Advertisement
ಹಿಂದಿನ ಎರಡು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿರುವ ವಿಜುಗೌಡ ಪಾಟೀಲ ಈ ಬಾರಿ ಬಿಜೆಪಿ ಘೋಷಿತ ಅಭ್ಯರ್ಥಿ. ಕಳೆದ ಬಾರಿ 4,355 ಮತಗಳಿಂದ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿರುವ ಎಂ.ಬಿ. ಪಾಟೀಲ ಅವರು ಈ ಬಾರಿಯೂ ಪೈಪೋಟಿ ಎದುರಿಸಬೇಕಾದ ಸ್ಥಿತಿ ಇದೆ.
Related Articles
Advertisement
ಇಷ್ಟೆಲ್ಲದರ ಹೊರತಾಗಿಯೂ ನೀರಾವರಿ ಹೆಸರಿನಲ್ಲಿ ಮಾಡಿರುವ ಯೋಜನೆಗಳ ಕಾಮಗಾರಿಗಳು ಅವೈಜ್ಞಾನಿಕ ಹಾಗೂ ನಿಯಮ ಬಾಹಿರವಾಗಿ ಕೆಲಸ ಮಾಡಲಾಗಿದೆ. ಸಂತ್ರಸ್ತ ರೈತರ ಜಮೀನು ಸಮೀಕ್ಷೆ ವೈಜ್ಞಾನಿಕ ರೀತಿಯಲ್ಲೇ ಆಗಿಲ್ಲ, ಭೂ ಸ್ವಾ ಧೀನವಾಗಿಲ್ಲ, ನೋಟಿಸ್ ನೀಡಿಲ್ಲ, ಪರಿಹಾರ ವಿತರಿಸಿಲ್ಲ. ಮನಸ್ಸಿಗೆ ಬಂದಂತೆ ನಕ್ಷೆಗಳನ್ನು ಬದಲಿಸಿ ಯೋಜನೆ ರೂಪಿಸಿದ್ದಾರೆ.
ನಿಡೋಣಿ-ಸಂಗಾಪುರ ಧನ್ಯಾಳ ಭಾಗದಲ್ಲಿ ಗುರುಪಾದ ಬಾಗಿ ಅವರ ತೋಟದಲ್ಲಿ ಮುಳವಾಡ ಪಶ್ಚಿಮ ಕಾಲುವೆ ಕಾಮಗಾರಿಗೆ ಪರಿಹಾರ ನೀಡದ ಕಾರಣ ಅಕ್ವಾಡೆಕ್ಟ್ ಕೋಟಿ ಕೋಟಿ ರೂ. ಖರ್ಚು ಮಾಡಿ ನಿರ್ಮಿಸುತ್ತಿರುವ ಕಾಲುವೆ ಕಾಮಗಾರಿ ಬಾಧಿತ ರೈತರು ಸ್ಥಗಿತಗೊಳಿಸಿದ್ದಾರೆ. ದೌರ್ಜನ್ಯ ನಡೆಸಿ ತೊನಶ್ಯಾಳ ರಸ್ತೆಯಲ್ಲಿ ರೈತರನ್ನು ಬಸಲಿಂಗಪ್ಪ ಮೇತ್ರಿ ಪೊಲೀಸ್ ಠಾಣೆಯಲ್ಲಿ ಕೂಡಿಸಿ ಬೆದರಿಸಿ ಕಾಲುವೆ ಮಾಡಿಸಿದ್ದಾರೆ ಎಂದು ದೂರಿದ್ದಾರೆ ಎಂದು ವಿರೋಧಿಗಳು ಬಹಿರಂಗ ಸಭೆಗಳಲ್ಲೇ ಈಗ ಆರೋಪಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಒಂದೇ ಹಳ್ಳಿಗಳ ಒಂದು ರಸ್ತೆಗಳೂ ನೆಟ್ಟಗಿಲ್ಲ. ಚುನಾವಣೆ ಹತ್ತಿರ ಬಂದಿರುವ ಈ ಹಂತದಲ್ಲಿ ರಸ್ತೆ ಕಾಮಗಾರಿಗಳು ಗುದ್ದಲಿ ಪೂಜೆ ಕಂಡಿದ್ದು, ರಸ್ತೆಗಳು ಆಗುವುದು ಯಾವಾಗ? ಇನ್ನು ಸಾರಿಗೆ ಕಥೆ ಹೇಳುವಂತಿಲ್ಲ. ತಾಲೂಕ ಕೇಂದ್ರದ ಮಾನ್ಯತೆ ಹೊಂದಿದ್ದರೂ ಬಬಲೇಶ್ವರ ಗ್ರಾಪಂ ಅಧಿಕಾರವನ್ನು ಪಟ್ಟಣ ಪಂಚಾಯತ್ ಮೇಲ್ದರ್ಜೆಗೆ ಏರಿಸುವ ಕೆಲಸವಾಗಿಲ್ಲ. ಇದಕ್ಕಾಗಿಯೇ ಬಬಲೇಶ್ವರದಲ್ಲಿ ಚುನಾವಣೆಯನ್ನೇ ಬಹಿಷ್ಕರಿಸಿ, ಬಬಲೇಶ್ವರದ ಗುರುಪಾದೇಶ್ವರ ಮಠದ ಪೀಠಾಧಿಪತಿ ಡಾ| ಮಹಾದೇವ ಶಿವಾಚಾರ್ಯರು ಪೀಠವನ್ನೇ ತೊರೆದು ಹೋಗಿದ್ದರು. ನಂತರ ಮನವೊಲಿಸಿ ಕರೆತಲಾಗಿದೆ. ಆದರೂ ಬಬಲೇಶ್ವರ ಪಟ್ಟಣ ಪಂಚಾಯತ್ ಘೋಷಣೆ ನನೆಗುದಿಗೆ ಬಿದ್ದಿದೆ.
ಮತ್ತೂಂದೆಡೆ ಸಚಿವ ಎಂ.ಬಿ. ಪಾಟೀಲ ಅವರು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆಗೆ ಹೋರಾಟಕ್ಕೆ ಮುಂದಾಗಿದ್ದು ಕೂಡ ಕ್ಷೇತ್ರದಲ್ಲಿ ಪರ-ವಿರೋಧ ಸೃಷ್ಟಿಸಿದೆ. ಅವರ ವಿರೋಧಿಗಳು ಅದರಲ್ಲೂ ಬಬಲೇಶ್ವರ ಮಠದ ಪೀಠಾಧಿಪತಿ ಡಾ| ಮಹದೇವ ಶ್ರೀಗಳು ನಮ್ಮ ಕ್ಷೇತ್ರದ ಓರ್ವ ಶಾಸಕ, ಸಚಿವನಾಗಿ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾನೆ. ಧರ್ಮ ಭಂಜಕರಿಗೆ ತಕ್ಕ ಪಾಠ ಕಲಿಸಿ ಎಂದು ಈಗಾಗಲೇ ಹಲವು ಬಹಿರಂಗ ಸಭೆ, ಸಂತರ ಸಭೆಗಳಲ್ಲಿ ಎಚ್ಚರಿಕೆ ನೀಡಿರುವುದು ಕೂಡ ಕ್ಷೇತ್ರವನ್ನು ಪ್ರತಿಷ್ಠೆಗೆ ಕೊಂಡೊಯ್ದಿದೆ.
