Advertisement

ಕಬ್ಬಿಣದ ಕಡಲೆಯಾದ ಸಂಪುಟ ವಿಸ್ತರಣೆ

07:00 AM May 21, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರ ಆಯ್ಕೆ ಎರಡೂ ಪಕ್ಷಗಳಿಗೆ ಸವಾಲಿನ ಪ್ರಶ್ನೆಯಾಗಿದ್ದು, ಜಾತಿ, ಪ್ರಾದೇಶಿಕವಾರು ಲೆಕ್ಕಾಚಾರದೊಂದಿಗೆ ಸಚಿವರನ್ನು ಆಯ್ಕೆ ಮಾಡುವ ಕಸರತ್ತು ನಡೆಸಬೇಕಾಗಿದೆ.

Advertisement

ಪ್ರಮುಖವಾಗಿ ಒಕ್ಕಲಿಗರು (ರೆಡ್ಡಿ ಸಮುದಾಯ ಸೇರಿ) ಮತ್ತು ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಸಚಿವ
ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. ಜತೆಗೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಕೂಡ ಸಚಿವ ಸ್ಥಾನಕ್ಕಾಗಿ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇದರೊಂದಿಗೆ ಪ್ರಾದೇಶಿಕವಾರು ಅವಕಾಶಗಳನ್ನೂ ನೀಡಬೇಕಾಗಿರುವುದರಿಂದ ಲೆಕ್ಕಾಚಾರ ತಲೆಬಿಸಿಗೆ
ಕಾರಣವಾಗಿದೆ. ಸಂಪುಟದಲ್ಲಿ ಮುಖ್ಯಮಂತ್ರಿ ಹೊರತಾಗಿ 33 ಸಚಿವರಿಗೆ ಅವಕಾಶವಿದೆ. ಈ ಪೈಕಿ ಕಾಂಗ್ರೆಸ್‌ಗೆ 20
ಮತ್ತು ಜೆಡಿಎಸ್‌ಗೆ 13 ಸ್ಥಾನ ಲಭ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರಲ್ಲೇ ಹಳೇ ಮೈಸೂರು, ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಗೆ ಹಂಚಿಕೆ ಮಾಡಬೇಕು. ಇದರ ಜತೆ ಜತೆಗೆ ಜಾತಿವಾರು ಲೆಕ್ಕಾಚಾರವನ್ನೂ ನೋಡಬೇಕು.

ಜೆಡಿಎಸ್‌ನಲ್ಲಿ ಒಕ್ಕಲಿಗರಿಗೆ ಆದ್ಯತೆ: ಜೆಡಿಎಸ್‌ನಲ್ಲಿ ಅತಿ ಹೆಚ್ಚು ಒಕ್ಕಲಿಗರು ಗೆದ್ದು ಬಂದಿರುವುದರಿಂದ 13 ಸ್ಥಾನಗಳ ಪೈಕಿ ಹೆಚ್ಚಿನ ಸ್ಥಾನಗಳನ್ನು ಅವರಿಗೆ ನೀಡಬೇಕಾಗುತ್ತದೆ. ಎಚ್‌.ಡಿ.ರೇವಣ್ಣ, ಎ.ಟಿ.ರಾಮಸ್ವಾಮಿ, ಜಿ.ಟಿ.
ದೇವೇಗೌಡ, ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಿವಲಿಂಗೇಗೌಡ, ಸಾ.ರಾ.ಮಹೇಶ್‌, ಸತ್ಯನಾರಾಯಣ ಒಕ್ಕಲಿಗ ಸಮುದಾಯದಿಂದ ಮುಂಚೂಣಿಯಲ್ಲಿದ್ದಾರೆ.

