ಹೊಸದಿಲ್ಲಿ: ತರಬೇತುದಾರರ ಕೊರತೆಯಲ್ಲೇ “ಸುಲ್ತಾನ್ ಅಜ್ಲಾನ್ ಶಾ ಕೂಟ’ದಲ್ಲಿ ಕಣಕ್ಕಿಳಿಯಲಿರುವ ಭಾರತ ಹಾಕಿ ತಂಡದ ನೂತನ ತರಬೇತುದಾರರಾಗಿ ಹಾಲೆಂಡ್ ತಂಡದ ಸಹಾಯಕ ತರಬೇತುದಾರ ಗ್ರಹಾಂ ರೀಡ್ ಆಯ್ಕೆಯಾಗುವರೇ? ಹೀಗೊಂದು ಬಲವಾದ ಅನುಮಾನ ಮೂಡಿದೆ. ಮೂಲತಃ ಆಸ್ಟ್ರೇಲಿಯದ ರೀಡ್ ದಿಢೀರನೆ ಆ್ಯಮ್‌ಸ್ಟರ್‌ಡಾಮ್ ಹಾಕಿ ಕ್ಲಬ್ ತರಬೇತುದಾರನ ಸ್ಥಾನದಿಂದ ಕೆಳಕ್ಕಿಳಿದಿದ್ದಾರೆ. ಹಾಲೆಂಡ್ ತಂಡದ ಸಹಾಯಕ ತರಬೇತುದಾರನೂ ಆಗಿರುವ ಅವರು ಆ ಸ್ಥಾನದಿಂದಲೂ ಕೆಳಗಿಳಿಯುವುದು ಬಹುತೇಕ ಖಚಿತ. ಹಾಕಿ ಇಂಡಿಯಾ ನೂತನ ತರಬೇತುದಾರರ ಆಯ್ಕೆ ಮಾಡಬೇಕಾಗಿರುವ ಅನಿವಾರ್ಯತೆಯಲ್ಲಿರುವಾಗಲೇ ರೀಡ್ ಅಲ್ಲಿ ರಾಜೀನಾಮೆ ನೀಡಿರುವುದು, ಅವರೇ ಭಾರತ ಹಾಕಿ ನೂತನ ತರಬೇತುದಾರರೇ ಎಂಬ ಪ್ರಶ್ನೆ ಮೂಡಿಸಿದೆ.
ಮೊದಲೇ ಸುಳಿವು
ಕಳೆದ ತಿಂಗಳು ಗ್ವಾಲಿಯರ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ಸ್ ಟ್ರೋಫಿ ನಡೆದಿದ್ದಾಗ, ತಂಡದ ಉನ್ನತ ಪ್ರದರ್ಶನ ನಿರ್ದೇಶಕ ಡೇವಿಡ್ ಜಾನ್, ಕೆಲವು ಹಿರಿಯ ಆಟಗಾರರಿಗೆ ರೀಡ್ ಆಯ್ಕೆಯಾಗುವ ಸುಳಿವನ್ನು ನೀಡಿದ್ದರು ಎಂದು ವರದಿಯಾಗಿತ್ತು. ಮೂಲಗಳ ಪ್ರಕಾರ, ಹಾಕಿ ಇಂಡಿಯಾ ಅಧಿಕಾರಿಗಳು ರೀಡ್ ಅವರನ್ನು ಈಗಾಗಲೇ ಸಂಪರ್ಕಿಸಿದ್ದಾರೆ. ಮತ್ತೆ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗುವ ಕನಸಿನಲ್ಲಿರುವ ಭಾರತದ ತರಬೇತುದಾರನಾಗುವುದು ಬಹಳ ಒತ್ತಡದ ಹೊಣೆಗಾರಿಕೆ. ಒಂದು ವೇಳೆ ಆಯ್ಕೆಯಾದರೆ ರೀಡ್ ಅದನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.