Advertisement

ಹೃದಯಕ್ಕೂ ಕೋವಿಡ್ 19ಕ್ಕೂ ಇದೆಯೇ ನಿಕಟ ನಂಟು?

09:13 AM Apr 12, 2020 | Sriram |

ಬೆಂಗಳೂರು: ವಾರದ ಹಿಂದಿನ ಮಾತು. ಹೃದಯಾಘಾತಕ್ಕೀಡಾದ ವ್ಯಕ್ತಿಯೊಬ್ಬರು ನಗರದ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಾದರು. 2 ದಿನಗಳ ಅನಂತರ ಅವರಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿತು. ಪ್ರಾಥಮಿಕ ಹಂತದ ತಪಾಸಣೆಯಲ್ಲಿ ಕೋವಿಡ್ 19 ಲಕ್ಷಣಗಳು ದೃಢವಾದವು. ವಿಸ್ತೃತ ತಪಾಸಣೆ ನಡೆಸಿದಾಗ ನೆಗೆಟಿವ್‌ ಬಂದಿತ್ತು.

Advertisement

ಈ ಹೊಸ ಬೆಳವಣಿಗೆಯು ಸದ್ಯದ ಮಟ್ಟಿಗೆ ಹೃದಯಾಘಾತಕ್ಕೀಡಾದ ರೋಗಿಗಳನ್ನೂ ಅನುಮಾನದಿಂದ ನೋಡುವಂತೆ ಮಾಡಿದೆ. ಅಷ್ಟೇ ಅಲ್ಲ, ರೋಗಿಯ ಪ್ರಯಾಣದ ಹಿನ್ನೆಲೆ ಮತ್ತು ಜ್ವರದ ಚರಿತ್ರೆ ಪರಿಶೀಲಿಸುವ ಅಗತ್ಯ ಮತ್ತು ಅನಿವಾರ್ಯತೆಯನ್ನೂ ಸೃಷ್ಟಿಸಿದೆ.
ಕೋವಿಡ್ 19 ವೈರಸ್‌ಗಳು ಶ್ವಾಸಕೋಶಗಳ ಮೇಲೆ ಮಾತ್ರ ದಾಳಿ ಮಾಡುವುದಿಲ್ಲ; ಹೃದಯದ ಸ್ನಾಯುಗಳ ಮೇಲೂ ಆಕ್ರಮಣ ಮಾಡುವ ಸಾಧ್ಯತೆಗಳಿರುತ್ತವೆ. ಇದು ಚೀನ, ಅಮೆರಿಕ, ಇಟಲಿಯ ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ. ರಾಜ್ಯದಲ್ಲಿಯೂ ಸೋಂಕು ಪೀಡಿತರು ಹೃದಯಾಘಾತದಿಂದ ಸಾವನ್ನಪ್ಪಿರುವ ಪ್ರಕರಣಗಳು ವರದಿಯಾಗಿವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸದ್ಯ ಹೃದಯಾ ಘಾತಕ್ಕೀಡಾದವರನ್ನೂಕೋವಿಡ್ 19 ತಪಾಸಣೆಗೆ ಒಳಪಡಿಸುವ ಅನಿವಾರ್ಯತೆ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ನಗರದ ವಿವಿಧ ಹೃದ್ರೋಗ ಆಸ್ಪತ್ರೆಗಳು ಹೃದಯ ಸಂಬಂಧಿ ಸಮಸ್ಯೆಗಳಿಂದ ದಾಖಲಾಗುತ್ತಿರುವ ರೋಗಿಗಳನ್ನು ಕೋವಿಡ್ 19 ತಪಾಸಣೆಗೆ ಒಳಪಡಿಸುವುದಕ್ಕಾಗಿ ಪ್ರತ್ಯೇಕ ಶಿಷ್ಟಾಚಾರ ಸಿದ್ಧಪಡಿಸಿ ಅನುಸರಿಸುತ್ತಿವೆ.

