Advertisement

ಸಮಗ್ರ ಚರ್ಚೆಯಾಗಬೇಕು ಏಕಕಾಲಕ್ಕೆ ಚುನಾವಣೆ ಸಾಧ್ಯವೇ?

09:34 AM Aug 16, 2017 | Team Udayavani |

ಏಕಕಾಲಕ್ಕೆ ಚುನಾವಣೆ ನಡೆಸುವುದು ಕೆಟ್ಟ ಚಿಂತನೆಯಂತೂ ಖಂಡಿತ ಅಲ್ಲ. ಆದರೆ ಇದಕ್ಕೂ ಮೊದಲು ಸಾಧಕ- ಬಾಧಕಗಳ ಬಗ್ಗೆ ಸಮಗ್ರ ಚರ್ಚೆಯಾಗಬೇಕು. 

Advertisement

ದೇಶಕ್ಕೊಂದೇ ಚುನಾವಣೆ – ಇದು ಪ್ರಧಾನಿಯವರ ಅಚ್ಚುಮೆಚ್ಚಿನ ವಿಷಯ. ಲೋಕಸಭೆ ಮತ್ತು ಎಲ್ಲ ವಿಧಾನಸಭೆಗಳಿಗೆ ಒಂದೇ ಸಲ ಚುನಾವಣೆ ನಡೆಸಿ ಐದು ವರ್ಷ ಚುನಾವಣೆಯ ರಗಳೆಯಿಲ್ಲದೆ ಆಡಳಿತ ನಡೆಸುವುದು ಈ ಪರಿಕಲ್ಪನೆಯ ಹಿಂದಿರುವ ಉದ್ದೇಶ. ಹಿಂದೆಯೂ ಹಲವು ಬಾರಿ ಆಗಾಗ ಈ ಪ್ರಸ್ತಾವ ಬಂದಿತ್ತು. ಕಳೆದ ವರ್ಷ ಮೋದಿ ಈ ಕುರಿತು ಸ್ಪಷ್ಟವಾಗಿ ಮಾತನಾಡಿರುವುದಲ್ಲದೆ ಜನಾಭಿಪ್ರಾಯ ಸಂಗ್ರಹವನ್ನೂ ಮಾಡಿದ್ದಾರೆ. ಇದಕ್ಕಾಗಿ ರಚಿಸಿದ್ದ ವೆಬ್‌ಸೈಟಿನಲ್ಲಿ ಬಹುತೇಕ ಮಂದಿ ಏಕಕಾಲಕ್ಕೆ ಚುನಾವಣೆ ನಡೆಸುವ ಪರವಾಗಿದ್ದಾರೆ. ಮಾಧ್ಯಮಗಳಿಗೂ ಈ ಪರಿಕಲ್ಪನೆ ಆಕರ್ಷಣೀಯವಾಗಿ ಕಂಡಿದೆ. ಮುಂದಿನ ವರ್ಷವೇ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಯೋಗ ಆಗುವ ಸಾಧ್ಯತೆಯಿದೆ ಎಂಬ ವರದಿ ಈ ಚರ್ಚೆಯನ್ನು ಮತ್ತೂಮ್ಮೆ ಮುನ್ನೆಲೆಗೆ ತಂದಿದೆ. ಇದಕ್ಕಾಗಿ ಕೇಂದ್ರ ತನ್ನ ಅಧಿಕಾರವಧಿಯ ಕೆಲವು ತಿಂಗಳುಗಳನ್ನು ತ್ಯಾಗ ಮಾಡಲು ಕೂಡ ತಯಾರಿದೆ ಎನ್ನುತ್ತಿವೆ ವರದಿಗಳು. ಅಂದರೆ, 2019ರ ಎಪ್ರಿಲ್‌ನಲ್ಲಿ ನಡೆಯಬೇಕಾದ ಲೋಕಸಭಾ ಚುನಾವಣೆಯನ್ನು 2018ರ ನವೆಂಬರ್‌/ಡಿಸೆಂಬರ್‌ನಲ್ಲಿ ನಡೆಸುವ ಲೆಕ್ಕಾಚಾರದಲ್ಲಿದೆ ಎಂದಾಯಿತು. 2018ರಲ್ಲಿ ಕರ್ನಾಟಕ, ಗುಜರಾತ್‌ ಸೇರಿದಂತೆ ಕೆಲವು ರಾಜ್ಯಗಳಿಗೆ ಚುನಾವಣೆ ನಡೆಯಲಿರುವುದರಿಂದ ಅದರ ಜತೆಗೆ ಲೋಕಸಭೆಗೂ ಚುನಾವಣೆ ನಡೆಸುವುದು ಸರಕಾರದ ಚಿಂತನೆ ಎನ್ನಲಾಗುತ್ತಿದೆ. 

