Advertisement

ಇರುವುದೋ ಇಲ್ಲದಿರುವುದೋ!

07:30 AM Apr 15, 2018 | |

ಇದೆಂಥ ಪ್ರಶ್ನೆ ಮಾರಾಯ್ರ್ ! ಯಾರು ಇರುವುದು? ಎಲ್ಲಿ ಇರುವುದು? ಯಾವಾಗ ಇರುವುದು? ಮತ್ತು ಯಾಕೆ ಇರುವುದು? ಇದೆಲ್ಲ ಒಂದೂ ಗೊತ್ತಿರದೇ ಇರುವುದೋ, ಇಲ್ಲದಿರುವುದೋ ಹೇಳಲಿಕ್ಕೆ ಸಾಧ್ಯ ಉಂಟೆ? ಅಂತ ಕೇಳ್ತೀರಾ? ಇದರ ಮೂಲ ಎಲ್ಲುಂಟು ಗೊತ್ತುಂಟಾ?

Advertisement

ಮೊನ್ನೆ ರಾತ್ರಿ ಅಪ್ಪ ಫೋನು ಮಾಡಿದ್ದರು. “ತಮ್ಮ ಅಳಿಯ ಇದ್ದಾನಾ?’ ಅಂತ ಕೇಳಿದರು. ತಕ್ಷಣ ಉತ್ತರಿಸುವುದು ಕಷ್ಟವಾಯಿತು. ಏಕೆಂದರೆ, ನನ್ನ ಗಂಡ ಪಕ್ಕದಲ್ಲಿಯೇ ಕೂತಿದ್ದ. ಕೂತಿದ್ದ ಅಂದರೆ ಕೂತೇ ಇದ್ದ. ಹಾಗಂತ ಮೂರು ತಾಸಿನಿಂದ ನಾನು ಕೇಳಿದ ಒಂದು ಪ್ರಶ್ನೆಗೂ “ಹೌದು-ಇಲ್ಲ’ ಅಂತ ಉತ್ತರವಿಲ್ಲ. ನಾನು ಹೇಳಿದ ಸುದ್ದಿಗಳಿಗೆ “ಹಾಂ, ಹೂಂ’ ಅಂತ ಒಂದು ಉತ್ತರವೂ ಇಲ್ಲ. ಎದುರಿಗೆ ತಂದಿಟ್ಟ ತಾಟು ಹಾಗೆಯೇ ತಣ್ಣಗೆ ಕೂತಿದೆ. ಹಚ್ಚಿಟ್ಟ ಟಿ.ವಿ. ಕೂಡ ಗಮನ ಸೆಳೆಯಲಾರದೇ ಗೊಣ ಗೊಣ ಅಂತೇನೋ ಕುಂಯ್‌ಗಾಡುತ್ತಿದೆ. ಮಕ್ಕಳು ಹತ್ತಿರ ಬಂದು, “”ಅಪ್ಪಾ, ಫೀಸಿಗೆ ದುಡ್ಡು ಕೊಡು, ಗಾಡಿಯ ಚಾವಿ ಕೊಡು” ಅಂತೆಲ್ಲ ಕೇಳಿ ಉತ್ತರ ಬಾರದ್ದಕ್ಕೆ ತಾವೇ ಕಿಸೆಯಿಂದ ಬೇಕು ಬೇಕಾದ್ದನ್ನು, ಬೇಕು ಬೇಕಾದಷ್ಟು ತೆಗೆದುಕೊಂಡು ಖುಷಿಯಿಂದ ಹೋಗಿಯಾಯಿತು. ಅರ್ಧಾಂಗಿಯಾದ ನಾನು ಹತ್ತಿರ ಕೂತು ಕರೆದರೂ ಇಲ್ಲ, ಕಿರುಚಿದರೂ ಇಲ್ಲ, ತಿವಿದರೂ ಇಲ್ಲ. ಉಹೂಂ ಕಣ್ಣು ತನ್ನ ಏಕಾಗ್ರತೆಯನ್ನು ಒಂದಿಷ್ಟೂ ಕಳೆದುಕೊಳ್ಳುವುದಿಲ್ಲ. ಎಡದ ಕಾಲಿನ ಮೇಲೆ ಬಲದ ಕಾಲು ಹಾಕಿಕೊಂಡು ಪಾದ ಕುಣಿಸುತ್ತ ಮೆತ್ತೆಗೊರಗಿದ ದಿವ್ಯ ಭಂಗಿ. ತುಟಿಯ ಮೇಲೊಂದು ಕಿರುನಗೆಯ ಲಾಸ್ಯ, ಮುಖದ ತುಂಬಾ ಪ್ರಸನ್ನ ಭಾವ, ಎಡ ಅಂಗೈಯನ್ನು ಬಲ ಅಂಗೈ ಸ್ಪರ್ಶಿಸುತ್ತಲೇ ಇರುವ ನಿರಂತರ ಚಟುವಟಿಕೆ. ಈ ಭೂಮಂಡಲದ ಉಳಿದಷ್ಟೂ ಕ್ರಿಯೆಗಳನ್ನು ಹುಲು ಸಮಾನವೆಂದು ಭಾವಿಸಿ, ಆ ಕುರಿತಾದ ಸಮಸ್ತ ಆಸಕ್ತಿ-ಅಕ್ಕರೆಗಳನ್ನು ಲವಲೇಶವೂ ಉಳಿಯದಂತೆ ಬರಿದಾಗಿಸಿಕೊಂಡು ಕಠೊರ ತಪಸ್ವಿಯಂತೆ ತಲ್ಲೀನರಾಗಿರುವ ನಮ್ಮ ಪತಿರಾಯರು ಇದ್ದಾರೆ ಎನ್ನಬೇಕೊ? ಇಲ್ಲ ಎನ್ನಬೇಕೊ? ಎಂಬುದೇ ನನ್ನ ಜಿಜ್ಞಾಸೆ.

