Advertisement

ಉಗ್ರರಿಗೆ ಶಸ್ತ್ರಾಸ್ತ್ರ ಖರೀದಿಯ ಅಡ್ಡಾ ಆಗುತ್ತಿದೆಯೇ ಬಿಹಾರ?

02:16 AM Feb 18, 2021 | Team Udayavani |

ರವಿವಾರ ಜಮ್ಮು-ಕಾಶ್ಮೀರ ಡಿಜಿಪಿ ದಿಲ್‌ಬಾಗ್‌ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ “”ಕಾಶ್ಮೀರದ ಉಗ್ರರು ಭಯೋತ್ಪಾದನ ಕೃತ್ಯಗಳಿಗಾಗಿ ಬಿಹಾರದಿಂದ ಶಸ್ತ್ರಾಸ್ತ್ರ ಖರೀದಿಸಿ, ಮಿಲಿಟೆಂಟ್‌ಗಳ ನಡುವೆ ಹಂಚುತ್ತಿದ್ದಾರೆ. ಈ ಕೆಲಸಕ್ಕಾಗಿ ಉಗ್ರರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದಾರೆ” ಎಂದಿದ್ದಾರೆ. ಫೆಬ್ರವರಿ 6ರಂದು ಕಾಶ್ಮೀರದ ಉಗ್ರ ಕಮಾಂಡರ್‌ಗಳಾದ ಹಿದಾಯತೊಲ್ಲಾಹ್‌ ಮಲಿಕ್‌ ಮತ್ತು ಜಹೂರ್‌ ಅಹಮ್ಮದ್‌ ಬಂಧನದ ಅನಂತರ ಉಗ್ರರು-ಬಿಹಾರದ ಅಕ್ರಮ ಶಸ್ತ್ರಾಸ್ತ್ರ ತಯಾರಕ ಘಟಕಗಳ ನಡುವಿನ ಜಾಲದ ಬಗ್ಗೆ ಅನುಮಾನಗಳು ಹೆಚ್ಚಾಗುತ್ತಿವೆ. ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ಅನಂತರದಿಂದ ಆ ಪ್ರದೇಶದಲ್ಲಿ ಪಾಕಿಸ್ಥಾನದ ಪಿತೂರಿಯನ್ನು ಹತ್ತಿಕ್ಕಲು ಸೇನೆ ಸಫ‌ಲವಾಗುತ್ತಿದೆ. ಈ ಕಾರಣಕ್ಕಾಗಿಯೇ,ಅಲ್ಲಿನ ಉಗ್ರ ಸಂಘಟನೆಗಳು ಈಗ ಶಸ್ತ್ರಾಸ್ತ್ರಗಳಿಗಾಗಿ ಬಿಹಾರದತ್ತ ನೋಡುತ್ತಿವೆಯೇ ಎನ್ನುವ ಪ್ರಶ್ನೆ ಎದುರಾಗುತ್ತಿದೆ.

