Advertisement

ನೂರು ವರ್ಷ ಬದುಕುತ್ತೇನೆ ಎಂಬುದು ಗಮ್ಯವೇ?…ಎಲ್ಲದರ ಗಮ್ಯ ಒಂದೇ…ಆದರೂ ಒಂದೇ ಅಲ್ಲ !

05:25 PM Dec 07, 2024 | Team Udayavani |

ಎಲ್ಲದರ ಗಮ್ಯ ಒಂದೇ ಅಂತ ಮೇಲ್ನೋಟಕ್ಕೆ ಅನ್ನಿಸಿದರೂ ಆ ಗಮ್ಯ ಒಂದೇ ಅಲ್ಲ ಎಂಬುದು ನಿತ್ಯ-ಸತ್ಯ. ಹಿರಿಯರು ಹೇಳ್ತಾರೆ ಎಲ್ಲರ ಹುಟ್ಟೂ, ಎಲ್ಲದರ ಹುಟ್ಟೂ ಹೆಚ್ಚುಕಮ್ಮಿ ಒಂದೇ ರೀತಿಯಲ್ಲೇ ಆದರೂ ತೆರಳುವ ವಿಧಾನ ಬೇರೆ. ತೆರಳಿ ಸಾಗುವ ಹಾದಿಯು ಭಿನ್ನವೇ ಆದರೂ ಗಮ್ಯ ಮಾತ್ರ ಒಂದೇ ಅಂತ. ಖಂಡಿತ ನಿಜವೇ ಸರಿ. ಆದರೆ ಕೊಂಚ ಭಿನ್ನ ಎಂಬ ಅನಿಸಿಕೆ ನನ್ನದು. ಹಾಗಾಗಿ ಮೊದಲಿಗೆ ಈ ಗಮ್ಯ ಎಂದರೇನು ಎಂದು ಅರ್ಥೈಸಿಕೊಳ್ಳುವಾ.

Advertisement

ಗಮ್ಯ ಎಂದರೆ ಕೊನೆಯ ಸ್ಟಾಪ್‌ ಎಂದುಕೊಳ್ಳಬಹುದು. ಯಾವುದು ಕೊನೆಯೋ ಅನಂತರ ಮುಂದೇನೂ ಇಲ್ಲವೋ ಅದೇ ಗಮ್ಯ. ಕೆಲವರ ಮಾತಿನಲ್ಲಿ ಗಮ್ಯ ಎಂದರೆ ಸಿರಿವಂತನಾಗೋದು. ಆದರೆ ಈ ಸಿರಿಗೆ ಕೊನೆಯೆಲ್ಲಿ? ಹತ್ತು ಕೋಟಿಯೇ? ನೂರು ಕೋಟಿಯೇ? ನೂರಿದ್ದರೆ ಸಾವಿರ, ಸಾವಿರ ಎಂದರೆ ಹತ್ತು ಸಾವಿರ ಹೀಗೆ ಆಸೆಗೆ ಕೊನೆಯೆಲ್ಲಿ? ಹೀಗಾಗಿ ಸಿರಿ ಎಂಬುದು ಗಮ್ಯವೇ ಅಲ್ಲ. ನೂರು ವರ್ಷ ಬದುಕುತ್ತೇನೆ ಎಂಬುದು ಗಮ್ಯವೇ? ಮಾದರಿಯ ಬದುಕು ಗಮ್ಯವೇ? ಹಾಗಿದ್ದರೆ ಮಾದರಿ ಎಂದರೇನು? ಯಶಸ್ಸು ಎಂಬುದೂ ಗಮ್ಯವಲ್ಲ. ಏಕೆಂದರೆ ಈ ಯಶಸ್ಸು ಎಂದರೇನು? ಯಶಸ್ಸನ್ನು ಅಳೆಯುವ ಮಾನದಂಡ ಇದೆಯೇ?