ಏಕಕಾಲಕ್ಕೆ ಚುನಾವಣೆ ನಡೆಸಿದರೆ ಭಾರೀ ಪ್ರಮಾಣದಲ್ಲಿ ಹಣ ಉಳಿತಾಯವಾಗಲಿದೆ ಎನ್ನುವುದು ಈ ವಾದದ ಪರವಾಗಿರುವವರ ಅಭಿಪ್ರಾಯ. ಚುನಾವಣೆಗಾಗಿ ಸರಕಾರ, ಅಭ್ಯರ್ಥಿಗಳು ಮತ್ತು ಪಕ್ಷಗಳು ಅಪಾರ ಪ್ರಮಾಣದ ಹಣ ಖರ್ಚು ಮಾಡುತ್ತಿವೆ. ಐದು ವರ್ಷಕ್ಕೊಮ್ಮೆ ಒಂದೇ ಸಲ ಚುನಾವಣೆ ನಡೆಸಿದರೆ ಈ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು ಎನ್ನುತ್ತಾರೆ. ಆದರೆ ಇದು ಚುನಾವಣೆಯನ್ನು ಹಣದ ಮೌಲ್ಯದಲ್ಲಿ ಅಳೆದಂತಾಗುತ್ತದೆ. ಚುನಾವಣೆಯೇ ಪ್ರಜಾಪ್ರಭುತ್ವದ ಅಂತಃಶಕ್ತಿ. ಚುನಾವಣೆಗೆ ತನ್ನದೇ ಆದ ಪಾವಿತ್ರ್ಯವಿದ್ದು, ಹಣ ಖರ್ಚಾಗುತ್ತದೆ ಎಂಬ ಕಾರಣಕ್ಕೆ ಚುನಾವಣೆಯನ್ನೇ ತಪ್ಪಿಸಿ ಬಿಡುವುದು ಎಷ್ಟು ಸರಿ ಎನ್ನುವ ಪ್ರಶ್ನೆಗೆ ಉತ್ತರಿಸುವ ಅಗತ್ಯವಿದೆ. ಪದೇ ಪದೇ ಚುನಾವಣೆ ನಡೆಯುತ್ತಿದ್ದರೆ ಸರಕಾರಕ್ಕೆ ಆಡಳಿತದತ್ತ ಗಮನ ಹರಿಸಲು ಸಮಯ ಸಾಕಾಗುವುದಿಲ್ಲ. ಚುನಾವಣೆ ಕಾಲದಲ್ಲಿ ಯಾವ ನೀತಿ ಅಥವಾ ನಿರ್ಧಾರಗಳನ್ನು ಘೋಷಿಸುವಂತಿಲ್ಲ. ಜತೆಗೆ ಚುನಾವಣೆ ನಡೆದು ಫ‌ಲಿತಾಂಶ ಘೋಷಣೆಯಾಗುವಷ್ಟು ಸಮಯ ಇಡೀ ಆಡಳಿತ ಯಂತ್ರ ಚುನಾವಣಾ ಆಯೋಗದ ಅಡಿಯಲ್ಲಿರುತ್ತದೆ. ಅಧಿಕಾರಿಗಳೆಲ್ಲ ಚುನಾವಣೆ ಕೆಲಸದಲ್ಲಿ ವ್ಯಸ್ತರಾಗಿರುವುದರಿಂದ ಸರಕಾರಿ ಕಚೇರಿಗಳಲ್ಲಿ ಜನರ ಕೆಲಸ ಆಗುವುದಿಲ್ಲ. ಪೊಲೀಸ್‌ ಇಲಾಖೆ ಹಾಗೂ ಇತರ ಭದ್ರತಾ ಸಂಸ್ಥೆಗಳು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜನೆಗೊಳ್ಳುತ್ತವೆ. ರಾಜಕೀಯ ಪಕ್ಷಗಳಿಗೂ ಪದೇ ಪದೇ ಚುನಾವಣೆಗೆ ತಯಾರಿ ನಡೆಸುವ ತಲೆಬಿಸಿ ಇಲ್ಲದೆ ಜನರ ನೈಜ ಸಮಸ್ಯೆಗಳತ್ತ ಗಮನ ಹರಿಸಲು ಸಾಧ್ಯವಾಗುತ್ತದೆ ಎನ್ನುವುದೆಲ್ಲ ಏಕಕಾಲಕ್ಕೆ ಚುನಾವಣೆ ನಡೆಯಬೇಕು ಎನ್ನುವವರ ಅಭಿಪ್ರಾಯ.  ಏಕಕಾಲಕ್ಕೆ ಚುನಾವಣೆ ನಡೆದರೆ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಬಹುದು ಎನ್ನುವುದು ವಿರೋಧಿಸುವವರ ಪ್ರಬಲ ವಾದ. ನಮ್ಮದು ಪ್ರಜಾತಾಂತ್ರಿಕ ಸಂಸದೀಯ ಒಕ್ಕೂಟ ವ್ಯವಸ್ಥೆ. ಇದರಲ್ಲಿ ಲೋಕಸಭೆ ಚುನಾವಣೆಯಷ್ಟೇ ಮಹತ್ವ ವಿಧಾನಸಭೆ ಚುನಾವಣೆಗಳಿಗೂ ಇದೆ. ಹೀಗಾಗಿ ಏಕಕಾಲಕ್ಕೆ ಚುನಾವಣೆ ನಡೆಸುವುದು ಅತಾರ್ಕಿಕ ಮಾತ್ರವಲ್ಲ, ಅಸಂಗತ ಚಿಂತನೆ. ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯಲ್ಲಿ ಪ್ರತ್ಯೇಕ ಚುನಾವಣೆ ನಡೆಸುವುದರಿಂದ ಮತದಾರರಿಗೆ ಸರಿಯಾದ ಆಯ್ಕೆಯನ್ನು ಮಾಡಲು ಸಾಧ್ಯವಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಬೀಸುವ ಅಲೆಯ ಲಾಭ ಒಂದೇ ಪಕ್ಷಕ್ಕೆ ಸಿಗುವ ಅಪಾಯವಿದೆ. ಎಂಬ ಪ್ರತಿವಾದವಿದೆ. ಏಕಕಾಲಕ್ಕೆ ಚುನಾವಣೆ ನಡೆಸುವುದು ಕೆಟ್ಟ ಚಿಂತನೆಯಂತೂ ಖಂಡಿತ ಅಲ್ಲ. ಆದರೆ ಇದಕ್ಕೂ ಮೊದಲು ಸಾಧಕ- ಬಾಧಕಗಳ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ಪ್ರಜಾತಂತ್ರದ ಮೌಲ್ಯಗಳಿಗೆ ಹಾನಿಯಾಗದಂತೆ ಕಾರ್ಯಗತ ಗೊಳಿಸಿಕೊಳ್ಳಲು ಸಾಧ್ಯವಾದರೆ ಮಾತ್ರ ಇದರಿಂದ ಒಳಿತಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next