Advertisement
ಮನೆ ಬಿಡೋದು ಅಷ್ಟು ಸುಲಭ ಅಲ್ಲ! ಅಯ್ಯೋ, ಮನೆ ಬಿಟ್ಟು ದೇಶಾಂತರ ಓಡಿ ಹೋಗುವುದರ ಬಗ್ಗೆ ನಾನಿಲ್ಲಿ ಹೇಳ್ತಿಲ್ಲಾರೀ. ನಮಗೆ, ಅಂದರೆ ಗೃಹಿಣಿಯರಿಗೆ ಅಷ್ಟು ಸುಲಭವಾಗಿ ಮನೆ ಬಿಟ್ಟು ಹೊರಗೆ ಹೋಗಲು ಸಾಧ್ಯವಿಲ್ಲ ಅಂತ ಹೇಳಿದ್ದು. ಉದಾಹರಣೆಗೆ, ಮುಂಜಾನೆಯ ವಾಕಿಂಗ್ ಅನ್ನೇ ತೆಗೆದುಕೊಳ್ಳಿ- ಗಂಡಸರಿಗಾದರೆ ಎದ್ದು, ಹಲ್ಲುಜ್ಜಿ, ಮುಖ ತೊಳೆದು, ಒಂದು ನೈಟ್‌ಪ್ಯಾಂಟು ಟಿ- ಶರ್ಟ್ ಏರಿಸಿಕೊಂಡು, ಮೊಬೈಲು ಜೇಬಿಗಿಳಿಸಿ ಹೊರಟರೆ ಮುಗಿಯಿತು. ಎಷ್ಟೊತ್ತಿಗೆ ವಾಪಸಾದರೂ ಯಾರು ಕೇಳುವವರಿದ್ದಾರೆ?
Related Articles
Advertisement
ಖುಷಿಯ ನಡುವಿನ ಧಾವಂತಕೆಲವೊಮ್ಮೆ ಯಜಮಾನರು ಇದ್ದಕ್ಕಿದ್ದಂತೆ ಸಂಜೆ ಬೇಗ ಬಂದು, ಬೇಗ ರೆಡಿಯಾಗಿ, ಎಲ್ಲರೂ ಸಿನಿಮಾಕ್ಕೋ, ಹೋಟೆಲ್‌ಗೋ ಹೋಗೋಣ ಎಂದಾಗ, ಖುಷಿ ಪಡುವುದಕ್ಕಿಂತ ಮೊದಲು ನೆನಪಾಗುವುದು ಹೋಟೆಲ್ ಊಟ ಒಲ್ಲದ, ಸಿನಿಮಾಕ್ಕೆ ಬರಲೊಪ್ಪದ ಅತ್ತೆ ಮಾವನಿಗೆ ಅಡುಗೆ ಏನು ಮಾಡುವುದು ಅಂತ. ಅವರಿಗೆ ಎಲ್ಲ ರೆಡಿ ಮಾಡಿ, ಮನೆ ಬಾಗಿಲುಗಳನ್ನೆಲ್ಲಾ ಹಾಕಿ, ಮಕ್ಕಳಿಗೆ ಬೇಕಾದ ಸಾಮಾನು ತೆಗೆದುಕೊಂಡು, ಒಂದು ಸಿಕ್ಕರೆ ಮತ್ತೂಂದು ಸಿಗದಂತೆ ಕಳೆದು ಹೋಗಿರುವ ರಾಶಿ ಬಟ್ಟೆಗಳ ನಡುವೆ, ನಮ್ಮ ಬಟ್ಟೆಗಳನ್ನು ಹುಡುಕಾಡಿ ಹಾಕಿಕೊಂಡು ಹೊರಡುವ ಹೊತ್ತಿಗೆ ಯಜಮಾನರು, “ಏನ್ ಹೆಂಗಸ್ರೋ? ರೆಡಿಯಾಗೋಕೆ ಎಷ್ಟು ಟೈಮ್ ತೆಗೆದುಕೊಳ್ತಾರೆ’ ಎಂದು ಸಿಡಿಸಿಡಿ ಎನ್ನುತ್ತಿರುತ್ತಾರೆ. ಒಬ್ಬರೇ ಹೋಗಲಾದೀತೇ?
