Advertisement
– ಶಿಕ್ಷಣ, ನೀರಾವರಿ, ಮೂಲ ಸೌಲಭ್ಯ, ಅಭಿವೃದ್ಧಿ ವಿಚಾರದಲ್ಲಿ ಸರಕಾರಗಳ ವರ್ತನೆ, ಉದಾಸೀನತೆ ಈ ಭಾಗದ ಅಸಂಖ್ಯಾತರ ಮನದೊಳಗೆ ಇಂತಹ ಮಾತು ಹಾಗೂ ಪ್ರಶ್ನೆಗಳನ್ನು ಮೂಡಿಸಿದೆ.
Related Articles
Advertisement
ಭೀಕರ ಬರ ದಿಂದಾಗಿ ಕೃಷ್ಣಾ ನದಿ ಬತ್ತಿದ್ದು, ಕೋಯ್ನಾದಿಂದ ನಾಲ್ಕು ಟಿಎಂಸಿ ಅಡಿ ನೀರು ಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಇಂದಿಗೂ ಹನಿ ನೀರು ಬಂದಿಲ್ಲ. ನೀರು ತರುವ ನಿಟ್ಟಿನಲ್ಲಿ ಸರಕಾರವಾಗಿ, ವಿಪಕ್ಷವಾಗಿ ಯಾರೊಬ್ಬರು ಜವಾಬ್ದಾರಿಯುತ ಯತ್ನ ತೋರಲೇ ಇಲ್ಲ. ತುಂಗಭದ್ರ ಜಲಾಶಯದಲ್ಲಿ ಹೂಳಿನ ಸಮಸ್ಯೆ ಹೆಚ್ಚಿದ್ದು, ಸಮನಾಂತರ ಜಲಾಶಯ ನಿರ್ಮಾಣ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ, ಯೋಜನೆಗೆ ಅನುಮೋದನೆ ದೊರೆತಿದೆ ಎಂಬುದು ಬಿಟ್ಟರೆ ಇಂದಿಗೂ ಭೂಸ್ವಾಧೀನ ಇನ್ನಿತರ ಯಾವ ಕಾರ್ಯವೂ ಆಗಿಲ್ಲ.
ಮಹದಾಯಿ ನ್ಯಾಯಾಧೀಕರಣ ನೀರು ಹಂಚಿಕೆ ತೀರ್ಪು ನೀಡಿದ್ದರೂ, ಅಧಿಸೂಚನೆ ವಿಚಾರದ ಮಾತಿನ ಸಮರ ನಡೆದಿದ್ದು ಬಿಟ್ಟರೆ ಮತ್ತೇನು ಆಗಿಲ್ಲ.
ಡಾ| ಡಿ.ಎಂ.ನಂಜುಂಡಪ್ಪ ವರದಿ, ಹೈಕ ಭಾಗಕ್ಕೆ 371(ಜೆ)ಕಲಂ ಜಾರಿಗೊಂಡರೂ ಸಮರ್ಪಕ ಅನುಷ್ಠಾನವಾಗಿಲ್ಲ. ಮುಂಬಯಿ ಕರ್ನಾಟಕ, ಹೈದರಾಬಾದ ಕರ್ನಾಟಕ್ಕೆ ವಿವಿಧ ಇಲಾಖೆಯಡಿ ಸಾಮಾನ್ಯವಾಗಿ ಬರಬೇಕಾದ ನಿಧಿಯನ್ನೇ ವಿಶೇಷ ಅಭಿವೃದ್ದಿ ನಿಧಿಯಲ್ಲಿ ತೋರಿಸಲಾಗಿದೆ. 371(ಜೆ)ಕಲಂ ಅಡಿಯಲ್ಲಿ ಶೇ.50ರಷ್ಟು ಸಹ ಅನುದಾನ ವೆಚ್ಚವಾಗಿಲ್ಲ ಎಂಬ ಕೊರಗು ಈ ಭಾಗದ ಜನರದ್ದಾಗಿದೆ.
