Advertisement

ಒತ್ತಡಮುಕ್ತ ಜೀವನ ಸಾಧ್ಯವೇ…?

01:10 AM Feb 07, 2021 | Team Udayavani |

ಇಂದಿನ ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಒತ್ತಡಯುಕ್ತ ಜೀವನವನ್ನು ನಾವು ನಮ್ಮ ಅರಿವಿಗೆ ಬಂದೋ ಬಾರದೆಯೋ ಅದನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೇವೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದೇವೆ. ಸ್ವಲ್ಪ ಹೊತ್ತು ಸುಮ್ಮನೆ ಕುಳಿತು ಕಾಫಿ ಹೀರಲು ನಮ್ಮಲ್ಲಿ ಸಮಯವಿಲ್ಲ. ತ‌ಂದೆ-ತಾಯಿ, ಬಂಧು-ಬಳಗದೊಂದಿಗೆ ಹತ್ತಿರದಿಂದ ಮಾತ ನಾಡಿಸಲು ನಮ್ಮ ಉದ್ಯೋಗ ಬಿಡುತ್ತಿಲ್ಲ. ಮೊಬೈಲ್‌ನಲ್ಲಿ ನಾವು ಗಂಟೆಗಟ್ಟಲೆ ವ್ಯವಹರಿ ಸುತ್ತೇವೆ. ಆದರೆ ನಮ್ಮ ಮಕ್ಕಳ ಜತೆ, ಅವರ ಆಸಕ್ತಿ-ಅಭಿರುಚಿಗಳೊಂದಿಗೆ ಬೆರೆಯುವ ಆಸ್ಥೆ ನಮಗಿಲ್ಲ. ಅವರ ಅನುಭವಗಳನ್ನು ನಮ್ಮೊಡನೆ ಹಂಚಿಕೊಳ್ಳಲು ಬಿಡುತ್ತಿಲ್ಲ ನಾವು. ನಮಗೆ ಒಂದು ನಿಮಿಷ ಪ್ರಾರ್ಥಿಸಲು, ಧ್ಯಾನಿಸಲು ಮನಸ್ಸಿಲ್ಲ, ವ್ಯವಧಾನವಿಲ್ಲ. ಎಲ್ಲಕ್ಕಿಂತ ಮುಖ್ಯ ವಾಗಿ ಸಮಯವಿಲ್ಲ. ಆದರೆ ಈ ಹಿಂದಿನಂತೆ ದಿನಕ್ಕೆ 24 ತಾಸುಗಳೇ ಇವೆ. ಆದರೂ ನಮ್ಮನ್ನು ಸಮಯದ ಅಭಾವ ಕಾಡುತ್ತಿದೆ. ನಿಜಕ್ಕೂ ನಮ್ಮ ನಡುವೆ ಏನು ನಡೆಯುತ್ತಿದೆ? ನಾಗಾಲೋಟ ದಿಂದ ಓಡುತ್ತಿರುವ ನಮ್ಮ ಜೀವನವೇ ಇವ‌ಕ್ಕೆಲ್ಲ ಮುಖ್ಯ ಕಾರಣವೇ?

Advertisement

ನಿಜಕ್ಕೂ ಚಿಂತಿಸಬೇಕಾದ ವಿಚಾರ ಇದು. ಎಲ್ಲಿಯೋ ನಾವು ನಮ್ಮ ಗುರಿ ಸಾಧಿಸುವ ಭರದಲ್ಲಿ ಎಡವಿ ಬೀಳುತ್ತಿದ್ದೇವೆ. ಇದು ನಮ್ಮ ಜೀವನದ ಮೇಲೆ ನಂಬಲಸಾಧ್ಯವಾದ ಆಘಾತಕಾರಿ ಪರಿಣಾಮವನ್ನುಂಟು ಮಾಡು ತ್ತಿದೆ. ಎಲ್ಲದಕ್ಕೂ ಮುಖ್ಯ ಕಾರಣ ನಮ್ಮ ಒತ್ತಡ ಯುಕ್ತ ಜೀವನ. ಒತ್ತಡವನ್ನು ಮುಖ್ಯವಾಗಿ ಎರಡು ರೀತಿಯಲ್ಲಿ ಕಾಣಬಹುದು. ಮೊದಲನೆ ಯದಾಗಿ ಸಕಾರಾತ್ಮಕ ಮತ್ತು ಎರಡನೆಯದಾಗಿ ನಕಾರಾತ್ಮಕ ಒತ್ತಡ.