“ಹೌದು’ ಎಂದರೆ ಅವರ ಇರುವಿಕೆ ಸುತ್ತಲಿನ ಲೋಕವ್ಯಾಪಾರಗಳೊಂದಿಗೆ ಸೇರಿಕೊಂಡಿರಬೇಕಾಗುತ್ತದಲ್ಲವೆ? ತಾಟಿನಲ್ಲಿರುವ ಆಹಾರವನ್ನು ಬಾಯಿಗೆ ಹಾಕಿಕೊಂಡು ಉಣ್ಣುವುದಕ್ಕಾಗಿ ಇಟ್ಟಿದ್ದಾರೆಂದು ಅರಿವಾಗಬೇಕು. ರಾತ್ರಿಯಾಗಿದೆ, ಮನೆಯ ಬಾಗಿಲು- ಚಿಲಕ-ಬೀಗಗಳನ್ನು ಭದ್ರಪಡಿಸಬೇಕೆಂದು ನೆನಪಾಗಬೇಕು, ಹಗಲಿಡೀ ಹೊರಗಿದ್ದು ಒಳ ಬಂದಿರುವ ತಾನು ಹೆಂಡತಿ-ಮಕ್ಕಳ ಕಷ್ಟ-ಸುಖಗಳನ್ನೊಂದಿಷ್ಟು ಕೇಳುವ ಯಜಮಾನ ಸ್ಥಾನದಲ್ಲಿದ್ದೇನೆಂದು ಲಕ್ಷ éಕ್ಕೆ ಬರಬೇಕು. ಹಾಗೆ ಅರಿವು-ತಿಳಿವು-ನೆನಪು-ಲಕ್ಷ éಗಳೆಲ್ಲ ಮಾಯಾವಾದ ವಿಸ್ಮರಣೆಯ ಸ್ಥಿತಿಯನ್ನು ತಲುಪಿದ ಆನಂದ ಮಾರ್ಗಿಗಳನ್ನು ಇದ್ದಾರೆ ಎನ್ನಬೇಕೋ? ಇಲ್ಲ ಎನ್ನಬೇಕೋ? ನನಗೆ ತಿಳಿಯುತ್ತಿಲ್ಲ.

ನಮ್ಮ ಹಿರಿಯರು ಇರುವಿಕೆಯನ್ನು ಹೇಗೆ ಮೂರು ಆಯಾಮಗಳಲ್ಲಿ ವರ್ಗೀಕರಿಸಿದ್ದಾರೆ ನೋಡಿ- ಕಾಯಾ, ವಾಚಾ, ಮನಸಾ, ಅಂದರೆ ಬರಿ ಕಾಯವೊಂದು ಇದ್ದರೆ ಅದು ಇರುವಿಕೆಯಾಗುವುದಿಲ್ಲ. ನಮ್ಮ ಮನಸ್ಸಿನ ಆಲೋಚನೆಗಳೂ, ಆಡುವ ಮಾತುಗಳೂ ಕೂಡ ಇಲ್ಲಿಯದ್ದು ಅಂತ ಆದರೆ ನಾವು ಆ ಅಲ್ಲಿ ಇದ್ದ ಹಾಗೆ. ಇದಕ್ಕೆ ನಮ್ಮ ವಿದ್ಯಾರ್ಥಿ ಸಮೂಹ ಒಂದು ಅತ್ಯುತ್ತಮ ಉದಾಹರಣೆ. ಅವರ ದೇಹವೊಂದು ತರಗತಿಯ ಕೋಣೆಯಲ್ಲಿರುತ್ತದೆ. ಆದರೆ, ಸಕಲೇಂದ್ರಿಯಗಳೂ ವಾಟ್ಸಾಪ್‌ ಅಥವಾ ಫೇಸುಬುಕ್ಕಿನ ಸಂದೇಶಗಳಲ್ಲಿ ವಾಚಾಳಿಯಾಗಿರುತ್ತವೆ. ಇನ್ನು ಮನಸ್ಸನ್ನಂತೂ ಕೇಳುವುದೇ ಬೇಡ. ಈಗಿನ ವಿದ್ಯಾರ್ಥಿಗಳ ಮನೋಲೋಕವನ್ನು ಹೊಕ್ಕಿ ಹಣುಕುವ ಎದೆಗಾರಿಕೆ ಯಾವ ಪಾಮರ ಮೇಷ್ಟ್ರಿಗೆ ಇರಲು ಸಾಧ್ಯ ಹೇಳಿ? ಅಲ್ಲಿ ಸಹಪಾಠಿಗಳಿದ್ದಾರೋ, ಸಿನಿತಾರೆಯರಿದ್ದಾರೋ ಅಥವಾ ಖುದ್ದು ಪಾಠ ಮಾಡುವ ಮೇಡಂ/ಸರ್‌ಗಳು ಇದ್ದಾರೋ ದೇವರಿಗೂ ಗೊತ್ತಿಲ್ಲ. ಹಾಗಾಗಿ ಅಂತಹ ದುಸ್ಸಾಹಸಕ್ಕೆ ತಲೆಹಾಕದೆ ಅಧ್ಯಾಪಕರು ದೇಹದ ಅಟೆಂಡೆನ್ಸ್‌ ತೆಗೆದುಕೊಂಡು ತೃಪ್ತರಾಗುತ್ತಾರೆ.

