Advertisement
ಮೇಲ್ನೋಟಕ್ಕೆ ಇದೊಂದು ಕಥೆಯಂತೆ ಕಾಣಬಹುದು. ಆದರೆ ನೂರಕ್ಕೆ ನೂರು ವಾಸ್ತವವಿದು. ಅತೀಂದ್ರಿಯ ಜ್ಞಾನವನ್ನು ಕೊಡುವ ಭಗವದ್ ಕೃಪೆ ಎಲ್ಲರಿಗೂ ಲಭ್ಯವಿಲ್ಲ. ದೇವಿ ತನ್ನ ಭಕ್ತರಿಗೆ ದಿವ್ಯ ಜ್ಞಾನವನ್ನು ಕರುಣಿಸುತ್ತಾಳೆ. ಪಂಚೇಂದ್ರಿಯಗಳು ಅಷ್ಟು ಸುಲಭದಲ್ಲಿ ನಮ್ಮ ನಿಯಂತ್ರಣಕ್ಕೆ ಬರುವುದಿಲ್ಲ. ಆದರೂ ಪ್ರಕೃತಿ ಇವುಗಳನ್ನು ಮೀರಿದ ವಿವೇಕವನ್ನು ನೀಡಿದೆ. ಪ್ರಾಣಿಗಳ ಪಾಲಿಗೂ ಕಿವಿ, ಕಣ್ಣು, ಮೂಗು, ನಾಲಗೆ, ಚರ್ಮಗಳುಂಟು. ಆದರೆ ಮನುಷ್ಯನಂತೆ ಆನೆ ತನ್ನ ಮನಸ್ಸನ್ನು ವಿವೇಕದಿಂದ ನಿಯಂತ್ರಿಸಿಕೊಳ್ಳದು. ಹುಲಿಯೂ ಅಷ್ಟೇ. ಆದರೆ ಮನುಷ್ಯನ ವಿವೇಕ ಪ್ರಾಣಿಗಳನ್ನು ಮೀರಿ ನಿಂತಿರುವ ಸಂಪನ್ನತೆಗೆ ನಮ್ಮನ್ನು ಹಿಡಿದು ತಂದಿದೆ. ಇದು ಆಕಸ್ಮಿಕವಲ್ಲ, ದೈವ ಸಾಕ್ಷಾತ್ಕಾರ. ಕಣ್ಣು ಮುಚ್ಚಿಕೊಂಡಾಗ ಕತ್ತಲೇ ಕಾಣಿಸುವುದು. ಆದರೆ ಕತ್ತಲೆ, ಬೆಳಕು, ಬಣ್ಣ ಸಾವಿರಾರು ರೂಪ ವಿಶೇಷಗಳು ಕಣ್ಣು ಮುಚ್ಚಿಕೊಂಡಾಗಲೂ ಸ್ಪಷ್ಟ. ಇಂಥ ಈ ಅವ್ಯಕ್ತವೇ ನಮ್ಮೊಳಗಿನ ಬ್ರಹ್ಮ. ಹೀಗಾಗಿಯೇ ಅಹಂ ಬ್ರಹ್ಮಾಸ್ಮಿ ಎಂದು ಶಂಕರರು ಹೇಳಿದ್ದು. ಕಣ್ಣು ಮುಚ್ಚಿಕೊಂಡರೆ ಸಾಲದು, ಕಣ್ಣುಗಳನ್ನು ತೆರೆಯದೇ ಜೀವನ ಸಾಗದು. ಆಗ ನಾವೇ ಬೇರೆ, ಎದುರಿಗಿನ ಬ್ರಹ್ಮ ಸೃಷ್ಟಿಯೇ ಬೇರೆ. ನಾವು, ನಮ್ಮನ್ನು ಸೃಷ್ಟಿಸಿದ ಬ್ರಹ್ಮ ಬೇರೆ ಬೇರೆ. ಹೀಗಾಗಿ ಮಧ್ವಾಚಾರ್ಯರು, ನಾವು ಬೇರೆ, ಸೂತ್ರಧಾರ ಬೇರೆ ಎನ್ನುತ್ತಾ ದ್ವೆ„ತವನ್ನು ಸಂಭ್ರಮಿಸಿದರು.
Related Articles
Advertisement
ಸೊಂಟ, ಬೆನ್ನು, ಮಂಡಿ, ಪಾದದ ನಡು, ಸಂಧಿ, ಸಂಧಿಯ ನೋವಿರದೆ ಅಸ್ಥಿ ಮಂಡಲವನ್ನು ಸಂಭಾಳಿಸಿಕೊಂಡು ವೃದ್ಧಾಪ್ಯವನ್ನು ಶಿಕ್ಷೆಯಾಗದಂತೆ ನೋಡುವುದು ಸಾಧ್ಯವಿಲ್ಲ ಎಂಬುದು ಹಲವರ ಉತ್ತರ. ಆದರೆ ಸಾಧ್ಯ ಎಂದು ಕೆಲವರು ಹೇಳುತ್ತಾರೆ. ಡಾಕ್ಟರ್‌ಗೆ ದೇವಿ ಶಕ್ತಿ ಕೊಡುತ್ತಾಳೆ. ವೈಷ್ಣವರಿಗೆ ಹರಿ ಸರ್ವೋತ್ತಮ. ಸ್ಮಾರ್ತರಿಗೆ ಶಿವನು ವಿಷ ನಿವಾರಕನಾಗಿದ್ದಾನೆ.
ಭಾರತೀಯ ಪರಂಪರೆಯು ಯೋಗವನ್ನು, ಧ್ಯಾನ, ತಪ-ಜಪಗಳನ್ನು ಮಂತ್ರ, ತಂತ್ರಾದಿ ವಿಷಯಗಳ ಕುರಿತಾಗಿ ಸುದೀರ್ಘವಾಗಿ ವ್ಯಾಖ್ಯಾನವನ್ನು ಕಟ್ಟಿಕೊಟ್ಟಿದೆ. ಕುಂಡಲಿನಿಯ ಜಾಗೃತ ಸಿದ್ಧಿಯು ನಮ್ಮ ಅನುಭವವನ್ನು ಲೌಕಿಕದಿಂದ ಅಲೌಕಿಕಕ್ಕೆ ಸಂಯೋಜಿಸಿ ಮನುಷ್ಯನಿಗೆ ಮೀರಿದ ಅತಿಮಾನುಷ ಶಕ್ತಿ ಘಟಕಗಳನ್ನು ಒದಗಿಸುತ್ತದೆ. ಸಾಧಕರು ಯೋಗದ ಮೂಲಕ, ಶಕ್ತಿ ಪೂಜೆಯ ಮೂಲಕ, ತಪಶ್ಚರ್ಯ ಅನುಷ್ಠಾನಗಳ ಮೂಲಕ ಲೌಕಿಕದ ಕಗ್ಗಂಟುಗಳನ್ನು ನಿವಾರಿಸುತ್ತಾರೆ. ಅದರಲ್ಲೂ ಅನಿಷ್ಠಾನಾದಿ ಜಪಗಳಿಂದ ಭೂತ, ಭವಿಷ್ಯತ್, ವರ್ತಮಾನಗಳನ್ನು ವಿಭಿನ್ನ ರೀತಿಯಲ್ಲಿ ಅರಿಯುವ ಶಕ್ತಿ ಹೊಂದಿರುತ್ತಾರೆ. ಅತಿಮಾನಷ, ಅತೀಂದ್ರಿಯ ಅನುಭವಗಳನ್ನು ಹೇಳುವ ಜನ ನಮಗೆ ಅರೆ
ಹುಚ್ಚರಂತೆ ಕಾಣಿಸಿಕೊಂಡರೆ ಅದರಲ್ಲಿ ಆಶ್ಚರ್ಯವಿಲ್ಲ. ಧಾರ್ಮಿಕವಾದ ಭ್ರಮೆ ಮತ್ತು ವಾಸ್ತವಗಳ ಮಿಶ್ರಣದಲ್ಲಿ ತೇಲಾಡುವ ಜನರ ಅಪಲಾಪ ಎಂದು ಕೆಲವರು ಗುರುತಿಸುತ್ತಾರೆ.
