Advertisement

ಸ್ಲಿಮ್‌ ಸಾಹಸ!

09:44 AM Jan 30, 2020 | mahesh |

ತೂಕ ಇಳಿಸಲೇಬೇಕು ಅಂತಾದಾಗ, ಅವರಿವರು ಮಾತನಾಡುವ “ಸ್ಲಿಮ್‌ ಸೂತ್ರ’ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು ಯೋಗ ಮಾಡು ಅಂದಳು. ಮತ್ತೂಬ್ಬಳು ಮತ್ತೂಂದು ಐಡಿಯಾ ಕೊಟ್ಟಳು. ನಾನೊಂದಿಷ್ಟು ಗೂಗಲ್‌ ಮೊರೆ ಹೋದೆ. ಎಲ್ಲಾ ಕಲಸುಮೇಲೋಗರವಾಗಿ ಎಲ್ಲಿಂದ ಪ್ರಾರಂಭಿಸಲಿ ಅಂತ ತೋಚದೆ, “ನಾಳೆ ನೋಡೋಣ’ ಎಂದು ದಿನ ದೂಡುತ್ತಲೇ ಇದ್ದೆ.

Advertisement

ಊರಲ್ಲಿದ್ದಾಗ ಕಡ್ಡಿಯಂತಿದ್ದ ನಾನು ಕೆಲಸ ಹಿಡಿದು, ಬೆಂಗಳೂರಿಗೆ ಬಂದ ಮೇಲೆ ದಪ್ಪಗಾಗಿದ್ದೆ. ಉಹ್ಹೂ, ಅಲ್ಲ ಅಲ್ಲ ದಪ್ಪ ಆಗುತ್ತಲೇ ಹೋದೆ. ಅನ್ನದ ಮೇಲೊಂದಿಷ್ಟು ಸಾಂಬಾರು ಅಥವಾ ಚಪಾತಿಗೊಂದು ಪಲ್ಯ ಮಾಡಿದರೆ ನಮ್ಮೂರಲ್ಲಿ ಊಟವೇ ಮುಗಿದು ಹೋಗುತ್ತಿತ್ತು. ಆದರೆ, ಬೆಂಗಳೂರಲ್ಲಿ ಜನ ವೆರೈಟಿ ಇಷ್ಟಪಡ್ತಾರೆ. ಚಪಾತಿಗೆ ಒಂದೇ ಪಲ್ಯನಾ? ಎಲ್ಲಿಗೂ ಸಾಲೋಲ್ಲ ಇವ್ರಿಗೆ. ಎರಡು ಬಗೆಯ ಪಲ್ಯ, ಒಂದರಿಂದ ಎರಡು ಬಗೆಯ ಸೈಡ್‌ ಡಿಶ್‌ಗಳಿಗೆ ನಾನು ಅಪ್‌ಡೇಟ್‌ ಆದ್ಮೇಲೆ ನನ್ನ ದೇಹಾನೂ ಆಗಬೇಕಲ್ವಾ?

ಆಫೀಸಿನಿಂದ ತಿಂಗಳಿಗೊಂದೋ, ಎರಡು ತಿಂಗಳಿಗೆ ಒಮ್ಮೆಯೋ “ಟೀಮ್‌ ಲಂಚ್‌’ಗೆ ಕರೆದುಕೊಂಡು ಹೋಗುತ್ತಿದ್ದರು. ಹೋಗುತ್ತಿದ್ದ ಕಡೆಯೆಲ್ಲ ಬಫೆ ಇರುತ್ತಿತ್ತು. ಸ್ಟಾರ್ಟರ್ಸ್‌ ಅಂತೆ, ಮೈನ್‌ ಕೋರ್ಸ್‌ ಅಂತೆ, ಡೆಸರ್ಟ್ಸ್ ಅಂತೆ! ನಮ್ಮಲ್ಲಿ ಮದುವೆ-ಮುಂಜಿಗಳಲ್ಲಿ ಒಂದೆರಡು ಬಗೆಯ ಸ್ವೀಟ್ಸ್‌, ಖಾರ ನೋಡಿದ್ದು ಗೊತ್ತಿತ್ತೇ ಹೊರತು, ಇವಿಷ್ಟನ್ನು ಒಂದೇ ಸಲಕ್ಕೆ ನೋಡಿದವಳಿಗೆ ಹೇಗನಿಸಿರಬೇಡ? ಅವರೆಲ್ಲ ತಮ್ಮ ತಟ್ಟೆಗಳನ್ನು ತುಂಬುತ್ತಿದ್ದರು, ನಾನೂ ಒಂದು ಕೈ ನೋಡಿಯೇ ಬಿಡೋಣ ಅಂತ ತೆಗೆದುಕೊಳ್ಳುತ್ತಿದ್ದೆ. ಪುಟಾಣಿ ಹೊಟ್ಟೆ ಬೆಳೆಯುತ್ತಾ ಬಂತು, ನನಗದರ ಅರಿವಾಗಲಿಲ್ಲಲ್ಲ. ಕಣ್ಮುಚ್ಚಿ ಆಫೀಸಿನವರ ಜೊತೆ ಹೋಗೋದು, ತಿನ್ನೋದು, ಬರೋದು.