ಮೂಗಿಗೆ ತುಪ್ಪ: ವಿವಿಧ ಇಲಾಖೆಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಕುರಿತು ಸಚಿವ ಸಂಪುಟ ಕಳೆದ ನಾಲ್ಕೈದು ತಿಂಗಳ ಹಿಂದೆಯೇ ನಿರ್ಣಯ ಕೈಗೊಂಡಿದ್ದರೂ ಇಂದಿಗೂ ಯಾವ ಕಚೇರಿ ಬಂದಿಲ್ಲ. ಸಕ್ಕರೆ ನಿರ್ದೇಶನಾಲಯ, ಉಪ ಲೋಕಾಯುಕ್ತರ ಕಚೇರಿ ಬೆಳಗಾವಿಗೆ ; ಕೆಬಿಜೆಎನ್‌ಎಲ್ ಆಲಮಟ್ಟಿಗೆ, ಕೆಎನ್‌ಎನ್‌ಎಲ್ ದಾವಣಗೆರೆಗೆ, ಉಪ ಲೋಕಾಯುಕ್ತ ಕಚೇರಿ, ಮಾಹಿತಿ ಹಕ್ಕು ಆಯುಕ್ತರ ಕಚೇರಿ ಕಲಬುರಗಿಗೆ ಹೀಗೆ ಸುಮಾರು ಒಂಬತ್ತು ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರದ ಘೋಷಣೆ ಮೂಗಿನ ತುದಿಯ ತುಪ್ಪವಾಗಿದೆ. ಕಚೇರಿಗಳು ಬರುವುದಿರಲಿ, ಕಚೇರಿ ಹೆಸರಲ್ಲಿ ಒಂದು ಟೇಬಲ್-ಕುರ್ಚಿ ಸಹ ಬಂದಿಲ್ಲ. ನಮಗೆ ನೀರಿಲ್ಲದಾಗಲೂ ತೆಲಂಗಾಣಕ್ಕೆ ಎರಡು ಟಿಎಂಸಿ ಅಡಿ ನೀರು ಹರಿಸಿದರೂ ಯಾರೊಬ್ಬರು ಚಕಾರವೆತ್ತಲಿಲ್ಲ. ಆ ಬಗ್ಗೆ ನಮ್ಮ ಭಾಗದ ಜನಪ್ರನಿಧಿಗಳಿಗೆ ಬೇಕಾಗಿಯೂ ಇಲ್ಲ ಎಂಬುದು ನೀರಾವರಿ ಹೋರಾಟಗಾರ ಬಸವರಾಜ ಕುಂಬಾರ ಅವರ ಆಕ್ರೋಶ.
ಉತ್ತರ ಕರ್ನಾಟಕ್ಕೆ ವಿವಿಧ ಕಚೇರಿಗಳು ಬರುವುದಿರಲಿ, ಇದೇ ಭಾಗದಲ್ಲಿದ್ದ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ ಇನ್ನಿತರ ಕಚೇರಿಗಳು ಹಾಸನ ಹಾಗೂ ರಾಮನಗರಕ್ಕೆ ಸ್ಥಳಾಂತಗೊಂಡಿವೆ. ವಿಟಿಯು ಇಬ್ಭಾಗ ಯತ್ನ ವ್ಯವಸ್ಥಿತ ರೂಪ ಪಡೆದಿದೆ. ಬಜೆಟ್ ಪೂರ್ವದಲ್ಲಿ ಉತ್ತರದ ಶಾಸಕರು ಒಟ್ಟಾಗಿ ಸೇರಿ ನಮ್ಮ ಭಾಗದ ಬೇಡಿಕೆ ಏನು, ಬಜೆಟ್‌ನಲ್ಲಿ ಎಷ್ಟು ಅನುದಾನ ಬೇಕೆಂಬ ಒತ್ತಾಯದ ಸಂಘಟಿತ ಧ್ವನಿ ಇಂದಿಗೂ ತೋರಿಲ್ಲ. ವರ್ಗಾವಣೆ ಆದೇಶಗಳಿಗೆ ಸಹಿ ಬಿದ್ದರೆ ಸಾಕು ಎನ್ನುವಂತೆ ಇದ್ದಾರೆ ಎಂಬುದು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರ ಆರೋಪ.
ಈ ಭಾಗದ ವಿಶ್ವವಿದ್ಯಾಲಯಗಳ ಕುಲಪತಿ ಹಾಗೂ ಕುಲಸಚಿವರ ಹುದ್ದೆ ವರ್ಷದವರೆಗೂ ಖಾಲಿ ಇದ್ದರೂ ಭರ್ತಿಯ ಯತ್ನ ಆಗುತ್ತಿಲ್ಲ. ಈ ಭಾಗದವರನ್ನು ಕಡೆಗಣಿಸಿ ಬೇರೆ ಕಡೆಯವರನ್ನ ಕುಲಪತಿಯಾಗಿಸಲಾಗುತ್ತದೆ. ವಿವಿ ಸೇರಿದಂತೆ ಸರಕಾರಿ ಇಲಾಖೆಗಳಲ್ಲಿ ಅದೆಷ್ಟೋ ಪ್ರಮುಖ ಹುದ್ದೆಗಳು ಪ್ರಭಾರಿಯಲ್ಲೇ ಇವೆ. ಇಷ್ಟಾದರೂ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸರಕಾರದ ಮೇಲೆ ಒತ್ತಡ ಹಾಕುತ್ತಿಲ್ಲ. ಹೀಗಾಗಿ ‘ನಮ್ಮ ಕಷ್ಟ ನೋವು-ಅಳಲು ಯಾರ ಮುಂದೆ ಹೇಳಿಕೊಳ್ಳಬೇಕು. ನಮಗೆ ನಾವೇ ಪ್ರಶ್ನೆ ಕೇಳಿಕೊಂಡು ಸ್ವಯಂ ಸಾಂತ್ವಾನ ಮಾಡಿಕೊಳ್ಳಬೇಕಾಗಿದೆ’ ಎಂಬುದು ಉತ್ತರದ ಜನರ ಅಳಲು.
•ಅಮರೇಗೌಡ ಗೋನವಾರ