ಚಿಕ್ಕಮಗಳೂರು: ಮಧ್ಯಪ್ರದೇಶದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬೇಕಾಗಿರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರು ನ.15ರಂದು ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರು ನನಗೆ ಎರಡು ಬಾರಿ ಕರೆ ಮಾಡಿ ಮಾತನಾಡಿದ್ದಾರೆ. ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಆದರೆ ನ.15ಕ್ಕೆ ನಾನು ರಾಜ್ಯದಲ್ಲಿ ಇರುವುದಿಲ್ಲ. ಮಧ್ಯಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿ ಪ್ರಚಾರಕ್ಕೆ ಹೋಗಬೇಕಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ ಎಂದು ವಿಜಯೇಂದ್ರ ಅವರಿಗೆ ತಿಳಿಸಿದ್ದೇನೆ ಎಂದರು.
ರಾಜ್ಯಾಧ್ಯಕ್ಷರು ಎನ್ನುವುದು ಒಂದು ಸ್ಥಾನ. ಅದಕ್ಕೆ ಕೊಡಬೇಕಾದ ಗೌರವವನ್ನು ಕೊಟ್ಟೇ ಕೊಡುತ್ತೇವೆ. ನ್ಯಾಯಪೀಠ ಬದಲಾಗಲ್ಲ, ನ್ಯಾಯಾಧೀಶರು ಬದಲಾಗುತ್ತಾರೆ. ನ್ಯಾಯಪೀಠಕ್ಕೆ ಎಲ್ಲರೂ ಗೌರವ ಕೊಡಬೇಕು, ನಾವೂ ಗೌರವ ಕೊಡುತ್ತೇವೆ. ನಾನು ಪಕ್ಷದ ಲಕ್ಷ್ಮಣ ರೇಖೆಯನ್ನು ಎಂದೂ ದಾಟಿಲ್ಲ. 20 ವರ್ಷ ಶಾಸಕನಾಗಿದ್ದೆ. 35 ವರ್ಷ ಕಾರ್ಯಕರ್ತನಾಗಿದ್ದೆ. ಈ ಅವಧಿಯಲ್ಲಿ ಒಮ್ಮೆಯೂ ಪಕ್ಷದ ಲಕ್ಷ್ಮಣ ರೇಖೆಯನ್ನು ಎಂದೂ ದಾಟಿಲ್ಲ. ಜಗಳವಾಡಿದ್ದರೂ ಪಕ್ಷದೊಳಗೆ ಜಗಳ ಆಡಿದ್ದೇವೆ. ಈ ಜಗಳ ನಮ್ಮ ಮನೆಯೊಳಗಿನ ಜಗಳ. ಬೇರೆಯವರ ಮನೆಯಲ್ಲಿ ಕೂತು, ನಮ್ಮ ಮನೆಯ ಸಮಸ್ಯೆ ಬಗೆಹರಿಸಿ ಎಂದು ಯಾವತ್ತೂ ಕೇಳಿಲ್ಲ. ನಮ್ಮ ಮನೆಯ ಸಮಸ್ಯೆಯನ್ನು ಬಗೆಹರಿಸಿ ಎಂದು ಮನೆಯೊಳಗಿದ್ದುಕೊಂಡೇ ಕೇಳ್ಳೋದು. ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯ ಇದ್ದರೂ ಗುರಿ ಒಂದೇ. ಕೇಂದ್ರದಲ್ಲಿ ಮೋದಿ ಸರ್ಕಾರ ಮತ್ತೆ ಬರಬೇಕು ಎನ್ನುವುದೇ ಆಗಿದೆ ಎಂದರು.
ಬೇರೆ ಪಕ್ಷ ಸೇರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಬೇಡ ಎಂದು ಅನಿಸಿದರೆ ಬಿಜೆಪಿ ಬಿಟ್ಟು ಇರುತ್ತೇನೆಯೇ ಹೊರತು ಬೇರೆ ಪಕ್ಷ ಸೇರಿ ರಾಜಕೀಯ ಮಾಡುವುದೇ ಇಲ್ಲ. ರಾಜಕೀಯ ಬಿಟ್ಟರೂ ನಾನು ಬೇರೆ ಪಕ್ಷಕ್ಕೆ ಮತ ಕೇಳಲೂ ಆಗುವುದಿಲ್ಲ. ಬಿಜೆಪಿಗೇ ಮತ ಕೇಳಬೇಕು. ಯಾವ ಜವಾಬ್ದಾರಿ ಇಲ್ಲದಿದ್ದರೂ ಶಕ್ತಿ ಮೀರಿ ಮೋದಿಗಾಗಿ ಬಿಜೆಪಿಗೆ ಮತ ಕೇಳುತ್ತೇನೆ ಎಂದ ಅವರು, ನನಗೆ ಅ ಧಿಕಾರ ಕೊಟ್ರೆ ಮಾತ್ರ ಬಿಜೆಪಿ, ಕೊಡದಿದ್ದರೆ ಬಿಜೆಪಿ ಬೇಡ ಎಂದು ನಾನು ಹೇಳಲ್ಲ. ಬಿಜೆಪಿ ಸೇರಿದಾಗಿನಿಂದ ಓಟು ನೀಡಿರುವುದು ಬಿಜೆಪಿಗೆ, ಓಟು ಕೇಳಿರುವುದೂ ಬಿಜೆಪಿಗೇ ಎಂದರು.
ರಾಜ್ಯ ಸುತ್ತಲಿ ಬಿಡಿ..
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೀಡಿರುವ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ರವಿ, ನಾನು ಎಲ್ಲರ ಹೇಳಿಕೆಗೂ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಹೇಳಿಕೆಗೆ ನಾನೇನು ಹೇಳಲು ಆಗುವುದಿಲ್ಲ. ಅದು ಅವರ ಭಾವನೆ, ಅದನ್ನವರು ಹೇಳಿದ್ದಾರೆ. ಅವರು ರಾಜ್ಯ ಸುತ್ತಬಹುದು. ಅವರಿಗೆ ಸಾಮರ್ಥ್ಯ ಇದೆ, ಸುತ್ತಲಿ ಬಿಡಿ ಎಂದರು.