Advertisement
ಇನ್ನೇನು ಕೆಲವೇ ತಿಂಗಳಲ್ಲಿ ಅಲ್ಲಿನ ಸಂಸತ್‌ನ ಕೆಳಮನೆ, ನ್ಯಾಶನಲ್ ಅಸೆಂಬ್ಲಿಗೆ ಚುನಾವಣೆ ನಡೆಯಲಿದೆ ಎನ್ನುವಾಗಲೇ ಈ ನಿರ್ಧಾರ ಹೊರಬಿದ್ದಿದೆ ಎನ್ನುವುದು ಗಮನಾರ್ಹ. ತೀರ್ಪಿನ ಹಿನ್ನೆಲೆಯಲ್ಲಿ ತಾಂತ್ರಿಕವಾಗಿ ಹೇಳುವುದಿದ್ದರೆ, ಅವರು ಈಗಾಗಲೇ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದಾರೆ ಮತ್ತು ಶೀಘ್ರದಲ್ಲಿಯೇ ನಡೆಯಲಿದೆ ಎಂದು ಹೇಳಲಾಗುವ ಸಂಸತ್ ಚುನಾವಣೆಯಲ್ಲಿ ಅವರಿಗೆ ಸ್ಪರ್ಧಿಸಲು ಅಸಾಧ್ಯ.
Related Articles
Advertisement
ಒಂದು ವೇಳೆ ಕಾನೂನು ಹೋರಾಟದಲ್ಲಿ ಮಾಜಿ ಪ್ರಧಾನಿ ಖಾನ್ ಅವರಿಗೆ ಹಿನ್ನಡೆಯಾದರೆ ಅವರ ರಾಜಕೀಯ ಜೀವನ ಮುಕ್ತಾಯವಾದಂತೆ. ಸದ್ಯ ಅವರಿಗೆ 70 ವರ್ಷ ವಯಸ್ಸು. ತೀರ್ಪಿನಲ್ಲಿ ಉಲ್ಲೇಖೀಸಲಾಗಿರುವ ವಾಕ್ಯಗಳನ್ನೇ ವಿಶ್ಲೇಷಿಸಿ ನೋಡುವುದಿದ್ದರೆ ನಿಷೇಧ ಅವಧಿ ಮುಕ್ತಾಯಗೊಂಡಾಗ ಅವರಿಗೆ 75 ವರ್ಷ ತುಂಬುತ್ತದೆ. ಆ ಸಂದರ್ಭದಲ್ಲಿ ಅವರಿಗೆ ದೇಹಾರೋಗ್ಯವಿದ್ದು, ಚುನಾವಣೆಗೆ ಸ್ಪರ್ಧೆ ಮಾಡಲು ಸಾಧ್ಯವೇ ಎಂಬಿತ್ಯಾದಿ ಪ್ರಶ್ನೆಗಳು ಉಂಟಾದರೂ ಉತ್ತರ ಕಂಡುಕೊಳ್ಳಲು ಸಾಧ್ಯವಿಲ್ಲದ ಮಾತು.
ಒಂದಂತೂ ನಿಜ. ನಿಷೇಧ ಊರ್ಜಿತವಾದರೆ ಹೋರಾಟ ಮುಂದುವರಿಸುವುದಂತೂ ನಿಶ್ಚಿತ. “ನನ್ನ ಈಗಿನ ಪಕ್ಷಕ್ಕೆ ನಿಷೇಧ ಹೇರಿದರೆ, ಹೊಸ ಪಕ್ಷ ಸ್ಥಾಪನೆ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಗೆಲ್ಲುತ್ತೇನೆ’ ಎಂದು ಜು.15ರಂದು ಸವಾಲು ಹಾಕಿದ್ದರು ಮಾಜಿ ಕ್ರಿಕೆಟಿಗ. ದೇಶದಲ್ಲಿನ ಹಿಂಸಾತ್ಮಕ ವಾತಾವರಣ ಕೊನೆಗೊಳ್ಳಲು ಪಿಟಿಐ ಪಕ್ಷವನ್ನು ನಿಷೇಧಿಸುವುದೊಂದೇ ಅತ್ಯುತ್ತಮ ಮಾರ್ಗ ಎಂದು ಸಚಿವ ರಾಣಾ ಸನಾವುಲ್ಲ ಹೇಳಿದ್ದಕ್ಕೆ ತಿರುಗೇಟಾಗಿ ಖಾನ್ ಈ ಮಾತುಗಳನ್ನಾಡಿದ್ದರು.
