Advertisement
ಮೈತ್ರಿ ಸರ್ಕಾರ ಬೀಳಿಸುವಲ್ಲಿ ಮತ್ತು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ “ಸಹಕರಿಸಿದ’ವರಿಗೆ ನೀಡಿದ್ದ ಭರವಸೆ ಈಡೇರಿಸುವ ಮೂಲಕ ತಮ್ಮ ಮಾತನ್ನು ಉಳಿಸಿಕೊಳ್ಳಬೇಕೆಂಬುದು ಯಡಿಯೂರಪ್ಪ ಅವರ ಚಿಂತನೆ. ಆದರೆ, ವ್ಯಕ್ತಿಗಿಂತ ಪಕ್ಷದ ನಿರ್ಧಾರವೇ ಅಂತಿಮ ಎಂಬುದು ಹೊಸದಾಗಿ ಗೆದ್ದು ಬಂದ ಶಾಸಕರಿಗೂ ಮನದಟ್ಟಾಗಬೇಕು ಎಂಬ ಇರಾದೆ ಪಕ್ಷದ ವರಿಷ್ಠರಿಗೆ ಇದೆ. ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿಗಳಷ್ಟೇ ಮಾತನಾಡುತ್ತಿದ್ದು, ವರಿಷ್ಠರಿಂದ ಈವರೆಗೆ ಯಾವುದೇ ಸ್ಪಂದನೆ, ಪ್ರತಿಕ್ರಿಯೆ ವ್ಯಕ್ತವಾಗದಿರುವುದು ಅದೇ ಕಾರಣಕ್ಕಾಗಿ ಎನ್ನಲಾಗಿದೆ.
ಅಲ್ಲದೆ, ತಿಂಗಳಾದರೂ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಾರದ ಕಾರಣ ಸಚಿವಾಕಾಂಕ್ಷಿಗಳು ಸದ್ಯ ಆತಂಕದಲ್ಲಿದ್ದಂತಿದೆ.
Related Articles
Advertisement
ಹೊಸ ಶಾಸಕರಿಗೆ ಮನವರಿಕೆ: ತಮಗೆ ಸ್ಥಾನಮಾನ ನೀಡುವ ವಿಚಾರದಲ್ಲಿ ಯಡಿಯೂರಪ್ಪ ನಿರ್ಧಾರ ಮಾತ್ರವಲ್ಲದೇ, ವರಿಷ್ಠರ ಒಪ್ಪಿಗೆಯೂ ಅಗತ್ಯ ಎಂಬುದು ಉಪಚುನಾವಣೆಯಲ್ಲಿ ಗೆದ್ದ ಬಿಜೆಪಿ ಶಾಸಕರಿಗೆ ಮನವರಿಕೆಯಾದಂತಾಗಿದೆ. ಇದು ಸಹಜವಾಗಿಯೇ ಮುಂದೆ ಅವರ ನಡೆ, ನುಡಿ, ಕಾರ್ಯ ನಿರ್ವಹಣೆಯಲ್ಲೂ ಪಕ್ಷದ ಶಿಸ್ತು ಪಾಲನೆ ಬಗ್ಗೆ ಸ್ಪಷ್ಟತೆ ಮೂಡಿಸಿದಂತಾಗಲಿದೆ. ಆ ಕಾರಣಕ್ಕೆ ವರಿಷ್ಠರು ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ನಿಲುವು ಪ್ರಕಟಿಸಿದಂತಿಲ್ಲ ಎನ್ನಲಾಗಿದೆ.
ಗೊಂದಲದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ?: ಸಂಪುಟ ವಿಸ್ತರಣೆ ಸಾಕೆ, ಪುನಾರಚಿಸಬೇಕೆ ಎಂಬ ಬಗ್ಗೆ ಯಡಿಯೂರಪ್ಪ ಅವರು ಗೊಂದಲದಲ್ಲಿದ್ದಾರೆ ಎನ್ನಲಾಗಿದೆ. ಗೆದ್ದ ಎಲ್ಲ 11 (ಅನರ್ಹ) ಶಾಸಕರನ್ನೂ ಸಚಿವರನ್ನಾಗಿ ಮಾಡಲು ಹೈಕಮಾಂಡ್ ಒಪ್ಪಿಗೆ ಇದೆ. ಆದರೆ, ಪರಾಜಿತ ಹಾಗೂ ಉಪಚುನಾವಣೆಗೆ ಸ್ಪರ್ಧಿಸದವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸಮ್ಮತಿ ಇಲ್ಲ ಎನ್ನಲಾಗಿದೆ. ಅವರಿಗೂ ಸ್ಥಾನಮಾನ ಕಲ್ಪಿಸಬೇಕಾದರೆ ಹಾಲಿ ಕೆಲ ಸಚಿವರನ್ನು ಕೈಬಿಟ್ಟು ಅವಕಾಶ ಕಲ್ಪಿಸಲಿ ಎಂಬ ಧೋರಣೆಯೂ ಇದೆ.
ಹೊಸದಾಗಿ ಡಿಸಿಎಂ ಹುದ್ದೆ ಸೃಷ್ಟಿ, ಇಲ್ಲವೇ ಹಾಲಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಕೈಬಿಡಬೇಕೆ ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದ್ದು, ನಿರ್ದಿಷ್ಟ ಸಂಭಾವ್ಯರ ಪಟ್ಟಿಯೊಂದಿಗೆ ವರಿಷ್ಠರ ಭೇಟಿಗೆ ಸಾಧ್ಯವಾಗಿಲ್ಲ. ಅಲ್ಲದೇ ಪಕ್ಷದ ಮಟ್ಟದಲ್ಲಿ ಈವರೆಗೆ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಬಗ್ಗೆ ಗಂಭೀರ ಚರ್ಚೆ ನಡೆದಿಲ್ಲ ಎಂದು ಮೂಲಗಳು ಹೇಳಿವೆ.
* ಎಂ. ಕೀರ್ತಿಪ್ರಸಾದ್