ಬೆಂಗಳೂರು: ಅಳೆದು-ತೂಗಿ ಕೊನೆಗೂ ಸರಕಾರ ಸಾರಿಗೆ ನಿಯಮಗಳ ಉಲ್ಲಂಘನೆಯ ದಂಡದ ಪ್ರಮಾಣವನ್ನು ತಗ್ಗಿಸಲು ಮುಂದಾಗಿದ್ದು, ಬಹುತೇಕ ಎಲ್ಲ 24 ನಿಯಮಗಳ ಉಲ್ಲಂಘನೆಗೆ ಕೇಂದ್ರ ಸರಕಾರ ವಿಧಿಸಿರುವ ದಂಡದ ಮೊತ್ತ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.
ವಿಕಾಸಸೌಧದಲ್ಲಿ ಶುಕ್ರವಾರ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಬಳಿಕ ಈ ಸಂಬಂಧ ಸೂಚನೆ ನೀಡಲಾಗಿದೆ. ಶನಿವಾರ ಪರಿಷ್ಕೃತ ದರವನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ.
ಈ ಮೊದಲು ಗುಜರಾತ್ ಮಾದರಿಯಲ್ಲಿ ದರ ಪರಿಷ್ಕರಣೆಗೆ ನಿರ್ಧರಿಸಲಾಗಿತ್ತು. ಈಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಕುಡಿದು ವಾಹನ ಚಾಲನೆ ಹೊರತುಪಡಿಸಿ ಉಳಿದೆಲ್ಲ ನಿಯಮಗಳ ಉಲ್ಲಂಘನೆಯಲ್ಲೂ ದಂಡ ತಗ್ಗಿಸಲು ಸರಕಾರ ಮುಂದಾಗಿದೆ. ಈ ಸಂಬಂಧ ಸಾರಿಗೆ ಇಲಾಖೆಗೆ ಸೂಚಿಸಿದ್ದು, ಅಧಿಕಾರಿಗಳು ಪರಿಷ್ಕೃತ ಪಟ್ಟಿ ಸಿದ್ಧ ಪಡಿಸುತ್ತಿದ್ದಾರೆ.
ಕನಿಷ್ಠ 20ರಿಂದ ಗರಿಷ್ಠ 80ರಷ್ಟು ದರ ಪರಿಷ್ಕರಣೆ ಮಾಡಲು ಉದ್ದೇಶಿಸಿದ್ದು, ಸರಾಸರಿ ಶೇ. 50ರಷ್ಟು ಕಡಿಮೆ ಆಗಲಿದೆ. ಶನಿವಾರ ಸಾರಿಗೆ ಇಲಾಖೆಯು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಸಾರಿಗೆ ಸಚಿವರು ಅನುಮೋದನೆ ನೀಡಿದ ಅನಂತರ ಅಂತಿಮಗೊಳ್ಳಲಿದೆ. ಎರಡು- ಮೂರು ದಿನಗಳಲ್ಲಿ ಅಧಿಸೂಚನೆ ಹೊರ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
“ನಿಯಮದ ಪ್ರಕಾರ ನೇರವಾಗಿ ರಾಜ್ಯಕ್ಕೆ ಅಧಿಕಾರ ಇಲ್ಲದಿರಬಹುದು. ಆದರೆ ಪರೋಕ್ಷವಾಗಿ ಹೆಚ್ಚು-ಕಡಿಮೆ ಮಾಡಲು ಅವಕಾಶ ಇದೆ’ ಎಂದು ಕಾನೂನು ಇಲಾಖೆ ಅಭಿ ಪ್ರಾಯಪಟ್ಟಿದೆ. ಅದರಂತೆ ಈ ಮೊದಲು ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ಹೊರಡಿಸಿದ್ದ ಅಧಿ ಸೂಚನೆ ಯನ್ನು ಹಿಂಪಡೆದು, ಶೀಘ್ರದಲ್ಲೇ ಪರಿಷ್ಕರಣೆ ಮಾಡಿ ಮತ್ತೂಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ದಂಡ ಪರಿಷ್ಕರಣೆ ವಿಧಾನ ಶೇ. 80ರಷ್ಟು ಗುಜರಾತ್ ಮಾದರಿ ಆಗಿರಲಿದೆ. ಕೆಲವು ದಂಡದ ಪ್ರಮಾಣ ಗುಜರಾತ್‌ಗಿಂತ ಭಿನ್ನವಾಗಿಯೂ ಇರಲಿದೆ ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.