Advertisement
ಕೊಡಗಿನಲ್ಲಿ ಹತ್ತು ಹಲವು ಜಲಪಾತಗಳಿವೆ ಆದರೆ ಇರ್ಪು ಜಲಪಾತ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ, ಜಿಲ್ಲೆಯಲ್ಲಿ ಇರುವ ಜಲಪಾತಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ ಎಂಬುದು ಇಲ್ಲಿನ ವಿಶೇಷ. ದಕ್ಷಿಣ ಕೊಡಗಿನ ಹಚ್ಚ ಹಸಿರಿನ ಕಾನನದ ನಡುವೆ ಬಂಡೆ ಕಲ್ಲುಗಳನ್ನು ಸೀಳಿಕೊಂಡು ಹಾಲ್ನೊರೆಯಂತೆ ಧುಮ್ಮಿಕ್ಕುವ ಈ ಜಲಪಾತದ ಸೌಂದರ್ಯವನ್ನು ಆಸ್ವಾಧಿಸಲು ಅದೆಷ್ಟೋ ಪ್ರವಾಸಿಗಳು ಬರುತ್ತಾರೆ , ಅಲ್ಲದೆ ಸುಮಾರು 60 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆ ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿಸುವುದರಲ್ಲಿ ಎರಡು ಮಾತಿಲ್ಲ .
ಅಂದಹಾಗೆ ಲಕ್ಷ್ಮಣ ತೀರ್ಥ ಜಲಪಾತದ ಹಿಂದೆ ಒಂದು ಪುರಾಣದ ಕಥೆಯೂ ಇದೆ. ಈ ಜಲಪಾತ ಸೃಷ್ಟಿಯಾಗಿರೋದೇ ಲಕ್ಷ್ಮಣನ ಬಾಣ ಪ್ರಯೋಗದಿಂದ ಎಂದು ಪುರಾಣಗಳಲ್ಲಿ ಹೇಳಲಾಗುತ್ತಿದೆ. ಸೀತಾ ದೇವಿಯ ಹುಡುಕಾಟದಲ್ಲಿದ್ದ ಶ್ರೀರಾಮ ಮತ್ತು ಲಕ್ಷ್ಮಣ ಇದೆ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬಳಲಿದ್ದ ಅಣ್ಣ ಶ್ರೀರಾಮ ತಮ್ಮ ಲಕ್ಷ್ಮಣನಲ್ಲಿ ನೀರು ಕೇಳಿದಾಗ ಲಕ್ಷ್ಮಣ ತನ್ನ ಬತ್ತಳಿಕೆಯಲ್ಲಿದ್ದ ಬಾಣವನ್ನು ಬ್ರಹ್ಮಗಿರಿ ಬೆಟ್ಟಕ್ಕೆ ಪ್ರಯೋಗಿಸಿ ಈ ಜಲಪಾತ ಸೃಷ್ಟಿಯಾಗಿದೆ ಎಂಬುದು ಪ್ರತೀತಿ. ಇರ್ಪು ಜಲಪಾತಕ್ಕೆ ಇನ್ನೊಂದು ಹೆಸರೇ ಲಕ್ಷ್ಮಣ ತೀರ್ಥ :
ಇರ್ಪು ಜಲಪಾತವು ದಕ್ಷಿಣ ಕೊಡಗಿನ ಬ್ರಹ್ಮಗಿರಿ ಅಭಯಾರಣ್ಯದಲ್ಲಿ ಕಾಣಸಿಗುತ್ತದೆ, ಇದನ್ನು ಲಕ್ಷ್ಮಣ ತೀರ್ಥ ಎಂದು ಕೂಡಾ ಕರೆಯಲಾಗುತ್ತದೆ. ಈ ಲಕ್ಷ್ಮಣ ತೀರ್ಥ ನದಿಯು ಕಾವೇರಿ ನದಿಯ ಮೂಲ ಎಂದು ಹೇಳಲಾಗುತ್ತದೆ.
