Advertisement

ಪ್ರಸಾದಕ್ಕೆ ಬೆರೆಸಿದ್ದು ಕೀಟನಾಶಕವೇ?

07:48 AM Dec 15, 2018 | Team Udayavani |

ಮೈಸೂರು/ಹನೂರು: ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಮಾರಂಭದ ನಂತರ ಪ್ರಸಾದ ಸೇವಿಸಿ ಅಸ್ವಸ್ಥರಾದವರನ್ನು
ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆತರಲಾಗಿದೆ. ಈ ಪೈಕಿ ಚಿಕಿತ್ಸೆ ಫ‌ಲಕಾರಿಯಾಗದೆ ಮೂವರು ಮೃತಪಟ್ಟಿದ್ದಾರೆ. ಅಸ್ವಸ್ಥರ
ಲಕ್ಷಣವನ್ನು ನೋಡಿದಾಗ ಆಹಾರದಲ್ಲಿ ಆರ್ಗನೋ ಫಾಸ್ಪರಸ್‌ ಎಂಬ ಕೀಟನಾಶಕ ಬೆರೆತಿರುವ ಸಾಧ್ಯತೆ ಮೇಲ್ನೋಟಕ್ಕೆ 
ಕಂಡುಬಂದಿದೆ ಎನ್ನಲಾಗಿದೆ.  ಅಸ್ವಸ್ಥರ ವಾಂತಿಯ ಸ್ಯಾಂಪಲ್‌ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಿದ್ದು, ಅಲ್ಲಿಂದ ವರದಿ ಬಂದ ನಂತರವಷ್ಟೇ ನಿಖರ ಕಾರಣ ತಿಳಿದು ಬರಲಿದೆ ಎಂದು ಕೆ.ಆರ್‌. ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ರಮೇಶ್‌ ತಿಳಿಸಿದರು.

Advertisement

ಸೀಮೆಎಣ್ಣೆ ವಾಸನೆ ಬರುತ್ತಿತ್ತು: “ಓಂ ಶಕ್ತಿ ದೇವಸ್ಥಾನಕ್ಕೆ ಹೋಗಲು ಮಾಲೆ ಹಾಕಿಕೊಂಡಿದ್ದ ನಾವೆಲ್ಲರೂ ಮಾರಮ್ಮನ ದೇಗುಲದಲ್ಲಿ ಗೋಪುರದ ಶಂಕುಸ್ಥಾಪನಾ ಕಾರ್ಯ ಇದ್ದಿದ್ದರಿಂದ ಪೂಜೆಗೆ ಹೋಗಿದ್ದೆವು. ಪೂಜೆ ನಂತರ ಕೊಟ್ಟ ಪ್ರಸಾದ  (ರೈಸ್‌ಬಾತ್‌) ಸೇವಿಸಿದೆವು, ಆದರೆ, ಕೆಮಿಕಲ್‌, ಸೀಮೆಎಣ್ಣೆ ವಾಸನೆ ಬರುತ್ತಿತ್ತು, ಆದರೆ, ಪ್ರಸಾದ ಅನ್ನುವ ಕಾರಣಕ್ಕೆ ಬಾಯಿಗೆ ಹಾಕಿದೆವು, ಎರಡು ತುತ್ತು ತಿನ್ನಲಾಗಲಿಲ್ಲ. ಹಾಗೇ ಇಟ್ಟು ಬಂದೆವು, ಮಧ್ಯಾಹ್ನದ ವೇಳೆಗೆ ಈ ರೀತಿ ಆಯಿತು ಎಂದು ಕೆಲವು
ಅಸ್ವಸ್ಥರು ಅಳಲು ತೋಡಿಕೊಂಡಿದ್ದಾರೆ. ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಬರುವವರ ಸಂಖ್ಯೆ ಹೆಚ್ಚಾದ ಕೂಡಲೇ ಒತ್ತಡ ತಾಳದೆ ಕೊಳ್ಳೇಗಾಲ ಮತ್ತು ಕಾಮಗೆರೆ ಆಸ್ಪತ್ರೆಗಳಿಂದ ಅಸ್ವಸ್ಥರನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕರೆತರಲಾಯಿತು. ಜತೆಗೆ ಬೆಳಗಿನ ಪಾಳಿ ಮುಗಿಸಿ ಮನೆಗೆ ತೆರಳಿದ್ದ ವೈದ್ಯರು, ದಾದಿಯರು ಸೇರಿ ಇತರೆ ಸಿಬ್ಬಂದಿಯನ್ನು ವಾಪಸ್‌ ಕರೆಸಿಕೊಂಡು ತುರ್ತು ಕಾರ್ಯಕ್ಕೆ ನಿಯೋಜಿಸಲಾಯಿತು.

