ಹೊಸದಿಲ್ಲಿ: ಇನ್ನು 2 ಲಕ್ಷ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸಿದರೆ, ಇಷ್ಟೇ ಮೊತ್ತ ದಂಡ ಪಾವತಿಸಬೇಕಾದ ಸ್ಥಿತಿ ಬರಬಹುದು! ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಲೋಕಸಭೆಯಲ್ಲಿ ಹಣಕಾಸು ಮಸೂದೆಯಲ್ಲಿ ಪ್ರಸ್ತಾವಿಸಲಾಗಿರುವ 40 ತಿದ್ದುಪಡಿಗಳಲ್ಲಿ ಈ ಅಂಶವನ್ನು ಪ್ರಸ್ತಾವಿಸಿದ್ದು, ಇದಕ್ಕೆ ಒಪ್ಪಿಗೆಯೂ ಸಿಕ್ಕಿದೆ.
ಫೆ. 1ರಂದು ಬಜೆಟ್ ಮಂಡಿಸಿದ್ದ ಜೇಟ್ಲಿ ಅವರು, 3 ಲಕ್ಷ ರೂ.ಗಳಿಗಿಂತ ಹೆಚ್ಚಿನ ನಗದು ವಹಿವಾಟಿಗೆ ಅಷ್ಟೇ ಮೊತ್ತದ ದಂಡ ವಿಧಿಸುವುದಾಗಿ ಹೇಳಿದ್ದರು. ಆದರೆ ಈಗ ತಿದ್ದುಪಡಿ ತರುವ ಮೂಲಕ ರೂ.2 ಲಕ್ಷಕ್ಕೆ ಇಳಿಸುವ ಪ್ರಸ್ತಾವ ಇಟ್ಟಿದೆ. ಸಂಸತ್‌ನಲ್ಲಿ ಒಪ್ಪಿಗೆ ದೊರೆತ ಬಳಿಕ, ಅಂದರೆ ಎ. 1ರಿಂದಲೇ ಈ ನಿರ್ಧಾರ ಜಾರಿಗೆ ಬರಲಿದೆ.
ಈ ತಿದ್ದುಪಡಿಯನ್ನು ಸಮರ್ಥಿಸಿಕೊಂಡಿರುವ ಅರುಣ್ ಜೇಟ್ಲಿ, ಕಪ್ಪು ಹಣ ನಿಗ್ರಹಕ್ಕಾಗಿ ರಚಿಸಲಾಗಿದ್ದು ಎಸ್‌ಐಟಿಯ ಶಿಫಾರಸಿನ ಅನ್ವಯವೇ ಈ ಬದಲಾವಣೆ ಮಾಡಿದೆ. “ಬ್ಯಾಕ್ ಡೋರ್ ಎಂಟ್ರಿ’ ಮೂಲಕ ಕಪ್ಪು ಹಣದ ವರ್ಗಾವಣೆ ತಡೆಯಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಆದರೆ ಟಿಎಂಸಿ, ಬಿಜೆಡಿ ಮತ್ತು ಆರ್‌ಎಸ್‌ಪಿ ಸದಸ್ಯರು ಬಜೆಟ್‌ನ ಭಾರೀ ಸಂಖ್ಯೆಯ ತಿದ್ದುಪಡಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಸ್ಪೀಕರ್ ಸುಮಿತ್ರಾ ಮಹಾಜನ್ ಅದನ್ನು ತಿರಸ್ಕರಿಸಿದರು. ಇದು ಹಣಕಾಸು ಮಸೂದೆ ಆಗಿರುವುದರಿಂದ ತಿದ್ದುಪಡಿಯಾಗಬಹುದು ಎಂದರು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅದನ್ನು ಸಮರ್ಥಿಸಿ ಮಾತನಾಡಿ, ಮಸೂದೆಯಲ್ಲಿ ಹೆಚ್ಚಿನ ಭಾಗ ತೆರಿಗೆ ವಿಧಿಸುವ ಅಥವಾ ಹಿಂಪಡೆಯುವ ಅಂಶಕ್ಕೇ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಜತೆಗೆ ಕಂಪೆನಿಗಳ ಕಾಯ್ದೆ, ಇಪಿಎಫ್, ಸ್ಮಗ್ಲಿಂಗ್ ಆ್ಯಂಡ್ ಫಾರಿನ್ ಎಕ್ಸ್ ಚೇಂಜ್ ಆ್ಯಕ್ಟ್, ಟ್ರಾಯ್ ಆ್ಯಕ್ಟ್ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ತಿದ್ದುಪಡಿ ಅಂಶಗಳೇ ಸೇರಿವೆ. ಹಣ ಕಾಸು ವಿಚಾರ ಸಂಬಂಧಿತ ಇರುವ 40 ನ್ಯಾಯಮಂಡಳಿಗಳನ್ನು 12ಕ್ಕೆ ಇಳಿಸುವ ತಿದ್ದುಪಡಿಯೂ ಇದೆ ಎಂದಿದ್ದಾರೆ.
ಅದಕ್ಕೆ ಪೂರಕವಾಗಿ ಕೇಂದ್ರ ಕಂದಾಯ ಕಾರ್ಯದರ್ಶಿ ಹಸುಖ್ ಅಧಿಯಾ ಕೂಡ ಟ್ವೀಟ್ ಮಾಡಿ 2 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತದ ನಗದು ವಹಿವಾಟು ಮಾಡಿದರೆ ಅಷ್ಟೇ ಮೊತ್ತವನ್ನು ದಂಡವನ್ನಾಗಿ ಪಾವತಿ ಮಾಡಬೇಕೆಂದು ತಿಳಿಸಿದ್ದಾರೆ.
ರಿಟರ್ನ್ಸ್ ಸಲ್ಲಿಕೆಗೆ ಆಧಾರ್, ಪಾನ್ ಕಡ್ಡಾಯ
ಜುಲೈ 1ರಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವ ವೇಳೆ ಆಧಾರ್ ಸಂಖ್ಯೆ , ಪಾನ್ ನಂಬರ್ ಕಡ್ಡಾಯ
ವಾಗಿ ನೀಡಬೇಕು. ಲೋಕಸಭೆಯಲ್ಲಿ ಮಂಡಿಸಲಾಗಿರುವ ಹಣಕಾಸು ಮಸೂದೆಯಲ್ಲಿ ಈ ಅಂಶ ಪ್ರಸ್ತಾವಿಸಲಾಗಿದೆ. ರಿಟರ್ನ್ಸ್ ಸಲ್ಲಿಕೆ ಮಾಡುವವರು ಆಧಾರ್ ನಂಬರ್ ಅನ್ನು ಜುಲೈ ಒಳಗಾಗಿ ಪಾನ್ ನಂಬರ್‌ಗೆ ಲಿಂಕ್ ಮಾಡಬೇಕು. ಒಂದು ವೇಳೆ ಲಿಂಕ್ ಮಾಡದೇ ಇದ್ದರೆ ಅಂಥ ಪಾನ್ ನಂಬರ್ ಪರಿಗಣಿಸದಿರುವ ಪ್ರಸ್ತಾವವಿದೆ. ಕೇಂದ್ರ ಕಾರ್ಮಿಕ ಸಚಿವಾಲಯ ಕೂಡ ಮಾ. 31ರಿಂದ ಇಪಿಎಫ್ ಖಾತೆಗಳನ್ನು ತೆರೆಯುವ ವೇಳೆ ಆಧಾರ್ ಕಡ್ಡಾಯವೆಂದು ಸೂಚಿಸಿದೆ.