ಆದರೆ ಅತೀಂದ್ರಿಯ ಶಕ್ತಿ ಎಂಬುದು, ಪಂಚೇಂದ್ರಿಯಕ್ಕೆ ಗಟ್ಟಿಯಾಗಿಯೇ ಬೆಸೆದುಕೊಂಡಿರುವ, ಇದು ಬೇರೆಯದೇ ಆದ ಅಂಗ, ಇಂದ್ರಿಯ ಎಂದು ಗುರುತಿಸಲಾಗದ ಭವಿಷ್ಯವನ್ನು ಬಗೆದು ಇಣುಕುವ ಶಕ್ತಿ ಹಲವರಲ್ಲಿ ಜಾಗೃತವಾಗಿರುತ್ತದೆ. ಇದು ಎಲ್ಲಿ ಅಡಕವಾಗಿದೆ ಎಂದು ಗುರುತಿಸಿ ಹೇಳುವುದು ಕಷ್ಟ. ಸ್ಕಿಝೋಫ್ರೀನಿಯಾ ಇರುವ ಜನರನ್ನು ಅವಸರ ಅವಸರವಾಗಿ ನಾವು ಮನೋರೋಗಿಗಳನ್ನಾಗಿ ಗುರುತಿಸುತ್ತೇವೆ. ಒಂದು ಉದಾಹರಣೆ ಗಮನಿಸಿ, ಒಬ್ಬ ಗೃಹಸ್ಥರ ಮಗಳು ಅಪರೂಪಕ್ಕೆ (ಇನ್ನೂ ಹದಿಮೂರರ ಹರೆಯ) ಸೀರೆ ಉಟ್ಟುಕೊಂಡು ಒಂದು ಸಮಾರಂಭಕ್ಕೆ ಹೊರಟಿದ್ದಳು. ಅವಳ ಜೊತೆ ಅದೇ ವಯಸ್ಸಿನ ಅವಳ ಗೆಳತಿಯೊಬ್ಬಳು ಸೇರಿಕೊಂಡಳು. ಈ ಗೃಹಸ್ಥರಿಗೆ ಏನನ್ನಿಸಿತೋ ಏನೋ, ಮಗಳ ಗೆಳತಿಯ ಬಳಿ “ನಿನ್ನ ಸೀರೆಯ ಸೆರಗಿನ ಬಗ್ಗೆ ಜಾಗ್ರತೆ ಇರಲಮ್ಮ’ ಎಂದು ಒಮ್ಮೆಲೇ ಎಚ್ಚರಿಕೆ ನೀಡಿದ್ದರು.
ಗೃಹಸ್ಥರ ಹೆಂಡತಿ ಅದನ್ನು ಕೇಳಿಸಿಕೊಂಡು ಒಳಗಿನಿಂದ ಓಡಿ ಬಂದು, “ರೀ, ಸುಮ್ಮನಿರ್ರೀ. ನಿಮ್ಮದೊಂದು ಅನಿಷ್ಠ’ ಎಂದು ಸಿಡಿಮಿಡಿಗೊಂಡಳು. ಆ ರಾತ್ರಿ ಸಮಾರಂಭದಲ್ಲಿ ಆರತಿ ಬೆಳಗುವ ಸಮಯದಲ್ಲಿ ಗೃಹಸ್ಥರ ಮಗಳ ಸೆರಗಿಗೆ ಆರತಿ ಹಿಡಿದು (ಅವಳೂ ಆರತಿಗೆ ಕೈ ಜೋಡಿಸಿದ್ದಳು) ಎತ್ತುವಾಗ ಸೆರಗಿಗೆ ಬೆಂಕಿ ಹತ್ತಿಕೊಂಡಿತು.
(ಮುಂದುವರಿಯುವುದು)
ಅನಂತಶಾಸ್ತ್ರಿ