ವಿಚಾರಸಂಕಿರಣಗಳಲ್ಲಿ ಪ್ರೌಢ ಭಾಷಣಗಳ ಭೀಷಣ ಮಳೆ ಸುರಿಯುವಾಗ ನೂರಾರು ಜನ ಭಾಗವಹಿಸಿರುತ್ತಾರೆ. ಆದರೆ ಅವರು ಇರುತ್ತಾರಾ ಅಂತ ಕೇಳಬಾರದು. ಅವರು ಟಿ.ಎ., ಡಿ.ಎ., ಊಟದ ಮೆನು ಬಗ್ಗೆ ಮಾತಾಡುತ್ತಲೋ ಅಥವಾ ತಮ್ಮ ತಮ್ಮ ಸಂದೇಶವಾಹನೆಯ ಗುರುತರ ಹೊಣೆಗಾರಿಕೆಯೊಂದಿಗೋ ಲೀನವಾಗಿರುತ್ತಾರೆ. ಆದ್ದರಿಂದಲೇ ಅವರು ಆ ವಿಚಾರಸಂಕಿರಣದಲ್ಲಿ ಇದ್ದಾರಾ ಅಂತ ಕೇಳಿದರೆ ಏನೆಂದು ಉತ್ತರಿಸಬೇಕೋ ತಿಳಿಯುವುದಿಲ್ಲ.

Advertisement

ಮೊನ್ನೆ ಕಾಕಾನ ಮಗಳ ಮದುವೆಯಾಯಿತು. ಅಪರೂಪದ ನೆಂಟರೆಲ್ಲ ಬರುತ್ತಾರೆ. ತುಂಬಾ ವರ್ಷದ ನಂತರ ಬಾಲ್ಯಸ್ನೇಹಿತರನ್ನು ಭೆಟ್ಟಿಯಾಗುವ ಸದಾವಕಾಶವೆಂದು ಸಂಭ್ರಮಿಸಿಕೊಂಡು ದೂರದ ಊರಿಗೆ ಹೋದೆ. ಒಬ್ಬರೇ, ಇಬ್ಬರೇ ಹತ್ತೆಂಟು ಜನ ಹಳೆಯ ಮಿತ್ರರು ಬಂದಿದ್ದರು. “ಹಾಯ್‌, ವಾವ್‌’ ಎಂದೆಲ್ಲ ಓಡೋಡಿ ಬಂದು ತಬ್ಬಿಕೊಂಡರು, ಗಟ್ಟಿಯಾಗಿ ಕೈ ಕುಲುಕಿದರು, “ಕಮಾನ್‌’ ಎಂದು ಎಳೆದೆಳೆದು ಸೆಲ್ಫಿ ತಗೊಂಡರು. ಕೆಲವೇ ಕ್ಷಣ. ಅದನ್ನು ಅಪ್‌ಲೋಡ್‌ ಮಾಡುವ ಬಹುಮುಖ್ಯ ಕ್ರಿಯೆಯೊಂದಿಗೆ ಮತ್ತೆ ತಮ್ಮ ತಮ್ಮ ಕೈಮುದ್ದುಗಳಲ್ಲಿ ಕಳೆದು ಹೋದರು. ಇಡೀ ಸಭಾಂಗಣ ಜನರಿಂದ ತುಂಬಿ ತುಳುಕುತ್ತಿತ್ತು. 

ಆದರೆ ಮಾತಿಲ್ಲ, ಕತೆಯಿಲ್ಲ, ಬರೀ ರೋಮಾಂಚನ. ಅಂಗೈಯೊಳಗಿನ ಅರಗಿಣಿಯೊಂದಿಗೆ ನಿತಾಂತ ಸಂವಹನದ ರೋಮಾಂಚನ. ಅಸೀಮ ಸೀಮೆಯಾಚೆಯ ಅನೂಹ್ಯ ಲೋಕವೊಂದಕ್ಕೆ ಜೀವತಂತು ಜೋಡಣೆಯಾಗಿರುವಂತೆ ತನ್ನ ಸುತ್ತಲಿನ ಪರಿಸರವನ್ನು ಕಡೆಗಣಿಸಿ ಅಗಣಿತ ತಾರಾಗಣ ಗಳ ನಡುವಿನ ಅಪೂರ್ವ ಬೆರಗನ್ನೇ ನೆಚ್ಚಿಕೊಂಡ ಮೆಚ್ಚಿಕೊಂಡ ಅಲೌಕಿಕ ರೋಮಾಂಚನವದು. 

