ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 20 ಕೋಟಿ ಅನುದಾನ ಒದಗಿಸುವ ಭರವಸೆ ನೀಡಿದ್ದು, ಇಂದಿಗೂ ಭರವಸೆ
ಈಡೇರಿಲ್ಲ.
Advertisement
ಬೀದರ್ ಜಿಲ್ಲೆಯ ರೈತರ ಜೀವನಾಡಿ ಎಂದೆ ಗುರುತಿಸಿಕೊಂಡ ಬಿಎಸ್‌ಎಸ್‌ಕೆ ಕಾರ್ಖಾನೆಯನ್ನು ಪ್ರಸಕ್ತ ವರ್ಷದಲ್ಲಿ ಪ್ರಾರಂಭಿಸುವ ನಿಟ್ಟಿನಲ್ಲಿ ಕಳೆದ ಜೂನ್ ತಿಂಗಳಿಂದ ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ವಿಧಾನ ಸಭೆಚುನಾವಣೆ ಸಂದರ್ಭದಲ್ಲಿ ಕೂಡ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ನೂರು ಕೋಟಿ ಅನುದಾನ ಒದಗಿಸುವ
ಭರವಸೆ ನೀಡಲಾಗಿತ್ತು. ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆದ ನಂತರ ಜಿಲ್ಲೆಯ ರೈತರು ಈ ವರ್ಷ ಬಿಎಸ್‌ಎಸ್‌ಕೆ ಶುರುವಾಗುತ್ತದೆ ಎಂದು ಭರವಸೆ ಇಟ್ಟುಕೊಂಡಿದರು.
ಮೊದಲು ಕಾರ್ಖಾನೆ ಶುರುವಾಗುತ್ತದೆ. 20 ಕೋಟಿ ಅನುದಾನ ಬಿಡುಗಡೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಬಂಡಪ್ಪ ಖಾಶೆಂಪೂರ್, ಗಣಿ ಮತ್ತು ಭೂ ವಿಜ್ಞಾನ ಹಾಗೂ
ಮುಜುರಾಯಿ ಸಚಿವ ರಾಜಶೇಖರ ಪಾಟೀಲ ಅವರು ಕೂಡ ಕಾರ್ಖಾನೆ ಪ್ರಾರಂಭಿಸುವ ನಿಟ್ಟಿನಲ್ಲಿ ಸರ್ಕಾರದ ಜತೆಗೆ ಚರ್ಚೆ ನಡೆಸಿದ್ದು, ಕೂಡಲೆ ಸಾಲದ ಹಣ ಬಿಡುಗಡೆ ಆಗಲಿದೆ ಎಂದು ಪದೆ ಪದೆ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಇಂದಿಗೂ ಕೂಡ ಜಿಲ್ಲೆಯ ಸಚಿವರು ಕಾರ್ಖಾನೆ ಪ್ರಾರಂಭಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿವೆ.
Related Articles
ಸಮಯಕ್ಕೆ ಸಾಲದ ಹಣ ಸಿಗದ ಕಾರಣ ಕಾರ್ಖಾನೆ ಬಾಗಿಲು ಮುಚ್ಚಲಾಗಿತ್ತು. ಕಾರ್ಖಾನೆ ಮುಚ್ಚಿದ ನಂತರ ಕಾರ್ಖಾನೆಗೆ 10 ಕೋಟಿ ಸಾಲದ ಹಣ ಬಿಡುಗಡೆಯಾಗಿದ್ದು, ರೈತರ ಕಬ್ಬಿನ ಬಾಕಿ ಹಣ ಪಾವತಿಸಿದ ಆಡಳಿತ ಮಂಡಳಿ, ಉಳಿದ ಹಣದಲ್ಲಿ ಅಕ್ರಮ ಎಸಗಲಾಗಿದೆ ಎಂದು ಆಡಳಿತ ಮಂಡಳಿ ಸದಸ್ಯರೇ ಆರೋಪ ಮಾಡಿದ್ದರು. ಇದೀಗ ಜಿಲ್ಲೆಯಲ್ಲಿನ ವಿವಿಧ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಶುರುಮಾಡಿ ಎರಡು ತಿಂಗಳ ಸಮೀಪಕ್ಕೆ ಬಂದಿದ್ದು, ಇದೀಗ ಸರ್ಕಾರ ಸಾಲದ ಹಣ ನೀಡಿದರೂ ಕೂಡ ಕನಿಷ್ಠ ಹತ್ತು ದಿನಗಳ ಕಾಲ ಕಾರ್ಖಾನೆ ಶುರು ಮಾಡಲು ಸಾಧ್ಯವಿಲ್ಲ ಎಂಬುದು ಕಾರ್ಖಾನೆ ಸಿಬ್ಬಂದಿಗಳ ಮಾತು. ಚುನಾಯಿತ ಜನ ಪ್ರತಿನಿಧಿಗಳು ಅಕ್ರಮಕ್ಕೆ
ಸಾಥ್ ನೀಡುವ ನಿಟ್ಟಿನಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಅನುಮಾನ ಕಾರ್ಖಾನೆ ಸಿಬ್ಬಂದಿಗಳು ಹಾಗೂ ರೈತರನ್ನು ಕಾಡುತ್ತಿದೆ.
