Advertisement
ನಾವೆಲ್ಲಾ ಆಗಿನ್ನೂ ಚಿಕ್ಕವರಿದ್ದೆವು. ಅಮ್ಮ ಬೆಳ್ಳಂಬೆಳಗ್ಗೆ ಎದ್ದು ಬಹಳಷ್ಟು ಕೆಲಸಗಳನ್ನು ಮುಗಿಸಿದರೂ ನಮಗಿನ್ನೂ ಬೆಳಗಾಗುತ್ತಿರಲಿಲ್ಲ. ಚಳಿಗಾಲದ ದಿನಗಳ ಮುಂಜಾವಿನ ಚಳಿ ನಮ್ಮನ್ನು ಮತ್ತಷ್ಟು ಮುದುಡಿ, ಹೊದ್ದು ಮಲಗಲು ಪ್ರೇರೇಪಿಸುತ್ತಿತ್ತು. ಅಮ್ಮ ಕರೆದು ಎಬ್ಬಿಸಿದಾಗ ಗಡಿಬಿಡಿಯಿಂದ ಎದ್ದು ಬಂದು, ನಿತ್ಯಕರ್ಮಗಳನ್ನು ಮುಗಿಸಿ ಅಡುಗೆ ಕೋಣೆಗೆ ಓಡುತ್ತಿದ್ದೆವು. ನೆಲಮಟ್ಟದಲ್ಲಿದ್ದ ಎರಡು ಒಲೆಗಳ ಮುಂದೆ ಚಳಿ ಕಾಯಿಸಿಕೊಳ್ಳಲು ನಮ್ಮ ನಡುವೆ ಪೈಪೋಟಿ ಶುರುವಾಗುತ್ತಿತ್ತು.
Related Articles
Advertisement
ಹೊರಗೆ ಚಳಿಯಿದ್ದರೂ ಬೆಳಗ್ಗೆ ಧಾವಂತದಲ್ಲಿ ಮನೆಗೆಲಸ ಮಾಡುವಾಗ ಬೆವೆತುಹೋಗುವ ಅನುಭವ ನಿಮಗೂ ಆಗಿರಬಹುದು. ಮಿಕ್ಸಿ, ಗ್ರೈಂಡರ್, ವಾಷಿಂಗ್ ಮೆಷಿನ್, ಇಂಡಕ್ಷನ್ ಕುಕ್, ಗ್ಯಾಸ್ ಸ್ಟೌ, ಕುಕ್ಕರ್, ಇತ್ಯಾದಿ ಉಪಕರಣಗಳಿದ್ದರೂ, ಸ್ಟೀಲ್/ ಕಾಪರ್ ಬಾಟಂ/ ಟೆಫ್ಲಾನ್ ಕೋಟೆಡ್ ಎಂದು ಸುಲಭದಲ್ಲಿ ತೊಳೆಯಬಹುದಾದ ಪಾತ್ರೆಗಳಿದ್ದರೂ ಕೆಲಸ ಮುಗಿಯುವಷ್ಟರಲ್ಲಿ ನಾನು ಬೆವರಿ, ಬಸವಳಿದಿರುತ್ತೇನೆ. ಹಾಗಾದರೆ, ಯಾವ ಸೌಕರ್ಯಗಳೂ ಇಲ್ಲದ ಆ ದಿನಗಳಲ್ಲಿ ನನ್ನಮ್ಮ ಎಷ್ಟು ಬೆವರಿರಬಹುದು, ಹೇಗೆಲ್ಲಾ ಬೆಂದಿರಬಹುದು?
ಅಮ್ಮನಂತೆಯೇ ಆ ಕಾಲದ ಎಲ್ಲಾ ಅಮ್ಮಂದಿರೂ ಅಡುಗೆ ಕೋಣೆಯಲ್ಲಿ ಅಕ್ಷರಶಃ ಬೇಯುತ್ತಿದ್ದರು. ನೆಲ ಮಟ್ಟದ ಒಲೆಯಲ್ಲಿ ಕಟ್ಟಿಗೆ ತುಂಬಿ ಉರಿಸಲು ಅಮ್ಮ ಪಡುತ್ತಿದ್ದ ಪಾಡು ಅಂತಿಂಥದ್ದಲ್ಲ. ಬಗ್ಗಿ ಕುಳಿತು ಗಾಳಿ ಊದಿ ಒಲೆ ಉರಿಸಲು ಪಾಡುಪಡುವಾಗ ಆ ಬಿಸಿಗೆ, ಹೊಗೆಗೆ ಅಮ್ಮನ ಕಣ್ಣು ಕೆಂಪಾಗಿ, ಕೆಮ್ಮು ಬಂದು, ಕಣ್ಣಲ್ಲಿ ನೀರು ಸುರಿದದ್ದರ ಕಷ್ಟ ಅಷ್ಟಾಗಿ ನನಗೆ ಗೊತ್ತಾಗುತ್ತಿರಲಿಲ್ಲ. (ಒಮ್ಮೊಮ್ಮೆ ನಾನೂ ಒಲೆ ಉರಿಸಿದ್ದಿದೆ. ಅದು ಆಗ ಕಷ್ಟದ ಕೆಲಸವೆಂದು ನನಗೆ ಅನಿಸಿರಲಿಲ್ಲ. ಎಲ್ಲರ ಮನೆಯಲ್ಲೂ ಹಾಗೇ ಇದ್ದುದರಿಂದ ಅದು ರೂಢಿಯೆನಿಸಿತ್ತು) ನಲ್ಲಿ ತಿರುಗಿಸಿದರೆ ನೀರು ಸುರಿಯುವ ವ್ಯವಸ್ಥೆ ಈಗ ಇದೆ. ಅಂದಿನ ಅಮ್ಮಂದಿರು ದೂರದಿಂದ ನೀರನ್ನು ತರಬೇಕಿತ್ತು. ಬಾವಿಯಿಂದ ನೀರೆಳೆದು ಕೊಡಗಳಲ್ಲಿ ತುಂಬಿಸಿ, ತಲೆಗೊಂದು, ಸೊಂಟಕ್ಕೆ ಒಂದು ಕೊಡ ಇಟ್ಟು ಮನೆಯ ಅಗತ್ಯಕ್ಕೆ ತಕ್ಕ ನೀರನ್ನು ತಂದು ತುಂಬಿಸುವಾಗ ಅವರಿಗೆಷ್ಟು ಕಷ್ಟ ಆಗಿರಲಿಕ್ಕಿಲ್ಲ?