ಭವಸಾಗರದೊಳು ಈಜುವ ಮಾನವ ಪ್ರಾಣಿ ಮುಳುಗದಂತೆ ತೇಲುವ ಕಲೆಯನ್ನು ಕಲಿತುಕೊಳ್ಳಬೇಕೆಂದು ಅನಾದಿ ಕಾಲದಿಂದಲೂ ಅನುಭಾವಿಗಳೂ, ಸಂತರೂ, ದಾಸರು ಅದಿನ್ನೆಷ್ಟು ತಿಳಿಹೇಳಿದ್ದರೇನೋ ಪಾಪ. ಅವರ ಶತಶತಮಾನಗಳ ಪ್ರಯತ್ನಕ್ಕೆ ಈಗ ಫ‌ಲ ಸಿಕ್ಕಿದೆ ಎನ್ನಬಹುದೋ ಏನೋ. ಏಕೆಂದರೆ ಆಧುನಿಕ ಗ್ಯಾಜೆಟ್‌ಗಳು ಇದ್ದೂ ಇಲ್ಲದಂತೆ ಇರುವ ಕಲೆಯನ್ನು ಮನುಷ್ಯನಿಗೆ ಕಲಿಸಿವೆ. ಋಷಿ-ಮುನಿಗಳು ತಾವು ಕೂತಲ್ಲಿಯೇ ಸಮಾಧಿ ಸ್ಥಿತಿಯನ್ನು ತಲುಪಿ ಮೂರುಲೋಕಗಳನ್ನು ಸಂಚರಿಸಿ ಬರುತ್ತಿದ್ದರು. ಕೆಲವರು ಸತ್‌ ಚಿತ್‌ ಬೆಳಕಲ್ಲಿ ಚಿತ್ತವನ್ನು ಲೀನಗೊಳಿಸಿ ಬ್ರಹ್ಮಾನಂದವನ್ನು ಅನುಭವಿಸುತ್ತಿದ್ದರು. ಅಂತಹ ಧ್ಯಾನಸದೃಶ ಕ್ರಿಯೆಯಲ್ಲಿನ ತಲ್ಲೀನತೆಯನ್ನೇ ನನ್ನ ಗಂಡನಂತಹ ಲಕ್ಷಾಂತರ ಜನರಲ್ಲಿ ಕಾಣಬಹುದು. ಹಾಗಂತ ಇವರು ಇಹಲೋಕಕ್ಕೆ ಇಳಿಯುವುದೇ ಇಲ್ಲವೇ ಅಂತ ಕೇಳಬೇಡಿ, ಅವರ ಕೈಮುದ್ದು ಹ್ಯಾಂಡ್‌ಸೆಟ್‌ ಅನ್ನಲಿಕ್ಕೆ ನಾನು ಇಟ್ಟ ಹೆಸರು ಕೈಮುದ್ದು. ಗತಪ್ರಾಣವಾಗುವ ಲಕ್ಷಣ ಕಂಡುಬಂದಾಗ ಅಂದರೆ ಅದರ ಚಾರ್ಜ್‌ ಕಡಿಮೆಯಾದ ಸೂಚನೆ ಸಿಕ್ಕೊಡನೆ ಗೋಡೆಗಳ ಕಡೆ ಕಣ್ಣಾಡಿಸುತ್ತಾರೆ. ಅದನ್ನು ಚಾರ್ಜಿಗೆ ಹಾಕಿಕೊಂಡು ಮತ್ತೆ ಆ ಗೋಡೆಗೆ ಒರಗಿಕೊಂಡು ಅಥವಾ ಮೂಲೆಯಾಗಿದ್ದರೆ ಮುದುಡಿಕೊಂಡು ತಲ್ಲೀನ ಸ್ಥಿತಿಗೆ ಇಳಿಯುತ್ತಾರೆ. ಹೌದು ಅದು ಕೈಮುದ್ದು. ಈ ನಮೂನಿ ಮುದ್ದನ್ನು ಅವರು ಅವರ ಪ್ರೇಯಸಿಯನ್ನೂ ಮಾಡಿರುವುದಿಲ್ಲ, ಹೆಂಡತಿಯನ್ನಂತೂ ಕೇಳಲೇಬೇಡಿ. ತಮ್ಮ ಇಷ್ಟಲಿಂಗವನ್ನು ಅಂಗೈಯಲ್ಲಿ ಹಿಡಿದುಕೊಂಡ ಶರಣರಿಗೂ ಇಲ್ಲದ ಭಕ್ತಿಭಾವದಿಂದ, ಅರ್ತಿಯಿಂದ ಈ ಕೈಮುದ್ದನ್ನು ಹಿಡಿದುಕೊಂಡು ಅಡ್ಡಾಡುತ್ತಾರೆ.

