Advertisement

ಇರಾನಿ ಗ್ಯಾಂಗ್‌ ಸರಗಳ್ಳರ ಸೆರೆ

05:47 AM Jan 31, 2019 | Team Udayavani |

ಬೆಂಗಳೂರು: ಮಹಾರಾಷ್ಟ್ರದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ದುಬಾರಿ ಮೌಲ್ಯದ ಕೆಟಿಎಂ ಡ್ಯೂಕ್‌ ಬೈಕ್‌ನಲ್ಲಿ ಸಂಚರಿಸಿ ಸರಗಳ್ಳತನ ಮಾಡುತ್ತಿದ್ದ ಕುಖ್ಯಾತ ಇರಾನಿ ತಂಡದ ಇಬ್ಬರು ಕಳ್ಳರು ವಿದ್ಯಾರಣ್ಯಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಮುಂಬೈ ಮೂಲದ ಮೊಹಮದ್‌ ಅಲಿ (23), ಸೈಯದ್‌ ಕರಾರ್‌ ಹುಸೈನ್‌(37) ಬಂಧಿತರು. ಬಂಧಿತರಿಂದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1 ಕೆಟಿಎಂ ಡ್ಯೂಕ್‌ ಬೈಕ್‌ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಬಂಧನದಿಂದ ಸಂಜಯ್‌ ನಗರದ 5, ಆರ್‌. ಟಿ.ನಗರದ 3, ಸದಾಶಿವನಗರ, ಬಾಣಸವಾಡಿ, ಯಲಹಂಕ, ಯಲಹಂಕ ಉಪನಗರ ಹಾಗೂ ಜ್ಞಾನಭಾರತಿ, ರಾಮಮೂರ್ತಿನಗರ ಠಾಣೆಗಳ ತಲಾ 2 ಪ್ರಕರಣಗಳು ಸೇರಿ ನಗರದ ವಿವಿಧೆಡೆ ನಡೆದಿದ್ದ 20ಕ್ಕೂ ಅಧಿಕ ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ಮೊಹಮದ್‌ ಅಲಿ ಮತ್ತು ಸೈಯದ್‌ ಆತ್ಮೀಯ ಸ್ನೇಹಿತರು. ಇಬ್ಬರೂ ಮುಂಬೈನ ಅಂಬೋಲಿ ಪ್ರದೇಶದಲ್ಲಿ ವಾಸವಾಗಿದ್ದು, ಸರಗಳ್ಳತನ ಮಾಡುವುದನ್ನೆ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕಳವು ಕೃತ್ಯದಿಂದ ಸಂಪಾದಿಸಿದ ಹಣದಲ್ಲೇ ದುಬಾರಿ ಮೌಲ್ಯದ ಹೊಸ ಡ್ಯೂಕ್‌ ಬೈಕ್‌ ಖರೀದಿಸಿದ್ದರು. ಇದೇ ಬೈಕ್‌ನಲ್ಲಿ ನಗರವನ್ನು ಸುತ್ತಾಡಿ ಒಂಟಿ ಮಹಿಳೆಯರ ಸರಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದರು.

ಬಳಿಕ ಕಂಟೋನ್ಮೆಂಟ್ ರೈಲು ನಿಲ್ದಾಣ ಅಥವಾ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣ(ಮೆಜೆಸ್ಟಿಕ್‌ ರೈಲು ನಿಲ್ದಾಣ)ದ ಪಾರ್ಕಿಂಗ್‌ ಸœಳದಲ್ಲಿ ಬೈಕ್‌ ನಿಲ್ಲಿಸಿ ರೈಲು ಮಾರ್ಗದ ಮೂಲಕ ಮುಂಬೈಗೆ ಹೋಗುತ್ತಿದ್ದರು. ಕೆಲ ದಿನಗಳ ಬಳಿಕ ಮತ್ತೆ ಮುಂಬೈನಿಂದ ವಿಮಾನದ ಮೂಲಕ ನಗರಕ್ಕೆ ಬಂದು, ಅದೇ ಡ್ಯೂಕ್‌ ಬೈಕ್‌ನಲ್ಲಿ ಸುತ್ತಾಡಿ, ಕೃತ್ಯವೆಸಗಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕಳ್ಳರು ಸಿಕ್ಕಿದ್ದು ಹೇಗೆ: 2018 ಜುಲೈ 9ರಂದು ಸಿಂಗಾಪುರ ಲೇಔಟ್ ನಿವಾಸಿ ವಿಜಯಲಕ್ಷ್ಮೀ ತಮ್ಮ ಮನೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಆರೋಪಿಗಳು, 30 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೃತ್ಯ ನಡೆದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಡ್ಯೂಕ್‌ ಬೈಕ್‌ ನಂಬರ್‌ ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿದ ಪೊಲೀಸರು, ಮೆಜೆಸ್ಟಿಕ್‌ ಸಿಟಿ ರೈಲು ನಿಲ್ದಾಣದಲ್ಲಿ ಕೆಟಿಎಂ ಡ್ಯೂಕ್‌ ಬೈಕ್‌ ಒಂದನ್ನು ತಿಂಗಳುಗಟ್ಟಲೇ ನಿಲ್ಲಿಸಿ ಹೋಗುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಬೈಕ್‌ ಮಾಲೀಕರು ಬಂದ ಕೂಡಲೇ ಮಾಹಿತಿ ನೀಡುವಂತೆ ಪೊಲೀಸರು ಪಾರ್ಕಿಂಗ್‌ ಸಿಬ್ಬಂದಿಗೆ ಸೂಚಿಸಿದ್ದರು.

