Advertisement

ಕಟ್ಟಡಗಳ ಅಳತೆ ಪತ್ತೆಯಲ್ಲಿ ಅವ್ಯವಹಾರ?

12:35 AM Oct 31, 2019 | Team Udayavani |

ಬೆಂಗಳೂರು: ಮಾಲೀಕರ ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆಯಡಿ (ಸಲ್ಫ್ ಅಸೆಸ್‌ಮೆಂಟ್‌ ಸ್ಕೀಮ್‌-ಎಸ್‌ಎಎಸ್‌) ಕಟ್ಟಡಗಳ ಅಳತೆಯನ್ನು ತಪ್ಪಾಗಿ ನಮೂದಿಸಿರುವುದು ಪತ್ತೆ ಮಾಡುವ ಉದ್ದೇಶದಿಂದ ಪ್ರಾರಂಭಿಸಿದ್ದ ಟೋಟಲ್‌ ಸ್ಟೇಷನ್‌ ಸರ್ವೇ(ಟಿಎಸ್‌ಎಸ್‌- ಕಟ್ಟಡಗಳ ನಿಖರ ಅಳತೆ ಪತ್ತೆ) ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದರು.

Advertisement

ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಪೂರ್ವ ವಲಯದ ಟೋಟಲ್‌ ಸ್ಟೇಷನ್‌ ಸರ್ವೇ ಬಳಿಕ ಹಲವು ಬೃಹತ್‌ ವಾಣಿಜ್ಯ ಕಟ್ಟಡಗಳು ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿತ್ತು. ಆದರೆ, ಈ ಮೊತ್ತವನ್ನು ವಸೂಲಿ ಮಾಡುವ ಬದಲಾಗಿ, ಕಾನೂನು ಬಾಹಿರವಾಗಿ ತೆರಿಗೆ ಮನ್ನಾ ಮಾಡಿ, ಬಿಬಿಎಂಪಿ ಬೊಕ್ಕಸಕ್ಕೆ 63.31 ಕೋಟಿ ರೂ. ವಂಚಿಸಲಾಗಿದೆ. ಪೂರ್ವ ವಲಯದ ಜಂಟಿ ಆಯುಕ್ತ ರವೀಂದ್ರ ಅವರೇ ನೇರವಾಗಿ ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದರು.

ಬಿಬಿಎಂಪಿಯಲ್ಲಿ ಆದಾಯ ಸೋರಿಕೆಯನ್ನು ತಪ್ಪಿಸುವ ಉದ್ದೇಶದಿಂದಲೇ ಟೋಟಲ್‌ ಸ್ಟೇಷನ್‌ ಸರ್ವೇಯೋಜನೆಯನ್ನು ರೂಪಿಸಲಾಗಿತ್ತು. ಈ ಯೋಜನೆ ಸರ್ಮಪಕವಾಗಿ ಜಾರಿಯಾಗಿದ್ದರೆ ನಿರೀಕ್ಷೆಯಂತೆ ಪಾಲಿಕೆಗೆ ಅದಾಯ ಹೆಚ್ಚುತ್ತಿತ್ತು ಎಂದರು. 2008ರಿಂದ ಬಾಕಿ ಉಳಿಸಿಕೊಂಡಿದ್ದ ತೆರಿಗೆ, ದಂಡ ಮತ್ತು ಬಡ್ಡಿ ಕಟ್ಟಬೇಕೆಂದು ನೋಟಿಸ್‌ ನೀಡಲಾಗಿತ್ತು. ತೆರಿಗೆ ವಂಚಿಸಿದ್ದ, ವಿವಿಧ ಸ್ಟಾರ್‌ ಹೋಟೆಲ್‌ಗ‌ಳು, ವಾಣಿಜ್ಯ ಕಟ್ಟಡಗಳು ಜಂಟಿ ಆಯುಕ್ತರ (ಜೆಸಿ) ಬಳಿ ಮೇಲ್ಮನವಿ ಸಲ್ಲಿಸಿದಾಗ, ಜಂಟಿ ಆಯುಕ್ತರಾದ ರವೀಂದ್ರ ಕಾನೂನು ಬಾಹಿರವಾಗಿ ನಿರ್ಣಯ ಕೈಗೊಂಡು ಪಾಲಿಕೆಗೆ ಕೋಟ್ಯಂತರ ರೂ. ನಷ್ಟ ಮಾಡಿದ್ದಾರೆ.

