Advertisement
ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯಿಸಿದ ಜನಪ್ರಿಯ ಸಿನೆಮಾಗಳಲ್ಲೊಂದು “ವೀರಪ್ಪ ನಾಯ್ಕ’. ಅದರ ಕೊನೆಯ ಸನ್ನಿವೇಶದಲ್ಲಿ ದೇಶದ ವಿರುದ್ಧ ಸಮರ ಸಾರಿರುವ ಪುತ್ರನ ಕೈಯ್ಯನ್ನೇ ಕಡಿಯಲಾಗುತ್ತದೆ. ಆಗ ಪುತ್ರ ನೋವಿನಿಂದ ಅಮ್ಮಾ ಎಂದು ಕಿರುಚಿಕೊಳ್ಳುವಾಗ “ಈಗ ನಿನಗೆ ಅಮ್ಮನ ನೆನಪಾಯಿತಾ’ ಎಂದು ವೀರಪ್ಪ ನಾಯ್ಕ ಪಾತ್ರಧಾರಿಯಾಗಿರುವ ವಿಷ್ಣುವರ್ಧನ್ ಕೇಳುತ್ತಾರೆ. ಈ ಸಂದರ್ಭ ವಿವರಿಸುವ ಅಗತ್ಯವೇನೆಂದರೆ, ಭಾರತದ ದೇಶದ ಪಾತಕ ಲೋಕ ವಿಶೇಷವಾಗಿ ಮುಂಬಯಿಯ ಭೂಗತ ಜಗತ್ತನ್ನು ಆಳಿ ಬೊಬ್ಬಿರಿದವರೆಲ್ಲ ಸಮಯದ ಪ್ರಭಾವ, ತನಿಖೆಯ ಹೊಡೆತಕ್ಕೆ ಸಿಕ್ಕಿಯೋ ಕೊನೆಗಾಲದಲ್ಲಿ “ಅಮ್ಮಾ’ ಎನ್ನುವಂತೆ ಭಾಸವಾಗುತ್ತಿದೆ. ಅದಕ್ಕೆ ಮೂರು ಪ್ರತ್ಯೇಕ ಉದಾಹರಣೆಗಳನ್ನು ನೀಡಬಹುದು. ಆರಂಭದಲ್ಲಿ ದಾವೂದ್ ಇಬ್ರಾಹಿಂ ಜತೆಗೆ ಚುಂಗು ಹಿಡಿದುಕೊಂಡು ಬೆಳವಣಿಗೆ ಕಂಡುಕೊಂಡ ಅಬು ಸಲೇಂ ಮೋನಿಕಾ ಬೇಡಿ ಜತೆಗೆ ಭಾರತಕ್ಕೆ ಬಂದ. 2005ರಲ್ಲಿ ಅದೇ ಗ್ಯಾಂಗ್‌ನಲ್ಲಿದ್ದು ನಂತರ ಪ್ರತ್ಯೇಕಗೊಂಡಿದ್ದ ಛೋಟಾ ರಾಜನ್‌ನನ್ನು ಬಂಧಿಸಿ (?) ಸ್ವದೇಶಕ್ಕೆ ಕರೆ ತರಲಾಗುತ್ತದೆ. ಇದೀಗ ಮುಂಬೈ ಅಂಡರ್ ವರ್ಲ್ಡ್ ಅನ್ನು ಆಳಿದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಶರಣಾಗುತ್ತಾನಾ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ಚರ್ಚೆಗೆ ನಾಂದಿ ಹಾಡಿದ್ದು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಸಂಸ್ಥಾಪಕ ರಾಜ್ ಠಾಕ್ರೆ. ಅವರ ಪ್ರಕಾರ ಬಿಜೆಪಿ ಜತೆ ಆತ ನಿಕಟ ಸಂಪರ್ಕ ಇರಿಸಿಕೊಂಡಿದ್ದಾನೆ. ಶರಣಾಗತನಾಗುವ ಬಗ್ಗೆ ಮಾತುಕತೆಯಲ್ಲಿ ನಿರತನಾಗಿದ್ದಾನೆ ಎನ್ನುವುದು ಅವರ ಪ್ರಧಾನ ಆರೋಪ.
