ಆನೇಕಲ್: ಬನ್ನೇರುಘಟ್ಟ ಅರಣ್ಯದ ಸಲಗ ಜಂಟಲ್ ರಂಗ ಬಂಧನವಾಗಿ ಇಂದಿಗೆ 19 ತಿಂಗಳು ಕಳೆದಿದೆ. ದೂರದ ಆನೆ ಕ್ಯಾಂಪ್ ಒಂದರಲ್ಲಿ ಮಾವುತನ ಅಂಕುಶಕ್ಕೆ ರಂಗ ತಲೆಬಾಗಿದ್ದಾನೆ. ಆದರೆ ರಂಗನಿಲ್ಲದ ಕಾರಿಡಾರ್‌ನಲ್ಲಿ ಇತರ ಆನೆಗಳು ತಮ್ಮ ಕಾರುಬಾರು ನಡೆಸಲು ಮುಂದಾಗಿವೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬನ್ನೇರುಘಟ್ಟ , ಆನೇಕಲ್ ಅರಣ್ಯ ವಲಯದಲ್ಲಿ 35 ವರ್ಷದ ರಂಗ ನಾಯಕನಂತಿದ್ದ. ಬನ್ನೇರುಘಟ್ಟದಿಂದ ಸಾವನದುರ್ಗ,ಮಾಗಡಿ, ನೆಲಮಂಗಲ, ತುಮಕೂರು ವರೆಗೂ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡು ಸ್ವತ್ಛಂದವಾಗಿದ್ದ. ಮಾಗಡಿ ಭಾಗದಲ್ಲಿ ಒಬ್ಬ ರೈತ, ಅರಣ್ಯ ಕಾವಲುಗಾರ ಮೃತರಾಗಲು ಜಂಟಲ್ ರಂಗ ಕಾರಣ ಎಂದು ಆನೆಗಳ ಸೆರೆಗೆ ಇಲಾಖೆ ಕಾರ್ಯಾಚರಣೆ ನಡೆಸಿತು. 9 ಆನೆಗಳ ಸೆರೆ ಹಿಡಿವ ಕಾರ್ಯಾಚರಣೆಯಲ್ಲಿ ಜಂಟಲ್‌ರಂಗ, ಐರಾವತ ಸೆರೆ ಸಿಕ್ಕಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇರಿಸಲಾಗಿತ್ತು.
ಈ ವೇಳೆಗೆ ಪ್ರಾಣಿಪ್ರಿಯರು ಮಧ್ಯಪ್ರವೇಶಿಸಿದ ಕಾರಣ ಉಳಿದ ನಾಲ್ಕು ಆನೆಗಳನ್ನು ಸೆರೆ ಹಿಡಿಯದೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಜಂಟಲ್ ರಂಗನ ಸೆರೆ ಬಳಿಕ ಸಂಘರ್ಷ ಕಡಿಮೆಯಾಗುತ್ತದೆ ಎಂದು ಜನರು ನಂಬಿದ್ದರು. ಆದರೆ ಸೆರೆ ಹಿಡಿದ 15 ದಿನಗಳ ಅಂತರದಲ್ಲಿ ಮೂರು ರೈತರು ಆನೆ ದಾಳಿಗೆ ತುತ್ತಾದರು. ಬಳಿಕ ಆನೆ ದಾಳಿ ಹೆಚ್ಚಾಯಿತು. ರಂಗನಿದ್ದಾಗ ಸೀಮಿತ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸುತ್ತಿತ್ತು. ಸೆರೆ ಬಳಿಕ ಆನೆಗಳು ದಾಳಿ ಮತ್ತೆ ಹೆಚ್ಚಿತು. ಎರಡು ಆನೆಗಳು ತುಮಕೂರು,ಚಿತ್ರದುರ್ಗ, ಗುಬ್ಬಿ, ಆಂದ್ರಪ್ರದೇಶದ ಗಡಿ ಭಾಗಗಲ್ಲಿ ಸಂಚರಿಸಿ ಮತ್ತೆ ವಾಪಸ್ಸು ಬನ್ನೇರುಘಟ್ಟ ಅರಣ್ಯ ಸೇರಿವೆ. ಉಳಿದ ಆನೆಗಳು ಮಾಗಡಿ, ನೆಲಮಂಗಲ ಇತರೆಡೆ ದಾಂಧಲೆ ನಡೆಸುತ್ತಿವೆ. ದಾಳಿ ಮತ್ತು ಹಾನಿಯಿಂದ ಇಲಾಖೆ ಜಂಟಲ್ ರಂಗನನ್ನು ಹಿಡಿದು ತಪ್ಪು ಮಾಡಿದೆವಾ ಎಂದು ಯೋಚಿಸುವಂತಾಗಿದೆ.
