ಇಂಫಾಲ : ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮೀಳಾ ಈ ವರ್ಷ ಜುಲೈ ತಿಂಗಳಲ್ಲಿ ತಮ್ಮ ದೀರ್ಘಕಾಲದ ಬ್ರಿಟಿಷ್ ಜತೆಗಾರನಾಗಿರುವ ಡೆಸ್ಮಂಡ್ ಕುಟಿನ್ಹೋ ಅವರನ್ನು ವಿವಾಹವಾಗಲಿದ್ದಾರೆ.
“ನಾವು ಮದುವೆ ದಿನಾಂಕವನ್ನು ಇನ್ನೂ ಗೊತ್ತುಪಡಿಸಿಲ್ಲ. ಆದರೆ ಜುಲೈ ಅಂತ್ಯದೊಳಗೆ ತಮಿಳು ನಾಡಿನಲ್ಲಿ ಮದುವೆಯಾಗಲು ನಿರ್ಧರಿಸಿದ್ದೇವೆ’ ಎಂದು ಶರ್ಮೀಲಾ ಅವರ ತಮಿಳುನಾಡಿನ ಪೆರುಮಾಳಮಲೈ ಎಂಬಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
ಶರ್ಮೀಳಾ ಅವರು ಮದುವೆಯಾಗಲಿರುವ ಡೆಸ್ಮಂಡ್ ಅವರ ಕುಟುಂಬದವರು ಮೂಲತಃ ಗೋವೆಯವರು. ಡೆಸ್ಮಂಡ್ ಹುಟ್ಟಿದ್ದು ತಾಂಜಾನಿಯಾದಲ್ಲಿ. ಅನಂತರದಲ್ಲಿ ಬ್ರಿಟನ್‌ಗೆ ವಲಸೆ ಹೋದ ಅವರು ಆ ಬಳಿಕ ಬ್ರಿಟಿಷ್ ಪೌರತ್ವ ಪಡೆದರು ಎಂದು ಶರ್ಮೀಳಾ ತಿಳಿಸಿದ್ದಾರೆ.
“ನಮ್ಮ ಮದುವೆ ಬಗ್ಗೆ ನಾನು ನನ್ನ ಕುಟುಂಬದವರಿಗೆ ಇನ್ನೂ ತಿಳಿಸಿಲ್ಲ; ಮುಖ್ಯವಾಗಿ ನನ್ನ ತಾಯಿಗೆ. ಆದರೆ ನಾನು ಬೇಗನೆ ಈ ಬಗ್ಗೆ ಮನೆಯವರಿಗೆ, ತಾಯಿಗೆ ತಿಳಿಸುವೆ. ಮದುವೆ ಗೆ ಕೆಲವೊಂದು ನಿಕಟ ಸ್ನೇಹಿತರನ್ನು ಹಾಗೂ ಹಿತೈಷಿಗಳನ್ನು ಆಹ್ವಾನಿಸುವೆ’ ಎಂದು ಶರ್ಮೀಳಾ ಹೇಳಿದರು.
ಅಸ್ಸಾಂನಲ್ಲಿ ಚಾಲ್ತಿಯಲ್ಲಿರುವ ವಿವಾದಾತ್ಮಾಕ ಸಶಸ್ತ್ರ ಪಡೆಗಳ ವಿಶೇಷಾಧಿಕಾರಗಳ ಕಾಯಿದೆಯ ವಿರುದ್ಧ ತಮ್ಮ 16 ವರ್ಷಗಳ ನಿರಶನ ಸತ್ಯಾಗ್ರಹವನ್ನು 2016ರ ಆಗಸ್ಟ್ 9ರಂದು ಕೊನೆಗೊಳಿಸಿದ್ದ ಶರ್ಮೀಳಾ ಆ ಬಳಿಕ ಪೀಪಲ್ಸ್ ರಿಸರ್ಜೆನ್ಸ್ ಆ್ಯಂಡ್ ಜಸ್ಟಿಸ್ ಅಲಾಯನ್ಸ್ (ಪಿಆರ್‌ಜೆಎ) ಎಂಬ ರಾಜಕೀಯ ಪಕ್ಷವನ್ನು ಆರಂಭಿಸಿದ್ದರು. ಮಾಜಿ ಮುಖ್ಯಮಂತ್ರಿ ಓಕ್ರಮ್ ಇಬೋಬಿ ಸಿಂಗ್ ವಿರುದ್ಧ ತೌಬಾಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಶರ್ಮೀಳಾಗೆ ಕೇವಲ 90 ಮತಗಳು ಮಾತ್ರವೇ ಸಿಕ್ಕಿದ್ದವು !