ಯಶಸ್ಸು ಎಂಬುದು ಗಮ್ಯವಲ್ಲ ಬದಲಿಗೆ ಜೀವನದ ಯಾನ. ಗಮ್ಯ ಎಂದರೇನು ಎಂದು ಅರ್ಥೈಸಿಕೊಳ್ಳುವುದೇ ಇಷ್ಟು ಕ್ಲಿಷ್ಟವಾಗಿದೆ ಎಂದರೆ ಆ ಗಮ್ಯವನ್ನು ತಲುಪುವುದು ಹೇಗೆ? ಅರ್ಥಾತ್‌ ಎಲ್ಲರ ಮನದಲ್ಲೂ ಒಂದೇ ವಿಷಯದ ಗಮ್ಯ ಇಲ್ಲಾ ಅಂತಾಯ್ತು ಅಲ್ಲವೇ? ತೆರಳುವ ದಾರಿಗಳು ಹಲವು ಆದರೆ ಗಮ್ಯ ಒಂದೇ ಅಲ್ಲ ಎಂದು ನನಗೇಕೆ ಅನ್ನಿಸಿದ್ದು ಎಂದರೆ ನರಕ ಸೇರುವವರಾರು? ಸ್ವರ್ಗ ಸೇರುವವರಾರು? ಹರಿಹರರ ಪಾದ ಸೇರಿ ಮುಕ್ತಿಯನ್ನು ಪಡೆಯುವವರಾರು? ಇಷ್ಟೇ ಸನ್ನಿವೇಶಗಳನ್ನು ಆಲೋಚಿಸಿದರೆ ಅಲ್ಲೇ ಗಮ್ಯಗಳು ಮೂರು ಆದವು. ಗಮ್ಯ ಸೇರುವ ಹಾದಿಗಳು ನೂರಾರು ಎಂದರೆ ಗಮ್ಯ ಆದವು ಮೂರು.

ಇಷ್ಟಕ್ಕೂ ಈ ವಿಚಾರಗಳು ಏಕೆ ಬಂದಿದ್ದು? ಈಚೆಗೆ ಬೆಂಗಳೂರಿಗೆ ಬಂದಿದ್ದಾಗ ಬಂದ ಆಲೋಚನೆಗಳಿವು. ಪುಸ್ತಕ ಬಿಡುಗಡೆಯ ಒಂದು ಸಮಾರಂಭಕ್ಕೆ ಹೋದಾಗ, ಎಲ್ಲರೊಂದಿಗೆ ಇದ್ದಾಗ ಮೊಳಕೆಯೊಡೆದ ಆಲೋಚನೆಯು, ಮೆಟ್ರೋದಲ್ಲಿ ಸಾಗುವಾಗ ಕೊಂಚ ಬೆಳೆದು ನಿಂತಿತು. ಅನಂತರ ದಿನನಿತ್ಯದ ಬೀದಿಯ ಟ್ರಾಫಿಕ್‌ ಗಮನಿಸುತ್ತಾ ಸಾಗಿದಂತೆ ಗಮ್ಯ ಎಂಬ ಆಲೋಚನೆ ದಟ್ಟವಾಯ್ತು. ಕೆಲವೊಮ್ಮೆ ಮೂಡುವ ಆಲೋಚನೆಗಳು ಬಾಲಿಶ ಎನ್ನಿಸಿದರೂ ಆ ಚಿಕ್ಕ ವಿಚಾರವು ಬ್ರಹ್ಮಾಂಡವನ್ನೇ ತೆರೆದಿಡಬಹುದು ಎನಿಸುತ್ತದೆ. ಬಗೆದು ನೋಡಬೇಕು ಅಷ್ಟೇ. ಹೀಗೇಕೆ ಹೇಳಿದೆ ಎಂದು ನೋಡುವ ಬನ್ನಿ.

ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಎಂಬುದೇ ಗಮ್ಯ ಅಂತ ಮೊದಲು ಅಂದುಕೊಳ್ಳುವಾ. ಈ ಗಮ್ಯವೇ ಸಾಗರ ಎಂದುಕೊಂಡರೆ ಅಲ್ಲಿ ಸೇರಿದ ಮಂದಿ ನದಿಗಳೇ ತಾನೇ? ಹುಟ್ಟು ಒಂದೇ, ಹಾದಿ ಅನೇಕ, ಗಮ್ಯ ಒಂದೇ ಎಂಬುದನ್ನೇ ಇಲ್ಲಿಗೆ ಹೋಲಿಸಿದರೆ ಹುಟ್ಟು ಎಂಬುದು ಅವರವರ ಮನೆ, ತೆರಳಿದ ಹಾದಿಗಳು ಅನೇಕ, ಗಮ್ಯ ಎಂಬುದು ಕಾರ್ಯಕ್ರಮ. ಸೇರಿದ ಉದ್ದೇಶ ಸಫಲವಾದ ಮೇಲೆ ತೆರಳುವ ಘಳಿಗೆಯೂ ಬಂದೇ ಬರುತ್ತದೆ ಅಲ್ಲವೇ? ಅಲ್ಲೊಂದು ವಿಚಾರ ಎಂದರೆ ಎಲ್ಲರೂ ಒಮ್ಮೆಗೆ ತೆರಳಿ ಬಿಡಲಿಲ್ಲ. ಒಬ್ಬರು, ಇಬ್ಬರು , ಮೂವರು ಎಂಬಂತೆ ಹೊರಟಿದ್ದು.