ಹಿಂದುಳಿದ ವರ್ಗದ ಕುರುಬ ಸಮುದಾಯದಿಂದ ಎಚ್‌.ವಿಶ್ವನಾಥ್‌, ಬಂಡೆಪ್ಪ ಕಾಶಂಪೂರ್‌, ಲಿಂಗಾಯತ ಸಮುದಾಯದಿಂದ ವಿಧಾನ ಪರಿಷತ್‌ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಪರಿಶಿಷ್ಟ ಜಾತಿಯಿಂದ ಎಚ್‌.
ಕೆ.ಕುಮಾರಸ್ವಾಮಿ ಮತ್ತು ಬಿಎಸ್‌ಪಿಯಿಂದ ಆಯ್ಕೆಯಾಗಿರುವ ಮಹೇಶ್‌ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಪಕ್ಷದಲ್ಲಿ ಅಲ್ಪಸಂಖ್ಯಾತರಾರೂ ಗೆಲ್ಲದೇ ಇರುವುದರಿಂದ ಎರಡು ಬಾರಿ ರಾಜ್ಯಸಭೆಗೆ ಸ್ಪರ್ಧಿಸಿ ಸೋತಿರುವ ಬಿ.ಎಂ.ಫಾರೂಕ್‌ ಅವರನ್ನು ನೇಮಿಸುವ ಬಗ್ಗೆ ಪಕ್ಷ ಚಿಂತನೆ ನಡೆಸಿದೆ.

Advertisement

ಕಾಂಗ್ರೆಸ್‌ನಲ್ಲೂ ಇದೇ ಸ್ಥಿತಿ: ಇನ್ನು ಕಾಂಗ್ರೆಸ್‌ ನಲ್ಲೂ ಸಚಿವಾಕಾಂಕ್ಷಿಗಳ ಪರಿಸ್ಥಿತಿ ಇದೇ ರೀತಿ. ಒಕ್ಕಲಿಗ ಸಮುದಾಯದಿಂದ ಡಿ.ಕೆ.ಶಿವಕುಮಾರ್‌, ಕೃಷ್ಣಬೈರೇಗೌಡ, ಎನ್‌.ಎಚ್‌.ಶಿವಶಂಕರರೆಡ್ಡಿ ಸ್ಪರ್ಧೆಯಲ್ಲಿದ್ದಾರೆ. ಪರಿಶಿಷ್ಟ ಜಾತಿಯಿಂದ ಡಾ.ಜಿ.ಪರಮೇಶ್ವರ್‌, ಪರಿಶಿಷ್ಟ ಪಂಗಡದಿಂದ ಸತೀಶ್‌ ಜಾರಕಿಹೊಳಿ, ರಮೇಶ್‌ ಜಾರಕಿಹೊಳಿ,
ಬ್ರಾಹ್ಮಣ ಸಮುದಾಯದಿಂದ ರಮೇಶ್‌ ಕುಮಾರ್‌, ಆರ್‌.ವಿ.ದೇಶಪಾಂಡೆ, ಅಲ್ಪಸಂಖ್ಯಾತ ಸಮುದಾಯದಿಂದ ರೋಷನ್‌ ಬೇಗ್‌, ಕೆ.ಜೆ.ಜಾರ್ಜ್‌, ಜಮೀರ್‌ ಅಹಮದ್‌, ತನ್ವೀರ್‌ ಸೇs…,ಯು.ಟಿ.ಖಾದರ್‌ ಇದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದ ಮಧ್ಯೆಯೂ ಕಾಂಗ್ರೆಸ್‌ನಲ್ಲಿ 16 ಮಂದಿ ಈ ಸಮುದಾಯದಿಂದ ಗೆದ್ದು ಬಂದಿದ್ದಾರೆ. ಈ ಪೈಕಿ ಎಂ.ಬಿ.ಪಾಟೀಲ್‌, ಶಾಮನೂರು ಶಿವಶಂಕರಪ್ಪ, ಎಚ್‌.ಕೆ.ಪಾಟೀಲ್‌, ಎಸ್‌.ಆರ್‌.ಪಾಟೀಲ್‌, ರಾಜಶೇಖರ ಪಾಟೀಲ್‌ ಹುಮ್ನಾಬಾದ್‌, ಲಕ್ಷ್ಮೀ ಹೆಬ್ಟಾಳ್ಕರ್‌ ಹೆಸರು ಮುಂಚೂಣಿಯಲ್ಲಿದೆ. ಅಲ್ಲದೆ, ಕುರುಬ ಸಮುದಾಯದ ಬೈರತಿ ಬಸವರಾಜ್‌, ಸಿ.ಎಸ್‌.ಶಿವಳ್ಳಿ, ಎಚ್‌.ಎಂ.ರೇವಣ್ಣ ಹೆಸರು ಕೇಳಿಬರುತ್ತಿದೆ. ಈ ಮಧ್ಯೆ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿರುವ ಮುಳಬಾಗಿಲಿನ ಪಕ್ಷೇತರ ಶಾಸಕ ನಾಗೇಶ್‌ ಮತ್ತು ರಾಣೆಬೆನ್ನೂರು ಕ್ಷೇತ್ರದಲ್ಲಿ
ಕೆಪಿಜೆಪಿಯಿಂದ ಗೆದ್ದಿರುವ ಆರ್‌.ಶಂಕರ್‌ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಈ ಬಾರಿ ಅಲ್ಪಸಂಖ್ಯಾತರು ಕಾಂಗ್ರೆಸ್‌ ಪಕ್ಷವನ್ನು ಸಂಪೂರ್ಣ ಬೆಂಬಲಿಸಿರುವುದರಿಂದ ಆ ಸಮುದಾಯದ ಸಚಿವರಿಗೆ ಸ್ಥಾನಮಾನ ನೀಡಲೇ ಬೇಕಾಗುತ್ತದೆ. ಪ್ರಾದೇಶಿಕವಾರು ಪರಿಗಣಿಸಿದಾಗ ಕರಾವಳಿ ಭಾಗದಿಂದ ಆಯ್ಕೆಯಾಗಿರುವ ಏಕೈಕ ಅಲ್ಪಸಂಖ್ಯಾತ ಶಾಸಕ ಯು.ಟಿ.ಖಾದರ್‌ ಅವರನ್ನು ಪರಿಗಣಿಸಬೇಕಾಗುತ್ತದೆ. ಅತಿ ಹೆಚ್ಚು ಬಾರಿ ಆಯ್ಕೆಯಾಗಿರುವ ರೋಷನ್‌ ಬೇಗ್‌, ಕೆ.ಜೆ. ಜಾರ್ಜ್‌, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಗೆದ್ದ ಜಮೀರ್‌ ಅಹಮದ್‌ ಅವರನ್ನು ಕಡೆಗಣಿಸಿದರೆ ಸಮಸ್ಯೆಯಾಗಲಿದೆ. ಇದು ಕಾಂಗ್ರೆಸ್‌ನ ತಲೆತಿನ್ನುತ್ತಿದೆ.

ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ 
ಜೆಡಿಎಸ್‌ನಿಂದ ಒಕ್ಕಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದರಿಂದ ಆ ಪಕ್ಷ ಸಮುದಾಯಕ್ಕೆ ಅತಿ ಹೆಚ್ಚು ಸಚಿವ ಸ್ಥಾನ ನೀಡಲೇ ಬೇಕು. ಇನ್ನು ಕಾಂಗ್ರೆಸ್‌ನಲ್ಲಿ ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ನೀಡಿದರೆ ಇತರೆ ಸಮುದಾಯದವರು ತಿರುಗಿಬೀಳಬಹುದು. ಈಗಾಗಲೇ ಕಾಂಗ್ರೆಸ್‌ನಲ್ಲಿ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಕೇವಲ ಜಾತಿವಾರು ಲೆಕ್ಕಾಚಾರ ನೋಡಿದರೆ ಪ್ರಾದೇಶಿಕವಾರು ಲೆಕ್ಕಾಚಾರ ಏರುಪೇರಾಗುತ್ತದೆ. ಇದು ಕೂಡ ಪ್ರತೀಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಚಿವರ ಆಯ್ಕೆ ಎರಡೂ ಪಕ್ಷಗಳಿಗೆ ಕಬ್ಬಿಣದ ಕಡಲೆಯಾಗುವ ಪರಿಸ್ಥಿತಿ ಕಾಣಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next