Related Articles
ಇರ್ಪು ಜಲಪಾತಕ್ಕೆ ಹೊಂದಿಕೊಂಡು ರಾಮೇಶ್ವರ ದೇವಾಲಯವೊಂದು ಇದ್ದು, ಇದು ಕೂಡಾ ಶ್ರೀರಾಮನಿಂದಲೇ ಪ್ರತಿಷ್ಠಾಪಿಸಲ್ಪಟ್ಟಿದೆ ಎಂಬುದು ಪ್ರತೀತಿ ಹಾಗಾಗಿ ಶಿವರಾತ್ರಿಯ ಸಂದರ್ಭ ಇಲ್ಲಿಗೆ ಬರುವ ಭಕ್ತರ ಸಂಖ್ಯೆಯು ಗಣನೀಯವಾಗಿರುತ್ತದೆ. ಅಲ್ಲದೆ ಭಕ್ತಾದಿಗಳು ಈ ಜಲಪಾತದ ಪವಿತ್ರ ನೀರಿನಲ್ಲಿ ಮಿಂದೆದ್ದರೆ ಅವರ ಇಷ್ಟಾರ್ಥಗಳು ಈಡೇರುತ್ತದೆಯಂತೆ.
Advertisement
ನೀವು ಬರುವುದಾದರೆ :ನೀವೇನಾದರೂ ಈ ಜಲಪಾತಕ್ಕೆ ಭೇಟಿ ನೀಡುವುದಾದರೆ ವಿರಾಜಪೇಟೆಯಿಂದ ನಾಗರಹೊಳೆ ಮಾರ್ಗವಾಗಿ ಸುಮಾರು 48 ಕಿ.ಮೀ ದೂರದಲ್ಲಿದೆ ಮತ್ತು ಮಡಿಕೇರಿಯಿಂದ ಸುಮಾರು 80 ಕಿ.ಮೀ ದೂರದಲ್ಲಿದೆ ಈ ಇರ್ಪು ಜಲಪಾತ. ಇರ್ಪು ರಾಮೇಶ್ವರ ದೇವಸ್ಥಾನದ ಬಳಿಯ ವರೆಗೆ ವಾಹನದಲ್ಲಿ ಬಂದರೆ ಅಲ್ಲಿ ವಾಹನ ನಿಲ್ಲಿಸಿ ಅಲ್ಲಿ ಅರಣ್ಯ ಇಲಾಖೆಯ ಟಿಕೆಟ್ ಕೌಂಟರ್ ಇದೆ ಅಲ್ಲಿ ಪ್ರವಾಸಿಗರು ಒಬ್ಬರಿಗೆ 50 ರೂ. ಪಾವತಿಸಿ ಸುಮಾರು ಒಂದು ಕಿಲೋ ಮೀಟರ್ ದೂರ ಪ್ರಕೃತಿಯ ಮಡಿಲಲ್ಲಿ ನಡೆದು ಸಾಗಿದರೆ ಇರ್ಪು ಜಲಪಾತ ಸಿಗುತ್ತದೆ. ಅಂದಹಾಗೆ ಸಂಜೆ ಐದು ಗಂಟೆಯವರೆಗೆ ಮಾತ್ರ ಜಲಪಾತ ವೀಕ್ಷಣೆಗೆ ಇಲ್ಲಿ ಅವಕಾಶವಿದೆ. ಎಚ್ಚರ ವಹಿಸಿ : ಮಳೆಗಾಲದಲ್ಲಿ ಬಂಡೆಕಲ್ಲುಗಳು ಜಾರುವುದರಿಂದ ಪ್ರವಾಸಿಗರು ತುಂಬಾ ಎಚ್ಚರ ವಹಿಸುವುದು ಅವಶ್ಯಕ. ಜೊತೆಗೆ ಪರಿಸರದ ಕಾಳಜಿ ಕೂಡ ನಿಮ್ಮ ಮೇಲಿರಲಿ. ಪರಿಸರ ರಕ್ಷ ಣೆ ನಮ್ಮ ನಮ್ಮೆಲ್ಲರ ಹೊಣೆ… – ಸುಧೀರ್ ಆಚಾರ್ಯ