Advertisement

ಮೇಡ್‌ ಇನ್‌ ಅಮೆರಿಕ, ಉತ್ಪಾದನೆ ಬಿಹಾರದಲ್ಲಿ!
ದೇಶಾದ್ಯಂತ ವಶವಾಗುವ ವಿವಿಧ ರೀತಿಯ ಅಕ್ರಮ ಪಿಸ್ತೂಲುಗಳ ಮೇಲೆ ಸಾಮಾನ್ಯವಾಗಿ “ಮೇಡ್‌ ಇನ್‌ ಯುಎಸ್‌’, “ಓನ್ಲಿ ಫಾರ್‌ ಆರ್ಮಿ ಯೂಸ್‌’, “ಮೇಡ್‌ ಇನ್‌ ಇಟಲಿ’ ಎಂದು ಬರೆಯಲಾಗಿರು ತ್ತದೆ. ಆದರೆ ಇವುಗಳಲ್ಲಿ ಬಹುತೇಕ ಸಿದ್ಧವಾಗುವುದು ಬಿಹಾರ, ಯುಪಿ ಅಥವಾ ಮಧ್ಯಪ್ರದೇಶದಲ್ಲಿ ಎನ್ನುವುದು ಪತ್ತೆಯಾಗುತ್ತಿರುತ್ತದೆ. ಅದರಲ್ಲೂ ಬಿಹಾರದ ಮುಂಗೇರ್‌ ಪ್ರದೇಶವಂತೂ ಅಕ್ರಮ ಗನ್‌, ಪಿಸ್ತೂಲುಗಳ ಉತ್ಪಾದನೆಯಲ್ಲಿ ದಶಕಗಳಿಂದ ಕುಖ್ಯಾತಿ ಪಡೆದಿದೆ. 2014ರಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ನ ಶಸ್ತ್ರಾಸ್ತ್ರ ಸಾಗಣೆದಾರ ರವೇಶ್‌ ಉಲ್‌ ಇಸ್ಲಾಮ್‌ ಪಠಾನ್‌ಕೋಟ್‌ ರೈಲ್ವೇ ನಿಲ್ದಾಣದ‌ಲ್ಲಿ ಸಿಕ್ಕಿಬಿದ್ದಾಗ, ಆತನ ಬಳಿಯ ಬಂದೂಕುಗಳ ಮೇಲೆಲ್ಲ ಮೇಡ್‌ ಇನ್‌ ಯುಎಸ್‌ಎ ಎಂದು ಬರೆಯಲಾಗಿತ್ತು. ಆದರೆ ಅವೆಲ್ಲವೂ ಸಿದ್ಧವಾದದ್ದು ಬಿಹಾರದ ಮುಂಗೇರ್‌ನಲ್ಲಿ ಎನ್ನುವುದು ತನಿಖೆಯಿಂದ ಪತ್ತೆಯಾಯಿತು.

ಬಿಹಾರವೇಕೆ ಬಂದೂಕುಗಳ ಆಗರವಾಯಿತು?
18ನೇ ಶತಮಾನದಲ್ಲಿ ಬಂಗಾಲದ ನವಾಬನಾಗಿದ್ದ ಮೀರ್‌ ಖಾಸಿಂ ಬ್ರಿಟಿಷರ ವಿರುದ್ಧ ಹೋರಾಡಲು ಬಿಹಾರ ಭಾಗದಲ್ಲಿ ಬಂದೂಕುಗಳ ಉತ್ಪಾದನೆ ಆರಂಭಿಸಿದ. ಬಂದೂಕು ಉತ್ಪಾದನೆ ಕೆಲಸಕ್ಕೆ ಮುಂಗೇರ್‌ ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಸ್ಥಳೀಯರಿಗೇ ತರಬೇತಿ ನೀಡಲಾಗುತ್ತಿತ್ತು. ಸ್ವಾತಂತ್ರ್ಯಾ ನಂತರ ಕೇಂದ್ರ ಸರಕಾರ ತನ್ನ ದೇಖರೇಖೀಯಲ್ಲಿ ಚಿಕ್ಕ ಘಟಕಗಳನ್ನೆಲ್ಲ ಸೇರಿಸಿ ಕರ್ನಚೂರಾ ನಗರಿಯಲ್ಲಿ ಏಕ ಉತ್ಪಾದನ ಘಟಕ ಆರಂಭಿಸಿತು. 1956ರಲ್ಲಿ ಸರಕಾರ ನವ ಕೈಗಾರಿಕಾ ನೀತಿಯಡಿಯಲ್ಲಿ ಖಾಸಗಿ ಬಂದೂಕು ಉತ್ಪಾದನೆಯನ್ನು ನಿಷೇಧಿಸಿಬಿಟ್ಟಿತು. ಆದರೆ ಮುಂಗೇರ್‌ನ ಕೆಲಸಗಾರರ ಪರವಾನಿಗೆಯನ್ನು ಮಾತ್ರ ಮುಂದುವರಿಸಲಾಯಿತು. ಮುಂದಿನ ವರ್ಷಗಳಲ್ಲಿ ಅನೇಕ ಬಂದೂಕು ತಯಾರಿ ಘಟಕಗಳೂ ಬಾಗಿಲುಹಾಕಲಾರಂಭಿಸಿದವು. ಇದರಿಂದಾಗಿ ಅನೇಕ ಕೆಲಸಗಾರರು ನಿರುದ್ಯೋಗಿಗಳಾದರು. ಆದರೆ ಇವರಿಗೆಲ್ಲ ಪಿಸ್ತೂಲು, ಗನ್‌ಗಳ ತಯಾರಿಯಲ್ಲಿ ಪರಿಣತಿಯಿತ್ತು. ಸುಲಭ ಹಣದ ಆಸೆಗೆ ಬಿದ್ದವರು ಸೇರಿ, ಮುಂದೆ ಅಕ್ರಮವಾಗಿ ಬಂದೂಕು ತಯಾರಿಯಲ್ಲಿ ತೊಡಗಿದರು. ಮಾಫಿಯಾಗಳು ಈ ಬಂದೂಕುಗಳನ್ನೆಲ್ಲ ದೇಶಾದ್ಯಂತ ಅಕ್ರಮ ಸರಬರಾಜು ಮಾಡುತ್ತವೆ” ಎನ್ನುತ್ತಾರೆ ಪಟ್ನಾದ ವಕೀಲ ಅವಧೇಶ್‌ ಕುಮಾರ್‌.

