Advertisement

ಬಂದ್‌ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ತರವೇ?

11:02 PM Sep 27, 2021 | Team Udayavani |

ಇಡೀ ದೇಶ ಈಗಷ್ಟೇ ಕೊರೊನಾ ಲಾಕ್‌ಡೌನ್‌ಗಳಿಂದ ಚೇತರಿಕೆ ಕಂಡು, ಆರ್ಥಿಕ ಅಭಿವೃದ್ಧಿಯತ್ತ ಸಾಗುತ್ತಿದೆ. ಜನರೂ ತಮ್ಮ ವ್ಯಾಪಾರ, ವ್ಯವಹಾರಗಳನ್ನು ಉತ್ತಮಗೊಳಿಸುವತ್ತ ನೋಡುತ್ತಿದ್ದಾರೆ. ಇದರ ಬೆನ್ನಲ್ಲೇ, ಪದೇ ಪದೆ ಪ್ರತಿಭಟನೆ, ಬಂದ್‌ ನೆಪದಲ್ಲಿ ಸಾರ್ವಜನಿಕರ ಬದುಕಿಗೆ ಅಡ್ಡಿ ಮಾಡುತ್ತಿರುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ.

Advertisement

ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಒಂದು ವರ್ಷದಿಂದ ಪ್ರತಿಭಟನೆ, ಹೆದ್ದಾರಿ ತಡೆಗಳು, ಬಂದ್‌ನಂಥ ಹೋರಾಟಗಳು ನಡೆಯುತ್ತಲೇ ಇವೆ. ಇತ್ತ ಕೇಂದ್ರ ಸರಕಾರ, ತನ್ನ ಮೂರು ಕಾಯ್ದೆಗಳೂ ಉತ್ತಮವಾಗಿವೆ. ಹಾಗಾಗಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಿದೆ. ಆದರೆ ಅತ್ತ ಸಂಯುಕ್ತ  ಕಿಸಾನ್‌ ಮೋರ್ಚಾವೂ ತನ್ನ ಪಟ್ಟು ಸಡಿಲಿಸುತ್ತಿಲ್ಲ. ಹೀಗಾಗಿ ಸರಕಾರ ಮತ್ತು ರೈತರ ನಡುವೆ ಸಾರ್ವಜನಿಕರು ಹೈರಾಣಾಗಿರುವುದು ಮಾತ್ರ ಸತ್ಯ.  ಈ ಪ್ರಶ್ನೆ ಎದ್ದಿರುವುದೇ ಸೋಮವಾರ ನಡೆದ ದೇಶವ್ಯಾಪಿ ಬಂದ್‌ ಬಗ್ಗೆ. ಹೋರಾಟವೇನೋ ಸರಿ, ಆದರೆ ಬಂದ್‌ ಆಚರಿಸುವ ಮೂಲಕ

ನಮ್ಮ ಮೇಲೇಕೆ ಗದಾಪ್ರಹಾರ ಎಂದು ಹೊಟೇಲ್‌ ಉದ್ಯಮಿಗಳು, ಅಂಗಡಿಗಳ ಮಾಲಕರು, ಇತರ ಸಣ್ಣಪುಟ್ಟ ವ್ಯಾಪಾರಿಗಳು ಪ್ರಶ್ನಿಸುತ್ತಿದ್ದಾರೆ. ಕೊರೊನಾ ಕಾಲದಲ್ಲಿ ನಾವು ತಿಂಗಳುಗಟ್ಟಲೆ ಲಾಕ್‌ಡೌನ್‌ನಂಥ ಬಂದ್‌ ಅನುಭವಿಸಿದ್ದೇವೆ. ಈಗಲೂ ಏನಾದರೂ ಒಂದು ನೆಪ ಮಾಡಿಕೊಂಡು ಬಂದ್‌ಗೆ ಕರೆ ನೀಡುವುದು ಸೂಕ್ತವೇ ಎಂಬುದು ಅವರ ಪ್ರಶ್ನೆಯಾಗಿದೆ.

