Advertisement

ಹೊಸ ಭರವಸೆಯಿಂದ ಸಕ್ರಿಯ ನಿರೀಕ್ಷೆ

10:50 AM Oct 11, 2022 | Team Udayavani |

ಬಂಟ್ವಾಳ: ರಾಜ್ಯದ ಮೊದಲ ನೀರಾ ಘಟಕ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದ್ದ ತುಂಬೆಯಲ್ಲಿರುವ ತೋಟಗಾರಿಕೆ ಇಲಾಖೆಯ ನೀರಾ ಘಟಕವನ್ನು ಪುನರಾರಂಭಿಸುವ ಕುರಿತ ಹಲವು ಪ್ರಯತ್ನಗಳು ವಿಫಲವಾದರೂ ಪುನರಾರಂಭದ ಪ್ರಯತ್ನ ಇನ್ನೂ ಜೀವಂತವಾಗಿದೆ. ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲಾ ತೆಂಗು ಬೆಳೆಗಾರರ ರೈತ ಉತ್ಪಾದಕ ಸಂಸ್ಥೆ ಮುಂದೆ ಬಂದಿದ್ದು, ಅವರ ಪ್ರಸ್ತಾವನೆ ಇಲಾಖೆಯ ಕೇಂದ್ರ ಕಚೇರಿಗೆ ಸಲ್ಲಿಕೆಯಾಗಿದೆ.

Advertisement

ತುಂಬೆಯಲ್ಲಿರುವ ತೋಟಗಾರಿಕಾ ಕ್ಷೇತ್ರದಲ್ಲಿ 2011-12ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ, ತೆಂಗು ಅಭಿವೃದ್ಧಿ ಮಂಡಳಿ, ಪಾಲಕ್ಕಾಡ್‌ ತೆಂಗು ಉತ್ಪಾದಕ ಕಂಪೆನಿಗಳ ಮೂಲಕ ನೀರಾ ಘಟಕ ಆರಂಭಗೊಂಡು 2014ರಲ್ಲಿ ನೀರಾ ತಂಪು ಪಾನೀಯಗಳ ಪ್ಯಾಕೆಟ್‌ಗಳು ಹಾಪ್‌ಕಾಮ್ಸ್‌ ಮೂಲಕ ಮಾರಾಟವೂ ನಡೆದಿತ್ತು. ಆದರೆ ಬಳಿಕ ನಿರ್ವಹಣೆ ಸಾಧ್ಯವಾಗದೆ ಮುಚ್ಚಲ್ಪಟ್ಟಿತ್ತು.

ಪುನರಾರಂಭದ ಪ್ರಯತ್ನಗಳು ವಿಫಲ

ಈ ರೀತಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ನೀರಾ ಘಟಕವನ್ನು ಮತ್ತೆ ಆರಂಭಿಸುವ ಕುರಿತು ಒತ್ತಾಯಗಳು ಕೇಳಿಬಂದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಪುನರಾರಂಭಕ್ಕೆ ಹಲವು ಪ್ರಯತ್ನಗಳನ್ನು ಮಾಡಿದೆ. 2020ರಲ್ಲಿ ಅಂದಿನ ದ.ಕ. ಜಿ.ಪಂ. ಸಿ.ಇ.ಓ. ಡಾ| ಆರ್‌. ಸೆಲ್ವಮಣಿ ಅವರು ತೆಂಗಿನ ಮರದ ಕಲ್ಪರಸವನ್ನು ನೀರಾಗಿ ಪರಿವರ್ತಿಸಿ ಮಾರಾಟಕ್ಕೆ ಕ್ರಮ ಕೈಗೊಳ್ಳಲು ಹಾಪ್‌ ಕಾಮ್ಸ್‌ ಸಂಸ್ಥೆಯನ್ನು ಕೋರಿದ್ದರು. ಸಂಸ್ಥೆಯು ಅದರ ಸಾಧಕ- ಬಾಧಕಗಳ ಅಧ್ಯಯನಕ್ಕೂ ಪ್ರಯತ್ನ ನಡೆಸಿತ್ತು. ಆದರೆ ಬಳಿಕ ನೀರಾ ಘಟಕದ ಪುನರಾರಂಭದ ಪ್ರಯತ್ನ ಬಿದ್ದು ಹೋಯಿತು.

