ಹೊಸದಿಲ್ಲಿ : ಭಾರತ ಸಹಿತ ವಿವಿಧ ವಿದೇಶಿ ಕರೆನ್ಸಿಗಳನ್ನು ಚೀನ ಭಾರೀ ಪ್ರಮಾಣದಲ್ಲಿ ಮುದ್ರಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಚೀನ ಮಾಧ್ಯಮ ವರದಿ ಮಾಡಿದೆ.
ಚೀನದ ಆದ್ಯಂತವಿರುವ ಹಣ ಉತ್ಪಾದನೆ ಘಟಕಗಳಲ್ಲಿ (ನೋಟು ಮುದ್ರಣಾಲಯಗಳಲ್ಲಿ) ಈಚೆಗೆ ನೋಟು ಮುದ್ರಣ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು “ದ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.
ಚೈನಾ ಬ್ಯಾಂಕ್ ನೋಟ್ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಶನ್ ನ ಬಹು ಮೂಲಗಳನ್ನು ಉಲ್ಲೇಖೀಸಿರುವ ಈ ವರದಿಯು “ಚೀನದ ಈ ನೋಟು ಮುದ್ರಣಾಲಯಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿವೆ ಮತ್ತು ಸರಕಾರ ಈ ವರ್ಷ ಈ ಮುದ್ರಣ ಘಟಕಗಳಿಗೆ ಅಸಾಮಾನ್ಯ ಎನಿಸಿರುವ ಅತ್ಯಧಿಕ ಪ್ರಮಾಣದ ಮುದ್ರಣ ಗುರಿಯನ್ನು ವಿಧಿಸಿದೆ’ ಎಂದು ಹೇಳಿದೆ.
ಅತ್ಯಧಿಕ ನೋಟುಗಳ ಬೇಡಿಕೆಯು ಚೀನದ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯ ಭಾಗೀದಾರರಿಂದ ಬಂದಿರುವುದಾಗಿ ವರದಿ ಹೇಳಿದೆ.
2013ರಲ್ಲಿ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯನ್ನು ಆರಂಭಿಸಿದ ಎರಡು ವರ್ಷಗಳಲ್ಲಿ ಥಾಯ್ಲಂಡ್, ಬಾಂಗ್ಲಾದೇಶ, ಶ್ರೀಲಂಕಾ, ಮಲೇಶ್ಯ, ಭಾರತ, ಬ್ರಝಿಲ್ ಮತ್ತು ಪೋಲಂಡ್ ದೇಶಗಳ ಕರೆನ್ಸಿ ಉತ್ಪಾದನೆ ಯೋಜನೆಯ ಗುತ್ತಿಗೆಗಳನ್ನು ಯಶಸ್ವಿಯಾಗಿ ಪಡೆಯಲಾಗಿದೆ ಎಂದು ಚೈನಾ ಬ್ಯಾಂಕ್ ನೋಟ್ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಶನ್ ಅಧ್ಯಕ್ಷ ಲಿಯು ಗೀಶೆಂಗ್ ಅವರ ಲೇಖನವನ್ನು ವರದಿಯು ಉಲ್ಲೇಖೀಸಿದೆ.
ಈ ಸುದ್ದಿ ನಿಜವೇ ಆದಲ್ಲಿ ಇದರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಕಳವಳ ವ್ಯಕ್ತಪಡಿಸಿದ್ದಾರೆ.
ಆದರೆ ಭಾರತ ಸರಕಾರದಿಂದ ಈ ವರೆಗೆ ಈ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆ ಹೊರ ಬಂದಿಲ್ಲ.
2016ರಲ್ಲಿ ಮೋದಿ ಸರಕಾರ 500 ಮತ್ತು 1,000 ರೂ.ಗಳ ನೋಟು ಅಪನಗದೀಕರಣ ಮಾಡಿದ ಬಳಿಕದಲ್ಲಿ ಭಾರತೀಯ ಬ್ಯಾಂಕುಗಳು ಸಾರ್ವಕಾಲಿಕ ದಾಖಲೆಯ ನಕಲಿ ನೋಟುಗಳನ್ನು ಸ್ವೀಕರಿಸಿವೆ. ಅಂತೆಯೇ ಶಂಕಾಸ್ಪದ ಹಣ ವಹಿವಾಟಿನಲ್ಲಿ ಶೇ.480ರ ಜಿಗಿತ ಕಂಡು ಬಂದಿದೆ.
ಈ ಶಂಕಿತ ಹಣಕಾಸು ವಹಿವಾಟಿನ ಬಹುತೇಕ ವ್ಯವಹಾರಗಳು ಉಗ್ರರಿಗೆ ಹಣ ಪೂರೈಸುವ ಜಾಲಕ್ಕೆ ಸಂಬಂಧಿಸಿದ್ದುದಾಗಿ ದೇಶದ ಹಣಕಾಸು ಗುಪ್ತಚರ ದಳ (ಎಫ್ಐಯು) ವಿಶ್ಲೇಷಿಸಿದೆ.