ಪೊಲೀಸರ ಹರಸಾಹಸ: ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕಾಮಗೆರೆ ಆಸ್ಪ$ತ್ರೆಯತ್ತ ದೌಡಾಯಿಸುತ್ತಿದ್ದರು. ಆಸ್ಪತ್ರೆಯ ಆವರಣದಲ್ಲಿ ಸೇರಿದ್ದ ಸಾರ್ವಜನಿಕರನ್ನು ಚದುರಿಸಿ ವಾಹನಗಳಿಗೆ ಅನುವು ಮಾಡಿಕೊಡಲು ಪೊಲೀಸರು ಹರಸಾಹಸವನ್ನೇ ನಡೆಸಿದರು. ಹನೂರು ಕ್ಷೇತ್ರದ ಶಾಸಕ ನರೇಂದ್ರ, ಬೆಳಗಾವಿ ಅಧಿವೇಶನ
ಮುಗಿಸಿ ವಾಪಸಾಗುತ್ತಿದ್ದು, ಈ ಸಂಬಂಧ ಜಿಲ್ಲಾಧಿಕಾರಿಯವರ ಜತೆ ಚರ್ಚಿಸಿ ಅಸ್ವಸ್ಥರಿಗೆ ಕೂಡಲೇ ಅಗತ್ಯ ಚಿಕಿತ್ಸೆ ನೀಡಲು
ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು. 

ಪ್ರಕರಣ ಕುರಿತು ತನಿಖೆಯಾಗಲಿ
ಬೆಂಗಳೂರು:
ದುರಂತದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ ಜಿಲ್ಲಾ
ಉಸ್ತುವಾರಿ ಸಚಿವರಾದ ಪುಟ್ಟರಂಗ ಶೆಟ್ಟಿ, ಹನೂರು ಕ್ಷೇತ್ರದ ಶಾಸಕರಾದ ನರೇಂದ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕ
ಮಾಡಿ ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಚಾಮರಾಜನಗರ ಜಿಲ್ಲಾಧಿಕಾರಿಗಳಿಂದ ಘಟನೆ ಕುರಿತು ಮಾಹಿತಿ ಪಡೆದುಕೊಂಡರಲ್ಲದೆ, ಕೂಡಲೇ ಪ್ರಕರಣದ ತನಿಖೆ ಆಗಬೇಕು ಎಂದರು.

ಮುಗಿಲು ಮುಟ್ಟಿದ ಆಕ್ರಂದನ
ಘಟನೆಯಲ್ಲಿ ಮೃತಪಟ್ಟ ಬಿದರಹಳ್ಳಿ ಗ್ರಾಮದ ಶಾಂತರಾಜು ಅವರಿಗೆ 12 ವರ್ಷದಿಂದ ಮಕ್ಕಳಿರಲಿಲ್ಲ. ಎರಡು ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಮೃತರ ಪತ್ನಿ ಹಾಗೂ ಕುಟುಂಬದವರು ಮಗುವಿನೊಡನೆ ಆಸ್ಪತ್ರೆಗೆ ಬಂದು ಆಕ್ರಂದಿಸುತ್ತಿದ್ದುದು ಕಣ್ಣಲ್ಲಿ ನೀರಾಡುವಂತೆ ಮಾಡಿತು. ಶಾಂತರಾಜು ಕೂಲಿ ಕಾರ್ಮಿಕ. ಇಟ್ಟಿಗೆ ಕೊಯ್ಯುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇವರ ಪತ್ನಿ
ಶಿವಗಾಮಿ. ಈ ದಂಪತಿ ಮದುವೆಯಾಗಿ 12 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಎರಡು ತಿಂಗಳ ಹಿಂದಷ್ಟೇ ಹೆಣ್ಣು ಮಗು ಜನಿಸಿತ್ತು. ಇದರಿಂದ ಕುಟುಂಬದಲ್ಲಿ ಸಂತಸ ಮನೆಮಾಡಿತ್ತು. ಇದೀಗ ಕುಟುಂಬದ ಆಧಾರವಾಗಿದ್ದ ಶಾಂತರಾಜು ಅಕಾಲಿಕವಾಗಿ ಮೃತಪಟ್ಟಿರುವುದು ಅವರಿಗೆ ದಿಗ್ಭ್ರಮೆ ಮೂಡಿಸಿದೆ. 

Advertisement

ವಿಷಾಹಾರ ಸೇವನೆಯಿಂದ ಹಲವಾರು ಜನ ಮೃತರಾಗಿರುವುದು ದುರ್ದೈವದ ಘಟನೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು
ಅಸ್ವಸ್ಥರಿಗೆ ತುರ್ತು ಚಿಕಿತ್ಸೆ ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.

 ● ಜಿ .ಟಿ.ದೇವೇಗೌಡ, ಸಚಿವ 

ಅಮಾಯಕರು ಹೀಗೆ ದುರಂತದಲ್ಲಿ ಸಾವಿಗೀಡಾಗುತ್ತಿರುವುದು ತೀರ ನೋವಿನ ಸಂಗತಿ. ದೇವಾಲಯದ ಆಡಳಿತ ಮಂಡಳಿಯಲ್ಲಿ ಎರಡು ಬಣವಿದ್ದು, ಈ ದುರಂತಕ್ಕೆ ವಿಷಪ್ರಾಶನ ಕಾರಣವೆಂದು ಹೇಳಲಾಗುತ್ತಿದೆ. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕು.
 ●ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ

ಸರ್ಕಾರ ಕೂಡಲೇ ಸ್ಪಂದಿಸಬೇಕು, ಮೃತಪಟ್ಟವರ ಕುಟುಂಬಗಳಿಗೆ ಸಿಎಂ ಪರಿಹಾರ ನೀಡಿ, ಉನ್ನತ ತನಿಖೆ ನಡೆಸಬೇಕು.
 ●ಶೋಭಾ ಕರಂದ್ಲಾಜೆ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next