Advertisement

Social Mediaಗಳ ಪಾತ್ರ ಒಳ್ಳೆಯದೋ? ಕೆಟ್ಟದ್ದೊ?

01:14 PM Jun 26, 2024 | Team Udayavani |

21ನೇ ಶತಮಾನದ ಬಹುಮುಖ್ಯ ಆವಿಷ್ಕಾರ ಹಾಗೂ ಬೆಳವಣಿಗೆ ಅಂತರ್ಜಾಲ ಎಂದರೆ ತಪ್ಪಾಗಲಾರದು. ಹಲವಾರು ಗಣಕಯಂತ್ರಗಳನ್ನು ಅಗೋಚರ ಜಾಲದಿ ಬೆಸೆದು ಪುಟಗಟ್ಟಳೆ ಮಾಹಿತಿಯನ್ನು ಕೀಲಿಮಣೆಯ ಒಂದು ಒತ್ತುಗುಂಡಿ ಒತ್ತಿದೊಡನೆ ಪರದೆಯ ಮೇಲೆ ಬರುವಂತೆ ಮಾಡಿದುದು ಮಾಹಿತಿ ತಂತ್ರಜ್ಞಾನದ ವಿಸ್ಮಯಕಾರಿ ಆವಿಷ್ಕಾರ.ಇದು ಇಂದು ಎಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿ ರುವುದು ಸುಳ್ಳಲ್ಲ.

Advertisement

ಈ ತಂತ್ರಜ್ಞಾನವು ನವೀಕರಣಗೊಂಡಂತೆ 2ಜಿ ,3ಜಿ 4ಜಿ ಗಳನ್ನೆಲ್ಲ ದಾಟಿ ಈಗ 5ಜಿ ಗೆ ಕಾಲಿಟ್ಟಿದ್ದೇವೆ. ಮೊದಲು ಅಕ್ಷರ ಹಾಗೂ ಸ್ಥಿರ ಚಿತ್ರಗಳಿಗೆ ಸೀಮಿತವಿದ್ದ   ಅಂತರ್ಜಾಲದ ದತ್ತಾಂಶ ಈಗ ಪ್ರಸಕ್ತವಾಗಿ ನಡೆಯುತ್ತಿರುವ ಘಟನೆಯ ನೇರ ಪ್ರಸಾರ ಮಾಡುವ ಸಾಮರ್ಥ್ಯ ಹೊಂದಿದೆ.

ಈ ಸಾಮಾಜಿಕ ಜಾಲತಾಣಗಳು ಸಾವಿರಾರು,ಲಕ್ಷಾಂತರ ಜನರಿರುವ ಕಂಪ್ಯೂಟರ್‌ ಜಗತ್ತಿನ ನಗರಗಳು ಎಂದರೆ ತಪ್ಪಾಗಲಾರದು.ಇಲ್ಲಿ ಜನರು ತಮಗಿರುವ ಅಕೌಂಟ್‌ ಮೂಲಕ ಪ್ರವೇಶ ಪಡೆಯುತ್ತಾರೆ.ಒಮ್ಮೆ ಇದರೊಳಗೆ ಕಾಲಿಟ್ಟರೆ ಮಾಯಾ ಪ್ರಪಂಚವೇ ತೆರೆದುಕೊಂಡಂತೆ.

ದಾರ್ಷನಿಕರು ನಮ್ಮ ಜಗತ್ತನ್ನು ಮಿಥ್ಯೆ ಎಂದರು ಆದರೆ ಈ ಅಂತರ್ಜಾಲದ ಮಿಥ್ಯಾ ಪ್ರಪಂಚವೇ ನಿಜವಾದ ನೈಜತೆ ಎಂದೆನಿಸುವಷ್ಟು ಇದರ ಗೀಳು ನಮ್ಮನ್ನು ಆವರಿಸಿದೆ.ಟ್ವಿಟ್ಟರ್‌, ಫೇಸ್‌ಬುಕ್‌,ವಾಟ್ಸಾಪ್‌,ಇನ್‌ಸ್ಟಾಗ್ರಾಮ್‌, ಸ್ನಾಪ್‌ಚಾಟ್‌ ಹೀಗೆ ಬಗೆ ಬಗೆಯ ಸಾಮಾಜಿಕ ಜಾಲ ತಾಣಗಳು ತಮ್ಮ ಮಾಯಾ ಪ್ರಪಂಚವನ್ನು ತೆರೆದಿಟ್ಟಿವೆ.