ಇದನ್ನೂ ಓದಿ:ಬಿಜೆಪಿ ಸರ್ಕಾರ ಕೃಷಿ ವಿರೋಧಿ ನೀತಿ ಕೈ ಬಿಟ್ಟು ರೈತರ ಪರವಾಗಿ ನಿಲ್ಲಲಿ: ಪ್ರವೀಣ ಹೆಗಡೆ

ಅಷ್ಟೇ ಅಲ್ಲ, ರೈತರ ಹೋರಾಟಕ್ಕೆ ನಮ್ಮ ವಿರೋಧವಿಲ್ಲ, ಕಾಯ್ದೆಯಿಂದ ಅವರಿಗೆ ತೊಂದರೆಯಾಗುವುದಾದರೆ ಹೋರಾಟ ಮಾಡಲಿ. ಆದರೆ ಹೋರಾಟದ ದಾರಿ ಮಾತ್ರ ಸಾರ್ವಜನಿಕರಿಗೆ ತೊಂದರೆ ಕೊಡುವಂತೆ ಇರಬಾರದು ಎಂದು ಹೇಳಿದ್ದಾರೆ.  ಹೀಗಾಗಿಯೇ ಸೋಮವಾರ ಕರೆ ನೀಡಲಾಗಿದ್ದ ಭಾರತ್‌ ಬಂದ್‌ಗೆ ಪಂಜಾಬ್‌ ಮತ್ತು ಹರಿಯಾಣ ಬಿಟ್ಟು ಬೇರೆಡೆ ಅಷ್ಟೇನೂ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಕರ್ನಾಟಕದಲ್ಲೂ ಬಂದ್‌ಗೆ ನೈತಿಕ ಬೆಂಬಲವಷ್ಟೇ ಸಿಕ್ಕಿತು. ಹಾಗಂತ ರೈತರ ಹೋರಾಟಕ್ಕೆ ಯಾರೂ ಬೆಂಬಲ ಕೊಡುತ್ತಿಲ್ಲ ಎಂಬರ್ಥವಲ್ಲ. ಆದರೆ ಬಂದ್‌ ಮಾದರಿಯ ಹೋರಾಟ ಬೇಡ ಎಂಬುದು ಜನರ ನೇರ ಪ್ರತಿಕ್ರಿಯೆಯಾಗಿತ್ತು ಎಂಬುದನ್ನು ರೈತ ಮುಖಂಡರು ಅರ್ಥ ಮಾಡಿಕೊಳ್ಳಬೇಕು.

Advertisement

ಈಗಿನ ಪರಿಸ್ಥಿತಿ ಉತ್ತಮವಾಗಿಯೇನೂ ಇಲ್ಲ. ರೈತರ ಜತೆಗೆ ಎಲ್ಲ ವರ್ಗದವರೂ ಕಷ್ಟ ಅನುಭವಿಸುತ್ತಿದ್ದಾರೆ. ಕೊರೊನಾ ಇಡೀ ಮನುಕುಲಕ್ಕೇ ಕಾಡಿದೆ. ಮುಂದಿನ ದಿನಗಳಿಗಾದರೂ ಹೊಟ್ಟೆ ಬಟ್ಟೆ ಕಟ್ಟಿಕೊಳ್ಳುವ ಹಪಾಹಪಿಯೂ ಎಲ್ಲರಲ್ಲೂ ಇದೆ. ಎಲ್ಲಿ ಮತ್ತೂಂದು ಕೊರೊನಾ ಲಾಕ್‌ಡೌನ್‌ ಬಂದು ಬಿಡುತ್ತದೆಯೋ ಎಂಬ ಆತಂಕವೂ ಜನರಲ್ಲಿದೆ. ಹೀಗಾಗಿ ಸಾರ್ವಜನಿಕ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ  ಬಂದ್‌ಗೆ ಕರೆ ನೀಡುವವರು ವರ್ತಿಸಬೇಕು.

ಇನ್ನು ಕರ್ನಾಟಕದಲ್ಲೂ ಕೆಲವು ಮುಖಂಡರು ಬಂದ್‌ ಎಂಬ ಪದವನ್ನು ತೀರಾ ಹಗುರವಾಗಿ ಪರಿಗಣಿಸಿದಂತೆ ಕಾಣುತ್ತದೆ. ಎಲ್ಲದಕ್ಕೂ ಬಂದ್‌, ಪ್ರತಿಭಟನೆ, ಕೆಲಸಕ್ಕೆ ಗೈರು ಹೀಗೆ ನಾನಾ ರೀತಿಯ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಎಲ್ಲೋ ಒಂದು ಕಡೆ ಸಾರ್ವಜನಿಕರ ಆಕ್ರೋಶಕ್ಕೆ ತಾವು ತುತ್ತಾಗುತ್ತಿದ್ದೇವೆ ಎಂಬುದನ್ನು ಮರೆತಂತೆ ಕಾಣಿಸುತ್ತಿದೆ. ಇನ್ನು ಮುಂದಾದರೂ ಹೋರಾಟದ ನೆಪದಲ್ಲಿ ಸಾರ್ವಜನಿಕರಿಗೆ ಅಡ್ಡಿ ಪಡಿಸುವುದು ಬೇಡ.

Advertisement

Udayavani is now on Telegram. Click here to join our channel and stay updated with the latest news.

Next