ದಾಖಲೆಗಳ ಪ್ರಕಾರ ಎಲ್ಲ ಪ್ರಕರಣಗಳಲ್ಲಿ, ರವೀಂದ್ರ ಏಳೆಂಟು ವರ್ಷಗಳ ತೆರಿಗೆ ಮನ್ನಾ ಮಾಡಿದ್ದಾರೆ. ಅಲ್ಲದೆ ಕೆಲವೆಡೆ ಕಟ್ಟಡದ ಅಳತೆ ಪ್ರಮಾಣದಲ್ಲೂ ವಿನಾಯಿತಿ ನೀಡಲಾಗಿದೆ. ಇದೇ ರೀತಿ ಇನ್ನೂ 12 ಪ್ರಕರಣಗಳು ಬೆಳಕಿಗೆ ಬಂದಿದ್ದು, ಎಲ್ಲ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. 8 ಆಸ್ತಿ ಪ್ರಕರಣಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೂರ್ವವಲಯದ ಜಂಟಿ ಆಯುಕ್ತರಾದ ರವೀಂದ್ರ ಅವರನ್ನು ಅಮಾನತು ಮಾಡಿ, ಪ್ರಕರಣದ ತನಿಖೆಯನ್ನು ಎಸಿಬಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.

ಎಂಟು ಕಂಪನಿಗೆ ವಿನಾಯಿತಿ: ಪಾಲಿಕೆಗೆ ನಷ್ಟ
1)”ದೊಮ್ಮಲೂರು ಸಸ್‌ಕೆನ್‌ ಟೆಕ್ನಾಲಜಿ ಲಿ.ಗೆ ಸಂಬಂಧಿಸಿದಂತೆ 2008ನೇ ಏ.4ರಿಂದ 2018ನೇ ಸಾಲಿನ ಮಾ.31ರವರೆಗೆ ಆಸ್ತಿ ತೆರಿಗೆ , ದಂಡ ಮತ್ತು ಬಡ್ಡಿ ಸೇರಿ ಒಟ್ಟು 22,72,49, 567 ರೂ. (ಕೋಟಿಗಳಲ್ಲಿ) ಪಾಲಿಕೆಗೆ ಪಾವತಿಸಬೇಕಾಗಿತ್ತು. ಆದರೆ, ಇದನ್ನು 2013ನೇ ಏ.4ರಿಂದ ಅನ್ವಯವಾಗುವಂತೆ ಬದಲಾಯಿಸಲಾಗಿದ್ದು, 5,89,74,629ರೂ.ಗೆ (ಬಡ್ಡಿ ದಂಡ ಸೇರಿದಂತೆ) ಪಾವತಿಸುವಂತೆ ಆದೇಶಿಸಲಾಗಿದೆ. ಇದರಿಂದ ಪಾಲಿಕೆಗೆ ಸುಮಾರು 16.82 ಕೋಟಿ ನಷ್ಟವಾಗಿದೆ.

Advertisement

2)ಕುಮಾರಕೃಪಾ ರಸ್ತೆಯ ಅಶೋಕ ಹೋಟೆಲ್‌ಗೆ 2008ರ ಏ.1ರಿಂದ 2018ರ ಮಾ.31ರವರೆಗೆ 9,94,51,396ರೂ.ಪಾವತಿಸಬೇಕಾಗಿತ್ತು. ಆದರೆ, ಜಂಟಿ ಆಯುಕ್ತರು ಈ ಸ್ವತ್ತು 1970ರಲ್ಲಿ ನಿರ್ಮಿಸಲಾಗಿದೆ ಎಂದು ಕಾನೂನು ಬಾಹಿರವಾಗಿ ಶೇ.39 ವಿನಾಯಿತಿ ನೀಡಿದ್ದು, ಹೆಚ್ಚುವರಿ ಹಣ ಪಾವತಿಸಿದ್ದಾರೆ ಎಂದು ತೋರಿಸಿದ್ದಾರೆ. ಈ ಹಿಂದೆ ನೀಡಿದ್ದ ಆದೇಶವನ್ನು ವಜಾಗೊಳಿಸಿದ ಕಾರಣ ಪಾಲಿಕೆಗೆ 9,94,51,396 ರೂ. ನಷ್ಟವಾಗಿದೆ.