ಇಂದು ಸ್ಮಾರ್ಟ್‌ ಫೋನ್‌ ಹೊಂದಿರುವ ಎಲ್ಲರೂ ಒಂದಲ್ಲಾ ಒಂದು ಸಾಮಾಜಿಕ ತಾಣದ ಸದಸ್ಯರಾಗಿದ್ದಾರೆ.ಎಲ್ಲೆಡೆ ನಾವು ಜನರನ್ನು ಮೊಬೈಲ್‌ ನಲ್ಲಿ ಜಾಲತಾಣದಲ್ಲಿ ಸಕ್ರಿಯರಾಗಿರುವುದನ್ನು ನೋಡಬಹುದು. ಸಾಮಾಜಿಕ ಜಾಲತಾಣಗಳು ಸಂಪರ್ಕದಲ್ಲಿ ಮಾಹಿತಿಯನ್ನು ಒದಗಿಸುವಲ್ಲಿ ಕ್ರಾಂತಿಯನ್ನೇ ಮಾಡಿವೆ.

Advertisement

ಜಗತ್ತಿನಲ್ಲಿ ಯಾವುದೇ ಮೂಲೆಯಲ್ಲಿ ಏನೇ ಘಟನೆ ನಡೆದರೂ ಅದನ್ನು ಮೊಬೈಲ್‌ ಅಲ್ಲಿ ಸೆರೆಹಿಡಿದು ಜಾಲತಾಣಗಳಿಗೆ ಕಳುಹಿಸಬಹುದು.ಎಲ್ಲ ಸದಸ್ಯರು ಈ ಅಗೋಚರ ಜಾಲದ ಕೊಂಡಿಗಳಾಗಿರುವುದರಿಂದ ಮಿಂಚಿನ ವೇಗದಲ್ಲಿ ಸುದ್ದಿ ಎಲ್ಲರಿಗೂ ತಲುಪುತ್ತದೆ. ಹೀಗೆ ವಿಶಾಲ ಜಗತ್ತು ಒಂದು ಸಣ್ಣ ಹಳ್ಳಿಯಂತಾಗಿ ಮಾರ್ಪಡಿಸುವಲ್ಲಿ ಸಾಮಾಜಿಕ ಜಾಲತಾಣದ ಪಾತ್ರ ದೊಡ್ಡದು.

ಜಗತ್ತಿನ ಅತಿಮುಖ್ಯ ಸಂಘಟನೆಗಳು, ಜಾಗತಿಕ ನೇತಾರರು,ಅತಿ ಮುಖ್ಯ ವ್ಯಕ್ತಿಗಳು ತಮ್ಮ ಸಮಾಚಾರಗಳನ್ನು, ನಿಲುವುಗಳನ್ನು ನಿರಂತರವಾಗಿ ಟ್ವಿಟ್ಟರ್‌ ನಲ್ಲಿ, ಫೇಸುºಕ್‌ ನಲ್ಲಿ ಅಪ್ಡೆàಟ್‌ ಮಾಡುತ್ತಾರೆ.ಅತಿ ಮುಖ್ಯ ವಿಚಾರಗಳ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಣೆಯನ್ನೂ,ಕ್ಷಣಾರ್ಧದಲ್ಲಿ ಅಭಿಯಾನಗಳನ್ನು ಪೂರೈಸಲಾಗುತ್ತದೆ. ಇಂದು ಟ್ವಿಟ್ಟರ್‌ ದೇಶ ದೇಶಗಳ ರಾಜಕೀಯ ಬಾಂಧವ್ಯಗಳನ್ನು ಬೆಸೆಯುವ ಅಳಿಸುವ ಸಾಮರ್ಥ್ಯ ಹೊಂದಿದೆ.

ವಿಷಯ ರಚನೆ ಹಾಗೂ ಅದರ ಹಂಚಿಕೆ ಹಾಗೂ ಅದರ ತಲುಪುವಿಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನ ವೇಗದಲ್ಲಿ ಆಗುತ್ತದೆ. ಸಾಮಾಜಿಕ ಜಾಲತಾಣಗಳಿಂದ ಯಾರೊಬ್ಬರೂ ತಮ್ಮ ಪ್ರತಿಭೆಯನ್ನು ಪರಿಚಯಿಸಬಹುದು. ಅದನ್ನು ಗುರುತಿಸಿ ಪೂರಕವಾಗಿ ಬೆಳೆಯ ಬಹುದು.ಪ್ರಚಾರವೂ ಬೇಗ ತಲುಪುವುದರಿಂದ ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಇದರ ಪಾತ್ರ ಬಹಳ ಹಿರಿದು. ವಾಣಿಜ್ಯ ಕ್ಷೇತ್ರದಲ್ಲಂತೂ ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌ ಎನ್ನುವ ವಿಭಾಗಗಳೆ ತೆರೆದಿವೆ.ಹೀಗೆ ಅಂಗೈಯಲ್ಲಿಯೇ ಮಾಹಿತಿ ಭಂಡಾರವನ್ನೇ ತೆರೆದಿಡುವ ಜಾಲತಾಣಗಳು ತಂದಿಟ್ಟಿರುವ ದುಷ್ಪರಿಣಾಮಗಳೂ ಕಮ್ಮಿಯೇನಲ್ಲ.

