Advertisement
ಅಹ್ಮದ್ ತಲೆಗೆ ಕೈಯಿಟ್ಟ. “”ನಾನು ಜ್ಯೋತಿಷ ಹೇಳುವುದೆ? ನನಗೆ ಅದರ ಯಾವ ಜ್ಞಾನವೂ ಇಲ್ಲ. ಸುಮ್ಮನೆ ನನ್ನನ್ನು ಒತ್ತಾಯಿಸಬೇಡ” ಎಂದು ಬೇಡಿಕೊಂಡ. ಆದರೆ, ಸತ್ತಾರಾ ಕಿವಿಗೊಡಲಿಲ್ಲ. “”ನೀನು ಧಾರಾಳವಾಗಿ ಹಣ ಸಂಪಾದಿಸಲು ಜ್ಯೋತಿಷಿಯಾಗಬೇಕು. ತಪ್ಪಿದರೆ ನಾನು ನಿನ್ನನ್ನು ತೊರೆದು ತವರುಮನೆಗೆ ಹೋಗಿಬಿಡುತ್ತೇನೆ” ಎಂದು ಹಟ ಹಿಡಿದಳು. ಮಾತ್ರವಲ್ಲ, ತನ್ನ ಗಂಡ ಒಬ್ಬ ಮಂತ್ರವಾದಿಯಿಂದ ಜ್ಯೋತಿಷ ವಿದ್ಯೆ ಕಲಿತು ಭೂತ, ಭವಿಷ್ಯ, ವರ್ತಮಾನಗಳನ್ನು ಹೇಳಬಲ್ಲ ಎಂದು ಎಲ್ಲರಲ್ಲಿಯೂ ಪ್ರಚಾರ ಮಾಡಿಬಂದಳು.
Related Articles
Advertisement
ಅಹ್ಮದ್, “”ನೀನು ರತ್ನವನ್ನು ತೆಗೆದುಕೊಂಡು ಹೋಗಿ ರಾಜನ ಹಾಸಿಗೆಯ ಕೆಳಗೆ ಇರಿಸಿಬಿಡು. ಉಳಿದುದನ್ನು ನಾನು ನೋಡಿಕೊಳ್ಳುತ್ತೇನೆ”’ ಎಂದು ಹೇಳಿ ಅವಳು ಕೊಟ್ಟ ನಾಣ್ಯಗಳನ್ನು ತೆಗೆದುಕೊಂಡ. ಬೆಳಗಾಯಿತು. ರಾಜನು ಅವನ ಭೇಟಿಗೆ ಬಂದು, “”ಕದ್ದವರ ವಿಷಯ ಗೊತ್ತಾಯಿತೆ?” ಎಂದು ಕೇಳಿದ. ಅಹ್ಮದ್ ಮುಗುಳ್ನಗುತ್ತ, “”ಪ್ರಭುಗಳೇ, ಕೊಡಲಿ ಹೆಗಲಲ್ಲಿರಿಸಿಕೊಂಡು ಹುಡುಕಿದವರಂತೆ ಮಾಡುತ್ತೀರಲ್ಲ! ರತ್ನ ನಿಮ್ಮ ಹಾಸಿಗೆಯ ಕೆಳಗಿರುವಂತೆ ತೋರುತ್ತಿದೆ” ಎಂದು ಹೇಳಿದ. ರಾಜನು ಹುಡುಕಿದಾಗ ರತ್ನವು ಅಲ್ಲಿ ಪತ್ತೆಯಾಯಿತು. ಅವನು ಸಂತೋಷದಿಂದ ಅಹ್ಮದನಿಗೆ ಒಂದು ಕುದುರೆಯನ್ನಲ್ಲದೆ ಐನೂರು ಚಿನ್ನದ ನಾಣ್ಯಗಳನ್ನು ಕೊಟ್ಟು ಕಳುಹಿಸಿದ.