ಕುಮ್ಕಿ ಆನೆಗಳ ನಿರೀಕ್ಷೆ: ಉದ್ಯಾನವನದ ಭಾಗದಲ್ಲಿ ಕಾಡಿನ ಸಲಗಗಳು ಓಡಾಡುತ್ತಿವೆ. ಯಾರಿಗೂ ತೊಂದರೆಯಾಗ ಬಾರದು ಎಂಬ ಕಾರಣಕ್ಕೆ ಅಧಿಕಾರಿಗಳು ಕಾಡಾನೆಗಳನ್ನು ಸೆರೆಹಿಡಿಯುವ ತರಬೇತಿ ಪಡೆದಿರುವ ಎರಡು ಆನೆಗಳನ್ನು ಕರೆಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕಾಗಿ ಸಾಕಾನೆ ಅಭಿಮನ್ಯು ಮತ್ತು ಅವನ ಸಂಗಡಿಗ ಕೃಷ್ಣ ಬರಲಿದ್ದಾನೆ.
ಸಾಕಾನೆ ಸಹಾಯದಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸುವುದು ಅಧಿಕಾರಿಗಳ ತಂತ್ರವಾಗಿದೆ. ಜಂಟಲ್ ರಂಗ ಹೇಗಿದ್ದಾನೆ: ರಂಗನ ಸೆರೆ ಬಳಿಕ ಬನ್ನೇರುಘಟ್ಟದ ಕ್ರಾಲ್ ನಿಂದ ಹೊರಗೆ ತಂದು ಹಿಂದೆ,ಮುಂದೆ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಬಂಧಿಸಿದ್ದರು. ಜುಲೈ 19, 2017 ರಂದು ರಂಗ ಮತ್ತು ಐರಾವತ ಎರಡು ಆನೆಗಳನ್ನು ಮತ್ತಿಗೋಡು ಆನೆ ಶಿಬಿರಕ್ಕೆ ಕೊಂಡೊಯ್ದರು. ಅಲ್ಲೂ ಆರು ತಿಂಗಳು ಬಂಧನದಲ್ಲೇ ಇದ್ದ ರಂಗ ನಿಧಾನವಾಗಿ ಮಾವುತನ ಮಾತು ಕೇಳಲು ಆರಂಭಿಸಿತು, ರಂಗ ಮಾವುತರ ಮಾತುಗಳನ್ನು ಪಾಲಿಸುತ್ತ ಸ್ವಭಾವ ಬದಲಿಸಿಕೊಳ್ಳುತ್ತಿದ್ದಾನೆ.
ಮುಂಜಾಗ್ರತಾ ಕ್ರಮ
ಬನ್ನೇರುಘಟ್ಟದ ಸುತ್ತಲು ಕಾಡಾನೆಗಳು ಸಂಚರಿಸುತ್ತಿವೆ. ಇದು ಸಹಜ, ಕಾಡಾನೆಗಳ ಆವಾಸಸ್ಥಾನದಲ್ಲಿ ಉದ್ಯಾನವನ ಇದೆ. ಹಾಗಾಗಿ ಕಾಡಾನೆಗಳೊಂದಿಗೆ ಸಹಬಾಳ್ವೆ ಅನಿವಾರ್ಯವಾಗಿದೆ.
ಹಾಗಾಗಿ ಆನೆಗಳಿಂದ ಸಿಬ್ಬಂದಿಗೆ, ಪ್ರವಾಸಿಗರಿಗೆ , ಯಾವುದೇ ತೊಂದರೆ ಆಗದಂತೆ ಮುಂಜಾಗೃತ
ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ
ನಿರ್ದೇಶಕ ಗೋಕುಲ್ ತಿಳಿಸಿದರು.
– ಮಂಜುನಾಥ ಎನ್ ಬನ್ನೇರುಘಟ್ಟ