ಮೊದಲಿಗೆ ನಮ್ಮ ಮೊಬೈಲ್‌ ವೀಕ್ಷಿಸುವ ಸಮಯ ವಿಪರೀತವೆನ್ನಿಸುವಷ್ಟು ಹೆಚ್ಚಾಗಿದೆ.ಮನೆ ಮಂದಿಯೆಲ್ಲಾ ಮೊಬೈಲ್‌ ದಾಸರಾಗಿ (ಪುಟ್ಟ ಮಕ್ಕಳೂ ಮೊದಲುಗೊಂಡು) ಆಸೀನರಾಗಿರುವುದು ಎಲ್ಲೆಡೆ ಕಂಡು ಬರುತ್ತದೆ. ಸಂಬಂಧಗಳಲ್ಲಿನ ಪ್ರೀತಿ,ಮಾತು ಕಥೆ ಕಡಿಮೆಯಾಗುತ್ತಿದೆ. ಫೇಸ್ಬುಕ್‌ ಅಲ್ಲಿ ಫ್ರೆಂಡ್‌ ಆಗಿ ಮದುವೆಯಾಗಿ ಕೈಕೊಟ್ಟು ಜೀವನವನ್ನೇ ಹಾಳು ಮಾಡಿಕೊಂಡವರ ಕಥೆಗಳು ಹೆಚ್ಚಾಗುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹೇಳಿ ವಂಚಿಸಿ ಹೆಣ್ಣು ಮಕ್ಕಳಿಗೆ ಮೋಸ ಮಾಡುವ, ಹಣ ಲಪಟಾಯಿಸುವ,ಸೈಬರ್‌ ಕ್ರೆ„ಮ್‌ ಎಸಗುವ,ಸುಳ್ಳು ಕಂಪನಿ ಸೃಷ್ಟಿಸುವ, ಒಬ್ಬರನ್ನೊಬ್ಬರು ಎತ್ತಿಕಟ್ಟುವ, ಸಂಸ್ಕೃತಿ,ಧರ್ಮ,ವ್ಯಕ್ತಿಗಳನ್ನು ತೇಜೋವಧೆ ಮಾಡುವ,ಸುಳ್ಳು ವೀಡಿಯೋ ಸೃಷ್ಟಿಸಿ ಹೆದರಿಸಿ ಹಣ ಪೀಕುವ ವ್ಯವಸ್ಥಿತ ತಂಡಗಳೆ ಸೃಷ್ಟಿಯಾಗಿವೆ.ಇವೆಲ್ಲಾ ಮಾನವನ ಅಶಾಂತಿಗೆ ಇನ್ನಷ್ಟು ಉರಿ ಹಚ್ಚಿವೆ.ಪ್ರಕೃತಿಯ ಎಲ್ಲ ವಿಷಯಗಳಲ್ಲೂ ಕೆಟ್ಟದ್ದು ಒಳ್ಳೆಯದು ಇದ್ದಿದ್ದೇ. ವಿವೇಕವಂತನಾದ ಮಾನವ ತನ್ನ ಬೆಳೆವಣಿಗೆಗೆ ಪೂರಕವಾದ ಅಂಶವನ್ನು ತೆಗೆದುಕೊಂಡು ಕೆಟ್ಟದ್ದನ್ನು ಬಿಡಬೇಕು. ಸಾಮಾಜಿಕ ಜಾಲತಾಣಗಳ ವಿಷಯವೂ ಇದರ ವ್ಯಾಪ್ತಿಗೆ ಬರುತ್ತದೆ.ಆದ್ದರಿಂದ ವಿವೇಕಯುತವಾದ ಇದರ ಬಳಕೆ ಮಾನವ ಜನಾಂಗಕ್ಕೆ ಹಾಗೂ ಮುಂದಿನ ಪೀಳಿಗೆಯ ಆರೋಗ್ಯಕ್ಕೆ ಒಳ್ಳೆಯದು ಎಂಬುದು ನಿಜವಾದ ಆಶಯ.

- ಚೇತನಾ ಭಾರ್ಗವ

ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next