ನೀರಾವರಿ ಹೊರತಾಗಿ ಕ್ಷೇತ್ರದಲ್ಲಿ ಸರ್ಕಾರಿ ಪದವಿ ಕಾಲೇಜುಗಳಿಲ್ಲ, ತಮ್ಮ ಶಿಕ್ಷಣ ಸಂಸ್ಥೆಗಳ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ಬಡವರ ಮಕ್ಕಳ ಅನುಕೂಲಕ್ಕೆ ಶೈಕ್ಷಣಿಕ ಯಾವುದೇ ಪ್ರಗತಿ ಮಾಡಿಲ್ಲ. ಕೆಲವು ಸರ್ಕಾರಿ ಶಾಲೆಗಳಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ತಮ್ಮದೇ ಹೆಸರಿನ ಫೌಂಡೇಶನ್‌ನಿಂದ ಸೌಲಭ್ಯ ಕಲ್ಪಿಸಿದ್ದು, ಬಹುತೇಕ ಸರ್ಕಾರಿ ಶಾಲೆಗಳು ಸೌಲಭ್ಯ ವಂಚಿತವಾಗಿದೆ. ಬಬಲೇಶ್ವರ, ತಿಕೋಟಾ ತಾಲೂಕು ಕೇಂದ್ರಕ್ಕೆ ಪದವಿ, ತಾಂತ್ರಿಕ ಕಾಲೇಜುಗಳಿಗೆ ಕಂಪ್ಯೂಟರ್ ಸೈನ್ಸ್‌ನಂಥ ಸರ್ಕಾರಿ ಕಾಲೇಜುಗಳ ಸೌಲಭ್ಯ ದೊರೆಯಬೇಕಿತ್ತು ಎಂದು ನ್ಯೂನತೆಗಳನ್ನು ಪಟ್ಟಿ ಮಾಡುತ್ತಾರೆ ವಿರೋಧಿಗಳು. ದೇವರಗೆಣ್ಣೂರ, ದ್ಯಾವಾಪುರ, ಅರಕೇರಿ, ಕಾಖಂಡಕಿಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕಳೆದ ವರ್ಷ ಟ್ಯಾಂಕರ್ ನೀರು ಪೂರೈಕೆ ಮಾಡಿದರೂ ಈಗಲೂ ಬಿಲ್ ಬಾಕಿ ಇವೆ. ಕ್ಷೇತ್ರದ ಬೆಸ್ಟ್ ಏನು?
ಕೆರೆಗಳಿಗೆ ನೀರು ತುಂಬುವ ಯೋಜನೆ, ತುಬಚಿ-ಬಬಲೇಶ್ವರ ಯೋಜನೆ ಅನುಷ್ಠಾನ, ಮುಳವಾಡ ಏತ ನೀರಾವರಿ ಪಶ್ಚಿಮ ಕಾಲುವೆ ಯೋಜನೆ ಅನುಷ್ಠಾನ. ಎಲ್ಲ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಾಣ. ವಿಕಲಚೇತನರಿಗೆ ಇಂಧನ ಆಧಾರಿತ ಇಂಧನ ಆಧರಿತ ಟ್ರೈ ಬೈಕ್ ಸೇರಿದಂತೆ ಇನ್ನಿತರ ಉತ್ತಮ ಕೆಲಸಗಳನ್ನು ಮಾಡಲಾಗಿದೆ. ಕ್ಷೇತ್ರದ ದೊಡ್ಡ ಸಮಸ್ಯೆ?
ನ್ಯಾಯ ಸಮ್ಮತ ಭೂಸ್ವಾಧೀನ ಆಗಿಲ್ಲ, ಸಂತ್ರಸ್ತರಿಗೆ ಪರಿಹಾರ ಹಣ ನೀಡಿಲ್ಲ. ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಸಮಸ್ಯೆ ಬಗೆಹರಿಸಿಲ್ಲ. ತೋಟಗಾರಿಕೆ ಉತ್ಪನ್ನಗಳ ಶಿಥಲೀಕರಣ ಘಟಕಗಳ ಸ್ಥಾಪನೆ ಕನಸು ನನಸಾಗಿಲ್ಲ. ಕ್ಷೇತ್ರದಲ್ಲಿ ಶಾಲೆಗಳಿಗೆ ಸೂಕ್ತ ಕಟ್ಟಡಗಳಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ವೈದ್ಯರೇ ಇಲ್ಲ ದುಸ್ಥಿತಿ ಇದೆ. ಕ್ಷೇತ್ರ ಮಹಿಮೆ