Advertisement
ಒಂದು ಕೋಟಿ ಸಾಲ: ಇನ್ನು ಕೆಲವು ಮೂಲಗಳ ಪ್ರಕಾರ ಇದೇ ತಿಂಗಳು ಸರ್ಕಾರ ಒಂದು ಕೋಟಿ ಅನುದಾನ ನೀಡುವಚಿಂತನೆಯಲ್ಲಿದ್ದು, ಕಾರ್ಖಾನೆ ಪ್ರಾರಂಭವಾದ ನಂತರ ಇನ್ನುಳಿದ ಸಾಲದ ಹಣ ನೀಡುವ ಆಲೋಚನೆಯಲ್ಲಿದೆ ಎಂದು
ತಿಳಿದುಬಂದಿದೆ. ಒಂದು ಕೋಟಿ ಅನುದಾನ ಯಾವ ಕೆಲಸಕ್ಕೆ ಸಾಕಾಗುತ್ತದೆ ಎಂಬ ಮಾತನ್ನು ಕಾರ್ಖಾನೆ ಅಧಿಕಾರಿಗಳು ತಿಳಿಸಿದ್ದು, ಸದ್ಯ ಕಾರ್ಖಾನೆಯ ಕಾರ್ಮಿಕರ ಸಂಬಳ, ಕಾರ್ಖಾನೆ ಮೇಲಿನ ಸಾಲದ ಬಡ್ಡಿ ಬಾಕಿ ಇದೆ. ಅಲ್ಲದೇ ಕಾರ್ಖಾನೆಯ ಯಂತ್ರೋಪಕರಣಗಳ ದುರಸ್ಥಿ ಕಾರ್ಯಕೂಡ ಇದ್ದು, ಕೋಟಿ ಅನುದಾನ ಸಾಕಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಯಾವಾಗ ಶುರು?: ಬಿಎಸ್‌ಎಸ್‌ಕೆ ಕಾರ್ಖಾನೆಯಲ್ಲಿ ಸುಮಾರು 24 ಸಾವಿರಕ್ಕೂ ಅಧಿಕ ರೈತರು ಷೇರುದಾರರಿದ್ದು, ಸಾವಿರಾರು ಕಬ್ಬು ಬೆಳೆಗಾರರು ಈ ಕಾರ್ಖಾನೆಯನ್ನೆ ನಂಬಿಕೊಂಡಿದ್ದಾರೆ. ನವೆಂಬರ್ ಕೊನೆಯ ವಾರ ಹಾಗೂ ಡಿಸೆಂಬರ್ ಮೊದಲ ವಾರದಲ್ಲಿ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯ ನಡೆಸುವುದಾಗಿ ಈ ಹಿಂದೇ ಸಹಕಾರ ಸಚಿವರು ಹೇಳಿಕೆ ಕೂಡ ನೀಡಿದರು. ಆದರೆ, ಸಧ್ಯ ಕಾರ್ಖಾನೆ ಶುರುವಾಗುವ ಸಾಧ್ಯತೆಗಳು ಕಂಡುಬರುತ್ತಿಲ್ಲ. ಮಳೆ ಕೊರತೆಯಿಂದ ರೈತರು ಹೊಲದಲ್ಲಿನ ಕಬ್ಬು ಸಾಗಿಸುವ ನಿಟ್ಟಿನಲ್ಲಿ ವಿವಿಧ ಕಾರ್ಖಾನೆಗಳ ಕಡೆಗೆ ಮುಖ ಮಾಡಿದ್ದಾರೆ. ಜನವರಿಯಲ್ಲಿ ಸ್ಥಗಿತ: ಮಳೆ ಕೊರತೆಯಿಂದ ಕಬ್ಬಿನ ಇಳುವರಿ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೆ ಒಳಗಾಗಿ ವಿವಿಧ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದು, ಬಹುತೇಕ ಕಾರ್ಖಾನೆಗಳು ಜನವರಿ ತಿಂಗಳಲ್ಲಿ ಕಬ್ಬು ನುರಿಸುವ ಕಾರ್ಯ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಈ ಮಧ್ಯದಲ್ಲಿ ಜನವರಿ ತಿಂಗಳಲ್ಲಿ ಕಾರ್ಖಾನೆ ಶುರು ಮಾಡಿದರೆ ಕಬ್ಬು ಎಲ್ಲಿಂದ ತರುತ್ತಾರೆ? ಸರ್ಕಾರದಿಂದ ಬರುವ ಸಾಲದ ಹಣ ಏನು ಮಾಡುತ್ತಾರೆ? ಚುನಾಯಿತ ಜನಪ್ರತಿನಿಧಿ ಗಳು, ಸಚಿವರು ಸೇರಿದಂತೆ ರಾಜ್ಯದ ಮುಖ್ಯಮಂತ್ರಿಗಳು ಕೂಡ ಸುಳ್ಳು ಭರವಸೆಗಳನ್ನು ನೀಡಿದರೆ ಏನು ಗತಿ ಎಂಬ ಪ್ರಶ್ನೆ ಜಿಲ್ಲೆಯ ರೈತರದಾಗಿದೆ. ದುರ್ಯೋಧನ ಹೂಗಾರ