Advertisement

ಬೇಜವಾಬ್ದಾರಿ ನಡವಳಿಕೆ ಸಲ್ಲ

10:01 AM Jul 06, 2019 | Suhan S |

ಮುಧೋಳ: ನಗರದ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಕೆಂಡಾಮಂಡಲರಾದ ಶಾಸಕ ಗೋವಿಂದ ಕಾರಜೋಳ, ಮುಖ್ಯ ವೈದ್ಯಾಧಿಕಾರಿ ಅಶೋಕ ಸೂರ್ಯವಂಶಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

Advertisement

ತಾಪಂ ಕಾರ್ಯಾಲಯದಲ್ಲಿ ನಡೆದ ತ್ತೈಮಾಸಿಕ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ತಿಂಗಳು ಅಂಬಿ ಕುಟುಂಬದ ಇಬ್ಬರು ರೋಗಿಗಳಿಗೆ ವೈದ್ಯರು ಸ್ಥಳದಲ್ಲಿ ಇರದ ಹಾಗೂ ಸಂಪರ್ಕಕ್ಕೆ ಸಿಗದ ಕಾರಣ ಮೃತಪಟ್ಟಿರುವ ಘಟನೆ ನಡೆದಿದೆ. ಇದಕ್ಕೆ ನಗರದ ಮುಖ್ಯ ವೈದ್ಯಾಧಿಕಾರಿ ನಿರ್ಲಕ್ಷ್ಯವೇ ಕಾರಣ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯ ಉದಯಸಿಂಹ ಫಡತಾರೆ ದೂರಿದರು.

ಇದಕ್ಕೆ ಕೆಂಡಾಮಂಡಲರಾದ ಶಾಸಕ ಕಾರಜೋಳ, ಬಡವರು ಸಾರ್ವಜನಿಕ ಆಸ್ಪತ್ರೆಗೆ ಬರುವುದೇ ತಮ್ಮ ಆರೋಗ್ಯ ಸುಧಾರಿಸಲು ಹೊರತು ಸಾಯುವುದಕ್ಕಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ನಂತರ ಶಾಸಕರು, ಬರುವ ರೋಗಿಗಳಿಗೆ ಸ್ಟೇತ್‌ಸ್ಕೋಪ್‌ ಬಳಸಿ ಒಮ್ಮೆಯಾದರೂ ತಪಾಸಣೆ ಮಾಡಿದ್ದೀರಾ ಎಂದು ವೈದ್ಯಾಧಿಕಾರಿಯನ್ನು ಪ್ರಶ್ನಿಸಿದರು. ‘ರೋಗಿಗಳ ಸಂಖ್ಯೆ ಹೆಚ್ಚು ಇರುವ ಕಾರಣ ಸ್ಟೇತ್‌ಸ್ಕೋಪ್‌ ಬಳಸಲು ಆಗುವುದಿಲ್ಲ’ ಅಸಂಬದ್ಧ ಉತ್ತರಕ್ಕೆ ರೋಸಿ ಹೋದ ಶಾಸಕರು, ಮಾನವೀಯತೆಯಿಂದ ವೈದ್ಯರಾಗಿ ಸೇವೆ ಸಲ್ಲಿಸದ ನೀವು ತತ್‌ಕ್ಷಣ ಸೇವೆಯಿಂದ ನಿರ್ಗಮಿಸುವುದೇ ವಾಸಿ ಎಂದು ಆಕ್ರೋಶ ಹೊರಹಾಕಿದರು.

ಸರ್ವೇ ನಂ.195ರ ಕ್ಷೇತ್ರ 1-17 ಜಾಗೆಯು ಕೋರ್ಟ್‌ ಆದೇಶದ ಪ್ರಕಾರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸೇರಿದ ಜಾಗೆ ಎಂದು ಆದೇಶವಿದ್ದರೂ ಅದರಲ್ಲಿನ 17 ಗುಂಟೆ ಜಾಗೆಯನ್ನು ಸ್ಥಳೀಯ ಕೆಲ ಜನರು ಅತಿಕ್ರಮಣ ಮಾಡಿ ಜಾಗೆಯನ್ನು ಕಬಳಿಸಿದ್ದಾರೆ. ಇದನ್ನು ಬೆಂಬಲಿಸಿದ ಪಿಡಿಒ ಕಬಳಿಸಿದವರ ಹೆಸರಿನಲ್ಲಿ 8 ಜನರಿಗೆ ಉತಾರ ನೀಡಿದ ವಿಷಯವನ್ನು ಜಿಪಂ ಸದಸ್ಯ ಮಹಾಂತೇಶ ಉದಪುಡಿ ಸಭೆಯಲ್ಲಿ ಚರ್ಚೆಗೆ ತಂದರು.

Advertisement

ಭೂ ದಾಖಲೆಗಳ ವಿಭಾಗದ ಸಹಾಯಕ ನಿರ್ದೇಶಕರನ್ನು ಸಭೆಗೆ ಆಹ್ವಾನಿಸಿ ಈ ವಿಷಯ ಗಮನಕ್ಕೆ ತಂದಾಗ ಕೇವಲ 17 ಗುಂಟೆ ಸರ್ಕಾರಿ ಜಾಗೆ ಇದೆ ಎಂದು ತಿಳಿಸಿದಾಗ ಮಾತಿನ ಚಕಮಕಿ ನಡೆಯಿತು. ಸರ್ಕಾರದ ನೌಕರಸ್ಥರು ಸರಕಾರಿ ಜಾಗೆಗಳಿಗೆ ವಾರಸುದಾರರು ಇದ್ದಂತೆ. ಇಂತಹ ಜಾಗೆಯನ್ನು ಅಧಿಕಾರಿಗಳೇ ಕಾಪಾಡದಿದ್ದರೆ ಸರ್ಕಾರವೇ ಬಳೆ ತೊಟ್ಟುಕೊಂಡಿದೆಯೇ ಎಂದು ಶಾಸಕರು ಏರುದನಿಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕರು, ಇಂತಹ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲು ವಿಶೇಷ ಸಭೆ ಕರೆಯಲು ದೂರವಾಣಿ ಮುಖಾಂತರ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.

ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಜಾತಿ ಪ್ರಮಾಣ ಪತ್ರ ಪರಿಶೀಲನೆ ಮಾಡಿಕೊಡಲು ನೂತನ ತಹಶೀಲ್ದಾರ್‌ ಸಂಜಯ ಇಂಗಳೆಯವರಿಗೆ ಶಾಸಕರು ಸೂಚಿಸಿದರು. ಈ ಹಿಂದಿನ ತಹಶೀಲ್ದಾರ್‌ ಈ ವಿಷಯದಲ್ಲಿ ಬೇಕಾಬಿಟ್ಟಿಯಾಗಿ ಜಾತಿ ಪ್ರಮಾಣಪತ್ರ ನೀಡಿ ಹೋಗಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next