Advertisement

ಜೂಜಾಟಕ್ಕೆ ಪೊಲೀಸರದ್ದೇ ಸಾಥ್‌?

02:07 PM May 27, 2019 | Suhan S |

ಹುಬ್ಬಳ್ಳಿ: ನಗರದ ಹೋಟೆಲ್ವೊಂದರಲ್ಲಿ ಇಸ್ಪೀಟ್ ಜೂಜಾಟ ಕೇಂದ್ರವೊಂದು ನಡೆಯುತ್ತಿದ್ದು, ವಿಚಿತ್ರವೆಂದರೆ ಇದನ್ನು ತಡೆಯಬೇಕಾದ ಪೊಲೀಸ್‌ ಸಿಬ್ಬಂದಿಯೇ ಇದರ ಸಕ್ರಿಯ ಸದಸ್ಯರಾಗಿದ್ದಾರೆ!

Advertisement

ನಗರದ ಸಿದ್ದಪ್ಪ ಕಂಬಳಿ ಮಾರ್ಗದಲ್ಲಿನ ಹೋಟೆಲ್ವೊಂದರ ಕೋಣೆಯನ್ನೇ ತಮ್ಮ ಜೂಜಾಟದ ಅಡ್ಡೆ ಮಾಡಿಕೊಂಡಿದ್ದು, ಅನೇಕ ಪೊಲೀಸ್‌ ಸಿಬ್ಬಂದಿ ಪ್ರತಿದಿನ ಬೆಳಗ್ಗೆಯಿಂದಲೇ ಈ ಕೇಂದ್ರದಲ್ಲಿ ಎಲೆ ತಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಇಸ್ಪೀಟ್ ಜೂಜಾಟಕ್ಕೆ ಸಿಲುಕಿದ ಪೊಲೀಸ್‌ ಸಿಬ್ಬಂದಿಯಲ್ಲಿ ಅನೇಕರು ಹಣ ಕಳೆದುಕೊಂಡಿದ್ದು, ಇದರಿಂದ ಅವರ ಕುಟುಂಬ ತೀವ್ರ ಸಂಕಷ್ಟ ಪಡುವಂತಾಗಿದೆ.

ಪೊಲೀಸ್‌ ಇಲಾಖೆಯ ಎಸ್‌ಬಿ (ವಿಶೇಷ ವಿಭಾಗ) ಡ್ಯೂಟಿ ಮಾಡುವವರು, ರಾತ್ರಿ ಗಸ್ತು ತಿರುಗುವವರು, ಕ್ರೈಂ ಸಿಬ್ಬಂದಿ, ವಾಹನಗಳ ಚಾಲಕರು ಜೂಜಾಟದಲ್ಲಿ ತೊಡಗುತ್ತಿದ್ದಾರೆಂದು ಹೇಳಲಾಗುತ್ತಿದೆ. ನಗರದಲ್ಲಿ ನಡೆಯುವ ಮಟ್ಕಾ, ಜೂಜಾಟದಂತಹ ಅಕ್ರಮ ದಂಧೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವವರೇ ನಾವು. ನಮ್ಮ ಮಾಹಿತಿ ಅವರಿಗೆ ಹೇಗೆ ಹೋಗಲಿದೆ ಎಂಬ ಮನೋಭಾವ ಇವರದ್ದಾಗಿದೆ ಎನ್ನಲಾಗಿದೆ.