ಇನ್ನು ಅಲ್-ಖಾದಿರ್ ಟ್ರಸ್ಟ್ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಮೇ 9ರಂದು ಅವರನ್ನು ಬಂಧಿಸಲಾಗಿತ್ತು. ಮಾಜಿ ಪ್ರಧಾನಿ ಎಂಬುದನ್ನೂ ಲೆಕ್ಕಿಸದೆ ದರದರನೆ ಅವರನ್ನು ಎಳೆದೊಯ್ದು ಬಂಧಿಸಿದ್ದು ಬೆಂಬಲಿಗರಲ್ಲಿ ಆಕ್ರೋಶ ಸೃಷ್ಟಿಸಿತ್ತು ಮತ್ತು ಅನಂತರ ಉಂಟಾಗಿದ್ದ ಕೋಲಾಹಲ ಹಾಲಿ ಸರಕಾರವನ್ನು ಕಂಗೆಡಿಸಿತ್ತು. ಎಲ್ಲಿಯ ವರೆಗೆ ಎಂದರೆ ಇಮ್ರಾನ್ ಬೆಂಬಲಿಗರು ರಾವಲ್ಪಿಂಡಿಯಲ್ಲಿ ಇರುವ ಪಾಕಿಸ್ಥಾನ ಸೇನೆಯ ಪ್ರಧಾನ ಕೇಂದ್ರಕ್ಕೇ ನುಗ್ಗಿ ದಾಂಧಲೆ ನಡೆಸಿದ್ದರು. ಆ ಪ್ರಕರಣದಲ್ಲಿ ಕೆಲವು ದಿನಗಳ ಬಳಿಕ ಹೈಕೋರ್ಟ್ ಅವರನ್ನು ಬಿಡುಗಡೆಯನ್ನೂ ಮಾಡಿತ್ತು. ಈ ಬಾರಿ ಮಾಜಿ ಪ್ರಧಾನಿ ಜಾಣ ನಡೆ ಅನುಸರಿಸಿದ್ದಾರೆ.
ಬಂಧನ ಖಂಡಿಸಿ ಹಿಂಸೆಗೆ ಇಳಿಯದಂತೆ ಸೂಚನೆಯನ್ನೂ ನೀಡಿದ್ದಾರೆ. ಏಕೆಂದರೆ ಸಂಸತ್ ಚುನಾವಣೆ ಸಂದರ್ಭದಲ್ಲಿ ಅದೇ ಬೆಳವಣಿಗೆ ಪ್ರತಿಕೂಲವಾಗಿ ಹೋದರೆ ಕಷ್ಟವಾದೀತು ಎಂಬ ದೂರದೃಷ್ಟಿಯನ್ನು ಇರಿಸಿಕೊಂಡಿದ್ದಾರೆ.
2022 ಎ.11ರಿಂದ ಮೊದಲ್ಗೊಂಡು ಇಮ್ರಾನ್ ಖಾನ್ ಅವರು ತಮ್ಮ ದೇಶದ ಸೇನೆಯ ವಿರುದ್ಧ ಕಟು ಮಾತುಗಳನ್ನು ಆಗಾಗ ಆಡುತ್ತಾ ಬಂದಿದ್ದರು. “ನನ್ನ ಸರಕಾರ ಪತನಕ್ಕೆ ಸೇನೆಯ ಹಿರಿಯ ಅಧಿಕಾರಿಗಳು, ವಿಶೇಷವಾಗಿ ಸೇನಾ ಮುಖ್ಯಸ್ಥ ಜ| ಖಮರ್ ಜಾವೇದ್ ಬಾಜ್ವಾ ಅವರೇ ಕಾರಣ’ ಎಂದು ಆರೋಪಿ ಸುತ್ತಾ ಬಂದಿದ್ದರು. ಅದಕ್ಕೆ ಪೂರಕವಾಗಿ ಅಲ್-ಖಾದಿರ್ ಟ್ರಸ್ಟ್ ವಂಚನೆ, ಪ್ರಧಾನಿಯಾಗಿದ್ದಾಗ ವಿದೇಶ ಪ್ರವಾಸದ ವೇಳೆ ಸಿಕ್ಕಿದ್ದ ಉಡುಗೊರೆಗಳನ್ನು ಮಾರಾಟ ಮಾಡಿದ ಆರೋಪಗಳಲ್ಲಿ ಅವರಿಗೆ ಶಿಕ್ಷೆಯಾಗಿದೆ. ಪಾಕಿಸ್ಥಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಮತ್ತು ಇಮ್ರಾನ್ ಖಾನ್ ಅವರ ಹೇಳಿಕೆಯೇನೆಂದರೆ ಸದರಿ ಶಿಕ್ಷೆಯಾಗಿರುವ ಪ್ರಕರಣದಲ್ಲಿನ ಆರೋಪಗಳೇ ಸುಳ್ಳು. “ಅಧಿಕಾರದಿಂದ ಇಳಿದ ಬಳಿಕ ನನ್ನ ವಿರುದ್ಧ 76 ವಿವಿಧ ಪ್ರಕರಣಗಳು ದಾಖಲಾಗಿವೆ’ ಎನ್ನುತ್ತಾರೆ ಮಾಜಿ ಪ್ರಧಾನಿ.