Related Articles
Advertisement
ಹಲವು ತನಿಖಾ ವರದಿಗಳ ಪ್ರಕಾರ ದಾವೂದ್‌ಗೆ ಐದು ಖಂಡಗಳ 12 ರಾಷ್ಟ್ರಗಳಲ್ಲಿ ಬಹುಕೋಟಿ ಮೌಲ್ಯದ ಆಸ್ತಿ ಇದೆ. 2006-2011ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಆಸ್ತಿ, ವ್ಯಾಪಾರೋದ್ದಿಮೆಗಳನ್ನು ಮಾರಾಟ ಮಾಡಿದ್ದಾನೆಂದು ಅದರಲ್ಲಿ ಉಲ್ಲೇಖೀಸಲಾಗಿದೆ. ಈ ವರ್ಷದ ಜುಲೈ 17ರಂದು “ದ ವೈರ್’ ಎಂಬ ಆನ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ದಾವೂದ್ ಗ್ಯಾಂಗ್ ಮತ್ತು ಮುಂಬೈ ಪೊಲೀಸ್‌ನ ಕೆಲ ಅಧಿಕಾರಿ ವರ್ಗದವರು ನಿಕಟ ಸಂಪರ್ಕ ಇರಿಸಿಕೊಂಡಿದ್ದಾರೆ ಎಂಬ ವಿಚಾರವೂ ಬಹಿರಂಗವಾಗಿದೆ.
ಇನ್ನು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಸಿಡಿಸಿರುವ ಹೊಸ ಮಾಹಿತಿಯ ವಿಷಯಕ್ಕೆ ಬರುವುದಾದರೆ ಭೂಗತ ಪಾತಕಿ ಶರಣಾಗತನಾಗುವ ವಿಚಾರ ಹೊಸತೇನೂ ಇಲ್ಲ. ಶರದ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ಪಾತಕಿ ಈ ಬಗ್ಗೆ ಪ್ರಸ್ತಾಪವನ್ನಿಟ್ಟಿದ್ದ ಎಂದು ಅವರು ಹೇಳಿಕೊಂಡಿದ್ದರು. ಇನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಗ್ಯಾಂಗ್‌ನ ಕೇಸುಗಳನ್ನು ನಿಭಾಯಿಸುತ್ತಿದ್ದ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಆತ ಭಾರತಕ್ಕೆ ಬಂದು ಶರಣಾಗಲು ಸಿದ್ಧನಿದ್ದಾನೆ ಎಂದು ಹೇಳಿದ್ದರು. ಅದಕ್ಕೆ ಕಾಂಗ್ರೆಸ್ ನಾಯಕರೊಬ್ಬರು ಕೂಡ ನೇತೃತ್ವದ ವಹಿಸಿದ್ದರು. ಈ ವಿಚಾರ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಶಿವಶಂಕರ ಮೆನನ್ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ನಡುವೆ ಹಲವು ಹಂತಗಳಲ್ಲಿ ಚರ್ಚೆಯಾಯಿತು. ಆದರೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಈ ಅಂಶ ನಿರಾಕರಿಸಿದ್ದರು. ಆದರೆ ಅಂತಿಮವಾಗಿ ಫಲಿತಾಂಶವೇನೂ ಕಂಡು ಬರಲಿಲ್ಲ.
