ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಎಲ್ಲೆಂದರಲ್ಲಿ ತ್ಯಾಜ್ಯ ರಾಶಿ ಬಿದ್ದಿದೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆೆ. ಆದ್ದರಿಂದ ಈ ಕುರಿತು ಸ್ಥಳೀಯಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ.
ಎಲ್ಲೆಂದರಲ್ಲಿ ಕಸ; ಸೊಳ್ಳೆ ಉತ್ಪತ್ತಿ
ಸಾಲಿಗ್ರಾಮ ಪ.ಪಂ. ವ್ಯಾಪ್ತಿಯಲ್ಲಿ ಪೇಟೆ ಭಾಗದ ಕಸವನ್ನು ಮಾತ್ರ ವಿಲೇವಾರಿ ಮಾಡಲಾಗುತ್ತದೆ. ಇದನ್ನು ಹೊರತುಪಡಿಸಿ ವಾರ್ಡ್‌ಗಳಲ್ಲಿ ಪ್ರತಿ ಮನೆಯಿಂದ 15 ದಿನಗಳಿಗೊಮ್ಮೆ ಒಣಕಸವನ್ನು ಪಡೆದು ಹಸಿ ಕಸವನ್ನು ಮನೆಯಲ್ಲೇ ವಿಲೇವಾರಿ ಮಾಡುವಂತೆ ತಿಳಿಸಲಾಗುತ್ತದೆ. ಆದರೆ ಹೆಚ್ಚಿನ ಮನೆಗಳಲ್ಲಿ ಹಸಿ ಕಸ ವಿಲೇವಾರಿಗೆ ಪೂರಕ ವ್ಯವಸ್ಥೆ ಮಾಡಿಕೊಳ್ಳದೆ ರಸ್ತೆಯ ಅಕ್ಕ-ಪಕ್ಕದಲ್ಲಿ ಕಸ ಎಸೆಯಲಾಗುತ್ತಿದೆ. ಇಲ್ಲಿನ 16 ವಾರ್ಡ್‌ನಲ್ಲಿ ಸುಮಾರು 1,500 ಮನೆ ಹಾಗೂ 5 ವಸತಿ ಸಂಕೀರ್ಣಗಳು, 10ಕ್ಕೂ ಹೆಚ್ಚು ಹೊಟೇಲ್, ತರಕಾರಿ ಮಾರುಕಟ್ಟೆ, ನಾಲ್ಕೈದು ಕಲ್ಯಾಣ ಮಂಟಪಗಳಿದ್ದು ಪ್ರತಿದಿನ ಸುಮಾರು 3.50-4 ಟನ್ ಕಸ ಸಂಗ್ರಹವಾಗುತ್ತದೆ. ಇದರ ಜತೆಗೆ ಅಕ್ಕಪಕ್ಕದ ಗ್ರಾ.ಪಂ.ಗಳಲ್ಲೂ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಪ.ಪಂ. ಪ್ರದೇಶಗಳಲ್ಲಿ ಕಸ ಎಸೆಯುತ್ತಿದ್ದಾರೆ. ಹೀಗಾಗಿ ಎಲ್ಲ ಕಡೆ ತ್ಯಾಜ್ಯ ರಾಶಿ ಬಿದ್ದಿದೆ.
ಸಾಂಕ್ರಾಮಿಕ ರೋಗಕ್ಕೆ ಆಹ್ವಾನ
ಇಲ್ಲಿನ ಪಾರಂಪಳ್ಳಿ ರಸ್ತೆ, ಕಾರ್ಕಡ-ಕಾವಡಿ ರಸ್ತೆ, ಕೋಟ- ಬನ್ನಾಡಿ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಮೀನುಮಾರುಕಟ್ಟೆ ಕಡೆ ಮುಂತಾದ ಕಡೆ ಕೊಳೆತ ತ್ಯಾಜ್ಯ ರಾಶಿ ಬಿದ್ದಿದ್ದು ಸೊಳ್ಳೆಗಳು ಹೇರಳವಾಗಿ ಉತ್ಪತ್ತಿಯಾಗುತ್ತಿದ್ದು ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುವಂತಿದೆ.
ಸಾರ್ವಜನಿಕರು ಹೊಣೆಗಾರಿಕೆ ಮರೆಯುವಂತಿಲ್ಲ
ಪ.ಪಂ. ವ್ಯಾಪ್ತಿಯಲ್ಲಿನ ಪ್ರತಿ ನಾಗರಿಕರು ಘನ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಕಸ, ಒಣ ಕಸ, ಅಪಾಯಕಾರಿ ಕಸವನ್ನಾಗಿ ಬೇರ್ಪಡಿಸಿ, ಹಸಿಕಸವನ್ನು ತಮ್ಮ ಸ್ವಂತ ಸ್ಥಳದಲ್ಲಿ ಪೈಪ್ ಕಾಂಪೋಸ್ಟ್, ಪಿಟ್ಕಾಂಪೋಸ್ಟ್ ಮೂಲಕ ವಿಲೇವಾರಿಗೊಳಿಸುವಂತೆ ಹಾಗೂ ಒಣಕಸವನ್ನು ಸಂಗ್ರಹಿಸಿ ಪ್ರತಿ 15 ದಿನಗಳಿಗೊಮ್ಮೆ ಪ.ಪಂ. ಘನತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡಬೇಕು ಮತ್ತು ಅಪಾಯಕಾರಿ ವಸ್ತುಗಳು, ಎಲೆಕ್ಟ್ರಾನಿಕ್ ಸಾಮಾನುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನೀಡುವುದು ಕಡ್ಡಾಯಗೊಳಿಸ ಲಾಗಿದೆ ಮತ್ತು ಈ ಎಲ್ಲ ಕಸಗಳನ್ನು ಮಿಶ್ರ ಮಾಡಿದರೆ ದಂಡ ವಿಧಿಸಲಾಗುತ್ತದೆ. ಇದನ್ನು ಗಮನಿಸಲು ಮೇಲ್ವಿಚಾರಣೆ ಅಧಿಕಾರಿ ಗಳನ್ನು ನೇಮಿಸಲಾಗಿದೆ. ಆದರೆ ಈ ಬಗ್ಗೆ ಸಾರ್ವಜನಿಕರ ಸಹಕಾರ ಕಡಿಮೆ ಇದೆ ಮತ್ತು ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಪ್ರವೃತ್ತಿಯಾಗಿ ಮುಂದುವರಿಸುತ್ತಿದ್ದಾರೆ. ಹೀಗಾಗಿ ಸ್ವಚ್ಛತೆ ಎನ್ನುವುದು ಕೇವಲ ಸ್ಥಳೀಯಾಡಳಿತ ಕರ್ತವ್ಯವಾಗಿರದೆ ಸಾರ್ವಜನಿಕರ ಹೊಣೆಗಾರಿಕೆ ಕೂಡ ಇದೆ ಎನ್ನುವುದನ್ನು ನಾಗರಿಕರು ಮರೆಯು ವಂತಿಲ್ಲ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.