Advertisement

ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮದಿಂದ ತೆರಳುವಾಗಲೂ ಹೀಗೆಯೇ ತಾನೇ? ಇದನ್ನೇ ಆರಂಭ ಎಂದುಕೊಂಡರೆ ಹುಟ್ಟು ಹಲವು. ಎಲ್ಲರೂ ಸೇರಲು ಹೊರಟಿದ್ದು ಅವರವರ ಮನೆಗೆ ಅರ್ಥಾತ್‌ ಅದೇ ಗಮ್ಯ. ಬಂದ ಹಾದಿಯಲ್ಲೇ ತಿರುಗಿ ಹೊರಟ ಮೇಲೆ ತೆರಳಿಯುವ ಹಾದಿಗಳೂ ಅನೇಕ. ಒಂದರ್ಥದಲ್ಲಿ ಇಲ್ಲಿ ಎಲ್ಲವೂ ಹಲವುಗಳೇ ! ಹೊರಟ ಘಳಿಗೆಗಳು ಹಲವು. ಸಾಗಿದ್ದ ಹಾದಿಗಳು ಹಲವು. ಕೊನೆಗೆ ಗಮ್ಯವೂ ಹಲವು.

ಕೆಲವರು ನೇರವಾಗಿ ಮನೆಗೆ ಹೊರಟರೆ, ಕೆಲವರು ಅಲ್ಲಿನ ಕಡಲೇಕಾಯಿ ಪರಿಷೆಗೆ. ಕೆಲವರು ಪುಸ್ತಕ ಸಂತೆಗೆ ಹೊರಟರೆ ಮತ್ತೆ ಕೆಲವರು ಮತ್ತೆಲ್ಲಿಗೋ ಹೋಗಿ ಅನಂತರ ಮನೆಗೆ. ಎಲ್ಲವೂ ಹಲವು, ಎಲ್ಲವೂ ಭಿನ್ನ. ಸ್ನೇಹಿತರ ಜತೆ ಮೆಟ್ರೋದಲ್ಲಿ ಪಯಣಿಸುವಾಗ ಈ ವಿಚಾರವೇ ಕಾಡಿದ್ದು.

ಎಲ್ಲ ಗಮ್ಯಕ್ಕೂ ಒಂದು ಸಾಧನ ಬೇಕಲ್ಲವೇ? ಸ್ವರ್ಗಾರೋಹಣವನ್ನೇ ಒಂದು ಉದಾಹರಣೆಯಾಗಿ ತೆಗೆದುಕೊಂಡರೆ, ಅಲ್ಲಿ ನಡಿಗೆ ಎಂಬುದು ಸಾಧನವಾಗಿತ್ತು. ಕಪಿಗಳ ಗಮ್ಯವು ಸಾಗರವನ್ನು ದಾಟಿ ಲಂಕೆಗೆ ಹೋಗಬೇಕು ಎಂಬುದೇ ಆಗಿದ್ದು ಆ ಸಾಧನವು ಸಾಗರೋಲ್ಲಂಘನವೇ ಆಗಿತ್ತು. ಸಾಧನ ಎಂದರೆ ಗುರಿ ಮುಟ್ಟುವಿಕೆ ಎಂಬುದೂ ಹೌದು, ಸಾಧನ ಎಂದರೆ ಸಲಕರಣೆಯೂ ಹೌದು. ಯಾವುದೇ ಗಮ್ಯಕ್ಕೂ ಆ ಅಂಬಿಗ ಬೇಕೇಬೇಕು ಎಂಬುದೂ ಅಷ್ಟೇ ಸತ್ಯ.