ಹೀಗಾಗಿ, ರಾಜ್ ಠಾಕ್ರೆ ಹೇಳಿದ್ದು ಸರಿಯೋ ತಪ್ಪೋ ಎಂಬ ವಿಚಾರ ಚರ್ಚೆಗೆ ಆಸ್ಪದವಾದರೂ, ದಾವೂದ್ ಗ್ಯಾಂಗ್‌ನಿಂದ ಸಿಡಿದು ಪ್ರತ್ಯೇಕ ಅಸ್ತಿತ್ವ ಕಂಡ ಛೋಟಾ ರಾಜನ್ ಮತ್ತು ಅಬು ಸಲೇಂ ಶರಣಾಗತಿಯನ್ನು ಷರತ್ತಿನ ಮೇರೆಗೆ ಪ್ರಕಟಿಸಲಾಗಿದೆ. ಅದು ಹೇಗೆಂದರೆ ನಕಲಿ ದಾಖಲೆಗಳ ಮೂಲಕ ಪೋರ್ಚುಗಲ್‌ಗೆ ತೆರಳಿ ಲಿಸºನ್‌ನಲ್ಲಿ ಸಿಕ್ಕಿಬಿದ್ದಿದ್ದ ಆತನನ್ನು ಭಾರತಕ್ಕೆ ಕರೆ ತರುವಲ್ಲಿ ಎರಡು ವರ್ಷಗಳ ಪ್ರಕ್ರಿಯೆ ನಡೆದಿತ್ತು. ಕೊನೆಗೆ ಅಮೆರಿಕ ಸರ್ಕಾರ ಮಧ್ಯ ಪ್ರವೇಶ ಮಾಡಿ ಅಲ್ಲಿನ ಆಡಳಿತದ ಮೇಲೆ ಪ್ರಭಾವ ಬೀರಿ ಅಬು ಸಲೇಂ ಮತ್ತು ಮೋನಿಕಾ ಬೇಡಿಯನ್ನು ಕಷ್ಟಪಟ್ಟು ಭಾರತಕ್ಕೆ ಗಡೀಪಾರು ಮಾಡಲಾಯಿತು. ಪೋರ್ಚುಗಲ್ ಕಾನೂನಿನಲ್ಲಿ ಗಲ್ಲು ಶಿಕ್ಷೆ ಇಲ್ಲ.
ಹೀಗಾಗಿ, ಸಲೇಂಗೆ ಗರಿಷ್ಠ ಶಿಕ್ಷೆಯೆಂದರೆ ಜೀವ ಇರುವ ವರೆಗೆ ಜೈಲಿಲ್ಲಿಯೇ ಇರಬೇಕು. ಮರಣ ದಂಡನೆ ವಿಧಿಸುವಂತಿಲ್ಲ. ಆದರೆ ಮುಂಬೈ ದಾಳಿಯಂಥ ಗುರುತರ ಆರೋಪ ಆತನ ಮೇಲೆ ಇದ್ದುದರಿಂದ 1962ರ ಭಾರತೀಯ ಗಡೀಪಾರು ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು.
2015ರ ನ.7ರಂದು ಛೋಟಾ ರಾಜನ್ ಭಾರತಕ್ಕೆ ಬರಲಿದ್ದಾನೆ ಎಂಬ ವಿಚಾರ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ನವದೆಹಲಿಯಲ್ಲಿ ಸಿಬಿಐ ವಕ್ತಾರರು ಸುದ್ದಿಗೋಷ್ಠಿಯಲ್ಲಿ ಆತ ಶರಣಾಗಿಧ್ದೋ ಅಥವಾ ಬಂಧನ ಮಾಡಿಧ್ದೋ ಎಂಬ ಪ್ರಶ್ನೆಗೆ ಹೇಳಿದ್ದೇನೆಂದರೆ ಇಂಡೋನೇಷ್ಯಾದ ಬಾಲಿ ವಿಮಾನ ನಿಲ್ದಾಣದಲ್ಲಿ ವಲಸೆ ಪ್ರಕ್ರಿಯೆ ಪೂರೈಸಲು ಸಾಲಿನಲ್ಲಿ ನಿಂತಿದ್ದ. ಆತನ ಚಲನವಲನಗಳ ಮೇಲೆ ನಿಗಾ ಇರಿಸಿದ್ದ ತನಿಖಾ ಸಂಸ್ಥೆ ಆತನನ್ನು ಸೆರೆ ಹಿಡಿಯಿತು ಎಂದರು. ಭದ್ರತಾ ಸಂಸ್ಥೆಗಳ ಅಧಿಕಾರಿಗಳು ಹೆಸರೇನೆಂದು ಕೇಳಿದಾಗ ರಾಜೇಂದ್ರ ಸದಾಶಿವ ನಿಕಾಲೆj ಎಂದು ಹೇಳಿದ. ಕೂಡಲೇ ಆತನ್ನು ವಶಕ್ಕೆ ಪಡೆದಾಗ ಕರ್ನಾಟಕದ ಮಂಡ್ಯದ ವಿಳಾಸ ಇರುವ ಪಾಸ್‌ಪೋರ್ಟ್ ಅನ್ನು ಬೆಂಗಳೂರಿನಲ್ಲಿ ಪಡೆದದ್ದೂ ಗಮನಕ್ಕೆ ಬಂದಿದೆ ಎಂದಿದ್ದರು. 55 ವರ್ಷದ ಡಾನ್‌ಗೆ ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಸ್ಥಿತಿ ಹದಗೆಡುತ್ತಿತ್ತು. ಹೀಗಾಗಿ ಕೊನೆಯ ದಿನಗಳಲ್ಲಿ “ಪರದೇಶಿ’ಯಾಗಿ ಸಾಯುವುದಕ್ಕಿಂತ “ದೇಶವಾಸಿ’ಯಾಗಿ ಕೊನೆಯುಸಿರುಬಿಡುವುದು ಉತ್ತಮವೆಂದು ಆತ ಕಂಡುಕೊಂಡಿರುವ ಸಾಧ್ಯತೆಯೇ ಹೆಚ್ಚು. ಹೀಗಾಗಿಯೇ ಯಾವುದೋ ಒಂದು ಹಂತದಲ್ಲಿ ಒಪ್ಪಂದ ನಡೆದಿರುವ ಸಾಧ್ಯತೆಯೇ ಹೆಚ್ಚು.
ಅದೇ ವಿಚಾರ ದಾವೂದ್ ಇಬ್ರಾಹಿಂನ ವಿಚಾರದಲ್ಲೂ ನಡೆದೀತೇ? ಆದರೆ ತಾಜಾ ಮಾಹಿತಿ ಏನೆಂದರೆ ಭೂಗತ ಪಾತಕಿಗೆ ಈ ಹಿಂದೆ ವರದಿಯಾಗಿದ್ದಂತೆ ಹಲವು ಕಾಯಿಲೆಗಳಿವೆ, ಇನ್ನೇನು ದಿನಗಳ ಎಣಿಕೆ ಎಂಬಿತ್ಯಾದಿ ವದಂತಿಗಳಿಗೆ ಪೊಲೀಸ್ ಕಸ್ಟಡಿಯಲ್ಲಿರುವ ಇಬ್ರಾಹಿಂ ಕಸ್ಕರ್ ತೆರೆ ಎಳೆದಿದ್ದಾನೆ. ಆತ ಫಿಟ್ ಆ್ಯಂಡ್ ಫೈನ್. ಕೆಲವೊಂದು ವಹಿವಾಟುಗಳನ್ನು ತಾನೇ ನೋಡಿಕೊಳ್ಳುತ್ತಿದ್ದಾನೆಂದು ಆತ ಹೇಳಿಕೊಂಡಿದ್ದಾನೆ. ಹೀಗಾಗಿ, ಭೂಗತ ಪಾತಕಿಯ ಶರಣಾಗತಿ ಎಂಬ ವಿಚಾರ ಈಗಷ್ಟೇ ತೇಲಿಬಂದಿದೆ. ಅದು ಕಾರ್ಯಸಾಧ್ಯವಾಗುತ್ತದೋ ಇಲ್ಲವೋ ಎನ್ನುವುದನ್ನು ಸಮಯವೇ ನಿರ್ಧಾರ ಮಾಡಬೇಕಷ್ಟೇ.
ಸದಾಶಿವ ಖಂಡಿಗೆ