Advertisement
ಏಕಾಗ್ರತೆ. Concentration ಎಂದರೇನು? ಒಂದು ರೀತಿಯಲ್ಲಿ ವ್ಯಾಖ್ಯಾನಕ್ಕೆ ಮೀರಿದ ಪ್ರಶ್ನೆ ಇದು ಎಂಬ ತಾರ್ಕಿಕ ಉತ್ತರ ದೊರೆಯ ಬಹುದು. ಆದರೆ, ಪರಂಪರೆ ಅಂತಃಸತ್ವವನ್ನು ಒಂದಿಷ್ಟು ಬಗೆದು ನೋಡಿದರೆ ನಿಜಾರ್ಥವು ಖಂಡಿತವಾಗಿಯೂ ದೊರೆಯುವುದು. ಒಂದು ಪ್ರಾತಿನಿಧಿಕ ವಾದ ಉದಾಹರಣೆಯನ್ನು ನೀಡುವುದಾದರೆ-ಯೋಗ. ದೈಹಿಕ ಮತ್ತು ಮಾನಸಿಕವಾದ ಏಕಾಗ್ರತೆಯನ್ನು ಏಕಕಾಲದಲ್ಲಿ ರೂಪಿಸುವ ಬಗೆ ಇದು. ಆದ್ದರಿಂದ, ಭಾರತದ ಈ ಕೊಡುಗೆ ಈಗ ವಿಶ್ವಮಾನ್ಯತೆಯನ್ನು ಪಡೆಯಲು ಸಾಧ್ಯವಾಗಿದೆ.
Related Articles
Advertisement
ಸಮಕಾಲೀನ ಸಂದರ್ಭದಲ್ಲಿ ಅನೇಕ ಸಾಧ್ಯತೆಗಳು ಏಕಕಾಲಕ್ಕೆ ಲಭ್ಯ ಆಗಿರುವುದೇ ಆಧುನಿಕ ರೀತಿಯ ಅಸಹಜ ಒತ್ತಡಗಳಿಗೆ ಕಾರಣವಾಗಿದೆ.
ಈ ಬಗ್ಗೆ ಕೇವಲ 25-30 ವರ್ಷ ಹಿಂತಿರುಗಿ ನೋಡಿದರೆ ಸಾಕು. ಆ ಕಾಲಕ್ಕೆ ಒಂದು ಕಾದಂಬರಿಯ, ದೈನಿಕ ಸಹಿತ ಎಲ್ಲಾ ನಿಯತಕಾಲಿಕ ಗಳ, ಸಾಹಿತ್ಯ ಕೃತಿಗಳ ಓದುವಿಕೆ ಒಂದೇ ಹಂತದಲ್ಲಿ ಪೂರ್ಣ ವಾಗುತ್ತಿತ್ತು. ಅಂದರೆ, ಒಂದು ಕಾದಂಬರಿಯನ್ನು ಓದಲು ಕೈಗೆತ್ತಿ ಕೊಂಡರೆ, ಅದರ ಮೊದಲ ಪುಟದಿಂದ ಕೊನೆಯ ಪುಟದ ತನಕದ ಓದು ಸತತವಾಗಿರುತ್ತಿತ್ತು. ಇದೇ ಮಾತು ಭಜನೆ, ಸಂಕೀರ್ತನೆ, ಸಂಗೀತಗೋಷ್ಠಿ, ಯಕ್ಷಗಾನ, ಹರಿಕತೆ ಮುಂತಾದ ಎಲ್ಲಾ ಲಲಿತ ಕಲೆಗಳ ವೀಕ್ಷಣೆ- ಕೇಳುವಿಕೆಗೂ ಅನ್ವಯ.
ರೇಡಿಯೋಗದಲ್ಲಿನ ನಿರ್ದಿಷ್ಟ ಕಾರ್ಯ ಕ್ರಮಗಳನ್ನು ಆಲಿಸು ವುದು; ಟಿವಿಯ ಆರಂಭಿಕ ವರ್ಷಗಳಲ್ಲಿ ಧಾರಾವಾಹಿಗಳ ವೀಕ್ಷಣೆ ಕೂಡಾ. ಎಲ್ಲವೂ ಏಕಾಗ್ರತೆಯ ಚೌಕಟ್ಟಿನಲ್ಲಿರುತ್ತಿತ್ತು. ಈ ಮೂಲಕ ಏನು ಸಾಧನೆಯಾಯಿತು ಎಂಬ ಪ್ರಶ್ನೆ ಉದ್ಭವಿಸಿದರೆ, ಅದಕ್ಕೆ ಉತ್ತರ: ಮನಸ್ಸನ್ನು ಅರಳಿಸುವ ರಸಗ್ರಹಣ.
ಆದರೆ, ಈಗ ನೂರಾರು ಅಡಚಣೆಗಳು. ಕಾದಂಬರಿ ಅಥವಾ ಸಾಹಿತ್ಯ ಕೃತಿಯನ್ನು ಓದಲು ಆರಂಭಿಸಿದ ಅಥವಾ ಮಧುರ ವಾದ ಸಂಗೀತ ಆಸ್ವಾದಿಸಲು ಆರಂಭವಾದ ರಿಂಗಣಗೊಳ್ಳುವ ಸೆಲ್‌ಫೋನ್, ವಾಟ್ಸಾಪ್- ಇನ್‌ಸ್ಟಾಗ್ರಾಂ ಸಂದೇಶಗಳು, ಸ್ನೇಹಿತರ ಕರೆಗಳು ಇತ್ಯಾದಿ! ಹೀಗೆ, ಕಾದಂಬರಿಯ ಮೊದಲ ಪುಟವನ್ನೇ ಹತ್ತಾರು ಬಾರಿ ಓದಿದವರಿರಬಹುದು; ಇದು ಆಕ್ಷೇಪಣೆಯಲ್ಲ; ನಾವು ಕಳೆದುಕೊಳ್ಳುವ ಸಹೃದಯಿ ಅನುಸಂಧಾನದ ಬಗೆಗಿನ ಆತಂಕ ಅಷ್ಟೆ! ಇತ್ತೀಚೆಗೆ ವಿವಿಧೆಡೆ ಆರಂಭವಾಗಿರುವ ಏಕಾಗ್ರತಾ ಜಾಗೃತಿಯ ಶಿಬಿರಗಳು ಈ ಮಾತನ್ನು ಪುಷ್ಟೀಕರಿಸುತ್ತದೆ.
ಅಂದಹಾಗೆ: ಇದು ಓದಿದ ನೆನಪು ಬಾದಾಮಿಯನ್ನು ರಾತ್ರಿ ನೀರಲ್ಲಿ ನೆನೆಸಿ, ಮರು ಮುಂಜಾನೆ ತಿಂದರೆ, ನೆನಪಿನ ಶಕ್ತಿ ವೃದ್ಧಿಸುತ್ತದೆ. ಆತ ಬಾದಾಮಿಯನ್ನು ತಂದ. ಆದರೆ, ರಾತ್ರಿ ನೀರಲ್ಲಿ ನೆನೆಯ ಹಾಕಲು ಮರೆತ !
-ಮನೋಹರ ಪ್ರಸಾದ್