ಬಾಗಲಕೋಟೆ: ಬಾದಾಮಿ ಹಾಗೂ ಬೀಳಗಿ ತಾಲೂಕು ವ್ಯಾಪ್ತಿಯಲ್ಲಿ 1 ಲಕ್ಷ ಎಕರೆ ಭೂಮಿಗೆ ನೀರಾವರಿ ಕಲ್ಪಿಸಲು ಸಂಕಲ್ಪ ಹಾಕಿಕೊಂಡಿದ್ದೇನೆ. ಎರಡು ವರ್ಷಗಳಲ್ಲಿ ಇದನ್ನು ಸಾಕಾರಗೊಳಿಸಲಾಗುವುದು ಎಂದು ನಿರಾಣಿ ಉದ್ಯಮ ಸಮೂಹದ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಬೀಳಗಿ ಶಾಸಕ ಮುರಗೇಶ ನಿರಾಣಿ ಹೇಳಿದರು.
ಬಾದಾಮಿ ತಾಲೂಕಿನ ಕಲ್ಲಾಪುರ ಎಸ್. ಕೆ. ಗ್ರಾಮದಲ್ಲಿ ಎಂಆರ್‌ಎನ್ ಕೇನ್ ಪಾವರ್ ಇಂಡಿಯಾ ಲಿ.ನ ಸಕ್ಕರೆ ಕಾರ್ಖಾನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾದಾಮಿ ತಾಲೂಕಿನಲ್ಲಿ ಈಗಾಗಲೇ ಆರಂಭಗೊಂಡಿದ್ದ ಎರಡು ಕಾರ್ಖಾನೆ ಸ್ಥಗಿತಗೊಂಡಿವೆ. ಹೀಗಾಗಿ ಈ ತಾಲೂಕಿನಲ್ಲಿ ಯಾರೂ ಸಕ್ಕರೆ ಕಾರ್ಖಾನೆ ಆರಂಭಿಸಲು ಮುಂದೆ ಬರಲಿಲ್ಲ. ಬನಶಂಕರಿ ದೇವಿಯ ಆಶೀರ್ವಾದೊಂದಿಗೆ ಇಲ್ಲಿ ಹೊಸ ಕಾರ್ಖಾನೆ ಆರಂಭಿಸಿದ್ದು, ಕಬ್ಬು ಪೂರೈಸುವ ರೈತರಿಗೆ ಪ್ರತಿ 15 ದಿನಗಳಿಗೊಮ್ಮೆ ಬಿಲ್ ನೀಡಲಾಗುವುದು.
ಅಲ್ಲದೇ ಈ ಭಾಗದಲ್ಲಿ ನೀರಾವರಿ ಕೈಗೊಳ್ಳಲು 10 ವರ್ಷಗಳಿಂದಲೇ ಯೋಜನೆ ಹಾಕಿಕೊಂಡಿದ್ದು, ಹೆರಕಲ್ ದಕ್ಷಿಣ ಏತ ನೀರಾವರಿ, ಕೆರೆ ತುಂಬುವ ಯೋಜನೆ, ಹೆರಕಲ್ ಬಳಿ ಸೇತುವೆ ಸಹಿತ ಬ್ಯಾರೇಜ್‌ಗೆ 2012ರಲ್ಲಿ ಅನುಮೋದನೆ ನೀಡಲಾಗಿತ್ತು. ಕೈನಕಟ್ಟಿ ಬಳಿ 16 ಸಾವಿರ ಎಕರೆ, ಯಳ್ಳಿಗುತ್ತಿ ಏತ ನೀರಾವರಿ ಯೋಜನೆ ಮೂಲಕ 2,500 ಎಕರೆ ನೀರಾವರಿ ಕಲ್ಪಿಸಲಾಗುತ್ತಿದೆ. ಈಗಾಗಲೇ ಮಲಪ್ರಭಾ ಬಲದಂಡೆ ಹಾಗೂ ಘಟಪ್ರಭಾ ಎಡದಂಡೆ ಕಾಲುವೆಗಳಿಗೆ ನೀರು ಬಾರದ ಹಿನ್ನೆಲೆಯಲ್ಲಿ ಸುಮಾರು 15 ಸಾವಿರ ಎಕರೆಯನ್ನು ನೀರಾವರಿಯಿಂದ ಡಿನೋಟಿಫೈ ಮಾಡಿ, ಅನಗವಾಡಿ ಸೇತುವೆ ಬಳಿ ಜಾಕ್ ವೆಲ್ ನಿರ್ಮಿಸಿ ಈ ಕಾಲುವೆ ಜಾಲದ ಭೂಮಿಗೆ ನೀರಾವರಿ ಕಲ್ಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಎರಡು ವರ್ಷದಲ್ಲಿ ಒಟ್ಟಾರೆ 1 ಲಕ್ಷ ಎಕರೆ ಭೂಮಿಗೆ ನೀರು ಒದಗಿಸಲು ಸಂಕಲ್ಪ ಹಾಕಿಕೊಳ್ಳಲಾಗಿದೆ ಎಂದರು.