ಇವೆಲ್ಲದರ ನಡುವೆ, ಮನೆಗೆ ಅಡಿಗೆಯವಳ ಆಗಮನವಾಯಿತು. ಅಲ್ಲಿಯವರೆಗೆ ಕೈ ಕಾಲಿಗೆ ಅಡುಗೆ ಕೋಣೆಯಲ್ಲಾದರೂ ವ್ಯಾಯಾಮ ದೊರೆಯುತ್ತಿತ್ತು, ಅವಳು ಬಂದ್ಮೇಲೆ ಅದಕ್ಕೂ ಬ್ರೇಕ್‌. ಆಫೀಸು ಮುಗಿಸಿ ಬಂದು ಸೋಫಾದಲ್ಲಿ ಪವಡಿಸಿದರೆ ಒಂದು ಕೈಯಲ್ಲಿ ಕಾದಂಬರಿ, ಇನ್ನೊಂದು ಕೈಯಲ್ಲಿ ಕರಂಕುರುಂ ಬಾಯಿಗೆ ಹೋಗುತ್ತಿತ್ತು. ಅಡಿಗೆಯವಳು ಮಾಡುತ್ತಿದ್ದ ದಿನಕ್ಕೊಂದು ವೈವಿಧ್ಯವನ್ನು ಆಸ್ವಾದಿಸುತ್ತಿದ್ದವಳಿಗೆ, ಏರುತ್ತಿರುವ ತೂಕದ ಬಗ್ಗೆ ಅರಿವಾಗಿದ್ದು, “ಏಯ್‌, ಏನೇ ದಿನದಿಂದ ದಿನಕ್ಕೆ ಡುಮ್ಮಿ ಆಗ್ತಿದ್ದಿ?’ ಅಂತ ತಂಗಿ ಕಿಚಾಯಿಸಿದಾಗಲೇ. ಅವಳು ಇದ್ದ ಹಾಗೇ ಇದ್ದಳು, ನಾನು ಡುಮ್ಮಕ್ಕ ಆಗೋಗಿದ್ದೆ! ಬೆಂಗಳೂರಿಗೆ ಬಂದ ನಂತರ, ವರ್ಷದಲ್ಲಿ ಆರು ಕೆಜಿ ಜಾಸ್ತಿಯಾಗಿದ್ದೆ!

ಅವಳು ಅಷ್ಟು ಹೇಳಿದ್ದೇ ತಡ, ನನ್ನೊಳಗೆ ಫಿಟ್‌ನೆಸ್‌ ಬಗ್ಗೆ ಕಾಳಜಿ ಜಾಗೃತವಾಯ್ತು. ಆಫೀಸ್‌ನ ಲೇಡೀಸ್‌ ವಾಷ್‌ರೂಮ್‌ನಲ್ಲಿ ಅವರಿವರು ಮಾತನಾಡುವ “ಸ್ಲಿಮ್‌ ಸೂತ್ರ’ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು ಯೋಗ ಮಾಡು ಅಂದಳು. ಮತ್ತೂಬ್ಬಳು ಮತ್ತೂಂದು ಐಡಿಯಾ ಕೊಟ್ಟಳು. ನಾನೊಂದಿಷ್ಟು ಗೂಗಲ್‌ ಮೊರೆ ಹೋದೆ. ಎಲ್ಲಾ ಕಲಸುಮೇಲೋಗರವಾಗಿ ಎಲ್ಲಿಂದ ಪ್ರಾರಂಭಿಸಲಿ ಅಂತ ತೋಚದೆ, “ನಾಳೆ ನೋಡೋಣ’ ಎಂದು ದಿನ ದೂಡುತ್ತಲೇ ಇದ್ದೆ. ಹೀಗಿರುವಾಗ, ನಮ್ಮ ಬಾಲಿವುಡ್‌ ಕೃಷ್ಣ ಸುಂದರಿ ಬಿಪಾಶ ಬಸುವಿನ ಹಿಟ್‌ ಕಾರ್ಡಿಯೋ ವ್ಯಾಯಾಮದ ವಿಡಿಯೋ ಯೂಟ್ಯೂಬ್‌ನಲ್ಲಿ ಸಿಕು¤. ಇನ್ನು ಟೈಂ ಪಾಸ್‌ ಮಾಡಿದ್ರೆ ನನಗೇ ನನ್ನ ಗುರುತು ಸಿಗಲಿಕ್ಕಿಲ್ಲವೆಂದು ಆ ವೀಡಿಯೋ ನೋಡಿ ನನ್ನ ಸ್ಲಿಮ್‌ ಕಸರತ್ತಿಗೆ ಮುಹೂರ್ತ ಫಿಕ್ಸ್‌ ಮಾಡಿದೆ.