ಅಂದ ಹಾಗೆ ಇಷ್ಟೆಲ್ಲ ಸುದ್ದಿಯಾಗಿರುವ ಪ್ರಕರಣದ ಬಗ್ಗೆಯೂ ತಿಳಿದುಕೊಳ್ಳಲೇಬೇಕಾಗುತ್ತದೆ. ಪ್ರಧಾನಿಯಾಗಿ ವಿದೇಶ ಪ್ರವಾಸದ ವೇಳೆ ಸಿಕ್ಕಿದ ಉಡುಗೊರೆಗಳನ್ನು ಸರಕಾರದ ವಶಕ್ಕೆ ಒಪ್ಪಿಸಬೇಕು. 2018ರಿಂದ 2022ರ ವರೆಗಿನ ಅವಧಿಯಲ್ಲಿ ಏಳು ಬೆಲೆ ಬಾಳುವ ವಾಚ್‌ಗಳು ಸೇರಿದಂತೆ ಕೋಟ್ಯಂತರ ಮೌಲ್ಯದ ಉಡುಗೊರೆಗಳನ್ನು ಸರಕಾರದ ಕೋಠಿಯಿಂದ ತೆಗೆದು ದುಬಾೖ ಯಲ್ಲಿ ಮಾರಾಟ ಮಾಡಿದ್ದರು ಎನ್ನುವುದು ಆರೋಪ. ಈ ಪೈಕಿ ಒಂದು ವಾಚ್‌ನ ಬೆಲೆ 3 ಲಕ್ಷ ಡಾಲರ್. ಮಾಜಿ ಪ್ರಧಾನಿ “ನಾನೇ ಅವುಗಳನ್ನು ಖರೀದಿ ಮಾಡಿದ್ದೆ’ ಎಂದು ವಾದಿಸುತ್ತಾರೆ. ಏನೇ ಆಗಲಿ, ದೇಶದ ಪ್ರತಿನಿಧಿಯಾಗಿ ಮತ್ತೂಂದು ದೇಶಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಿಕ್ಕಿದ್ದ ಉಡುಗೊರೆಗಳನ್ನು ಮಾರಾಟ ಮಾಡಿ ಸಿಕ್ಕಿಬೀಳುವುದೆಂದರೆ ನಾಚಿಕೆಯ ವಿಚಾರವೇ. ಪಾಕಿಸ್ಥಾನದ ರಾಜಕೀಯದ ಇತಿಹಾಸದಲ್ಲಿ ಅಧಿಕಾರಕ್ಕೆ ಏರಿದ್ದ ಪ್ರಧಾನಮಂತ್ರಿ ಅಧಿಕಾರ ಪೂರ್ತಿಗೊಳಿಸಿದ್ದಿಲ್ಲ.
ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸ್ಥಿತಿ ಸದ್ಯಕ್ಕೆ ಅಯೋಮಯ ಎಂದಾದರೆ ಅಲ್ಲಿನ ನ್ಯಾಶನಲ್ ಅಸೆಂಬ್ಲಿಗೆ ನಡೆಯುವ ಚುನಾವಣೆಯೂ ವಿಳಂಬವಾಗುವ ಸಾಧ್ಯತೆ ಇದೆ ಎನ್ನುತ್ತಿವೆ ಆ ದೇಶದ ಪತ್ರಿಕೆಗಳ ವರದಿಗಳು. ಅದಕ್ಕೆ ಕಾರಣಗಳೂ ಇವೆ, ಆ ದೇಶದಲ್ಲಿನ ಕೌನ್ಸಿಲ್ ಆಫ್ ಕಾಮನ್ ಇಂಟೆರೆಸ್ಟ್ (ಸಿಸಿಐ) ಕೈಗೊಂಡ ಪ್ರಕಾರ ಇತ್ತೀಚಿನ ಜನಸಂಖ್ಯೆಯ ದಾಖಲೆಗಳಿಗೆ ಅನುಗುಣವಾಗಿ ಕ್ಷೇತ್ರಗಳ ಪುನರ್ ವಿಂಗಡಣೆಯೂ ಆಗಬೇಕಾಗಿದೆ. ಪ್ರತೀ ಪ್ರಾಂತದಲ್ಲಿ ಕೂಡ ಈ ಬಗ್ಗೆ ನಿರ್ಣಯಗಳನ್ನು ಕೈಗೊಂಡು, ಕ್ಷೇತ್ರ ಪುನರ್ ವಿಂಗಡಣೆ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ ನಾಲ್ಕು ತಿಂಗಳ ಅವಧಿ ಬೇಕಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಆ ದೇಶದಲ್ಲಿ ಚುನಾವಣೆ ನಡೆದರೆ ಯಾರು ಗೆಲ್ಲುತ್ತಾರೆ ಎಂದು ಊಹಿಸಿಕೊಳ್ಳಲೂ ಕಷ್ಟವಾಗಿದೆ. ಏಕೆಂದರೆ ಅಲ್ಲಿನ ಸ್ಥಿತಿ ಯಾವತ್ತೂ ಡೋಲಾಯಮಾನವೇ ಆಗಿರುವುದರಿಂದ ಅಂಥ ಚಿಂತನೆಯನ್ನೂ ನಡೆಸಲು ಸಾಧ್ಯವಿಲ್ಲ. 2018ರ ಸಂಸತ್ ಚುನಾವಣೆ ವೇಳೆ ಕೂಡ ಪಿಟಿಐ ಅಕ್ರಮ ಎಸಗಿತ್ತು ಎಂಬ ಆರೋಪಗಳೂ ವ್ಯಕ್ತವಾಗಿದ್ದವು.
ಸದ್ಯಕ್ಕೆ ಘೋಷಣೆಯಾಗಿರುವಂತೆ ಆ.9ಕ್ಕೆ ಶೆಹಬಾಜ್ ಶರೀಫ್ ನೇತೃತ್ವದ ಸಂಪುಟ ಹಾಲಿ ನ್ಯಾಶನಲ್ ಅಸೆಂಬ್ಲಿಯನ್ನು ವಿಸರ್ಜಿ ಸುವ ನಿರ್ಧಾರವನ್ನು ಕೈಗೊಳ್ಳಲಿದೆ. ಆ ದೇಶದ ನಿಯಮ ಪ್ರಕಾರ ಅಧ್ಯಕ್ಷ ರಶೀದ್ ಅಳ್ವಿ ಸಂಪುಟದ ನಿಯಮ ಒಪ್ಪಲಿ, ಬಿಡಲಿ ನಿರ್ಧಾರ ತೆಗೆದುಕೊಂಡ ದಿನದಿಂದ ಎರಡು ದಿನಗಳ ಒಳಗಾಗಿ ಸ್ವಯಂಚಾಲಿತವಾಗಿ ಅದು ಜಾರಿಯಾಗಿ ಬಿಡುತ್ತದೆ. ಅಲ್ಲಿನ ಚುನಾವಣ ಆಯೋಗಕ್ಕೆ ನ. 8ರ ವರೆಗೆ ಚುನಾವಣೆ ನಡೆಸುವ ಅವಕಾಶವೂ ಇದೆ. ಅಂದರೆ 90 ದಿನಗಳ ಒಳಗಾಗಿ ಹೊಸ ಚುನಾವಣೆ ನಡೆಸಬೇಕು. ಇನ್ನೀಗ ಕ್ಷೇತ್ರಗಳ ಪುನರ್ ವಿಂಗಡಣೆ ಎಂದಾದರೆ, ಆ ಪ್ರಕ್ರಿಯೆ ಮುಕ್ತಾಯಗೊಳ್ಳಲು 2024ರ ಮೇ- ಜೂನ್ ಕೂಡ ಆಗಬಹುದು ಎಂಬ ಸಂದೇಹ ಕೂಡ ಎದ್ದಿದೆ. ಒಟ್ಟಾರೆಯಲ್ಲಿ ಭಾರತದ ನೆರೆಯ ರಾಷ್ಟ್ರದ ಆಡಳಿತ ಯಾವ ರೀತಿ ಇರಲಿದೆ ಎಂಬ ಬಗ್ಗೆ ಕಾದು ನೋಡುವುದೇ ಅತ್ಯುತ್ತಮ.
~ ಸದಾಶಿವ ಕೆ.