ಪ.ಬಂಗಾಲಕ್ಕೆ ಬದಲಾಗುತ್ತಿದೆಯೇ ನೆಲೆ?
ಬಿಹಾರ ಪೊಲೀಸ್‌ ಪ್ರಕಾರ 2001ರಿಂದ 2017ರ ಜೂನ್‌ ನಡುವೆ ಆ ರಾಜ್ಯವೊಂದರಲ್ಲೇ 41,333 ಅಕ್ರಮ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಈ ಅವಧಿಯಲ್ಲಿ ಇಂಥ 599 ಅಕ್ರಮ ಶಸ್ತ್ರಾಸ್ತ್ರ ತಯಾರಿ ಘಟಕಗಳನ್ನು ಪತ್ತೆಹಚ್ಚಿ, 2.29 ಲಕ್ಷ ಕ್ಯಾಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿತೀಶ್‌ ಕುಮಾರ್‌ ಆಡಳಿತದಲ್ಲಿ ಅಕ್ರಮ ಬಂದೂಕು ಘಟಕಗಳ ವಿರುದ್ಧ ಅಲ್ಲಿನ ಆಡಳಿತ ಪ್ರಬಲ ಸಮರ ಸಾರಿದೆ. ಈ ಕಾರಣಕ್ಕಾಗಿಯೇ ಈಗ ಇಂಥ ಉತ್ಪಾದಕರು ತಮ್ಮ ನೆಲೆಯನ್ನು ಪಶ್ಚಿಮ ಬಂಗಾಲದ ಹೌರಾಗೆ ಸ್ಥಳಾಂತರಿಸುತ್ತಿದ್ದಾರೆ ಎನ್ನುತ್ತಾರೆ ಪೊಲೀಸರು.

ಈಗ ಕೈಯಲ್ಲಿ ಸ್ಫೋಟಗೊಳ್ಳುವುದು ಕಡಿಮೆ!
ಈ ಹಿಂದೆಲ್ಲ ಬಿಹಾರದಲ್ಲಿ ಸಿದ್ಧವಾಗುತ್ತಿದ್ದ ಬಂದೂಕುಗಳು ಅತ್ಯಂತ ಕಳಪೆ ಗುಣಮಟ್ಟದಲ್ಲಿರುತ್ತಿದ್ದವಂತೆ. ಸೈಕಲ್‌ಗ‌ಳ ನಳಿಕೆಗಳನ್ನು ಬಂದೂಕಿನ ನಳಿಕೆಯಾಗಿ ಬಳಸುತ್ತಿದ್ದುದರಿಂದ ಅನೇಕ ಬಾರಿ ಅವು ಕೈಯಲ್ಲೇ ಸ್ಫೋಟಗೊಳ್ಳುವುದೇ ಅಧಿಕವಾಗಿತ್ತು. ಗುಂಡು ಸಿಡಿಸಲು ಹೋಗಿ, ಕೈ ಬೆರಳು ಛಿದ್ರಗೊಳಿಸಿ ಕೊಂಡವರ ಪ್ರಮಾಣ ಅಧಿಕವಿತ್ತು. ಇನ್ನು ದೇಶೀ ಕಟ್ಟಾಗಳು ಕೆಲವು ರೌಂಡ್‌ಗಳ ಬಳಕೆಯ ಅನಂತರ ವ್ಯರ್ಥವಾಗುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಕರು ಫ್ಯಾಕ್ಟರಿಗಳಲ್ಲಿ ಬಂದೂಕುಗಳನ್ನು ಸಿದ್ಧಪಡಿಸುತ್ತಿರುವುದರಿಂದ ಗನ್‌ಗಳ ಸಾಮರ್ಥ್ಯ ಬದಲಾಗುತ್ತಿದೆ.