ಸಾರಸಾರ ವಿಚಾರ ಮಾಡಿದರೆ ಸಂಸಾರವೆಂಬುದು ಘನಘೋರ ಎಂದು ಹೇಳಿದ ದಾಸರ ಮಾತನ್ನು ಬಲವಾಗಿ ನಂಬಿಕೊಂಡ ಇಂದಿನ ಲೌಕಿಕರು ಆಫೀಸಲ್ಲಿದ್ದೂ ಕೆಲಸದಲ್ಲಿ ತೊಡಗದೇ, ಮನೆಯಲ್ಲಿದ್ದೂ ಸಾಂಸಾರಿಕ ಕ್ರಿಯೆಗಿಳಿಯದೇ, ಸಮಾರಂಭಗಳಿಗೆ ಬಂದೂ ಸಾಮುದಾಯಿಕ ಚಟುವಟಿಕೆಯಲ್ಲಿ ತೊಡಗದೇ ನೀರಿನ ಹನಿ ತಾಕದ ಕೊಳದ ಪದ್ಮಪತ್ರದಂತೆ ನಿರ್ಲಿಪ್ತರಾಗಿರುವುದನ್ನು ನೋಡಿದರೆ ಉಘೇ ಉಘೇ ಎನ್ನದಿರಲಾದೀತೆ? ಇವರು ತಮ್ಮ ಸುತ್ತಮುತ್ತಲಿನ ಆಗುಹೋಗುಗಳ ಕಡೆಗೆ ಎಷ್ಟು ದಿವ್ಯ ನಿರ್ಲಕ್ಷ ತಾಳಿರುತ್ತಾರೆಂದರೆ ಒಂದು ಸಲ ನನ್ನ ಸಂಸಾರ ಔಟಿಂಗ್‌ ಅಂತ ಊಟಕ್ಕೆ ಹೋಗಿದ್ದೆವು. ಪ್ರಸಿದ್ಧ  ಹೊಟೇಲಿನ ತಾರಸಿ ತೋಟ. ಸುತ್ತಲೂ ಬಗೆಬಗೆ ಹೂಗಳು, ಮೇಲೆ ನೀಲಾಕಾಶದಲ್ಲಿ ಹುಣ್ಣಿಮೆ ಚಂದಿರ. “”ಏಯ್‌ ಇಲ್ಲಿ ನೋಡಿ” ಅಂತ ಎಳೆದೆಳೆದು ತೋರಿಸಿದೆ. “”ವಾವ್‌” ಅಂದವರೇ ಫೋಟೋ ತೆಗೆದರು, ಅಷ್ಟೇ. ಪಟಪಟ ಕೈಮುದ್ದುಗಳಲ್ಲಿ ಕಳೆದು ಹೋದರು. ವೇಟರ್‌ ತಂದಿಟ್ಟ ಮೆನುವನ್ನು ಓದಿ, ಊಟದ ಆರ್ಡರ್‌ ಕೊಡಲಿಕ್ಕೆ ಯಾರ ಕಣ್ಣೂ ಖಾಲಿ ಇರಲಿಲ್ಲ. ಆಮೇಲೆ ಊಟ ಬಂದಾಗಲೂ ಅಷ್ಟೆ. ಒಬ್ಬರೂ ತಾಟು ನೋಡಿಕೊಂಡು ಉಣ್ಣಲಿಲ್ಲ. ಕಡೆಗೆ ಬಿಲ್ಲು ನೋಡಿ ಎಷ್ಟಂತ ತಿಳಕೊಂಡು ದುಡ್ಡು ಎಣಿಸಿ ಕೊಡಲಿಕ್ಕೆ ಕಷ್ಟವಾಗುತ್ತದೆ ಅಂತ ಕಾರ್ಡು ಕೊಟ್ಟು ಕೈಮುಗಿದು ಬಿಟ್ಟರು. ಏನು ತಿಂದೆವೆಂದು ತಿಳಿಯದ, ಎಷ್ಟು ಕೊಟ್ಟೆವೆಂದು ತಿಳಿಯದ, ಎಲ್ಲಿ ಕೂತಿದ್ದೇವೆ, ಯಾರ್ಯಾರು ಕೂತಿದ್ದೇವೆ ಎಂದೂ ಗಣನೆಗೆ ಬಾರದ ಅಪೂರ್ವ ಸ್ಥಿತಪ್ರಜ್ಞ ಸ್ಥಿತಿಯೊಂದಕ್ಕೆ ಮನುಕುಲ ತಲುಪುತ್ತದೆ ಅಂತ ಬುದ್ಧನೂ ಎಣಿಸಿರಲಿಕ್ಕಿಲ್ಲ. 