ಕುದುರೆಯ ಮೇಲೆ ಕುಳಿತು ಅಹ್ಮದ್ ಮನೆಗೆ ಬರುವಾಗ ಶ್ರೀಮಂತ ಹೆಂಗಸೊಬ್ಬಳು ತನ್ನ ದಾಸಿಯರೊಂದಿಗೆ ಓಡೋಡಿ ಬಂದು ಅವನನ್ನು ತಡೆದು ನಿಲ್ಲಿಸಿದಳು. “”ನನ್ನ ಹಲವು ರತ್ನಾಭರಣಗಳು ನಾಪತ್ತೆಯಾಗಿವೆ. ಈ ದಾಸಿಯರ ಪೈಕಿ ಯಾರೋ ಕದ್ದಿರಬೇಕು. ಅರಮನೆಯ ರತ್ನವನ್ನು ನೀನು ಸುಲಭವಾಗಿ ಕಂಡುಹಿಡಿದ ವಿಷಯ ಎಲ್ಲರಿಗೂ ಗೊತ್ತಾಗಿದೆ. ನನ್ನ ಆಭರಣಗಳನ್ನೂ ಪತ್ತೆ ಮಾಡಿಕೊಡು” ಎಂದು ಕೇಳಿದಳು.
ತನಗೆ ಏನೂ ತಿಳಿಯದು ಎಂದು ಅಹ್ಮದ್ ಹೇಳಿದರೆ ಹೆಂಗಸು ನಂಬುವ ಸ್ಥಿತಿಯಲ್ಲಿರಲಿಲ್ಲ. ಅವಳಿಂದ ಪಾರಾಗಲು ಅವನು ಒಂದು ಉಪಾಯ ಮಾಡಿ, “”ಹೀಗೆಲ್ಲ ಅರ್ಧ ದಾರಿಯಲ್ಲಿ ನಿಲ್ಲಿಸಿ ಕೇಳಿದರೆ ಹೇಳುವುದು ಸಾಧ್ಯವಿಲ್ಲ. ಸ್ನಾನ ಮಾಡಿ, ಫಲ, ಪುಷ್ಪ$ ಕಾಣಿಕೆಯೊಂದಿಗೆ ನನ್ನ ಮನೆಗೆ ಬಂದರೆ ಹೇಳುತ್ತೇನೆ” ಎಂದು ಕಳುಹಿಸಿದ. ಅವಳಿಂದ ಪಾರಾಗಿ ಮನೆ ಸೇರಿಕೊಂಡ. ಆದರೆ ಸ್ವಲ್ಪ$ ಹೊತ್ತಿನಲ್ಲಿ ಹೆಂಗಸು ಕಾಣಿಕೆಗಳೊಂದಿಗೆ ಅವನ ಮನೆಗೆ ಬಂದುಬಿಟ್ಟಳು. “”ಕಣ್ಣಿಗೆ ಕಂಡಂತೆ ಹೇಳಿಬಿಟ್ಟೆಯಲ್ಲ! ನಾನು ಸ್ನಾನದ ಮನೆಯಲ್ಲಿ ಆಭರಣಗಳನ್ನು ತೆಗೆದಿರಿಸಿದ್ದು ನೆನಪಿರಲಿಲ್ಲ. ನಿನ್ನ ಮಾತಿನಂತೆ ಸ್ನಾನ ಮಾಡಲು ಹೋದಾಗ ಅದೆಲ್ಲವೂ ಕಾಣಿಸಿದವು. ಸುಮ್ಮನೆ ದಾಸಿಯರ ಮೇಲೆ ಅನುಮಾನಿಸಿದೆ” ಎಂದು ಹೇಳಿ ಅವನಿಗೆ ಕಾಣಿಕೆಗಳನ್ನು ನೀಡಿ ಹೊರಟುಹೋದಳು.