ಕೋವಿಡ್ 19 ನೆಗೆಟಿವ್‌ ಬಂದವರೂ ಹೃದಯಾ ಘಾತದಿಂದ ಸಾವನ್ನಪ್ಪಿರುವುದು ವರದಿಯಾಗಿದೆ.ಮತ್ತೂಂದೆಡೆ ಪಾಸಿಟಿವ್‌ ಬಂದು ಬಳಿಕ ಗುಣ ಮುಖರಾದರಲ್ಲಿ “ಮಯೋಕಾರ್ಡಿಯಲ್‌’ (ಹೃದಯದ ಸ್ನಾಯುಗಳ ವ್ಯತ್ಯಾಸ)ದ ಬಗ್ಗೆಯೂ ಇಸಿಜಿ ಮೂಲಕ ಕಂಡು ಕೊಳ್ಳಬೇಕಿದೆ. ಇವೆಲ್ಲ ಆಯಾಮಗಳಲ್ಲಿ ಅಧ್ಯಯನ ನಡೆಯಲಿದೆ ಎಂದು ಹೃದ್ರೋಗ ತಜ್ಞರು ಹೇಳಿದ್ದಾರೆ.

ಇದಲ್ಲದೆ ತೀವ್ರ ಉಸಿರಾಟದ ಸಮಸ್ಯೆ ಇರುವ ರೋಗಿಗಳಲ್ಲೂ ಕೋವಿಡ್ 19 ದೃಢಪಡುತ್ತಿದೆ. ಈ ಎರಡೂ ಕಾರಣಗಳಿಂದ ಕೋವಿಡ್ 19 ಕಂಡು ಬರುತ್ತಿರುವ ರೋಗಿಗಳಲ್ಲಿ ಭಿನ್ನತೆ ಕಂಡುಬರು ತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

ಅಧ್ಯಯನಕ್ಕೆ ಚಿಂತನೆ
ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಕೋವಿಡ್ 19ವೈರಸ್‌ ಪಾತ್ರದ ಬಗ್ಗೆಯೇ ಪ್ರತ್ಯೇಕ ಅಧ್ಯಯನ ನಡೆಸಲು ಸರಕಾರ ಮುಂದಾಗಿದೆ. ಮುಂದೊಂದು ವಾರದಲ್ಲಿ ರಾಜೀವ್‌ ಗಾಂಧಿ ಎದೆರೋಗಗಳ ಸಂಸ್ಥೆ ಹಾಗೂ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಗಳು ಸಂಯುಕ್ತವಾಗಿ ಈ ಅಧ್ಯಯನ ನಡೆಸಲು ಚಿಂತನೆ ನಡೆದಿದೆ. ಆಗ ಇದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ರಾಜೀವ್‌ ಗಾಂಧಿ ಎದೆ ರೋಗಗಳ ಸಂಸ್ಥೆ ನಿರ್ದೇಶಕ ಡಾ| ಸಿ. ನಾಗರಾಜ್‌ “ಉದಯವಾಣಿ’ಗೆ ಮಾಹಿತಿ ನೀಡಿದರು.

ಹೃದಯ ಸಂಬಂಧಿ ಸಮಸ್ಯೆ ಗಳಿರುವ ರೋಗಿಗಳನ್ನು ದಾಖಲಿಸಿ ಕೊಳ್ಳುತ್ತೇವೆ. ಅವರಲ್ಲಿ ಒಂದೆರಡು ದಿನಗಳ ಅನಂತರ ಜ್ವರ ಕಾಣಿಸಿಕೊಳ್ಳುವುದು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ದಾಖಲಾಗುವ ಯಾವುದೇ ರೋಗಿಗೆ ನಾವು ಕಡ್ಡಾಯವಾಗಿ ಮೊದಲು ಕೋವಿಡ್ 19 ಸೋಂಕು ದೃಢಪಡಿಸಿ ಕೊಳ್ಳುತ್ತಿದ್ದೇವೆ. ಈ ಅವಧಿಯಲ್ಲಿ ಎಂದಿನಂತೆ ಚಿಕಿತ್ಸೆ ಮುಂದುವರಿದಿರುತ್ತದೆ.
– ಡಾ| ರಾಹುಲ್‌ ಪಾಟೀಲ್‌,
ಕನ್ಸಲ್ಟಂಟ್‌ ಮತ್ತು ಹೃದ್ರೋಗ ತಜ್ಞರು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆ

- ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next