ಮುಂಬಯಿ: ಶಾರುಖ್ ಖಾನ್ ಅವರ ʼಡಂಕಿʼ ಥಿಯೇಟರ್ ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಸಿನಿಮಾ ಭರ್ಜರಿ ಸದ್ದು ಮಾಡುತ್ತಿದೆ.
ಕಿಂಗ್ ಖಾನ್ ಬಿಗ್ ಸ್ಕ್ರೀನ್ ನಲ್ಲಿ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ʼಪಠಾಣ್ʼ, ʼಜವಾನ್ʼ ಮೂಲಕ ಹಿಟ್ ಹೀರೋ ಆಗಿ ಶಾರುಖ್ ಖಾನ್ ಮರಳಿದ್ದಾರೆ. ಅದೇ ಸಾಲಿನಲ್ಲಿ ಬಂದ ರಾಜಕುಮಾರ್ ಹಿರಾನಿ ಅವರ ʼಡಂಕಿʼಯೂ ಹಿಟ್ ನತ್ತ ಸಾಗುತ್ತಿದೆ.
ಈ ನಡುವೆ ಶಾರುಖ್ ಖಾನ್ ಅವರ ಮುಂದಿನ ಸಿನಿಮಾದ ಬಗ್ಗೆ ಫ್ಯಾನ್ಸ್ ಗಳಲ್ಲಿ ಕುತೂಹಲ ಹೆಚ್ಚಾಗಿದೆ. ಮುಂದಿನ ಸಿನಿಮಾ ಯಾರೊಂದಿಗೆ ಮಾಡಲಿದ್ದಾರೆ ಎನ್ನುವ ಬಗ್ಗೆ ಫ್ಯಾನ್ಸ್ ಗಳಲ್ಲಿ ಚರ್ಚಾ ವಿಷಯವಾಗಿದ್ದು, ಟ್ವಿಟರ್ ನಲ್ಲಿ ʼಧೂಮ್ -4ʼ ಸಿನಿಮಾ ಟ್ರೆಂಡ್ ಆಗಿದೆ. ಇದರೊಂದಿಗೆ ಶಾರುಖ್ ಅವರನ್ನು ಫ್ಯಾನ್ಸ್ ಗಳು ಟ್ರೆಂಡ್ ಆಗಿಸಿದ್ದಾರೆ. ʼಧೂಮ್ -4ʼ ನಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎನ್ನುವ ಮಾತುಗಳು ಅಭಿಮಾನಿಗಳ ವಲಯದಲ್ಲಿ ಕೇಳಿ ಬರುತ್ತಿದೆ.
ಯಶ್ ರಾಜ್ ಫಿಲ್ಮ್ಸ್ ಶಾರುಖ್ ಜೊತೆ ʼಧೂಮ್ -4ʼ ಸಂಬಂಧ ಮಾತುಕತೆ ನಡೆಸಲಿದೆ ಎನ್ನಲಾಗುತ್ತಿದೆ. ಇನ್ನೊಂದು ಖಚಿತವಲ್ಲದ ವಿಚಾರವೂ ʼಧೂಮ್ -4ʼ ಬಗ್ಗೆ ಹರಿದಾಡುತ್ತಿದೆ. ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಸಿನಿಮಾದಲ್ಲಿ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಸಲ್ಮಾನ್ ಖಾನ್ ʼಧೂಮ್ -4ʼ ನಲ್ಲಿ ನಟಿಸಲಿದ್ದಾರೆ ಎನ್ನುವ ವದಂತಿಗಳು ಹಬ್ಬಿತ್ತು.
ಸದ್ಯ ಶಾರುಖ್, ರಾಮ್ ಚರಣ್ ʼಧೂಮ್ -4ʼ ನಲ್ಲಿ ನಟಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.