ಮೊನ್ನೆ ನಮ್ಮ ಓಣಿಯಲ್ಲೊಬ್ಬ ಆನಂದ ಮಾರ್ಗಿಗಳು ತಾರಸಿಯ ಮೇಲೆ ಕುಳಿತು ಕೈಮುದ್ದುವಿನಲ್ಲಿ ಲೀನವಾಗಿದ್ದರು. ಹಾಗೆಯೇ ಪ್ರಪಂಚ ಮರೆತ ಅವರಿಗೆ ಅರ್ಧರಾತ್ರಿ ಕಳೆದದ್ದೂ ಅರಿವಾಗಿಲ್ಲ. ಹಿಂದುಗಡೆಯ ಮಾವಿನ ತೋಪಿನಲ್ಲಿ ಮರಹತ್ತಿ ಕಳ್ಳನೊಬ್ಬ ತಾರಸಿಗೆ ಧುಮುಕಿದ್ದಾನೆ. ಇವರನ್ನು ನೋಡಿ ಅವನ ಎದೆ “ಧಸಕ್‌’ ಎಂದಿದೆ. ಆದರೆ ಕೊಂಚ ಹೊತ್ತಾದರೂ ಅಲ್ಲಾಡದ ಇವರ ಸಮಾಧಿ ಸ್ಥಿತಿಯಿಂದ ಧೈರ್ಯ ಪಡೆದುಕೊಂಡು ಸಾವಕಾಶವಾಗಿ ತೆರೆದ ಬಾಗಿಲಿನಿಂದ ಒಳಗೆ ಹೋಗಿದ್ದಾನೆ. ಸೋಫಾದ ಮೇಲೊಂದು, ಮಂಚದ ಮೇಲೊಂದು ಆನಂದ ಮಾರ್ಗಿಗಳು ಕಂಡಿದ್ದಾರೆ. ಆದರೆ ಎಲ್ಲರದ್ದೂ ಸಮಾಧಿ ಸ್ಥಿತಿಯೇ. ಮಂಚದ ಮೇಲಿನ ತಪಸ್ವಿಯ ಹತ್ತಿರ ಕಪಾಟಿನ ಕೀಲಿ ಎಲ್ಲಿದೆ ಅಂತ ಕೇಳಿದ್ದಾನೆ, ದಿಂಬಿನ ಕೆಳಗಿದೆ ಎಂದು ಹೇಳಿ ಅದು ಹೊರಳಿಕೊಂಡಿದೆ. ಕಪಾಟಿನ ಬಾಗಿಲು ತೆರೆದು ಒಂದಿಷ್ಟು ಒಡವೆ, ವಸ್ತು ಬಾಚಿಕೊಂಡು ಮುಂಬಾಗಿಲು ತೆಗೆದು ಹೊರಗೆ ಹೋಗಿದ್ದಾನೆ. ಮತ್ತೇನು ಅನ್ನಿಸಿತೋ ಒಳಗೆ ಬಂದು ಸೋಫಾದ ಮೇಲೆ ಕೂತ ತಪಸ್ವಿಯ ಹತ್ತಿರ ಗಾಡಿ ಕೀಲಿ ಎಲ್ಲಿದೆ ಅಂತ ಕೇಳಿದ್ದಾನೆ. ಆ ದಿವ್ಯ ಚೇತನವು ಟಿ.ವಿ. ಶೆಲ್ಫಿನ ಮೇಲಿದೆ ಅಂತ ಪಿಸುಗುಟ್ಟಿದೆ. ಕಳ್ಳನಿಗೆ ಥ್ರಿಲ್ಲೋ ಥ್ರಿಲ್ಲು. ಭೂಲೋಕದ ಜನರೆಲ್ಲ ಹೀಗೆ ತಮ್ಮ ಸಂಪತ್ತಿನ ಕುರಿತು ದಿವ್ಯ ನಿರ್ಲಕ್ಷ ತಾಳಿ, ಸಾಮಾಜಿಕ ನ್ಯಾಯ ನಿಷೂuರತೆಯಿಂದ ಹಂಚಿ ತಿನ್ನುವ ದಿನ ಬಂದಿತಲ್ಲ ಅಂತ ಆನಂದ ಭಾಷ್ಟ ಸುರಿಸಿದ್ದಾನೆ. ಕಳ್ಳನಿಗೆ ಅನ್ನಿಸಿದ್ದು ನಿನಗೆ ಹೇಗೆ ಗೊತ್ತಾಯ್ತು ಅಂತ ಕೇಳಬೇಡಿ. ಟ್ವೀಟ್‌ ಮಾಡುವುದರ ಮೂಲಕ ಎಲ್ಲರೂ ಎಲ್ಲರ ಮನಸ್ಸನ್ನೂ ತಿಳಿದುಕೊಳ್ಳುವ ಕಾಲವಲ್ಲವೇ ಇದು.

