ಬೆಂಗಳೂರು: ದೇಶದ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಯಾಗಿದ್ದ ಆರ್. ಎನ್. ಕುಲಕರ್ಣಿ ಅವರ ಕೊಲೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಟೀಕೆ ಮಾಡಿದೆ. ಕೊಲೆಯ ಹಿಂದೆ ಭೂ ಮಾಫಿಯಾದ ಎಂದಿರುವ ಜೆಡಿಎಸ್ ಟ್ವೀಟ್ ಮಾಡಿದೆ.
ರಾಜ್ಯ ಸರ್ಕಾರದ ಮೇಲೆ ಮಾಫಿಯಾಗಳು ಹಿಡಿತ ಸಾಧಿಸಿದರೆ ಏನೆಲ್ಲ ಆಗಬಹುದು ಎಂಬುದಕ್ಕೆ ಈ ಮಾಧ್ಯಮ ಅಂಕಣ ಸಾಕ್ಷಿ. ಆರ್. ಎನ್. ಕುಲಕರ್ಣಿ ಅವರ ಕೊಲೆಗೆ ಸಂಬಂಧಿಸಿದಂತೆ ಮೂರು ತಿಂಗಳಾದರೂ ಆರೋಪ ಪಟ್ಟಿ ದಾಖಲಾಗಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಮುಗುಮ್ಮಾಗಿ ಕುಳಿತಿದೆ ಎಂದಿದೆ.
ಮೈಸೂರಿನಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಈ ಕೊಲೆ ಪ್ರಕರಣದ ಹಿಂದೆ ಭೂಮಾಫಿಯಾದ ಕೈವಾಡವಿರುವುದು ಸ್ಪಷ್ಟವಾಗಿದೆ. ತಮ್ಮ ನೆರೆ ಮನೆಯವರ ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕುಲಕರ್ಣಿ ಅವರು ದೂರು ದಾಖಲಿಸಿದ್ದರು. ಈ ದೂರಿನ ನಂತರ ಅವರ ಕೊಲೆಯಾಗಿದೆ. ನಮ್ಮ ದೇಶದ ಗುಪ್ತಚರ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದವರ ಕೊಲೆ ಪ್ರಕರಣವೂ ಸರ್ಕಾರಕ್ಕೆ ನಾಟುವುದಿಲ್ಲ ಎಂದರೆ ಏನು ಅರ್ಥ? ಮೂರು ತಿಂಗಳಾದರೂ ಆರೋಪ ಪಟ್ಟಿ ಸಿದ್ಧವಾಗಿಲ್ಲ ಎಂಬುದು ನಮ್ಮ ಪೊಲೀಸ್ ವ್ಯವಸ್ಥೆಯ ನಿಷ್ಕ್ರಿಯತೆಗೆ ಹಿಡಿದ ಕನ್ನಡಿ ಎಂದಿದೆ.
ಇದನ್ನೂ ಓದಿ:ಜಡೇಜಾಗೆ ಸಿರಾಜ್ ನೀಡಿದ್ದೇನು?ವೈರಲ್ ವಿಡಿಯೋದಲ್ಲಿ ಇರುವುದೇನು? ಸ್ಪಷ್ಟನೆ ಕೊಟ್ಟ ಟೀಂಇಂಡಿಯಾ
ದೂರಿನನ್ವಯ ಅನಧಿಕೃತ ಕಟ್ಟಡದ ಬಗ್ಗೆ ಮೈಸೂರು ಮಹಾನಗರ ಪಾಲಿಕೆಯು ಯಾವುದೇ ಕ್ರಮ ಕೈಗೊಂಡಿಲ್ಲ. ರಿಯಲ್ ಎಸ್ಟೇಟ್ ಎಂಬುದು ದಂಧೆಕೋರರ ಅಡ್ಡೆಯಾಗಿದೆ. ಕಮಿಷನ್ ಗಿರಾಕಿಗಳೆಂದೇ ಕುಖ್ಯಾತವಾಗಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇಂತಹ ವಿಷಯಗಳು ಗಂಭೀರವಲ್ಲ. ಈ ಪ್ರಕರಣದ ನಂತರ ಜೀವಭಯದಿಂದಾಗಿ ಕುಲಕರ್ಣಿಯವರ ಪತ್ನಿ ಮನೆ ತೊರೆದು ವೃದ್ಧಾಶ್ರಮಕ್ಕೆ ಸೇರಿದ್ದಾರೆ. ದೇಶಕ್ಕೆ ಸೇವೆ ಸಲ್ಲಿಸಿದ ಅಧಿಕಾರಿ ಮತ್ತಾತನ ಕುಟುಂಬಕ್ಕೆ ರಕ್ಷಣೆ ಕೊಡದಷ್ಟು ಅಮಾನವೀಯವಾಗಿದೆ ಈ ಬಿಜೆಪಿ ಸರ್ಕಾರದ ಆಡಳಿತ. ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಅವರೆ, ಈಗಲಾದರೂ ಸೂಕ್ತ ಕ್ರಮ ಕೈಗೊಳ್ಳಿ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.