ಮುಂದೆ ಇಲಾಖೆಯು ಘಟಕಕ್ಕೆ ಮರುಜೀವ ನೀಡುವ ನಿಟ್ಟಿನಲ್ಲಿ ಆಸಕ್ತ ಖಾಸಗಿ ರೈತಪರ ಸಂಸ್ಥೆಗೆ ನೀಡುವುದಕ್ಕೆ ಚಿಂತನೆ ನಡೆಸಿ, ಅದರ ನಿಯಮಾವಳಿಗಳನ್ನು ಸಿದ್ಧಗೊಳಿಸಿ ಟೆಂಡರ್‌ ಕೂಡ ಕರೆದಿತ್ತು. ಆದರೆ ಮೂರು ಬಾರಿ ಟೆಂಡರ್‌ ಕರೆದರೂ, ಯಾವುದೇ ರೈತ ಉತ್ಪಾದಕಾ ಸಂಸ್ಥೆಗಳು ನಿರ್ವಹಣೆಗೆ ಮುಂದೆ ಬಂದಿರಲಿಲ್ಲ. ಹೀಗಾಗಿ ಆ ಪ್ರಯತ್ನವೂ ಬಿದ್ದು ಹೋಯಿತು.

Advertisement

ಬಳಿಕ ಮೂರ್ತೆದಾರರ ಸಂಘವು ನಿರ್ವಹಣೆಗೆ ಆಸಕ್ತಿ ತೋರಿದರೂ, ಅದರ ಪ್ರಯತ್ನ ಕೂಡ ಪ್ರಗತಿ ಕಂಡಿಲ್ಲ.

ಇದೀಗ ಕಳೆದ ಹಲವು ಸಮಯಗಳಿಂದ ತೆಂಗು ಬೆಳೆಗಾರರ ರೈತ ಉತ್ಪಾದಕ ಸಂಸ್ಥೆಯ ಪ್ರಸ್ತಾವನೆ ಪುನರಾರಂಭದ ನಿರೀಕ್ಷೆ ಹುಟ್ಟಿಸಿದ್ದು, ಅದು ಕೂಡ ಯಾವ ರೀತಿ ಕಾರ್ಯರೂಪಕ್ಕೆ ಬರುತ್ತದೆ ಎಂಬ ಚಿತ್ರಣ ಇನ್ನೂ ಹೊರಬಿದ್ದಿಲ್ಲ.