ಗಂಡ ಮಕ್ಕಳನ್ನು ಬಿಟ್ಟು ನಾವೊಬ್ಬರೇ ಎಲ್ಲಿಗಾದರೂ ದೂರ ಹೊರಡುವಾಗಿನ ಗಡಿಬಿಡಿ ಮತ್ತೂಂದು ರೀತಿಯದು. ಮೂರು ದಿನಕ್ಕಾಗುವಷ್ಟು ದೋಸೆ ಹಿಟ್ಟು ರುಬ್ಬಿಟ್ಟು, ಎರಡು ದಿನಕ್ಕಾಗುವಷ್ಟು ತಿಳಿಸಾರು ಮಾಡಿ, ಅನ್ನಕ್ಕೆ, ಚಪಾತಿಗೆ ಕಲಸಿಕೊಳ್ಳಲು ಎರಡು ಮೂರು ರೀತಿಯ ಚಟ್ನಿಪುಡಿ ಮಾಡಿಟ್ಟು, ಅವುಗಳನ್ನು ಇಟ್ಟಿರುವ ಜಾಗವನ್ನು ಯಜಮಾನರಿಗೆ ಪರಿಚಯ ಮಾಡಿಯೇ ಹೊರಡಬೇಕು. ಇಲ್ಲದಿದ್ದರೆ ಊರಿನಲ್ಲಿ ನೆಮ್ಮದಿಯಾಗಿ ಅಮ್ಮ, ಅಕ್ಕ ತಂಗಿಯರ ಜೊತೆಗೆ ಹರಟಲೂ ಬಿಡದೆ, ಅದೆಲ್ಲಿ, ಇದೆಲ್ಲಿ ಅಂತಾ ಇಪ್ಪತ್ತು ಸಲ ಫೋನು ಮಾಡಿ ತಲೆ ತಿಂದು ಬಿಡುತ್ತಾರೆ. ಅದೇ ಅವರು ಊರಿಗೆ ಹೋದಾಗ ನಾವೇನಾದರೂ ಅಪ್ಪಿ ತಪ್ಪಿ ಫೋನು ಮಾಡಿದರೆ, “ಸಮಯ, ಸಂದರ್ಭ ಗೊತ್ತಾಗೋದಿಲ್ವಾ?’ ಅಂತ ಪಟ್ ಅಂತ ಗದರಿಬಿಡುತ್ತಾರೆ. ಮನೆಗೆ ಬೀಗ ಹಾಕಿಕೊಂಡು ಎಲ್ಲರೂ ಹೋಗಬೇಕಾದ ಪರಿಸ್ಥಿತಿ ಬಂದಾಗ ಮತ್ತೂಂದಿಷ್ಟು ಹೆಚ್ಚಿನ ಜವಾಬ್ದಾರಿ. ಎಲ್ಲರ ಬಟ್ಟೆ, ಸಾಮಾನುಗಳನ್ನು ಸರಿಯಾಗಿ ಪ್ಯಾಕ್ ಮಾಡುವುದು ಒಂದೆಡೆಯಾದರೆ, ಹಾಲಿನವರಿಗೆ, ಪೇಪರ್‌ನವರಿಗೆ, ಕೆಲಸದವರಿಗೆ ಮುಂಚೆಯೇ ತಿಳಿಸುವುದು, ಫ್ರಿಡ್ಜ್ನಲ್ಲಿರುವ ತರಕಾರಿ, ಹಾಲು, ಮೊಸರನ್ನು ಖಾಲಿ ಮಾಡುವುದು, ಪ್ರಯಾಣದ ನಡುವೆ ಬಾಯಾಡಿಸಲು ಕುರುಕಲು, ತಿಂಡಿ, ಊಟ ಕಟ್ಟಿಕೊಂಡು, ನೀರಿನ ವ್ಯವಸ್ಥೆ ಮಾಡಿಕೊಳ್ಳುವುದು… ಅಬ್ಟಾ! ಉಸ್ಸಪ್ಪಾ ಎನಿಸಿಬಿಡುತ್ತದೆ. ಹೋಗೋಕೆ ಹಿಂದಿನ ಎರಡು ದಿನ, ಬಂದ ನಂತರದ ಎರಡು ದಿನ ಕೆಲಸಗಳ ರಾಶಿಯೇ ಬಿದ್ದಿರುತ್ತದೆ. ಒಮ್ಮೊಮ್ಮೆ ಊರೂ ಬೇಡಾ, ಕೇರೀನೂ ಬೇಡಾ, ತಣ್ಣಗೆ ಮನೆಯಲ್ಲಿದ್ದು ಬಿಡೋಣ ಎನಿಸುವುದುಂಟು. ಮನೆಯನ್ನು ನಾವು ಬಿಟ್ಟರೂ, ಮನೆ ನಮ್ಮನ್ನು ಬಿಡುವುದಿಲ್ಲ. ಅದಕ್ಕೇ ಹೇಳಿದ್ದು- ಹೆಂಗಸರಿಗೆ ಮನೆ ಬಿಟ್ಟು ಹೊರಡುವುದೆಂದರೆ ಸುಲಭವಲ್ಲ ಅಂತ… ನಿಮಗೇನನ್ನಿಸುತ್ತದೆ? – ನಳಿನಿ ಟಿ. ಭೀಮಪ್ಪ