ಈ ದಿವ್ಯಾನಂದರನ್ನು ಅವರ ಆನಂದದ ಸ್ಥಿತಿಯಿಂದ ಹೊರತರಲಿಕ್ಕೆ ಇರುವ ಏಕೈಕ ಮಾರ್ಗವೆಂದರೆ ವ್ಯಾಪ್ತಿ ಪ್ರದೇಶದ ಹೊರಗೆ ಕರೆದೊಯ್ಯುವುದು. ನಮ್ಮ ಜಿಲ್ಲೆಯ ಹಳ್ಳಿಗಳಿಗೆ ಹೋದರೆ ಮುಗಿದೇ ಹೋಯಿತು. ಎಂತೆಂತಹ ಜಬರ್ದಸ್ತ ಸಿಮ್‌ ಜಾಲವಾಗಿದ್ದರೂ ಇಲ್ಲಿಗೆ ತಲುಪುವುದಿಲ್ಲ. ಹಾಗಾಗಿ ಇಲ್ಲಿ ಯಾರು ಬಂದರೂ ನಾಟ್‌ ರೀಚೆಬಲ್‌. ಇಂತಹ ತಲುಪಲಾರದ ಸ್ಥಿತಿ ಬಂದುಬಿಟ್ಟರೆ ಎಲ್ಲ ತಪಸ್ವಿಗಳೂ ಚಡಪಡಿಸಲಾರಂಭಿಸುತ್ತಾರೆ. ಪದೇ ಪದೇ ತಮ್ಮ ಕೈಮುದ್ದಿನ ಕಡೆಗೆ ನೋಡಿ ಸತ್ತ ಕಲ್ಲು ತುಂಡಿನಂತೆ ಬಿದ್ದುಕೊಂಡ ಅದರಲ್ಲಿಣುಕಿ “ಛೇ ಛೇ’ ಅಂತ ಪೇಚಾಡುತ್ತಾರೆ. “ಚೆನ್ನಮಲ್ಲಿಕಾರ್ಜನಾ’ ಎಂದು ಹಾತೊರೆಯುವ ಅಕ್ಕನಂತೆ ಆರ್ದಹೃದಯದಿಂದ ಎತ್ತೆತ್ತರದ ದಿಬ್ಬ ಹತ್ತಿ ನೆಟ್‌ವರ್ಕ ಕುರಿತು ಧೇನಿಸುತ್ತಾರೆ. “ತಳಿರೇ, ತಾವರೆಯೇ, ಮದಾಳಿ ಕುಲಮೇ’ ಎಂದು ವಿಲಾಪಿಸಿದ ರಾಮನಂತೆ ಚಿಂತಾಕ್ರಾಂತರಾಗಿ ಮುಖ ಬಾಡಿಸಿಕೊಂಡು ಜೋತುವದನರಾಗುತ್ತಾರೆ. ಸಿಗರೇಟು ಸಿಗದ ಕಡೆಗೆ ಧೂಮಪಾನಿ ಒದ್ದಾಡುವಂತೆ, ಎಣ್ಣೆ ಬ್ಯಾನಾದ ಊರಲ್ಲಿ ಕುಡುಕ ನರಳುವಂತೆ ಹತಾಶರಾಗುತ್ತಾರೆ. ಮತ್ತೆ ವಾಪಸ್ಸು ಬರುವಾಗ ಜಿಲ್ಲೆಯ ಗಡಿ ದಾಟಿ ಬಯಲು ಪ್ರದೇಶ ಬಂದ ಕೂಡಲೇ ವಾಹನದೊಳಗೇ ಬಿದ್ದುಕೊಂಡು ಅಥವಾ ಸಾರಥಿಯಾದರೆ ನಿಲ್ಲಿಸಿ ಹೊರಗೆ ಹಾರಿಕೊಂಡು ಕೈಮುದ್ದಿನಲ್ಲಿ ಮುಳುಗಿಕೊಳ್ಳುತ್ತಾರೆ.

ಮೊನ್ನೆ ಒಬ್ಬ ಮಾಜಿ ಸಹೋದ್ಯೋಗಿಯ ಸಹಿ ಬೇಕೆಂದು ಅವರ ಮನೆಗೆ ಹೋಗಿದ್ದೆ. ಪೆಂಡಾಲು ಹಾಕಿದ್ದರು. ಬಹಳಷ್ಟು ಕಾರು ನಿಂತಿತ್ತು. “”ಛೇ ಫೋನು ಮಾಡಿಕೊಳ್ಳದೇ ಬಂದೆನಲ್ಲ” ಅಂತ ಪೇಚಾಟವೆನಿಸಿತು. ಆದರೆ ಸಹಿ ಅರ್ಜೆಂಟಾಗಿತ್ತು. ಒಬ್ಬರನ್ನು “”ಏನು ನಡೆಯುತ್ತಿದೆ, ಯಾವ ಫ‌ಂಕ್ಷನ್‌” ಅಂತ ಕೇಳಿದೆ. ಅವರ ಕೈಮುದ್ದು ಬಿಟ್ಟು ತಲೆಯೆತ್ತಿ ನೋಡಿ, “”ಏನು ಫ‌ಂಕ್ಷನ್‌” ಅಂತ ತಿರುಗಿ ನನ್ನನ್ನೇ ಕೇಳಿ “”ಡೊಂಟ್‌ ನೊ” ಅಂದರು. ಮತ್ತಿಬ್ಬರನ್ನು ಕೇಳಿದರೂ ಇದೇ ಉತ್ತರ. ಅಷ್ಟರಲ್ಲಿ ಸಹೋದ್ಯೋಗಿಯ ತಮ್ಮ ಕಂಡರು. “”ನಿಮ್ಮ ಅಣ್ಣ  ಎಲ್ಲಿದ್ದಾರೆ” ಅಂತ ಕೇಳಿದೆ. ಥಟ್ಟನೆ ತಮ್ಮ ಕೈಮುದ್ದನ್ನು ನೋಡಿ “”ಆನ್‌ಲೈನ್‌ ಇದ್ದಾನೆ” ಅಂದರು. ತಲೆ ಚಚ್ಚಿಕೊಳ್ಳಬೇಕೆನಿಸಿತು. ಅವರ ಮನೆಯ ಹಾಲ್‌ ಸೋಫಾದಲ್ಲಿ ಕೂತು ಅವರಿಗೇ ಫೋನು ಮಾಡಿದೆ. ಆಗ ಹೊರಬಂದು ಸಹಿ ಹಾಕಿದರು.

