ಬೆಂಗಳೂರು: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಸಜಾಕೈದಿ ಬೆಂಗಳೂರಿನಲ್ಲಿ ಗಾಂಜಾ ದಂಧೆ ನಡೆಸುತ್ತಿರುವ ಸಂಗತಿ ಬಯಲಾಗಿದೆ. ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಸೆ.20ರಂದು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮಾಹಿತಿ ದೊರೆತಿದೆ. ಈ ದಂಧೆಯ ಕಿಂಗ್‌ಪಿನ್ ಹಿಂಡಲಗಾ ಜೈಲಿನಲ್ಲಿರುವ ಸಜಾ ಕೈದಿ ಆಕಾಶ್ ದೇಸಾಯಿ ಇರಬಹುದು ಎಂದು ಮೂಲಗಳು ತಿಳಿಸಿವೆ.
ಸದ್ಯ, ಪ್ರಕರಣ ಸಂಬಂಧ ಬಾಲು ಪ್ರಸಾದ್ ಕಲಗಟ್ಟೆ, ಯಶ್ ಪ್ರಶಾಂತ್ ದೇಸಾಯಿ ಅವರನ್ನು ಬಂಧಿಸಿರುವ ಪೊಲೀಸರು, ಇತರೆ ಆರೋಪಿಗಳಾದ ಆ್ಯಂಟೋನಿ, ರೋಹಿತಾಸ್, ಸಚಿನ್ ಪೊನ್ನಪ್ಪ ಎಂಬುವವರ ಬಂಧನಕ್ಕೆ ಜಾಲಬೀಸಿದ್ದಾರೆ. ಜತೆಗೆ, ಹಿಂಡಲಗಾ ಜೈಲಿನ ಕೈದಿ ಆಕಾಶ್ ದೇಸಾಯಿ ಕೂಡ ಆರೋಪಿಯಾಗಿದ್ದಾನೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಚರಸ್ ಮಾರಾಟ ಪ್ರಕರಣದಲ್ಲಿ ಸಜಾ ಕೈದಿಯಾಗಿರುವ ಆಕಾಶ್ ದೇಸಾಯಿ ಜೈಲಿನಲ್ಲಿದ್ದುಕೊಂಡೇ ದಂಧೆ ನಡೆಸುತ್ತಿದ್ದಾನೆ. ಈ ಹಿಂದೆ ದಂಧೆಯಲ್ಲಿದ್ದ ಸಂಪರ್ಕ ಬಳಸಿಕೊಂಡು ಸಹೋದರನ ಮಗ ಬಾಲು ಪ್ರಸಾದ್ ಹಾಗೂ ಇತರ ಆರೋಪಿಗಳ ಮೂಲಕ ಗಾಂಜಾ ಸೇರಿದಂತೆ ಮಾದಕ ವಸ್ತು ಮಾರಾಟ ಮಾಡಿಸುತ್ತಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಮಾರಾಟಕ್ಕೂ ಮುನ್ನ ಸಿಕ್ಕಿಬಿದ್ದರು!: ಸೆ.20ರಂದು ಮಧ್ಯಾಹ್ನ ಸಿಂಗಸಂದ್ರದ ಸಮೀಪದ ಬಾರ್‌ವೊಂದರ ಸಮೀಪ ಇಬ್ಬರು ಅನುಮಾನಸ್ಪದ ವ್ಯಕ್ತಿಗಳು ಓಡಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಆಧರಿಸಿ, ಪಿಎಸ್‌ಐ ಎಚ್.ಎಂ. ಆನಂದ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆಯಲ್ಲಿ ಬಾಲು ಪ್ರಸಾದ್ ಹಾಗೂ ಯಶ್ ಪ್ರಶಾಂತ್‌ನನ್ನು ಬಂಧಿಸಿ, ಅವರ ಬಳಿಯಿದ್ದ 1 ಕೆ.ಜಿ. ಗಾಂಜಾ ಹಾಗೂ 2 ಮೊಬೈಲ್ ಜಪ್ತಿ ಮಾಡಿಕೊಂಡಿದೆ.
ಹಿಂಡಲಗಾ ಜೈಲಿನಲ್ಲಿರುವ ಆಕಾಶ್ ದೇಸಾಯಿ, ಮೊಬೈಲ್ ಮೂಲಕ ಕರೆ ಮಾಡಿ ಬೆಳಗಾವಿಯಲ್ಲಿ ಆ್ಯಂಟೋನಿ, ರೋಹಿತಾಸ್ ನೀಡುವ ಗಾಂಜಾ ಪಡೆದು ಯಶ್ ಮೂಲಕ ಸಚಿನ್ ಪೊನ್ನಪ್ಪನಿಗೆ ಮಾರಾಟ ಮಾಡಿ, ಹಣ ಪಡೆಯುವಂತೆ ತಿಳಿಸಿದ್ದ ಎಂದು ವಿಚಾರಣೆ ವೇಳೆ ಬಾಲುಪ್ರಸಾದ್ ಬಾಯಿಬಿಟ್ಟಿದ್ದಾನೆ ಎಂದು ಅಧಿಕಾರಿ ವಿವರಿಸಿದರು.
* ಮಂಜುನಾಥ ಲಘುಮೇನಹಳ್ಳಿ