ಬಬಲೇಶ್ವರ ವಿಧಾನಸಭೆ ಕ್ಷೇತ್ರ 2008ರಲ್ಲಿ ಮರು ವಿಂಗಡಣೆ ಆದ ಬಳಿಕ ಬಬಲೇಶ್ವರ ಎಂದು ನಾಮಕರಣಗೊಂಡಿದೆ. ಕ್ಷೇತ್ರ ಮರು ವಿಂಗಡಣೆ ಬಳಿಕ ನಡೆಯುತ್ತಿರುವ ಮೂರನೇ ಚುನಾವಣೆ 2018 ಈ ಸಂದರ್ಭದಲ್ಲಿ ಮತ್ತೆ ಕದನ ಕಣ ರಂಗೇರುತ್ತಿದೆ. ಕಾಂಗ್ರೆಸ್ ಭದ್ರ ಕೋಟೆ: ಬಬಲೇಶ್ವರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದರೂ ಕಾಂಗ್ರೆಸ್ಸೇತರ ಪಕ್ಷಗಳೂ ಬಲ್ಯ ಮೆರೆದಿವೆ. 1957ರಿಂದ ನಿರಂತರ ಗೆದ್ದಿದ್ದ ಕಾಂಗ್ರೆಸ್ ಪಕ್ಷ ಮೊದಲ ಸೋಲು ಕಂಡಿದ್ದು 1978ರಲ್ಲಿ. ಕಾಂಗ್ರೆಸ್ ಅಭ್ಯರ್ಥಿ ಶಿವರಾಯ ಜಿದ್ದಿ ಅವರನ್ನು ಸೋಲಿಸಿದ ಜನತಾ ಪಕ್ಷದ ಬದುಗೌಡ ಬಾಪುಗೌಡ ಪಾಟೀಲ ಮೊದಲ ಬಾರಿಗೆ ಕಾಂಗ್ರೆಸ್ ರಹಿತ ಶಾಸಕ ಎನಿಸಿದರು. 1962ರಲ್ಲಿ ಶಾಸಕರಾಗಿದ್ದ ಬಿ.ಎಂ.ಪಾಟೀಲ ಅರನ್ನು 1983 ಚುನಾವಣೆ ಬಳಿಕ 1989ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಬಿ.ಎಂ.ಪಾಟೀಲರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗಳಿಸುವಂತೆ ಮಾಡಿತ್ತು. 1199ರಲ್ಲಿ ಬಿ.ಎಂ. ಪಾಟೀಲ ಅವರ ಪುತ್ರ ಕಾಂಗ್ರೆಸ್‌ನ ಎಂ.ಬಿ. ಪಾಟೀಲರನ್ನು ಸೋಲಿಸಿ ಜನತಾದಳದಿಂದ ಆಯ್ಕೆಯಾದ ಶಿವಾನಂದ ಪಾಟೀಲ ಅವರು ಬಿಜೆಪಿಯಿಂದ ಸ್ಪ ರ್ಧಿಸಿ ಗೆದ್ದಿದ್ದರು. ಶಿವಾನಂದ ಪಾಟೀಲ ಅವರು ಬಸವನಬಾಗೇವಾಡಿ ಕ್ಷೇತ್ರಕ್ಕೆ ವಲಸೆ ಹೋದ ಬಳಿಕ ಎಂ.ಬಿ.ಪಾಟೀಲ ಅವರು ಸತತ ಮೂರು ಗೆಲುವು ಸಾಧಿ ಸಿದ್ದಾರೆ. ಇದರಲ್ಲಿ ಎರಡು ಬಾರಿ ಸೋತಿರುವ ಜೆಡಿಎಸ್ ಅಭ್ಯರ್ಥಿ ವಿಜುಗೌಡ ಪಾಟೀಲ ಶಾಸಕ ಶಿವಾನಂದ ಪಾಟೀಲ ಅವರ ಕಿರಿಯ ಸಹೋದರ ಎಂಬುದು ಗಣನೀಯ. ಶಾಸಕರು ಏನಂತಾರೆ?