Advertisement

ಚುನಾವಣೆ ವೇಳೆ ಹೆಚ್ಚು ಹಾವಳಿ
ಅಕ್ರಮ ಪಿಸ್ತೂಲುಗಳ ತಯಾರಿಯಲ್ಲಿ ಬಿಹಾರದಂತೆಯೇ ಉತ್ತರ ಪ್ರದೇಶವೂ ಕುಖ್ಯಾತಿ ಪಡೆದಿದೆ. 2016-2017ರ ನಡುವೆ ಯುಪಿ ಪೊಲೀಸರು ಅಜಂಗಢ ಮತ್ತು ಮುಜಾಫರ್ನಗರದಲ್ಲಿ 49,081 ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಈ ಕುರಿತು ಮಾತನಾಡಿದ್ದ ಉತ್ತರಪ್ರದೇಶದ ಎಸ್‌ಟಿಎಫ್ನ ನಿವೃತ್ತ ಹೆಚ್ಚುವರಿ ಸೂಪರಿಂಟೆಂಡೆೆಂಟ್‌ “”ಯುಪಿಯಲ್ಲಿ ನಡೆಯುವ ಅತ್ಯಧಿಕ ಅಪರಾಧ ಪ್ರಕರಣಗಳಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಅಥವಾ ದೇಶೀ ಗನ್‌ಗಳೇ ಇರುತ್ತವೆ. ಉತ್ತರಪ್ರದೇಶದ ಯಾವ ಜಿಲ್ಲೆಯಲ್ಲೂ ಇಂಥ ಅಕ್ರಮ ತಯಾರಿ ಘಟಕಗಳು ಇಲ್ಲ ಎನ್ನುವಂತಿಲ್ಲ. ಕೆಲವೆಡೆ ಮನೆಗಳಲ್ಲೇ ಪಿಸ್ತೂಲು, ಬಂದೂಕುಗಳನ್ನು ಸಿದ್ಧಪಡಿಸಲಾಗುತ್ತದೆ. ಬಂದೂಕು ತಯಾರಿಗಾಗಿ ಬಳಸಲಾಗುವ ವಸ್ತುಗಳನ್ನು ಟ್ರಂಕ್‌ ಒಂದರಲ್ಲಿ ಇಟ್ಟು ಬೇರೆಡೆ ಸಾಗಿಸಿ ತಪ್ಪಿಸಿಕೊಂಡು ಬಿಡುತ್ತಾರೆ” ಎಂದಿದ್ದರು. ಪ್ರತೀ ಬಾರಿ ಚುನಾವಣೆಯ ಸಮಯದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಹೆಚ್ಚಾಗುತ್ತದಂತೆ. 2017ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮುಜಾಫರ್ ನಗರಕ್ಕೆ ಸಮೀಪವಿರುವ ಶಾಮ್ಲಿ ಜಿಲ್ಲೆಯೊಂದರಲ್ಲೇ ಪೊಲೀಸರು123 ಗನ್‌ಗಳು, 80 ಪಿಸ್ತೂಲುಗಳನ್ನು ವಶಪಡಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next