Advertisement

ಒಬ್ಬ ಹುಡುಗ- ಹುಡುಗಿ ಫ್ರೆಂಡ್ಸಾಗಿ ಇರೋಕೆ ಸಾಧ್ಯ ಇಲ್ವಾ?

06:00 AM Aug 08, 2017 | |

ನೀನು ನನಗೆ ಸಿಗುವ ಮೊದಲು ನನಗೆ ನನ್ನದೇ ಪ್ರಪಂಚ. ಅದೆಷ್ಟೋ ಗೆಳೆಯರಿದ್ದರೂ ನಾನೊಬ್ಬ ಏಕಾಂಗಿ ಎಂಬ ನೋವು ಎಂದಿನಿಂದಲೂ. ನೀನು ನನಗೆ ಸಿಕ್ಕಿದ್ದು ಮೊದಲ ವರ್ಷದ ಬಿ.ಎ ಪದವಿಯಲ್ಲಿಯೇ ಆದರೂ, ನನ್ನ ನಿನ್ನ ಸ್ನೇಹ ಎರಡನೆಯ ವರ್ಷದಲ್ಲಿ ಚಿಗುರೊಡೆಯಿತು. ನೀನು ಮೊದಲು ಪರಿಚಯವಾದಾಗ ಒಬ್ಬ ಒಳ್ಳೆಯ ಗೆಳತಿ ಸಿಕ್ಕಿದಳು ಅಂದುಕೊಂಡೆ. ಕಾಲ ಕಳದಂತೆ ನಮ್ಮಿಬ್ಬರಲ್ಲಿ  ಸ್ನೇಹದ ಬೇರು ಗಟ್ಟಿಯಾಗಿ ನೆಲೆಯೂರಿತ್ತು. ನನ್ನ ಬದುಕಿನಲ್ಲಿ ನೀನು ಗುರುವಾಗಿ, ಸ್ನೇಹಿತೆಯಾಗಿದ್ದವಳು. ಇಂದು ನನ್ನ ಜೀವದ ಉಸಿರಾಗಿದ್ದೀಯಾ. ಅದೆಷ್ಟೋ ಬಾರಿ ನಾನು ಎಡವಿದರೆ ನೀನು ದುಃಖ ಪಡ್ತಿದ್ದೆ. ನಾನು ಕಷ್ಟ ಅನುಭವಿಸಿದರೆ ನೀನು ನೋವು ಅನುಭವಿಸುತ್ತಿದ್ದೆ. ನೀನು ಯಾವಾಗ್ಲೂ  ನಿನ್ನ ನೋವು ಸುಖ ಸಂತೋಷನಾ ನನ್ನ ಮುಂದೆ ಹಂಚಿಕೊಂಡಿದ್ದೀಯಾ. ಆದ್ರೆ ನನಗೆ ಆ ಅವಕಾಶ ಬರಲೇ ಇಲ್ಲ!            
     
ನಾನು ಕಾಲೇಜಿನ ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೊರಟಾಗ ನೀನು ‘ಆಲ್‌ ದಿ ಬೆಸ್ಟ್‌ ಕಣೋ, ಚೆನ್ನಾಗಿ ಮಾತನಾಡು’ ಎಂದು ಹಾರೈಸುತ್ತಿದ್ದೆ. ಆ ಮಾತುಗಳಿಂದ ನನಗೆ ಸಿಕ್ಕ ಸ್ಫೂರ್ತಿ ಅಷ್ಟಿಷ್ಟಲ್ಲ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನಿನ್ನ ಒಡನಾಟ, ನಿನ್ನ ಸ್ನೇಹ ನನಗೆ ಅನೇಕ ಕವನಗಳನ್ನು ರಚಿಸಲು ಪ್ರೇರೇಪಿಸಿದೆ. ನಿನ್ನಿಂದ ಅದೆಷ್ಟೋ ಬದುಕಿನ ಒಳ್ಳೆಯ ವಿಷಯಗಳನ್ನು ಕಲಿತಿರುವೆ. 

Advertisement

ನೀನು ನನಗೆ ಯಾವಾಗಲೂ ಒಂದು ಮಾತು ಹೇಳ್ತಿದ್ದೆ. ನೆನಪಿದೆಯಾ? ‘ಜೀವನದಲ್ಲಿ ಏನೇ ಬರಲಿ ನಾನು ನಿನ್ನ ಜತೆ ಇರ್ತೀನಿ’ ಅನ್ನೋ ಆ ಮಾತು ಮರೆತಿರುವೆಯಾ? ಈಗ, ನಿನ್ನ ಪವಿತ್ರ ಸ್ನೇಹಬಂಧನವೂ ನನ್ನ ಜತೆಯಲ್ಲಿ ಇಲ್ಲ. ಈಗ ನೀನೂ ಇಲ್ಲ. ಒಂದು ಹುಡುಗನ ಜತೆ ಒಂದು ಹುಡುಗಿ ಸ್ನೇಹದಿಂದ ಬಾಳುವುದಕ್ಕೆ ಸಾಧ್ಯನೇ ಇಲ್ಲವಾ? ಅವರು ಕೇವಲ ಪ್ರೇಮಿಗಳು ಮಾತ್ರ ಆಗಿರ್ತಾರ? ಇಂತಹ ಉತ್ತರ ಸಿಗದ ಪ್ರಶ್ನೆಗಳು ನನ್ನಲ್ಲಿವೆ. ನಮ್ಮಿಬ್ಬರದು ಪರಿಶುದ್ಧ ಸ್ನೇಹ ಎಂದು ಕೆಲವರಿಗೆ ಏಕೆ ಅರ್ಥವಾಗ್ಲಿಲ್ಲ?ಕೆಲವರು ನಮ್ಮಿಬ್ಬರ ಸ್ನೇಹಕ್ಕೆ “ಪ್ರೀತಿ’ ಎಂಬ ಹಣೆ ಪಟ್ಟಿ ಕಟ್ಟಿ ನಮ್ಮಿಬ್ಬರನ್ನೂ ಅಗಲಿಸಿದ ಆ ಕ್ಷಣಾನ ನಾ ಹೇಗೆ ಮರೆಯಲಿ? ಇಂದಿಗೂ ಸಹ ನನ್ನ ಹೃದಯಾಂತರಾಳದಲ್ಲಿ ನಿನ್ನ ಪವಿತ್ರ ಸ್ನೇಹವನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿರುವೆ. ನಾ ಬಯಸುವುದು ಒಂದೇ. ನೀ ಎಲ್ಲೇ ಇರು, ಹೇಗೇ ಇರು ಎಂದೆಂದಿಗೂ ನೀನು ಚೆನ್ನಾಗಿರು…  
 
ಇಂತಿ ನಿನ್ನ ಗೆಳೆಯ

– ಮುದಕನಗೌಡ ಎನ್‌. ಪಾಟೀಲ, ಗದಗ

Advertisement

Udayavani is now on Telegram. Click here to join our channel and stay updated with the latest news.

Next