೆ ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆ ಮಾಡಿದಾಗ ಧರಂಸಿಂಗ್‌ ಅವರಿಗಿಂತ ಖರ್ಗೆ ಅರ್ಹರಾಗಿದ್ದರು
ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿದ್ದರೂ, ದೇವೇಗೌಡರು ಮಲ್ಲಿಕಾರ್ಜುನ ಖರ್ಗೆ ಬದಲು
ಧರಂಸಿಂಗ್‌ ಮುಖ್ಯಮಂತ್ರಿ ಆಗುವಂತೆ ನೋಡಿಕೊಂಡಿದ್ದರು ಎನ್ನಲಾಗಿದೆ. ಆ ನಂತರ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ವಿಷಯ ಪ್ರಸ್ತಾಪ ಬಂದಾಗಲೆಲ್ಲ ಖರ್ಗೆ ಹೆಸರು ಮುಂಚೂಣಿಗೆ ಬಂದರೂ ಅದರ ಜೊತೆಗೆ ದಲಿತ ಸಿಎಂ ಎಂಬ ವಿಷಯವೂ ಮುಂಚೂಣಿಗೆ ಬರುತ್ತದೆ. ಅದು ಖರ್ಗೆಯವರ ಬೇಸರಕ್ಕೂ ಕಾರಣವಾಗಿದೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಅವರು ತಮಗೆ ದಲಿತ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆ ನೀಡುವುದಾದರೆ ಬೇಡ, ಅರ್ಹತೆ ಮೇಲೆ ಹುದ್ದೆ ದೊರೆತರೆ ಒಪ್ಪಿಕೊಳ್ಳುವುದಾಗಿ ಬಹಿರಂಗವಾಗಿಯೇ ಹೇಳಿದ್ದರು.

Advertisement

ದೇವೇಗೌಡರ ತೀರ್ಮಾನ ಮುಖ್ಯ
ಈ ಉಪ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿಸಿದಷ್ಟು ಸ್ಥಾನ ಪಡೆಯದೇ ಹೋದರೆ, ಜೆಡಿಎಸ್‌ ಮತ್ತೆ ಕಿಂಗ್‌
ಮೇಕರ್‌ ಆಗುವ ಸಾಧ್ಯತೆ ಇದೆ. ಆಗ ಜೆಡಿಎಸ್‌ ವರಿಷ್ಠ ದೇವೇಗೌಡರ ದೃಷ್ಟಿ ಯಾರ ಮೇಲೆ ಬೀಳುತ್ತದೆ
ಎನ್ನುವುದು ಮುಖ್ಯವಾಗುತ್ತದೆ. ಕಾಂಗ್ರೆಸ್‌ ಮೂಲಗಳ ಪ್ರಕಾರ ಒಂದು ವೇಳೆ ಮತ್ತೆ ಮೈತ್ರಿ ಸರ್ಕಾರ ಅಧಿಕಾರಕ್ಕೆ  ಬರುವ ಅವಕಾಶ ದೊರೆತರೆ ಕಾಂಗ್ರೆಸ್‌ಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆತರೆ ಅಚ್ಚರಿಯ ವ್ಯಕ್ತಿಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next