ಒಂದೆರಡು ದಿನಗಳು ಕಳೆದುಹೋದವು. ರಾಜನ ಅರಮನೆಯಿಂದ ಮತ್ತೆ ಕರೆ ಬಂತು. ಅಹ್ಮದ್ ಅಲ್ಲಿಗೆ ಹೋದ. “”ನಿನ್ನೆ ರಾತ್ರೆ ಅರಮನೆಯ ಖಜಾನೆಗೆ ನುಗ್ಗಿ ಚಿನ್ನದ ನಾಣ್ಯಗಳು ತುಂಬಿದ್ದ ನಲುವತ್ತು ಮೂಟೆಗಳನ್ನು ಕಳ್ಳರು ಅಪಹರಿಸಿದ್ದಾರೆ. ನಲುವತ್ತು ಮಂದಿ ಕಳ್ಳರು ಬಂದಿರಬಹುದು. ಅವರನ್ನು ಪತ್ತೆ ಮಾಡಬೇಕು” ಎಂದು ಆಜಾnಪಿಸಿದ. ಅಹ್ಮದನಿಗೆ ಮೈಯೆಲ್ಲ ಬೆವತಿತು. ತನಗೆ ಜ್ಯೋತಿಷ ತಿಳಿಯದೆಂದು ಹೇಳಿದರೆ ರಾಜನು ನಂಬಲಾರ. ಕಳ್ಳರ ಪತ್ತೆಯಾಗದಿದ್ದರೆ ಶಿಕ್ಷಿಸದೆ ಇರಲಾರ. ಆದ ಕಾರಣ ಅಹ್ಮದ್ ಒಂದು ಉಪಾಯ ಹುಡುಕಿದ. “”ನನಗೆ ಗೊತ್ತಿರುವ ಶಾಸ್ತ್ರದಲ್ಲಿ ದಿನಕ್ಕೆ ಒಬ್ಬ ಕಳ್ಳನನ್ನು ಮಾತ್ರ ಪತ್ತೆ ಮಾಡಲು ಸಾಧ್ಯ. ಹೀಗಾಗಿ ನಲುವತ್ತು ದಿನಗಳು ಕಳೆದ ಕೂಡಲೇ ನಿಮ್ಮಲ್ಲಿಗೆ ಬಂದು ನಿಜ ವಿಷಯ ಹೇಳುತ್ತೇನೆ” ಎಂದು ಹೇಳಿ ಮನೆಗೆ ಬಂದ.
ಅಹ್ಮದನಿಗೆ ಊಟ ರುಚಿಸಲಿಲ್ಲ. ನಿದ್ರೆ ಬರಲಿಲ್ಲ. ಒಂದು ಹಲಗೆಯ ಮೇಲೆ ಕ್ರಮವಾಗಿ ನಲುವತ್ತು ಅಂಕಗಳನ್ನು ಬರೆದ. ಮಧ್ಯರಾತ್ರೆಯಾಗುತ್ತಲೇ ಒಂದು ದಿನ ಕಳೆದುಹೋಯಿತು ಎಂಬ ಚಿಂತೆಯಲ್ಲಿ, “”ಒಂದು ಮುಗಿಯಿತು. ಇನ್ನು ಮೂವತ್ತೂಂಬತ್ತು ಉಳಿದಿದೆ” ಎಂದು ಹೇಳಿ ಒಂದು ಅಂಕಿಯನ್ನು ಹೊಡೆದು ಹಾಕಿದ.