ಗಮ್ಯವನ್ನು ಸಾಧಿಸುವ ದಿಶೆಯಲ್ಲಿ ಸಾಧನ ಬೇಕು ಎಂಬುದನ್ನು ವಾಹನ ಎಂದುಕೊಳ್ಳುವ. ಅಂದಿನ ಸನ್ನಿವೇಶವನ್ನೇ ತೆಗೆದುಕೊಂಡರೆ ನಾವು ಮೂವರು ಒಂದು ಆಟೋದಲ್ಲಿ ಮೆಟ್ರೋ ಸ್ಟೇಷನ್‌ಗೆ ತೆರಳಿದ್ದು. ಹುಟ್ಟು ಎಂಬುದು ಆ ಬೀದಿಯಾದರೆ, ಸ್ಟೇಷನ್‌ ಎಂಬುದು ಗಮ್ಯ. ಒಂದು ಕೋಣೆಯಿಂದ ಮತ್ತೂಂದು ಕೊನೆಗೆ ತಲುಪುವ ಮಾರ್ಗಗಳು ಹಲವು. ಈ ಮಾರ್ಗವು ಹಾದಿಯೂ ಆಗಬಹುದು, ಈ ಮಾರ್ಗವು ಸಾಗುವ ವಾಹನವೂ ಆಗಬಹುದು. ನಡೆದು ಸಾಗಬಹುದು, ಕಾಡಿಬೇಡಿ ಒಬ್ಬರ ಎರಡು ಚಕ್ರದ ವಾಹನದಲ್ಲಿ, ಆಟೋದಲ್ಲಿ, ಬಸ್ಸಿನಲ್ಲಿ ಹೀಗೆ ಯಾವುದೇ ರೀತಿಯಲ್ಲೂ ಸಾಗಬಹುದು.

ಗಮ್ಯ ಸೇರಲು ಹಾದಿಗಳು ಹಲವು. ಮೂವರೂ ಸೇರಿದ್ದು ಒಂದೇ ಗಮ್ಯಕ್ಕೆ. ಅಲ್ಲಿಗೆ ಒಂದು ಹಂತ. ಮುಂದೆ, ಅದೇ ಗಮ್ಯವು ಹುಟ್ಟು ಎನಿಸಿಕೊಂಡು ಗಮ್ಯವು ಮನೆ ಅಂತಾಯ್ತು. ಮೂವರ ಗಮ್ಯ ಇಲ್ಲಿ ಬೇರೆ ಬೇರೆಯೇ ಆಗಿತ್ತು. ಎಲ್ಲರ ಗಮ್ಯವೂ ಒಂದೇ ಆಗಿದ್ದರೆ, ಎಲ್ಲರೂ ಒಂದೇ ಮನೆಗೆ ಹೋಗಬೇಕಿತ್ತು, ಅಲ್ಲವೇ? ಗಮ್ಯವು ಒಂದೇ ಆದರೆ ಒಂದೇ ಅಲ್ಲ.

ಗಮ್ಯ ಸೇರುವ ಸಾಧನಗಳ ಬಗ್ಗೆಯೇ ಹೇಳುವುದಾದರೆ ಅದನ್ನು ಎರಡು ಭಿನ್ನ ರೀತಿಯಲ್ಲಿ ಹೇಳಬಹುದು. ಶಾಪಗ್ರಸ್ತ ಜಯ-ವಿಜಯರ ಎದುರಿಗೆ ಆ ಶ್ರೀಹರಿ ಇಟ್ಟಿದ್ದು ಎರಡು ಆಯ್ಕೆಗಳು. ಲೋಕಕಲ್ಯಾಣವನ್ನು ಮಾಡಿಕೊಂಡು ಏಳು ಜನ್ಮಗಳ ಅನಂತರ ನನ್ನನ್ನು ಸೇರುವಿರೋ? ಲೋಕಕಂಟಕರಾಗಿ ಮೂರುಜನ್ಮದ ಬಳಿಕ ನನ್ನನ್ನು ಸೇರುವಿರೋ? ಅಂತ. ಇಲ್ಲಿ ವೈಕುಂಠ ಎಂಬುದೇ ಹುಟ್ಟು ಅಥವಾ ಆರಂಭ ಮತ್ತು ಗಮ್ಯ. ಹಾದಿಗಳು ಮಾತ್ರ ಎರಡು.

ಇಲ್ಲಿನ ವಿಚಾರ ಪೌರಾಣಿಕವೇ ಆಗಿದ್ದರೂ ವಿಷಯಾಂತರವಂತೂ ಅಲ್ಲ. ಈ ಜಗತ್ತಿನಲ್ಲಿ ಅತ್ಯಂತ ಒಳ್ಳೆಯ ಬಾಳ್ವೆ ನಡೆಸಿದವರೂ ತೆರಳುತ್ತಾರೆ, ಕೆಟ್ಟ ಜಂತುವಿನಂತೆ ಬದುಕಿದ್ದವರೂ ತೆರಳುತ್ತಾರೆ. ಬದುಕಿ ಬಾಳಿದವರೂ ತೆರಳುತ್ತಾರೆ, ಬದುಕಿದ್ದಾರಾ ಎಂದೇ ಅರಿಯದಂತೆ ಇದ್ದವರೂ ತೆರಳುತ್ತಾರೆ. ತೆರಳುವಿಕೆ ಎಂಬುದನ್ನು ಗಮ್ಯದ ಸಾಧನ ಎಂದುಕೊಂಡರೆ ಆ ಸಾಧನದ ಸಾಧನವು ನೂರಾರು ಬಗೆ.