ಈ ಸಂಬಂಧ ಜ.16ರಂದು ಆರೋಪಿಗಳು ವಿಮಾನ ನಿಲ್ದಾಣದಿಂದ ಬಂದು ಡ್ಯೂಕ್‌ ಬೈಕ್‌ ಕೊಂಡೊಯ್ಡಿದ್ದರು. ಪಾರ್ಕಿಂಗ್‌ ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಈ ಬಾರಿ ಸಂಜಯನಗರ, ಸದಾಶಿವನಗರ, ಜ್ಞಾನಭಾರತಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ ಆರೋಪಿಗಳು, ಮುಂಬೈಗೆ ತೆರಳುವ ಸಲುವಾಗಿ ಮೆಜೆಸ್ಟಿಕ್‌ ರೈಲು ನಿಲ್ದಾಣದ ವಾಹನ ನಿಲುಗಡೆ ತಾಣದಲ್ಲಿ ಬೈಕ್‌ ನಿಲುಗಡೆ ಮಾಡಲು ಬಂದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.

•ಆರೋಪಿಗಳಿಂದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಒಂದು ಕೆಟಿಎಂ ಡ್ಯೂಕ್‌ ಬೈಕ್‌ ವಶ
•ವಿದ್ಯಾರಣ್ಯಪುರ ಠಾಣೆ ಪೊಲೀಸರ ಕಾರ್ಯಾಚರಣೆ
•ನಗರದ ವಿವಿಧೆಡೆ ನಡೆದಿದ್ದ 20ಕ್ಕೂ ಅಧಿಕ ಸರಗಳ್ಳತನ ಪ್ರಕರಣಗಳು ಪತ್ತೆ
•ಮುಂಬೈನ ಅಂಬೋಲಿ ಪ್ರದೇಶದ ಆರೋಪಿಗಳಿಗೆ ಸರಗಳವೇ ವೃತ್ತಿ
•ಈ ಹಿಂದೆ ತಂದೆ ಜತೆ ಬಂದು ಸರಗಳವು ಮಾಡುತ್ತಿದ್ದ ಪ್ರಮುಖ ಆರೋಪಿ

ಅಪ್ಪನ ಹಾದಿಯನ್ನೇ ಹಿಡಿದ ಮಗ
ಕೆಲ ವರ್ಷಗಳ ಹಿಂದೆ ಸಿಸಿಬಿ ಪೊಲೀಸರು ಇರಾನಿ ತಂಡದ ಸದಸ್ಯ ಸರ್ಫ್ರಾಜ್‌ ಎಂಬಾತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದೀಗ ಬಂಧನಕ್ಕೊಳಗಾಗಿರುವ ಮೊಹಮದ್‌ ಅಲಿ, ಸರ್ಫ್ರಾಜ್‌ನ ಪುತ್ರ ಎಂಬುದು ಗೊತ್ತಾಗಿದೆ. ಆರೋಪಿಯ ವಿಚಾರಣೆ ಸಂದರ್ಭದಲ್ಲಿ ತಂದೆ ಸಫ್ರಾಜ್‌ರಾಜ್‌ ಜತೆ ಈ ಹಿಂದೆ ನಗರಕ್ಕೆ ಬಂದು ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next