ಈಗಲಾದರೂ ಹೇಳಿ ಈ ಇವರೆಲ್ಲಾ ಇದ್ದಾರಾ? ಇದ್ದರೆ ಎಲ್ಲಿ ಇದ್ದಾರೆ? ಹೇಗಿದ್ದಾರೆ? ಇವರನ್ನು ನೀವು ಇದ್ದಾರೆ ಎನ್ನುವುದಾದರೆ ನಾನು ನನ್ನ ಬಗ್ಗೆ ಇಲ್ಲ ಅಂತ ಹೇಳಬೇಕಾಗುತ್ತದೆ. ಹೌದು ಎಲ್ಲರೂ ನನ್ನ ಮುಖ ಕಂಡಕೂಡಲೇ “”ಏಯ್‌ ನೀನು ಫೇಸುಬುಕ್ಕಿನಲ್ಲಿ ಇಲ್ಲಾ ಯಾಕೆ?” ಅಂತ ಕೇಳುತ್ತಾರೆ. ಇವರೆಲ್ಲ ಇರುವ ಜಗತ್ತಿನಲ್ಲಿ ನಾನಿಲ್ಲ ಸ್ವಾಮಿ. ಹಾಗಾಗಿ ಇವರ ಪಾಲಿಗೆ ನಾನು ಇಲ್ಲ. ನನ್ನೊಂದಿಗೇ ಇರುವ ಈ ಇವರೊಂದಿಗೆ ಇಲ್ಲದ ನಾನು ಇವರೆಲ್ಲ ಇದ್ದಾರಾ ಅಂತ ಕೇಳಿದರೆ ಏನು ಹೇಳಬೇಕು ಎಂಬ ಅಸಲಿ ಪ್ರಶ್ನೆಗೆ ಮತ್ತೆ ಬರುತ್ತೇನೆ. ಥೇಟ್‌ ವಿಕ್ರಮನ ಬೇತಾಳದ ಕತೆಯಾಯ್ತು ಅಂತ ಹೇಳುತ್ತೀರಾ. ನಾನೂ ಸಹ ಆ ಬೇತಾಳನನ್ನು ಹುಡುಕುತ್ತಿದ್ದೇನೆ ಮಾರಾಯ್ರ್, ವಿಕ್ರಮಾದಿತ್ಯ ತನ್ನ ಕೈಮುದ್ದಿನಲ್ಲಿ ಮುಖ ಹುದುಗಿಸಿಕೊಂಡ ಮೇಲೆ ಆ ಬೇತಾಳ ಸಹ ನನ್ನ ಹಾಗೇ ಒಂಟಿಯಾಗಿದೆಯಂತೆ. ಪಾಪ ಅದರ ಕತೆ ಕೇಳಲಿಕ್ಕೆ ಯಾರೆಂದರೆ ಯಾರಿಗೂ ಕೈ ಬಿಡುವಿಲ್ಲವಂತೆ. ನಿಮಗೆ ಸಿಕ್ಕರೆ ಇಲ್ಲಿಗೆ ಕಳಿಸಿಕೊಡಿ. ಆದರೆ ನನಗೊಂದು ಸಂಶಯವುಂಟು. ಈ ಬೇತಾಳನ ಕೈಗೂ ಕೈಮುದ್ದು ಸಿಕ್ಕಿದದರೂ ಸಿಕ್ಕಬಹುದು. ಹೇಗೆ ಗೊತ್ತುಂಟಾ? ಕೆಲವರು ರಸ್ತೆಯ ಮೇಲೆ ತಮ್ಮ ಕೈಮುದ್ದಿನಲ್ಲಿ ಮುಖ ಹುದುಗಿಸಿ ಡ್ರೆ„ವ್‌ ಮಾಡುವಾಗ ಪ್ರಾಣ ಬಿಡುತ್ತಾರಲ್ಲ, ಅವರು ಪ್ರೇತಗಳಾದ ಮೇಲೂ ಸಹ ಕೈಮುದ್ದಿನಲ್ಲೇ ಮುಳುಗಿರುತ್ತಾರೆ ತಾನೆ? ಪ್ರಾಣವನ್ನಾದರೂ ಬಿಟ್ಟೇನು ಆದರೆ ನನ್ನ ಕೈಮುದ್ದನ್ನು ಬಿಡಲಾರೆ ಅಂತ ಹಿಡಿದುಕೊಂಡವರಲ್ಲೆ ಸ್ವಾಮಿ ಅವರು? ಇಂಥ‌ವರ ಹೊಸ ಸಂಪರ್ಕದಿಂದ ಬಹುಶಃ ಪ್ರೇತಪ್ರಪಂಚದಲ್ಲೂ ಪ್ರಚಂಡ ಪ್ರೇಮ-ಪ್ರಸಿದ್ಧಿಗಳನ್ನು ಪಡೆದುಕೊಂಡಿರಬಹುದಾದ ಈ ಮಾಯಗಾತಿಯ ಮಹಿಮೆಗೆ ಬೇತಾಳರಾಯನೂ ಬಲಿಯಾಗಿರಬಹುದಲ್ಲವೆ?

ಪ್ರಜ್ಞಾ ಮತ್ತಿಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next