Advertisement

Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ

06:50 PM Jul 01, 2024 | Team Udayavani |

ರಬಕವಿ-ಬನಹಟ್ಟಿ (ಬಾಗಲಕೋಟೆ ಜಿಲ್ಲೆ) :  ರೈತರ ಬಗೆಗಿನ ಕಾಳಜಿ ವಿಚಾರದಲ್ಲಿ ಯಾರು ರಾಜಕಾರಣ ಮಾಡುವುದು ಬೇಡ. ಎಲ್ಲರೂ ಒಗ್ಗೂಡಿ ರೈತರ ಪರವಾಗಿ ಪಕ್ಷಾತೀತವಾಗಿ ಉತ್ತಮ ಕೆಲಸ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದರು.
ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದ ಬಳಿ ಕುಲಹಳ್ಳಿ ಹುನ್ನೂರು ಏತ ನೀರಾವರಿ ಯೋಜನೆಗೆ ಸೋಮವಾರ ಪ್ರಾಯೋಗಿಕವಾಗಿ ಚಾಲನೆ ನೀಡಿ ಮಾತನಾಡಿ ಈ ನೀರಾವರಿ ಯೋಜನೆಯಿಂದ ರಬಕವಿ ಬನಹಟ್ಟಿ ತಾಲೂಕಿನ ಮೂರು ಮತ್ತು ಜಮಖಂಡಿ ತಾಲೂಕಿನ 13 ಗ್ರಾಮಗಳ ಒಟ್ಟು 9,163  ಹೆಕ್ಟೇರ್‌ ಪ್ರದೇಶ ಭೂಮಿಗೆ ಅನುಕೂಲವಾಗಲಿದೆ. ಒಟ್ಟು ೦.೮೮೮ ಟಿಎಂಸಿ ನೀರು ಬಳಸಿಕೊಳ್ಳಲಾಗುವುದು ಎಂದು ಸಚಿವ ತಿಮ್ಮಾಪುರ ತಿಳಿಸಿದರು.
ರೂ. 73.75 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿ ಎರಡು ವರ್ಷಗಳಲ್ಲಿ ಮುಗಿಯಬೇಕಿತ್ತು. ಆರು ವರ್ಷಗಳಾದರೂ ಇನ್ನೂ ಯೋಜನೆ ಪೂರ್ತಿಯಾಗಿಲ್ಲ ಎಂದು ಸಚಿವರು ಗುತ್ತಿಗೆದಾರರನ್ನು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ದಿನಗಳಲ್ಲಿ ಇಂತಹ ಗುತ್ತಿಗೆದಾರರ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಆದಷ್ಟು ಬೇಗ ಕಾಮಗಾರಿ ಪೂರ್ತಿಗೊಳಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ ಈಗ ಪ್ರಾರಂಭವಾಗಿರುವ ಈ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ರೈತರ ಅನುಕೂಲಕ್ಕಾಗಿ ನಾಲ್ಕು ತಿಂಗಳ ಕಾಲ ನಿರಂತರವಾಗಿ ನೀರು ಪೂರೈಸಲು ತಿಳಿಸಿದ್ದೇನೆ ಎಂದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಸಮೀಪದ ಕುಲಹಳ್ಳಿ ಗ್ರಾಮದಿಂದ ಕೃಷ್ಣಾ ನದಿಯ ನೀರನ್ನು ಏಳು ಕಿ.ಮೀ ದೂರ ಕೊಳವೆ ಮೂಲಕ ನೀರನ್ನು ಎತ್ತುವ ಕಾಮಗಾರಿಯಾಗಿದೆ. ಸರ್ಕಾರ ಆದಷ್ಟು ಬೇಗನೆ ಕಾಮಗಾರಿ ಮುಕ್ತಾಯಗೊಳಿಸಲು ಕ್ರಮ ತೆಗೆದುಕೊಳ್ಳಬೇಕು. ಕೂಡಲೇ ಮುಖ್ಯ ಮಂತ್ರಿಯವರ ಕರೆಸಿ ಯೋಜನೆಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.
ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಕುಲಹಳ್ಳಿ ಹುನ್ನೂರು ಮತ್ತು ಕುಲಹಳ್ಳಿ ವೆಂಕಟೇಶ್ವರ ಏತ ನೀರಾವರಿ ಯೋಜನೆಗಳಿಂದ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ಮುಧೋಳ ತಾಲೂಕಿನ ರೈತರಿಗೆ ಮತ್ತು ರೈತರ ಭೂಮಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ರೈತರಿಗೆ ಸಂಬಂಧಪಟ್ಟ ಯಾವುದೇ ಕಾರ್ಯಗಳಿರಲಿ ಎಲ್ಲರೂ ಪಕ್ಷಾತೀತವಾಗಿ ಕಾರ್ಯ ಮಾಡಲು ಮುಂದಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಎರಡು ತಾಲೂಕಿನ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ತಾವು ಸಹಕಾರ ನೀಡಬೇಕು ಎಂದು ಸಚಿವರಲ್ಲಿ ವಿನಂತಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಪೂಜಾರಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಶ್ರೀಶೈಲ ಕಲ್ಯಾಣಿ, ವಿ.ಎನ್. ನಾಯಕ, ಶಿವಮೂರ್ತಿ, ಎನ್.ಎಂ. ದಿವಟೆ ಸೇರಿ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next