Advertisement

ಬದಲಾಗುತ್ತಾ  ಚಾಲುಕ್ಯರ ನಾಡು?

05:35 PM Jul 08, 2018 | |

ಬಾಗಲಕೋಟೆ: ಅದ್ಭುತ ನಿರ್ಮಾಣದ ಮೂಲಕ ವಿಶ್ವದ ಗಮನ ಸೆಳೆಯುವ ಚಾಲುಕ್ಯ ಅರಸರ ಕಾಲದ ಜಿಲ್ಲೆಯ ಪ್ರವಾಸಿ ತಾಣಗಳ ಹಣೆ ಬರಹ ಇನ್ನಾದರೂ ಬದಲಾಗುತ್ತಾ? ಎಂಬ ನಿರೀಕ್ಷೆ ಹೆಚ್ಚಿದೆ. ಈ ನಿರೀಕ್ಷೆ ಹೆಚ್ಚಲು, ಮಾಜಿ ಮುಖ್ಯಮಂತ್ರಿಯೊಬ್ಬರು ಬಾದಾಮಿ ಕ್ಷೇತ್ರ ಪ್ರತಿನಿಧಿಸುತ್ತಿರುವುದು ಕಾರಣ. ಜತೆಗೆ ಅವರು ಶಾಸಕರಾದ ಬಳಿಕ ಬಾದಾಮಿ ಕ್ಷೇತ್ರದ ಹಲವು ಪ್ರಮುಖ ಹಾಗೂ ಬಹು ವರ್ಷಗಳ ಬೇಡಿಕೆಗಳತ್ತ ಗಮನ ಹರಿಸುತ್ತಿರುವುದು, ಬಾದಾಮಿ ಕ್ಷೇತ್ರದ ಜನರ ನಿರೀಕ್ಷೆ ಹೆಚ್ಚಲು ಮತ್ತಷ್ಟು ಕಾರಣವಾಗಿದೆ. ಸಿದ್ದರಾಮಯ್ಯ ಅವರು, ಬಾದಾಮಿ ಕ್ಷೇತ್ರದ ಶಾಸಕರಾದ ಬಳಿಕ ಮುಖ್ಯವಾಗಿ ನೇಕಾರರ ಸಮಸ್ಯೆಗೆ ಮುಕ್ತಿ ಕೊಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಆದರೆ, ಐದು ವರ್ಷ ತಾವೇ ಸಿಎಂ ಆಗಿದ್ದಾಗ ಮಾಡದ ಕೆಲಸ, ಈಗ ಹಾಲಿ ಸಿಎಂಗೆ ಒತ್ತಡ ತಂದರೆ ಬೇಡಿಕೆ ಈಡೇರುತ್ತಾ ಎಂಬ ಮಾತೂ ಇನ್ನೊಂದೆಡೆ ಕೇಳಿ ಬರುತ್ತಿದೆ.

Advertisement

ಅದೆನೇ ಇದ್ದರೂ, ಗುಳೇದಗುಡ್ಡದ ನೇಕಾರರ ಒಕ್ಕೂಟ ಮಾಡಿಕೊಂಡ ಮನವಿಗೆ ಸ್ಪಂದಿಸಿ, ನೇಕಾರರ ವಲಸೆ ಹಾಗೂ ಅವರ ಜೀವನೋಪಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ಜವಳಿ ಪಾರ್ಕ್‌, ಪವರ್‌ಲೂಮ್‌ ಮತ್ತು ಗಾರ್ಮೆಂಟ್‌ ಉದ್ಯಮ ನಿರ್ಮಿಸಿ, ಗುಳೇದಗುಡ್ಡಕ್ಕೆ ಶಾಶ್ವತ ಉದ್ಯೋಗ ಕಲ್ಪಿಸಲು ಮುಂದಾಗುವಂತೆ ಹಾಲಿ ಸಿಎಂಗೆ ಪತ್ರ ಬರೆದಿದ್ದಾರೆ. ಮಾಜಿ ಸಿಎಂವೊಬ್ಬರ ಹಾಗೂ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರಿಂದ ಸಿದ್ದರಾಮಯ್ಯ ಅವರ ಪತ್ರಕ್ಕೆ ಹೆಚ್ಚು ಮಾನ್ಯತೆ ನೀಡಿ, ಸಂಬಂಧಿಸಿದ ಇಲಾಖೆಗೆ ಸಮಗ್ರ ಕಡತ ನೀಡಲು ಹಾಲಿ ಸಿಎಂ ಸೂಚನೆ ನೀಡಿದ್ದಾರೆ. ಆದರೆ, ಈ ಬೇಡಿಕೆ ಪ್ರಸಕ್ತ ಬಜೆಟ್‌ನಲ್ಲೇ ಘೋಷಣೆಯಾಗಲಿವೆ ಎಂಬ ನೇಕಾರರ ನಿರೀಕ್ಷೆ ಹುಸಿಯಾಗಿದೆ. ಅಲ್ಲದೇ ಬಾದಾಮಿ ತಾಲೂಕಿನ ಪರ್ವತಿಕೆರೆ, ಹಿರೇಕೆರೆ, ಗಂಜಿಕೆರೆಗೆ ಮಲಪ್ರಭಾ ನದಿಯ ಆಸಂಗಿ ಬ್ಯಾರೇಜ್‌ನಿಂದ ನೀರು ತುಂಬಿಸಲು ಸಣ್ಣ ನೀರಾವರಿ ಇಲಾಖೆಯಿಂದ 12 ಕೋಟಿ ಮೊತ್ತದ ಪ್ರಸ್ತಾವನೆ ಸಿದ್ಧಗೊಂಡಿದೆ. ಇದಕ್ಕೆ ಅನುಮೋದನೆ ಕೊಡಿಸಿ, ನೀರು ತುಂಬಿಸುವ ಕೆಲಸ ಮಾಡಿದರೆ, ಗುಳೇದಗುಡ್ಡ ನಗರವೂ ಸೇರಿ ಸುತ್ತಲು ಅಂತರ್ಜಲ ವೃದ್ಧಿಗೊಂಡು ಜನ- ಜಾನುವಾರುಗಳಿಗೆ ನೀರಿನ ಸಮಸ್ಯೆ ನೀಗಲಿದೆ.

ರಂಗಸಮುದ್ರ-ಕೆಂದೂರ ಕೆರೆಗೂ ನೀರು:
ಇನ್ನು ಜಿಲ್ಲೆಯಲ್ಲಿ ಅದ್ಭುತ ನಿರ್ಮಾಣದ ಮೂಲಕ ಗಮನ ಸೆಳೆಯುವ ರಂಗಸಮುದ್ರ ಕೆರೆ ಹಾಗೂ 2ನೇ ಅತಿದೊಡ್ಡ ಕೆರೆ ಎಂಬ ಖ್ಯಾತಿ ಪಡೆದ ಕೆಂದೂರ ಕೆರೆಗೆ ನೀರು ತುಂಬಿಸಲು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿ, ಯೋಜನೆ ರೂಪಿಸಲು ಸೂಚನೆ ನೀಡಿದ್ದಾರೆ. ಅದು ಶೀಘ್ರ ಜಾರಿಗೊಳ್ಳಲಿ ಎಂಬುದು ಕ್ಷೇತ್ರದ ಜನರ ಒತ್ತಾಯ.

ಸಿದ್ದರಾಮಯ್ಯ ಅವರು, ಶನಿವಾರ ಲೋಕೋಪಯೋಗಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಪ್ರವಾಸಿ ತಾಣಗಳ ಸಮಗ್ರ ಆಭಿವೃದ್ಧಿ ಜತೆಗೆ ಮೂಲ ಸೌಲಭ್ಯ ಕಲ್ಪಿಸಲು ಏನೇನು ಯೋಜನೆ ಜಾರಿಗೊಳಿಸಬೇಕು ಎಂಬುದರ ಕುರಿತ ಯೋಜನೆ ಸಿದ್ಧಪಡಿಸಿ ಕೊಡಲು ಸೂಚಿಸಿದ್ದಾರೆ. ಈಗ ಲೋಕೋಪಯೋಗಿ ಇಲಾಖೆಯ ಎಸ್‌ಇ ಸುರೇಶ ಅವರು ಬಾಗಲಕೋಟೆಗೆ ಬಂದು ಯೋಜನೆ ತಯಾರಿಸುತ್ತಿದ್ದಾರೆ.
.ಹೊಳೆಬಸು ಶೆಟ್ಟರ,
ಸಿದ್ದರಾಮಯ್ಯ ಆಪ್ತ

ಶ್ರೀಶೈಲ ಕೆ. ಬಿರಾದಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next