ಸಕಾರಾತ್ಮಕ ಒತ್ತಡವನ್ನು ವಿಶ್ಲೇಷಿಸುವು ದಾದರೆ ಈ ರೀತಿಯ ಒತ್ತಡವು ನಮ್ಮ ಜೀವನಕ್ಕೆ ಬೇಕಾದ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಾಧನವಾಗಿದೆ. ಇಲ್ಲಿ ಒತ್ತಡ ಉಂಟಾಗುವುದು ನಮ್ಮ ಜೀವನದ ಸಾಧನೆಗಾಗಿ. ಅಂದರೆ ಆರ್ಥಿಕ ಸುಧಾರಣೆಗಾಗಿ, ಜೀವನದ ಸಾಫ‌ಲ್ಯಕ್ಕಾಗಿ, ಉತ್ತಮ ಶಿಕ್ಷಣ ಪಡೆಯುವುದು, ಉದ್ಯೋಗ ಗಿಟ್ಟಿಸಿಕೊಳ್ಳುವುದು, ಉತ್ತಮ ವ್ಯಕ್ತಿ ಸಂಬಂಧ ಹೊಂದುವುದಕ್ಕಾಗಿ…ಹೀಗೆ ಹತ್ತು ಹಲವು ಸಂದರ್ಭಗಳಲ್ಲಿ ನಾವು ಒತ್ತಡಕ್ಕೆ ಒಳಗಾಗುತ್ತೇವೆ. ಇದುವೇ ಸಕಾರಾತ್ಮಕ ಒತ್ತಡ. ಸಾಧಿಸುವ ಛಲದ ಈಡೇರಿಕೆಗಾಗಿ ಈ ರೀತಿಯ ಒತ್ತಡ ಸಹಕಾರಿಯಾಗಿದೆ. ಒಟ್ಟಾರೆಯಾಗಿ ಇದು ಧನಾತ್ಮಕವಾಗಿದ್ದು ಸಾಕಷ್ಟು ಅನುಭವಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ಇನ್ನು ಎರಡನೆಯದಾಗಿ ನಕಾರಾತ್ಮಕ ಒತ್ತಡ. ಇದು ಹೆಸರೇ ಸೂಚಿಸುವಂತೆ ನಮ್ಮ ಮಟ್ಟಿಗೆ ಋಣಾತ್ಮಕವೇ ಸರಿ. ಈ ರೀತಿಯ ಒತ್ತಡಕ್ಕೆ ಒಳಗಾಗಲೇಬಾರದು. ಇದು ನಮ್ಮ ಜೀವಕ್ಕೆ ಅಪಾಯವನ್ನು ಒಡ್ಡುತ್ತದೆ. ಚಿಕ್ಕ ಚಿಕ್ಕ ವಿಷಯಗಳಿಗೆ ಸುದೀರ್ಘ‌ವಾಗಿ ಆಲೋಚಿಸಿ ಅನಾಹುತಗಳನ್ನು ತಂದುಕೊಳ್ಳುವುದು, ಇಂತಹ ಒತ್ತಡ ಕೇವಲ ನಮಗೆ ಮಾತ್ರವಲ್ಲ ಇತರರಿಗೂ ಕಿರಿಕಿರಿಯನ್ನು ಉಂಟುಮಾಡುತ್ತದೆ. ಋಣಾ ತ್ಮಕ ಭಾವನೆಗಳನ್ನು ಬೆಳೆಸಿಕೊಂಡಾಗ ತಮ್ಮ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅಸಾಧ್ಯ. ಇತರರೊಂದಿಗೆ ಬೆರೆಯಲು ಕೂಡ ಸಾಧ್ಯವಾಗಲಾರದು. ಇಂತಹ ಒತ್ತಡದಿಂದ ಮಾನಸಿಕ ಖನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ನನ್ನಿಂದ ಏನೂ ಸಾಧ್ಯವಿಲ್ಲ, ನಾನು ಜೀವನದಲ್ಲಿ ಮುಂದುವರಿಯಲಾರೆ ಎಂಬೆಲ್ಲ ನಕಾರಾತ್ಮಕ ಧೋರಣೆಗಳ ಸರಮಾಲೆ ಬೆಳೆಯುತ್ತಾ ಹೋಗುತ್ತದೆ. ದುಸ್ತರ ಬದುಕು ನಮ್ಮದಾಗುತ್ತದೆ.