ರುಬ್ಬುವ ಕಲ್ಲಲ್ಲಿ ದಿನಕ್ಕೆ ಹಲವು ಬಾರಿ ಹಿಟ್ಟನ್ನೋ, ಮಸಾಲೆಯನ್ನೋ ರುಬ್ಬುವಾಗ ಅವರು ಸ್ವಲ್ಪ ಸಮಯ ಸುಮ್ಮನೇ ಕುಳಿತು ದಣಿವಾರಿಸಿಕೊಳ್ಳಲು ಬಯಸಿರಲಿಕ್ಕಿಲ್ಲವೇ? ಮನೆಯ ನೆಲಕ್ಕೆ ಸೆಗಣಿ ಸಾರಿಸಿ ಅಂದಗೊಳಿಸುವಾಗ ತಮ್ಮ ಕೈಯ ಸೌಂದರ್ಯ ಹಾಳಾಗುತ್ತದೆಂಬ ಕಲ್ಪನೆಯೇ ಅವರಿಗಿರಲಿಲ್ಲ. ತರಹೇವಾರಿ ಮನೆಕೆಲಸಗಳನ್ನೆಲ್ಲ ಮುಗಿಸಿ ತೋಟ, ಹೊಲ ಗದ್ದೆಗಳ ಕೆಲಸದಲ್ಲೂ ಪಾಲ್ಗೊಂಡಾಗ ಅವರಿಗೆ ತಮ್ಮ ಬಗ್ಗೆ ಯೋಚಿಸಲು ಸಮಯವೇ ಇರಲಿಲ್ಲ.
ಹೌದು. ಅಂದಿನ ಅಮ್ಮಂದಿರಿಗೆ ಚಳಿಯಿದ್ದೂ ಚಳಿಯಿರಲಿಲ್ಲ. ಕಷ್ಟಗಳಿದ್ದರೂ ಅದರ ಬಗ್ಗೆ ಕೊರಗುಗಳಿರಲಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಇದ್ದರೂ ಸ್ವಾತಂತ್ರ್ಯದಿಂದ ವಂಚಿತರಾಗಿದ್ದೇವೆ ಎನಿಸಿರಲಿಲ್ಲ. ಈಗ ಕಾಲ ಬದಲಾಗಿದೆ. ಅಮ್ಮಂದಿರ ಪರಿಸ್ಥಿತಿ ಬದಲಾಗಿದೆ. ಹೈಟೆಕ್ ವ್ಯವಸ್ಥೆಗಳ ನಡುವೆ ಬದುಕಿಯೂ ನೂರಾರು ದೂರು, ದುಗುಡ, ದುಮ್ಮಾನಗಳಿರುವ ಆಧುನಿಕ ಅಮ್ಮಂದಿರು ಒಮ್ಮೆಯಾದರೂ ತಮ್ಮ ಅಮ್ಮಂದಿರನ್ನು ನೆನೆಯುವುದು ಒಳಿತು. ನನ್ನ ಅಮ್ಮನಿಗೇಕೆ ಚಳಿಯಾಗಲಿಲ್ಲ, ನನ್ನ ಅಮ್ಮನಿಗೇಕೆ ಆಸೆಗಳಿರಲಿಲ್ಲ, ನನ್ನ ಅಮ್ಮನಿಗೇಕೆ ಸುಸ್ತಾಗುತ್ತಿರಲಿಲ್ಲ… ಇಂತಹ ನೂರಾರು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದೊಂದಿಗೆ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡೋಣ..
-ಜೆಸ್ಸಿ ಪಿ.ವಿ.