Advertisement

ಹೇಳಿ ಕೇಳಿ ಆಕೆ ಫಿಟ್‌ ಹೀರೋಯಿನ್‌. ಅವಳಂತೆಯೇ ನಾನು ಮಾಡಲು ಸಾಧ್ಯವಿತ್ತೇ? “ಅರ್ಧ ಗಂಟೆಯ ವ್ಯಾಯಾಮ, ನೀಡಬೇಡ ವಿರಾಮ, ನೀನಾಗುವೆ ಸ್ಲಿಮ್‌ ಎಲ್ಲಾ ಆಯಾಮದಿಂದ’ ಅಂತ ನನಗೆ ನಾನೇ ಬೆನ್ನು ತಟ್ಟಿಕೊಂಡರೂ, ಐದೇ ಐದು ನಿಮಿಷಕ್ಕೇ ಸುಸ್ತು. ಒಂದೊಂದು ವ್ಯಾಯಾಮದಲ್ಲೂ ಎಂಟು ಅಥವಾ ಹದಿನಾರು ಕೌಂಟ್‌, ನನಗೆ ನಾಲ್ಕು ಐದಕ್ಕೇ ತಲೆ ಗಿರ್‌ ಎಂದು ಕಣ್ಣೆದುರು ನಕ್ಷತ್ರ ಕಾಣಿಸ್ತಾ ಇತ್ತು. ವ್ಯಾಯಾಮದ ನಡುವೆ ಮಾರ್ಚ್‌ (ನಿಂತಲ್ಲೇ ಓಡಿದಂತೆ ಮಾಡುವುದು) ಮಾಡ್ಬೇಕಂತೆ! ಅಲ್ಲ ಮಾರಾಯ್ತಿ, ನೀನು ಹೇಳಿದ ವ್ಯಾಯಾಮವನ್ನೇ ಮುಗಿಸೋಕ್ಕಾಗದೆ ಕಾಲುಗಳು ನಡುಗುತ್ತಿವೆ, ಬೆವರು ಇಳೀತಿದೆ, ಇನ್ನು ವಿರಾಮದಲ್ಲೂ ಮಾರ್ಚ್‌ ಮಾಡ್ಬೇಕಾ? ಅಂತ ಬಿಪಾಶಳಿಗೆ ಬೈದುಕೊಂಡೆ. ಕೆಲ ನಿಮಿಷಗಳಲ್ಲೇ ಸ್ಲಿಮ್‌ ಜಪ ಮರೆತುಹೋಗಿ, “ಕೂತ್ಕೊಂಡ್ರೆ ಸಾಕಪ್ಪಾ, ನನಗ್ಯಾಕೆ ತೆಳ್ಳಗಾಗುವ ಹುಚ್ಚು ಬಂತು’ ಅಂತನ್ನಿಸಿತು. ಕೊನೆಗೂ ಏನೇನೋ ಸರ್ಕಸ್‌ ಮಾಡಿ ಎರಡು ವರ್ಷದಲ್ಲಿ ನಾಲ್ಕು ಕೆಜಿ ಕಡಿಮೆ ಮಾಡಿಕೊಂಡೆ ಅನ್ನೋದು ಬೇರೆ ಮಾತು ಬಿಡಿ. ಆದರೆ, ಇನ್ನೂ ಒಂದೆರಡು ಕೆ.ಜಿ. ಇಳಿಸಬೇಕು. ಆದರೇನು ಮಾಡಲಿ, ಇಷ್ಟಕ್ಕೇ ಸುಸ್ತಾಗಿ ಹೋಗಿದ್ದೇನೆ. ಸದ್ಯಕ್ಕೆ ಇಷ್ಟು ಸಾಕು ಅಂತ ಸ್ಲಿಮ್‌ ಮಂತ್ರಕ್ಕೆ ಫ‌ುಲ್‌ಸ್ಟಾಪ್‌ ಹಾಕಿದ್ದೇನೆ.

-ಸುಪ್ರೀತಾ ವೆಂಕಟ್‌

Advertisement

Udayavani is now on Telegram. Click here to join our channel and stay updated with the latest news.

Next