ನಾನು ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಸಿದ್ದೇಶ್ವರ ಶ್ರೀಗಳು ಸರ್ಟಫಿಕೆಟ್ ನೀಡಿದ್ದು, ಚುನಾವಣೆಯಲ್ಲಿ ಜನತೆ ಅದನ್ನು ಅನುಮೋದಿಸಲಿದ್ದಾರೆ. ಹೀಗಾಗಿ ಬೇರೆಯವರ ಸರ್ಟಿಫಿಕೆಟ್ ನಮಗೆ ಬೇಕಾಗಿಲ್ಲ.ಅಭಿವೃದ್ಧಿ ಸಹಿಸದ ವಿರೋಧಿಗಳು ಮಾಡುವ ಆರೋಪಗಳು ರಾಜಕೀಯ ಪ್ರೇರಿತವೇ ಹೊರತು ವಾಸ್ತವವಲ್ಲ. ಧರ್ಮ ಕಾರ್ಯಕ್ಕೆ ಮುಂದಡಿ ಇಟ್ಟಿರುವ ನಾನು ಕೂಡ ಬಸವಾದಿ ಶರಣರಂತೆ ಸಂಕಷ್ಟ ಎದುರಿಸಿದರೂ ಅಂತಿಮವಾಗಿ ವಿಜಯ ಮಾತ್ರ ನನ್ನದೇ.
ಎಂ.ಬಿ.ಪಾಟೀಲ ನೀರಾವರಿ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ವಿಷಯದಲ್ಲಿ ಬಬಲೇಶ್ವರ ಕ್ಷೇತ್ರ ರಾಜ್ಯಕ್ಕೆ ಮಾದರಿ ಆಗಿದೆ. ಬೊಗಸೆ ನೀರಿಗೂ ತತ್ವಾರ ಇದ್ದ ನೆಲಕ್ಕೆ ಕೃಷ್ಣೆಯನ್ನೇ ಹರಿಸಿದ್ದಾರೆ. ಬರದ ನಾಡಿನ ರೈತರಿಗೆ ಇನ್ನೇನು ಬೇಕು?
ಪ್ರಕಾಶ ಗುಣದಾಳ, ಹಲಗಣಿ ನೀರಾವರಿ ಯೋಜನೆಗಳ ಸಂತ್ರಸ್ತರ ವೈಜ್ಞಾನಿಕ ಭೂಸ್ವಾಧೀನ ಆಗಿಲ್ಲ, ಪರಿಹಾರ ವಿತರಿಸಿಲ್ಲ. ಪ್ರಶ್ನಿಸಿದರೆ ಪೊಲೀಸ್ ಪ್ರಕರಣ ದಾಖಲಿಸಿ ಬೆದರಿಸುವ ದೌರ್ಜನ್ಯ ಮಿತಿ ಮೀರಿದೆ. ಕಾನೂನು ಬಾಹಿರ ಕೆಲಸಗಳ ಹಗರಣಗಳನ್ನು ದಾಖಲೆ ಸಮೇತ ಮುಂದಿನ ಸರ್ಕಾರದಲ್ಲಿ ಬಹಿರಂಗ ಮಾಡಿ, ತನಿಖೆ ಮಾಡಿಸುತ್ತೇವೆ.
ಚನ್ನಪ್ಪ ಕೊಪ್ಪದ, ಯಕ್ಕುಂಡಿ ಸಾವಿರ ಅಡಿ ಆಳಕ್ಕೆ ಕೊರೆದರೂ ನೀರು ದೊರೆಯುತ್ತಿರಲಿಲ್ಲ. ರೈತರಂತೂ ಕಂಗಾಲಾಗಿದ್ದರು. ಆದರೆ ಕಳೆದ ಐದು ವರ್ಷಗಳಲ್ಲಿ ನೀರಾವರಿ, ಕೆರೆಗಳಿಗೆ ನೀರು ತುಂಬಿಸಿದ್ದರಿಂದ ಅಂತರ್ಜಲ ಹೆಚ್ಚಿ ಬತ್ತಿದ ಕೊಳವೆ ಬಾವಿಗಳು ಮರು ಜೀವ ಪಡೆದಿವೆ. ಇದನ್ನು ಅಭಿವೃದ್ಧಿ ಎನ್ನದೇ ಮತ್ತೇನು ಎನ್ನಬೇಕು?
ಪ್ರಕಾಶ ಕೋರಿ, ಶೇಗುಣಸಿ ಜಿ.ಎಸ್. ಕಮತರ