ಅಧಿವೇಶನದಲ್ಲೂ ಪ್ರಸ್ತಾವ; ಸಚಿವರ ಭರವಸೆ

ಕಳೆದ ಮಾರ್ಚ್‌ನಲ್ಲಿ ಅಧಿವೇಶನದ ಸಂದರ್ಭ ವಿಧಾನ ಪರಿಷತ್‌ ಸದಸ್ಯ ಕೆ.ಹರೀಶ್‌ಕುಮಾರ್‌ ಅವರು ನೀರಾ ಘಟಕದ ಕುರಿತು ಪ್ರಸ್ತಾಪಿಸಿದ್ದು, ಅದಕ್ಕೆ ಉತ್ತರಿಸಿದ ರಾಜ್ಯ ತೋಟಗಾರಿಕಾ ಸಚಿವ ಮುನಿರತ್ನ ಅವರು ತುಂಬೆ ನೀರಾ ಘಟಕವನ್ನು ನಿರ್ವಹಿಸಲು ವಿಟ್ಲದಲ್ಲಿರುವ ಜಿಲ್ಲಾ ತೆಂಗು ಬೆಳೆಗಾರರ ರೈತ ಉತ್ಪಾದಕ ಸಂಸ್ಥೆ ಮುಂದೆ ಬಂದಿದ್ದು, ವಿಸ್ತೃತ ಯೋಜನಾ ವರದಿ ಸಲ್ಲಿಸಲು ಸಂಸ್ಥೆಗೆ ಸೂಚಿಸಲಾಗಿದೆ. ಘಟಕವನ್ನು ಖಾಸಗಿ ಸಹಭಾಗಿತ್ವದಲ್ಲಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೇರಳದ ಪಾಲಾಕ್ಕಾಡ್‌ ತೆಂಗು ಉತ್ಪಾದಕರ ಕಂಪೆನಿಯೊಂದಿಗೆ 2017ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಉತ್ಪನ್ನ ಮಾರಾಟದ ತೊಂದರೆಗಳಿಂದಾಗಿ ಘಟಕ ಆರಂಭಗೊಂಡಿಲ್ಲ. ಕರ್ನಾಟಕ ಅಬಕಾರಿ(ನೀರಾ) ನಿಯಮಗಳ ಪ್ರಕಾರ ರೈತ ಉತ್ಪಾದಕ ಸಂಸ್ಥೆಗಳಿಗೆ ಮಾತ್ರ ಅವಕಾಶ ವಿದೆ. ಆದ್ದರಿಂದ ರೈತ ಉತ್ಪಾದಕ ಸಂಸ್ಥೆಗಳಿಗೆ ವಹಿಸಲು ಮೂರು ಬಾರಿ ಟೆಂಡರ್‌ ಕರೆಯಲಾಗಿತ್ತು. ಯಾವುದೇ ರೈತ ಉತ್ಪಾದಕಾ ಸಂಸ್ಥೆ ಗಳು ಮುಂದೆ ಬಂದಿರಲಿಲ್ಲ ಎಂದು ಸಚಿವರು ವಿವರಿಸಿದ್ದರು. ಜತೆಗೆ ಜಿಲ್ಲೆಗೆ ಭೇಟಿ ಕೊಟ್ಟು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನೂ ಸಚಿವರು ನೀಡಿದ್ದರು.

ಇಲಾಖೆ ನಿರ್ದೇಶಕರಿಗೆ ಪ್ರಸ್ತಾವನೆ

ತುಂಬೆಯ ತೋಟಗಾರಿಕಾ ಕ್ಷೇತ್ರದಲ್ಲಿರುವ ನೀರಾ ಘಟಕವನ್ನು ನಿರ್ವಹಣೆ ಮಾಡಲು ಜಿಲ್ಲಾ ತೆಂಗು ಬೆಳೆಗಾರರ ರೈತ ಉತ್ಪಾದಕ ಸಂಸ್ಥೆ ಮುಂದೆ ಬಂದಿದ್ದು, ಅವರ ಪ್ರಸ್ತಾವನೆಯನ್ನು ಇಲಾಖೆಯ ನಿರ್ದೇಶಕರಿಗೆ ಕಳುಹಿಸಿಕೊಡಲಾಗಿದೆ. ಸಂಸ್ಥೆಯ ತೆಂಗು ಬೆಳೆಗಾರರು ನೀರಾ ತೆಗೆದು ಅದನ್ನು ಘಟಕದ ಮೂಲಕ ಪ್ಯಾಂಕಿಂಗ್‌ ಮಾಡಿ ಮಾರುಕಟ್ಟೆಗೆ ತಲುಪಿಸುವ ಯೋಜನೆ ಹಾಕಿಕೊಂಡಿದ್ದಾರೆ. – ಪ್ರದೀಪ್‌ ಡಿ’ಸೋಜಾ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರು, ಬಂಟ್ವಾಳ.

Advertisement

Udayavani is now on Telegram. Click here to join our channel and stay updated with the latest news.

Next