ರಾಜನು ಕಳ್ಳರ ಪತ್ತೆ ಮಾಡಲು ಅಹ್ಮದನಿಗೆ ಹೇಳಿದ ಸಂಗತಿಯನ್ನು ಕಳ್ಳರು ತಿಳಿದುಕೊಂಡಿದ್ದರು. ಕಳ್ಳರ ನಾಯಕನು ಅವನು ಈ ವಿಷಯವನ್ನು ಹೇಗೆ ಕಂಡು ಹಿಡಿಯುತ್ತಾನೆಂದು ತಿಳಿಯಲು ಒಬ್ಬ ಕಳ್ಳನನ್ನು ರಾತ್ರೆ ಅವನ ಮನೆಯ ಹಿಂದೆ ಅಡಗಿ ಕುಳಿತಿರಲು ಹೇಳಿದ. ಮಧ್ಯರಾತ್ರೆ ಅಹ್ಮದ್, “ಒಂದು ಹೋಯಿತು, ಮೂವತ್ತೂಂಬತ್ತು ಉಳಿಯಿತು’ ಎನ್ನುತ್ತಲೇ ತಾನು ಬಂದಿರುವುದು ಅವನಿಗೆ ಗೊತ್ತಾಗಿದೆಯೇ ಎಂದು ಕಳ್ಳನಿಗೆ ಸಂಶಯ ಬಂದಿತು. ಇದನ್ನು ಹೋಗಿ ತನ್ನ ನಾಯಕನಿಗೆ ತಿಳಿಸಿದ. ನಿಜ ಪರೀಕ್ಷೆಗಾಗಿ ನಾಯಕನು ಮರುದಿನ ಇಬ್ಬರನ್ನು ಅಲ್ಲಿಗೆ ಕಳುಹಿಸಿದ. ಮಧ್ಯರಾತ್ರೆ ಅಹ್ಮದ್, “”ಎರಡು ಹೋಯಿತು, ಮೂವತ್ತೆಂಟು ಉಳಿಯಿತು” ಎಂದು ಹೇಳಿ ಹಲಗೆಯ ಮೇಲಿದ್ದ ಎರಡನೆಯ ಅಂಕೆಯನ್ನು ಒರೆಸಿ ಹಾಕಿದ.
ಹೀಗೆ ದಿನವೂ ಒಬ್ಬೊಬ್ಬರಾಗಿ ಕಳ್ಳರ ಸಂಖ್ಯೆ ಹೆಚ್ಚಿಸುತ್ತ ಅಹ್ಮದ್ ಮನೆಯ ಬಳಿಗೆ ಬರತೊಡಗಿದರು. ಅಹ್ಮದ್ ಮಧ್ಯರಾತ್ರೆ ಸಂಖ್ಯೆಯನ್ನು ಹೇಳುವುದು ಕಂಡು ಅವರಿಗೆ ತಮ್ಮ ನಿಜ ವಿಷಯ ಅವನಿಗೆ ತಿಳಿದಿದೆಯೆಂದು ಖಾತ್ರಿಯಾಯಿತು. ಕಳ್ಳರು ನಾಯಕನೊಂದಿಗೆ ಅವನ ಮನೆಗೆ ಬಂದರು, “”ನೀನು ಎಂತಹ ಮೇಧಾವಿಯೆಂಬುದು ನಮಗೆ ಈಗ ಅರ್ಥವಾಗಿದೆ. ಅರಮನೆಯ ಚಿನ್ನದ ಮೂಟೆಗಳನ್ನು ಅಲ್ಲೇ ಸನಿಹದಲ್ಲಿರಿಸಿ ದೇಶ ಬಿಟ್ಟು ಹೋಗುತ್ತೇವೆ. ನಮಗೆ ಶಿಕ್ಷೆಯಾಗದಂತೆ ನೋಡಿಕೊಳ್ಳಬೇಕು” ಎಂದು ಕೇಳಿಕೊಂಡರು.
ನಲುವತ್ತು ದಿನಗಳ ಮೊದಲೇ ಕಳುವಾದ ಚಿನ್ನ ಮರಳಿ ಲಭಿಸಿದಾಗ ರಾಜನಿಗೆ ಸಂತೋಷವಾಯಿತು. “”ನಿನ್ನಂತಹ ದೈವಜ್ಞ ನನ್ನ ಬಳಿಯಲ್ಲೇ ಇರಬೇಕು. ಸುಂದರಿಯಾದ ನನ್ನ ಒಬ್ಬಳೇ ಮಗಳ ಕೈಹಿಡಿದು ಅರಮನೆಯಲ್ಲಿ ಇದ್ದುಬಿಡು. ಮುಂದೆ ಈ ರಾಜ್ಯಕ್ಕೆ ನೀನೇ ರಾಜನಾಗಬೇಕು” ಎಂದು ಹೇಳಿದ.
ಪ. ರಾಮಕೃಷ್ಣ ಶಾಸ್ತ್ರಿ