ಗಮ್ಯ ಸೇರುವ ಸಾಧನದ ಬಗ್ಗೆಯೇ ಒಂದೆರಡು ಮಾತುಗಳನ್ನು ಹೇಳುವುದಾದರೆ, ಹುಟ್ಟು ಎಂಬುದು ಮನೆ, ಗಮ್ಯ ಎಂಬುದು ನಿಮ್ಮದೇ ಕಚೇರಿ ಎಂದುಕೊಳ್ಳುವಾ. ಈ ಕಚೇರಿ ಎಂಬುದು ನೀವು ಕೆಲಸ ಮಾಡುವ ಬೇರೊಬ್ಬರ ಕಚೇರಿಯಾಗಬಹುದು ಅಥವಾ ನಿಮ್ಮದೇ ವಹಿವಾಟಿನ ಕಚೇರಿಯೂ ಆಗಬಹುದು. ಸಾಗುವ ಹಾದಿಗಳು ಹಲವು ಎಂಬುದು ಸಾಧನದ ಮೇಲೆ ಅವಲಂಬಿತ.

ನಡಿಗೆ ಎಂಬುದಾದರೆ ಮನೆಯಿಂದ ಕಚೇರಿಯವರೆಗೆ ಏಕಮಾತ್ರ ಸಾಧನ. ಬೈಸಿಕಲ್‌ ಅಥವಾ ಮೋಟಾರು ವಾಹನವಾದರೆ ಒಂದು ಹಂತದವರೆಗೆ ಅರ್ಥಾತ್‌ ಪಾರ್ಕಿಂಗ್‌ ಲಾಟ್‌ ತನಕ, ಅನಂತರ ನಡಿಗೆಯ ಜತೆಗೆ ಬಹುಶ: ಮೆಟ್ಟಿಲೇರುವುದೋ ಅಥವಾ ಲಿಫ್ಟ್ ಇರುವುದೋ ಇರಬಹುದು. ಬಸ್‌ ಪ್ರಯಾಣವಾದರೆ ಒಂದು ರೀತಿ, ಮೆಟ್ರೋ ಆದರೆ ಮಗದೊಂದು ರೀತಿ. ಇನ್ನು ಹೆಲಿಕಾಪ್ಟರ್‌ ಅಥವಾ ವಿಮಾನವಾದರೆ ಅದು ಮಗದೊಂದು ಲೆವಲ್‌ ಎನ್ನಬಹುದು.

ಒಟ್ಟಾರೆ ಗಮ್ಯದತ್ತ ಸಾಗುವ ಹಾದಿಗಳು ಅನೇಕಾನೇಕ. ಯಾವುದೇ ಹಾದಿಯೂ ಗಮ್ಯ ತಲುಪಿಸುತ್ತದೆ ನಿಜ ಆದರೆ ಎಲ್ಲಕ್ಕೂ ಅದರದ್ದೇ ಆದ ವೆಚ್ಚವೂ ಇರುತ್ತದೆ ಎಂಬುದು ನಿತ್ಯಸತ್ಯ. ಮೆಟ್ರೋದಲ್ಲಿ ಸಾಗಿದಾಗ ಆಗುವ ವೆಚ್ಚಕ್ಕೂ ಆಟೋದಲ್ಲಿ ಸಾಗುವಾಗ ತಗಲುವ ವೆಚ್ಚಕ್ಕೂ ವ್ಯತ್ಯಾಸವಿದೆ. ನಾನಾ ರೀತಿಯಲ್ಲೇ ಯೋಚಿಸಿದರೂ, ನಾನಾ ರೀತಿಯಲ್ಲೇ ವಿಷಯ ಅರುಹಿದರೂ ವಿಷಯ ಮಾತ್ರ ಇಷ್ಟೇ “ಗಮ್ಯವು ಒಂದೇ ಆದರೂ ನಿತ್ಯಜೀವನದಲ್ಲಿ ಅದು ಒಂದೇ ಅಲ್ಲ’. ಅಂದ ಹಾಗೆ ನೀವೇನಂತೀರಾ?

*ಶ್ರೀನಾಥ ಭಲ್ಲೇ, ರಿಚ್ಮಂಡ್‌

Advertisement

Udayavani is now on Telegram. Click here to join our channel and stay updated with the latest news.

Next