ಲಂಡನ್ : ಗಾಜಾದಲ್ಲಿ ಇಸ್ರೇಲ್-ಹಮಾಸ್ ಯುದ್ಧದ ನಡುವೆ ಐರ್ಲೆಂಡ್, ನಾರ್ವೆ ಮತ್ತು ಸ್ಪೇನ್ ಪ್ಯಾಲೆಸ್ತೀನ್ ಅನ್ನು ಔಪಚಾರಿಕವಾಗಿ ಒಂದು ರಾಷ್ಟ್ರವೆಂದು ಗುರುತಿಸುವ ನಿರ್ಧಾರವನ್ನು ಪ್ರಕಟಿಸಿವೆ. ನಿರ್ಧಾರದ ಪರಿಣಾಮವಾಗಿ,ಇಸ್ರೇಲ್ ತತ್ ಕ್ಷಣವೇ ಜಾರಿಗೆ ಬರುವಂತೆ ಐರ್ಲೆಂಡ್ ಮತ್ತು ನಾರ್ವೆಯಿಂದ ತನ್ನ ರಾಯಭಾರಿಗಳನ್ನು ಹಿಂಪಡೆದಿದೆ.
ಬುಧವಾರ, ಇಸ್ರೇಲಿ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್, “ನಾನು ಐರ್ಲೆಂಡ್ ಮತ್ತು ನಾರ್ವೆಗೆ ಸ್ಪಷ್ಟ ಮತ್ತು ನಿಸ್ಸಂದಿಗ್ಧವಾದ ಸಂದೇಶವನ್ನು ಕಳುಹಿಸುತ್ತಿದ್ದೇನೆ. ಇಸ್ರೇಲ್ ತನ್ನ ಸಾರ್ವಭೌಮತ್ವವನ್ನು ದುರ್ಬಲಗೊಳಿಸುವ ಮತ್ತು ಅದರ ಭದ್ರತೆಗೆ ಅಪಾಯವನ್ನುಂಟುಮಾಡುವವರ ಎದುರು ಮೌನವಾಗಿರುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.
ಮೇ 28 ರಿಂದ ಪ್ಯಾಲೇಸ್ತೀನ್ ರಾಷ್ಟ್ರ ಗುರುತಿಸುತ್ತದೆ ಎಂದು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಪ್ರಕಟಣೆಯಲ್ಲಿ ಹೇಳಿರುವ ಬಗ್ಗೆಯೂ ಕಾಟ್ಜ್ ಎಚ್ಚರಿಕೆ ನೀಡಿ” ಸ್ಪೇನ್ ವಿರುದ್ಧ ಕೂಡ ಇದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಲಾಗುವುದು” ಎಂದು ಕಿಡಿ ಕಾರಿದ್ದಾರೆ.
“ಐರಿಶ್-ನಾರ್ವೇಜಿಯನ್ ಮೂರ್ಖತನದಿಂದ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ಗುರಿಗಳನ್ನು ಸಾಧಿಸಲು ನಾವು ನಿರ್ಧರಿಸಿದ್ದೇವೆ. ನಮ್ಮ ನಾಗರಿಕರಿಗೆ ಭದ್ರತೆಯನ್ನು ಮರುಸ್ಥಾಪಿಸುವುದು, ಹಮಾಸ್ ಅನ್ನು ಕಿತ್ತುಹಾಕುವುದು ಮತ್ತು ಒತ್ತೆಯಾಳುಗಳನ್ನು ಮನೆಗೆ ಕರೆತರುವುದಕ್ಕಿಂತ ಬೇರೆ ಯಾವುದೇ ಕಾರಣಗಳಿಲ್ಲ” ಎಂದು ಕಾಟ್ಜ್ ಹೇಳಿದ್ದಾರೆ.
ಇದನ್ನೂ ಓದಿ: West Bank ಮೇಲೆ ಇಸ್ರೇಲ್ ದಾಳಿ; ವೈದ್ಯ ಸೇರಿ ಕನಿಷ್ಠ 7 ಮೃತ್ಯು