10 ಕೋಟಿ ಮೊತ್ತದ ಬೀಜ-ಗೊಬ್ಬರ: ಈ ಭಾಗದಲ್ಲಿ ಕಬ್ಬು ಬೆಳೆಗಾರ ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಾರ್ಖಾನೆಯಿಂದ 10 ಕೋಟಿ ವೆಚ್ಚದ ಕಬ್ಬಿನ ಬೀಜ, ಗೊಬ್ಬರ ಪೂರೈಕೆ ಮಾಡಲಾಗುವುದು. ನಿರಾಣಿ ಉದ್ಯಮ ಸಮೂಹದಿಂದ ಸಿಎಸ್‌ಆರ್ ಫಂಡ್‌ನಿಂದ ಸಾಮಾಜಿಕ ಕಾರ್ಯಗಳನ್ನೂ ಕೈಗೊಳ್ಳಲಾಗುತ್ತಿದೆ. ಬಾದಾಮಿ ತಾಲೂಕಿನಲ್ಲಿ ನೀರಾವರಿ, ಶಿಕ್ಷಣ, ಉದ್ಯೋಗ, ಉದ್ಯಮಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದರಿಂದ ರೈತರ ಆರ್ಥಿಕ ಮಟ್ಟ ಸುಧಾರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಸಂಸದ ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ರಾಮದುರ್ಗ ಶಾಸಕ ಮಹಾದೇವ ಯಾದವಾಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಬಾದಾಮಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ ಸೇರಿದಂತೆ ಸಾವಿರಾರು ರೈತರು, ಪ್ರಮುಖರು, ವಿವಿಧ ಮಠಾಧೀಶರು ಇದ್ದರು.
32 ಕೋಟಿ ವೆಚ್ಚದಲ್ಲಿ ಗಲಗಲಿ ಬ್ಯಾರೇಜ್ ಎತ್ತರಿಸುವ ಕಾಮಗಾರಿ ನಡೆಯುತ್ತಿದ್ದು, ಈ ಕಾರ್ಯ ಪೂರ್ಣಗೊಂಡಲ್ಲಿ ಹಲವು ತಾಲೂಕಿಗೆ ಅನುಕೂಲವಾಗಲಿದೆ. ಅಲ್ಲದೇ 108 ಕೋಟಿ ವೆಚ್ಚದಲ್ಲಿ ಮುಧೋಳ ಮತ್ತು ಬೀಳಗಿತಾಲೂಕಿನ ಸಮಗ್ರ ಕೆರೆ ತುಂಬುವ ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು.
-ಮುರಗೇಶ ನಿರಾಣಿ, ಬೀಳಗಿ ಶಾಸಕ