3)ಎ.ಎಸ್‌.ಕೆ ಬ್ರದರ್ ಲಿ. ಈ ಸಂಸ್ಥೆಯು 2008ರ ಏ.1ರಿಂದ 2018ರ ಮಾ.31ರವರೆಗೆ 8,57,19,582 ರೂ. ಬಾಕಿ ಉಳಿಸಿಕೊಂಡಿತ್ತು. ಇದನ್ನು 2015ರ ಏ.1ರಿಂದ ಅನ್ವಯವಾಗುವಂತೆ ಬದಲಾಯಿಸಲಾಗಿದ್ದು, 18,08,441 ರೂ. ಪಾವತಿಸುವಂತೆ ಸೂಚಿಸಲಾಗಿದೆ. ಅಷ್ಟೇ ಅಲ್ಲ, 8 ವರ್ಷಗಳ ತೆರಿಗೆಯನ್ನೂ ಮಾಫಿ ಮಾಡಲಾಗಿದ್ದು, 8,39,11,141ರೂ. ನಷ್ಟವುಂಟಾಗಿದೆ.

4) ರಾಯಲ್‌ ಆರ್ಕಿಡ್‌ ಹೋಟೆಲ್‌ ಲಿ.2008ರ ಏ.1ರಿಂದ ಅನ್ವಯವಾಗುವಂತೆ 7,6,99,518ರೂ. ಆಸ್ತಿ ತೆರಿಗೆ ಪಾವತಿಸುವಂತೆ ಹಾಗೂ ಶೇ 2ರಷ್ಟು ಹೆಚ್ಚುವರಿ ಮೊತ್ತವನ್ನೂ ಪಾವತಿಸುವಂತೆಯೂ ಸೂಚಿಸಲಾಗಿತ್ತು. ಆದರೆ, 49,32,735 ರೂ. ಮಾತ್ರ ಪಾವತಿಸುವಂತೆ ಆದೇಶಿಸಿ, 6,57,66,783 ರೂ. ನಷ್ಟವುಂಟಾಗಿದೆ.

5) ಎಂ.ಜಿ ರಸ್ತೆಯ ದಿ. ಓಬೆರಾಯ್‌ ಸಂಸ್ಥೆಯು ಆಸ್ತಿ ತೆರಿಗೆ ಮೊತ್ತವನ್ನು 2008ರ ಬದಲಾಗಿ 2015ರಿಂದ ಅನ್ವಯವಾಗುವಂತೆ ಬದಲಾಯಿಸಲಾಗಿದ್ದು, 6,14,19,064 ರೂ. ಬದಲಾಗಿ 1,09,66,983 ರೂ. ಪಾವತಿಸುವಂತೆ ಸೂಚಿಸಿದ್ದು, 7 ವರ್ಷಗಳ ಆಸ್ತಿ ತೆರಿಗೆಯನ್ನು ಮನ್ನಾ ಮಾಡಲಾಗಿದೆ. ಇದರಿಂದ 5,04,52,081 ರೂ. ನಷ್ಟವಾಗಿದೆ.