ಒತ್ತಡ ರಹಿತ ಬದುಕು ನೀರಸ. ಅದು ನಿಮ್ಮನ್ನು ನಿಂತ ನೀರಾಗಿಸುವ ಸಾಧ್ಯತೆಗಳಿವೆ. ನಿಮ್ಮ ಮೇಲೆ ಒತ್ತಡ ಬಿದ್ದಾಗಲೇ ನೀವೊಂದಿಷ್ಟು ಯೋಚನಾಶೀಲರಾಗಿ ಕಾರ್ಯಶೀಲರಾಗಲು ಸಾಧ್ಯ. ಹಾಗೆಂದು ಅತಿಯಾದ ಒತ್ತಡವನ್ನು ಮೈಮೇಲೆ ಎಳೆದುಕೊಳ್ಳುವ ಅಗತ್ಯವೂ ಇಲ್ಲ. ಇದು ನಿಮ್ಮ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡಬಲ್ಲದು. ಸಕಾರಾತ್ಮಕ ಒತ್ತಡವೇನೋ ನಿಮಗೆ ಗುರಿ ತಲುಪಲು ಸಹಾಯಕವಾಗಬಹುದು. ಆದರೆ ಋಣಾತ್ಮಕ ಭಾವನೆಗಳನ್ನು ಮನಸ್ಸಿನಿಂದ ಬೇರು ಸಹಿತ ಕಿತ್ತೂಗೆಯಬೇಕು. ಇಂತಹ ಒತ್ತಡದ ಜತೆಗೆ ಸೆಣಸಾಡಿ ಗೆದ್ದು ಜೀವನ ನಿರ್ವಹಣೆಗೆ ಅಣಿಯಾಗಬೇಕು. ಒತ್ತಡ ಯಾವುದೇ ಇರಲಿ, ಅದನ್ನು ಸ್ವೀಕರಿಸುವ ಮನೋಭಾವದ ಮೇಲೆ ಅದರ ಪರಿಣಾಮ ಅಡಗಿದೆ.

