ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ವಿಶೇಷ ಆತಿಥ್ಯ ಸೇರಿ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಲುಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಚಂದ್ರಗುಪ್ತ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್, ರೌಡಿಶೀಟರ್ ವಿಲ್ಸನ್‌ಗಾರ್ಡನ್ ನಾಗ ಸೇರಿ ಸಜಾ ಬಂಧಿಗಳ ಜತೆ ಸೇರಿ ಜೈಲಿನ ಆವರಣದಲ್ಲಿ ವಿಶೇಷ ಆತಿಥ್ಯ ಸ್ವೀಕರಿಸಿದ್ದರು. ಈ ಸಂಬಂಧ ಜೈಲಿನ ಮುಖ್ಯ ಅಧೀಕ್ಷಕ ಸೇರಿ 9 ಮಂದಿಯನ್ನು ಅಮಾನತುಗೊಳಿಸಲಾಗಿತ್ತು.
ಅಲ್ಲದೆ, ದರ್ಶನ್ ಹಾಗೂ ರೌಡಿಶೀಟರ್‌ಗಳ ವಿರುದ್ಧ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಜತೆಗೆ ಜೈಲಿನ ಮೂವರು ಅಧಿಕಾರಿ-ಸಿಬ್ಬಂದಿ ವಿರುದ್ಧ ಮತ್ತೂಂದು ಎಫ್ಐಆರ್ ದಾಖಲಾಗಿದೆ. ಈ ಮೂರು ಪ್ರಕರಣಗಳಲ್ಲಿ ಇಬ್ಬರು ಇನ್‌ಸ್ಪೆಕ್ಟರ್ ಹಾಗೂ ಒಬ್ಬರು ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿತ್ತು.
ಈ ಬೆನ್ನಲ್ಲೇ ಜೈಲಿನಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಜತೆಗೆ ಮಾಜಿ ಕೈದಿಗಳು ಕೂಡ ಜೈಲಿನ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಶೀಘ್ರದಲ್ಲೇ ವರದಿ ನೀಡುವಂತೆ ಸೂಚಿಸಿ ಸಿಸಿಬಿ ಮುಖ್ಯಸ್ಥ ಚಂದ್ರಗುಪ್ತ ನೇತೃತೃದಲ್ಲಿ ವಿಶೇಷ ತಂಡ ರಚಿಸಲಾಗಿದೆ.
ಈ ತಂಡ ಈಗಾಗಲೇ ತನಿಖೆ ಆರಂಭಿಸಿದ್ದು, ಜೈಲಿಗೂ ಭೇಟಿ ನೀಡಿ, ಪ್ರಾಥಮಿಕ ಮಾಹಿತಿ ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.