6) ಪ್ಯಾಲೇಸ್‌ ರಸ್ತೆಯ ಶ್ರೀರಾಮ್‌ ಲೀಲಾ ಡೆವಲಪರ್ ಪ್ರೈ.ಲಿ ಸಂಸ್ಥೆಯು ಮಾ.31ರ 2018ರವರೆಗೆ ಒಟ್ಟು 2,52,38,185 ರೂ. ಇದನ್ನೂ 2015ರಿಂದ ಅನ್ವಯವಾಗುವಂತೆ ಬದಲಾಯಿಸಲಾಗಿದ್ದು, 14,72,572 ರೂ. ತೆರಿಗೆ ನಿಗದಿ ಮಾಡಲಾಗಿದೆ. ಇದರಿಂದ ಏಳು ವರ್ಷಗಳ ಆಸ್ತಿ ತೆರಿಗೆ ಮೊತ್ತ 2,37,65,613 ರೂ. ನಷ್ಟವಾಗಿದೆ.

7)ಈಸ್ಟ್‌ ವೆಸ್ಟ್‌ ಹೋಟೆಲ್‌ ಲಿ. (ದಿ. ಗೇಟ್‌ವೇ ಹೋಟೆಲ್‌) ಸ್ವತ್ತಿಗೆ ಸಂಬಂಧಿಸಿದಂತೆ 2008ರಿಂದ 3,65,76,381ರೂ. ಪಾವತಿಸುವ ಬದಲಿಗೆ 2016ರಿಂದ ಆಸ್ತಿ ತೆರಿಗೆ ಅನ್ವಯಿಸುವಂತೆ ಬದಲಾಯಿಸಲಾಗಿದ್ದು, 69,59,889 ರೂ. ಪಾವತಿಸುವಂತೆ ಜಂಟಿ ಆಯುಕ್ತರು ಅನುಮೋದನೆ ನೀಡಿದ್ದಾರೆ. ಇದರಿಂದ 2,96,16,492 ರೂ. ನಷ್ಟವಾಗಿದೆ.

8) ಎಲೇಕ್ಸೆ„ರ್‌ ಎಂಟರ್‌ ಪ್ರೈಸಸ್‌ ಹಾಗೂ ಹೋಟೆಲ್‌ ಸ್ವತ್ತಿಗೆ ಸಂಬಂಧಿಸಿದಂತೆ 2008ರಿಂದ ಅನ್ವಯವಾಗುವಂತೆ 22,95,32,146 ರೂ. ಬಾಕಿ ಉಳಿದಿದೆ. ಆದರೆ, ಈ ವೇಳೆ ಜಂಟಿ ಆಯುಕ್ತರ ವರ್ಗಾವಣೆಗೆ ಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಇದೇ ತಿಂಗಳ 9ರಂದು ಒಂದೇ ದಿನದಲ್ಲಿ 2008ರ ಬದಲಾಗಿ, 2013ರಿಂದ ಅನ್ವಯವಾಗುವಂತೆ ಬದಲಾಯಿಸಲಾಗಿದೆ. ಈ ಹಿಂದೆ ಮೊತ್ತಕ್ಕೆ ಬದಲಾಗಿ 11,76,79, 968ರೂ. ಪಾವತಿಸುವಂತೆ ಸೂಚನೆ ನೀಡಿದ್ದರಿಂದ ಒಂದೇ ಪ್ರಕರಣದಲ್ಲಿ 11,18,52,176 ರೂ. ಮೊತ್ತ ನಷ್ಟವುಂಟು ಮಾಡಿದ್ದಾರೆ ಎಂದು ಪದ್ಮನಾಭ ರೆಡ್ಡಿ ದೂರಿದರು.

ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹಕ್ಕೆ ನೀಡಿರುವ ನೋಟಿಸ್‌ ಮತ್ತು ಸಂಗ್ರಹವಾಗಿರುವ ಮೊತ್ತಕ್ಕೂ ತಾಳೆಯಾಗದೆ ಇರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನೋಟಿಸ್‌ ನೀಡಿರುವುದೇ ತಪ್ಪಾಗಿದೆಯೋ ಅಥವಾ ಜಂಟಿ ಆಯುಕ್ತರು ತಪ್ಪು ಮಾಡಿದ್ದಾರೋ ಎನ್ನುವುದನ್ನು ತನಿಖೆ ನಡೆಸಲಾಗುವುದು.
-ಬಿ.ಎಚ್‌. ಅನಿಲ್‌ ಕುಮಾರ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next