ಕೋಲಾರ: ಶುದ್ಧ ನೀರಿನ ಘಟಕಗಳ ಸ್ಥಾಪನೆ ಮತ್ತು ಅದರ ನಿರ್ವಹಣೆ ವಿಚಾರದಲ್ಲಿ ಇಲ್ಲಿ ಆಗಿರುವ ಅವ್ಯವಹಾರ, ಅಕ್ರಮಗಳು ರಾಜ್ಯದ ಬೇರೆಲ್ಲೂ ಆಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಪಂ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ಸಮಸ್ಯೆ, ಶುದ್ಧ ನೀರಿನ ಘಟಕಗಳ ನಿರ್ವಹಣೆ ಹಾಗೂ ನರೇಗಾ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರಿಗೆ ಕೊಳವೆ ಬಾವಿಗಳನ್ನೇ ನಂಬಿಕೊಂಡಿರುವ ಜಿಲ್ಲೆಗೆ ಆರ್.ಓ.ಪ್ಲಾಂಟ್‌ಗಳ ಅಗತ್ಯವಿದೆ. ಆದರೆ, ಅಧಿಕಾರಿಗಳು ಕೆಟ್ಟು ನಿಂತಿರುವ ಆರ್‌ಒ ಪ್ಲಾಂಟ್‌ಗಳ ಬಗ್ಗೆ ಸರಿಯಾದ ಮಾಹಿತಿ ಕೊಡುವುದಿಲ್ಲ ಎಂದು ಹೇಳಿದರು.
ಅಧಿಕಾರಿಗಳಿಂದ ತಪ್ಪು ಮಾಹಿತಿ: ಜಿಲ್ಲೆಯಲ್ಲಿ 175 ಆರ್.ಒ.ಪ್ಲಾಂಟ್‌ಗಳಲ್ಲಿ ಎಲ್ಲವೂ ರಿಪೇರಿ ಆಗಿದ್ದು 11 ಮಾತ್ರವೇ ಉಳಿದಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದೀರಿ ನೀವು ಕೊಟ್ಟಿರುವ ಈ ಮಾಹಿತಿ ಸರಿ ಇದೆ ಎಂದು ಯಾರಾದರೂ ಶಾಸಕರು ಒಪ್ಪಿಕೊಳ್ಳುತ್ತಾರೆಯೇ ಕೇಳಿ ಎಂದಾಗ ಎಲ್ಲಾ ಶಾಸಕರು ಸುಳ್ಳು ಎಂದರು.
ಸಕಾಲದಲ್ಲಿ ದುರಸ್ತಿ ಇಲ್ಲ: ನೀವು ಯಾವನಿಗೋ ಹೆದರಿಕೊಂಡು ಇಂತಹ ಮಾಹಿತಿ ಕೊಡುತ್ತೀರಿ ಎಂದು ಈಶ್ವರಪ್ಪ ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲಿ ಆರ್‌ಒ ಪ್ಲಾಂಟ್‌ಗಳ ಸ್ಥಾಪನೆಯ ಗುತ್ತಿಗೆಯನ್ನು ಕೆನರಾ ಬ್ಯಾಂಕ್‌ಗೆ ನೀಡಲಾಗಿದೆ ಅವರು ಸಕಾಲಕ್ಕೆ ದುರಸ್ತಿ ಮಾಡಿಸುತ್ತಿಲ್ಲ ಎಂದು ಅಧಿಕಾರಿಗಳು ದೂರಿದರು. ಗುತ್ತಿಗೆದಾರರು ದುರಸ್ತಿ ಪಡಿಸದೆ ಹೋದರೆ ಎರಡು ಬಾರಿ ನೋಟಿಸ್ ನೀಡಿ ಅವರ ಸೇವೆಯನ್ನು ವಜಾ ಮಾಡಿ ನಿರ್ವಹಣಾ ವೆಚ್ಚ 3 ಸಾವಿರ ರೂ. ಗ್ರಾಪಂಗೆ ನೀಡಿ ದುರಸ್ತಿ ಪಡಿಸಿ ಎಂದು ಸಚಿವರು ತಾಕೀತು ಮಾಡಿದರು.
ಕ್ರಿಮಿನಲ್ ಕೇಸು ಹಾಕಿ: ಬತ್ತಿದ ಕೊಳವೆ ಬಾವಿಗಳಲ್ಲಿನ ಪಂಪ್ ಮೋಟಾರ್ ತೆಗೆಯಲು ಪಟ್ಟಭದ್ರರು ಬಿಡೋದಿಲ್ಲ, ಇದರಿಂದ ಸರ್ಕಾರಕ್ಕೆ ವಂಚನೆಯಾಗುತ್ತಿದೆ. ಇದನ್ನು ತಡೆಯಬೇಕು ಎಂದ ಮಾಜಿ ಸ್ವೀಕರ್ ರಮೇಶ್‌ಕುಮಾರ್ ಅವರ ಸಲಹೆಗೆ ಸ್ಪಂದಿಸಿದ ಅವರು, ಅಡ್ಡಿಪಡಿಸಿದರೆ ಕ್ರಿಮಿನಲ್ ಕೇಸ್ ಮೂಲಕ ಉತ್ತರ ನೀಡಿ ಎಂದು ಎಸ್ಪಿಗೆ ಸೂಚನೆ ನೀಡಿದರು.
ಬತ್ತಿ ಹೋಗುವ ಕೊಳವೆ ಬಾವಿಗಳಿಂದ ಪಂಪ್ ಮೋಟರ್ ವಾಪಸ್ಸು ತರುವುದಿಲ್ಲ. ಬೇಕಾದರೆ ಅಧಿಕಾರಿಗಳನ್ನು ಕೇಳಿ ಅಧಿಕಾರಿಗಳು ಸೇರಿಕೊಂಡು ಇಂತಹ ವ್ಯವಹಾರ ಮಾಡುತ್ತಾರೆ ಎಂದು ರಮೇಶ್ ಕುಮಾರ್ ಆರೋಪಿಸಿದರು.