ಜೂಜಾಟಕ್ಕೆ ಸಿಲುಕಿ ಹಣ ಕಳೆದುಕೊಂಡ ಅನೇಕರು ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್‌ಗಳು ಸೇರಿದಂತೆ ಖಾಸಗಿಯವರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಸಾಲ-ಬಡ್ಡಿ ಪಾವತಿಸಲಾಗದೆ ಪರದಾಡುತ್ತಿದ್ದಾರೆ. ಇಸ್ಪೀಟ್, ಜೂಜಾಟ ಇನ್ನಿತರ ಅಕ್ರಮ ದಂಧೆಗಳಲ್ಲಿ ತೊಡಗಿದವರನ್ನು ವಶಕ್ಕೆ ಪಡೆಯುವ ಇಲ್ಲವೆ ಬಂಧಿಸುವ ಕಾರ್ಯ ಮಾಡುವ ಪೊಲೀಸರೇ ಈ ಕಾರ್ಯಗಳಲ್ಲಿ ತೊಡಗಿದ್ದು, ಕ್ರಮ ಕೈಗೊಳ್ಳುವವರು ಯಾರು ಎಂಬುದು ಸಾರ್ವಜನಿಕರ ಪ್ರಶ್ನೆ. ಅಧಿಕಾರಿಗಳು ಇದನ್ನು ತಡೆಗಟ್ಟದಿದ್ದರೆ ಇಲಾಖೆಯ ಮರ್ಯಾದೆ ಹಾಳಾಗುವುದರಲ್ಲಿ ಸಂಶಯವಿಲ್ಲವೆಂದು ಹೆಸರು ಹೇಳಲಿಚ್ಚಿಸದ ಓರ್ವರು ‘ಉದಯವಾಣಿ’ಗೆ ತಿಳಿಸಿದ್ದಾರೆ.

ಉತ್ತರ ಸಿಗದ ಯಕ್ಷಪ್ರಶ್ನೆ:

ನಗರದಲ್ಲಿ ಗೂಂಡಾಗಳು, ರೌಡಿಗಳು, ಕೊಲೆ-ಸುಲಿಗೆಕೋರರು, ಮಟ್ಕಾ-ಜೂಜುಕೋರರ ಮೇಲೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ದಿಟ್ಟ ಕ್ರಮ ಕೈಗೊಂಡು ಸಾರ್ವಜನಿಕರಿಂದ ಭೇಷ್‌ ಎನಿಸಿಕೊಂಡಿದ್ದಾರೆ. ಆದರೆ ಇಲಾಖೆಯಲ್ಲಿನ ಕೆಲ ಸಿಬ್ಬಂದಿಯೇ ಇಂತಹ ಕೆಟ್ಟ ಅನಿಷ್ಟಗಳಲ್ಲಿ ಭಾಗಿಯಾಗುತ್ತಿದ್ದರೂ ಹಿರಿಯ ಅಧಿಕಾರಿಗಳು ಅವರ ಮೇಲೆ ಏಕೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಇದನ್ನು ನಿಯಂತ್ರಿಸುತ್ತಿಲ್ಲವೆಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು?:

ಅವಳಿ ನಗರದ ವಿವಿಧ ಠಾಣೆಗಳಲ್ಲಿ ಕ್ರೈಂ, ಎಸ್‌ಬಿ ವಿಭಾಗದಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಕೆಲ ಪೊಲೀಸರೇ ನಗರದ ಕೆಲ ಆಯಕಟ್ಟಿನ ಸ್ಥಳಗಳಲ್ಲಿ ಕ್ಲಬ್‌ಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ನಗರಕ್ಕೆ ಯಾವುದೇ ಅಧಿಕಾರಿಗಳು ಬಂದರೂ ಇವರ ಕ್ಲಬ್‌ಗಳಿಗೆ ಮಾತ್ರ ಯಾವುದೇ ಭಯವಿಲ್ಲ. ಇವು ನಿರಂತರವಾಗಿ, ನಿರ್ಭಿಡೆಯಿಂದ ನಡೆಯುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಮಾಜದಲ್ಲಿನ ಅನಿಷ್ಟಗಳನ್ನು ತೊಡೆದು ಹಾಕುವವರೇ ಇಂತಹುದರಲ್ಲಿ ಭಾಗಿಯಾಗಿರುವಾಗ ‘ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು’ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ನಗರದ ಲಾಡ್ಜ್ವೊಂದರಲ್ಲಿ ಪೊಲೀಸ್‌ ಸಿಬ್ಬಂದಿಯೇ ಜೂಜಾಟದಲ್ಲಿ ತೊಡಗಿಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಭಾಗಿಯಾಗಿದ್ದು ಕಂಡು ಬಂದರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು. -ಎಂ.ಎನ್‌. ನಾಗರಾಜ, ಹು-ಧಾ ಪೊಲೀಸ್‌ ಆಯುಕ್ತ
•ಶಿವಶಂಕರ ಕಂಠಿ
Advertisement

Udayavani is now on Telegram. Click here to join our channel and stay updated with the latest news.

Next