Advertisement

ದುಡಿದು ಹಣ ಸಂಪಾದಿಸುವ ಧಾವಂತ ದಲ್ಲಿ ನಮ್ಮ ಜೀವನದ ಸಿಹಿ ಕ್ಷಣಗಳನ್ನು ಅನುಭವಿಸಲು ಮರೆತಿದ್ದೇವೆ. ನಿಜಕ್ಕೂ ಒತ್ತಡ ಮುಕ್ತ ಜೀವನ ನಡೆಸಲು ಸಾಧ್ಯವೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ, ಒತ್ತಡದಿಂದ ಸಂಪೂರ್ಣವಾಗಿ ಅಲ್ಲದಿದ್ದರೂ ನಮ್ಮ ಬದುಕನ್ನು ಇನ್ನಷ್ಟು ಪರಿಪೂರ್ಣಗೊಳಿಸಲು ನಾವೇ ನಕಾರಾತ್ಮಕ ಒತ್ತಡದಿಂದ ಸಾಧ್ಯವಾದಷ್ಟು ಹೊರಬರಲು ಪ್ರಯತ್ನಿಸಬೇಕು. ನಮ್ಮ ಇತಿಮಿತಿಯೊಂದಿಗೆ ಬದುಕು ಕಟ್ಟಿಕೊಳ್ಳಲು ಕಲಿಯಬೇಕು. ಒಟ್ಟಾರೆಯಾಗಿ ಉತ್ತಮ ಹವ್ಯಾಸಗಳನ್ನು, ಅಭ್ಯಾಸಗಳನ್ನು ರೂಢಿಸಿ ಕೊಂಡು ಬಾಳುವಂತವರಾಗಬೇಕು. ಅಂದಾಗ ಮಾತ್ರ ಒತ್ತಡಮುಕ್ತರಾಗಿ ಸಾರ್ಥಕ ಬದುಕನ್ನು ಕಂಡುಕೊಳ್ಳಬಹುದು.

ನಕಾರಾತ್ಮಕ ಒತ್ತಡದಿಂದ ಹೊರ ಬರಲು ಕೆಲವು ಉಪಾಯಗಳು
– ನಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಮುಕ್ತವಾಗಿ ಇತರರೊಂದಿಗೆ ಹಂಚಿಕೊಂಡು ಚರ್ಚಿಸುವುದು.
– ಬೆಳಗ್ಗಿನ ಸ್ವಲ್ಪ ಸಮಯವನ್ನು ಯೋಗ ಮತ್ತು ಧ್ಯಾನಕ್ಕಾಗಿ ಮೀಸಲಿಡುವುದು. ಆ ಮೂಲಕ ಮನಸ್ಸನ್ನು ಒಂದೆಡೆಗೆ ಕೇಂದ್ರೀಕರಿಸಬಹುದು.
– ವಾಕಿಂಗ್‌, ವ್ಯಾಯಾಮ ಮಾಡುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ.
– ನೋವು-ನಲಿವುಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದು.
– ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು.
– ನಮಗೆ ಪುಸ್ತಕಕ್ಕಿಂತ ಇನ್ನೋರ್ವ ಒಳ್ಳೆಯ ಸ್ನೇಹಿತ ಸಿಗಲಾರ. ಆದ್ದರಿಂದ ಮನಸ್ಸಿಗೆ ಖುಷಿ ಕೊಡುವ ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು.
– “ಅನುಭವವೇ ಶಿಕ್ಷಣ’ ಎಂಬಂತೆ ಹಿರಿಯರ ಅನುಭವದ ನುಡಿಗಳನ್ನು ಪಾಲಿಸುವುದು. ಹಾಗೆಯೇ ಕಿರಿಯರ ನುಡಿಗಳನ್ನು ವಿಮರ್ಶಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವುದು.
– ಧಾರ್ಮಿಕ ಕೇಂದ್ರಗಳು, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ, ದೂರದ ಊರುಗಳಿಗೆ ಪ್ರವಾಸವನ್ನು ಕೈಗೊಳ್ಳುವುದು.
– ತಾನು ಎದುರಿಸುವ ಸಮಸ್ಯೆಗಳನ್ನು ತನ್ನ ಕುಟುಂಬದವರೊಂದಿಗೆ ಶಾಂತಚಿತ್ತರಾಗಿ ಚರ್ಚಿಸಿ ಎಲ್ಲರ ಸಮಕ್ಷಮದಲ್ಲಿ ಪರಿಹಾರ ಕಂಡುಕೊಳ್ಳುವುದು.

– ಗಾಯತ್ರಿ ನಾರಾಯಣ ಅಡಿಗ, ವಂಡ್ಸೆ

Advertisement

Udayavani is now on Telegram. Click here to join our channel and stay updated with the latest news.

Next